ಮುದ್ದೆಗೂ ಬೇಕು ಶಿಷ್ಟಾಚಾರದ ಮುದ್ರೆ!

7

ಮುದ್ದೆಗೂ ಬೇಕು ಶಿಷ್ಟಾಚಾರದ ಮುದ್ರೆ!

Published:
Updated:
Deccan Herald

ಸಾಣೇಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಅವರು ಹೇಳಿದ ಮಾತೊಂದು ವಿವಾದಕ್ಕೆ ಕಾರಣವಾಗಿದೆ. ಸ್ವಾಮೀಜಿ ಆ ಮಾತನ್ನು ಸ್ವಲ್ಪ ಒರಟಾಗಿ ಹೇಳಿದರು ಎನ್ನುವುದು ನಿಜ. ಆದರೆ ಅವರ ಮಾತಿನಲ್ಲಿ ಇರುವ ಸತ್ಯವನ್ನು ಅರಿಯುವ ಕೆಲಸವನ್ನೂ ಮಾಡಬೇಕಾಗಿದೆ.

ಆ ಸಮಾರಂಭಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಬಂದಿದ್ದರು. ಅವರು ಸಾಣೇಹಳ್ಳಿ ಮಠದಲ್ಲಿಯೇ ಊಟ ಮಾಡುವ ಕಾರ್ಯಕ್ರಮವೂ ಇತ್ತು. ಶಿಷ್ಟಾಚಾರದ ಪ್ರಕಾರ ಪೊಲೀಸರು ಆಹಾರ ಪರಿಶೀಲಿಸಲು ಮುಂದಾಗಿದ್ದರು. ಇದನ್ನು ಸ್ವಾಮೀಜಿ ಪ್ರಶ್ನೆ ಮಾಡಿದರು. ಸಮಾರಂಭದಲ್ಲಿ ಮಾತನಾಡಿದ ಅವರು, ‘ಒಬ್ಬರ ಊಟವನ್ನು ನೀವು ಪರಿಶೀಲಿಸುತ್ತೀರಿ. ಆದರೆ ಸಾವಿರಾರು ಮಂದಿಯ ಊಟವನ್ನು ಪರಿಶೀಲಿಸುವುದಿಲ್ಲ. ಒಬ್ಬರು ಸತ್ತರೆ ಏನೂ ಆಗುವುದಿಲ್ಲ. ಸಾವಿರಾರು ಮಂದಿ ಸತ್ತರೆ ಏನು ಮಾಡುವುದು?’ ಎಂದು ಪ್ರಶ್ನಿಸಿದ್ದರು. ‘ಮಂತ್ರಿಯೊಬ್ಬರು ಸತ್ತರೆ ಏನೂ ಆಗುವುದಿಲ್ಲ ಎಂದು ಸ್ವಾಮೀಜಿ ಹೇಳಿದರು’ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಿಜ. ಮಂತ್ರಿಯೂ ಸಾಯಬಾರದು. ಭಕ್ತರೂ ಸಾಯಬಾರದು. ಯಾರೇ ಸತ್ತರೂ ಸರಿಯಲ್ಲ. ಜನರನ್ನು ಬದುಕಿಸುವ ಬಗ್ಗೆ ಯೋಚಿಸಬೇಕೇ ವಿನಾ ಸಾಯಿಸುವುದಕ್ಕಲ್ಲ. ಸಾವಿರಾರು ಮಂದಿ ಸತ್ತರೆ ಏನು ಮಾಡುವುದು ಎಂಬ ಸ್ವಾಮೀಜಿ ಪ್ರಶ್ನೆ ಚರ್ಚೆಗೆ ಯೋಗ್ಯ ಎನಿಸುತ್ತದೆ. ಗಂಭೀರವಾಗಿ ಚರ್ಚೆಗೆ ಒಳಗಾಗಬೇಕಾದ ಪ್ರಶ್ನೆ ಇದು.

ಮಠ- ಮಂದಿರಗಳಲ್ಲಿ ನೀಡಲಾಗುವ ಪ್ರಸಾದಗಳಿಂದ ಹಿಡಿದು ಶಾಲೆಯಲ್ಲಿ ವಿತರಿಸಲಾಗುವ ಬಿಸಿಯೂಟದವರೆಗೆ ಎಲ್ಲ ಆಹಾರವನನ್ನೂ ಪರಿಶೀಲಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಸಾವಿರಾರು ಜನರು ಊಟ ಮಾಡುವ ಸ್ಥಳಗಳಲ್ಲಿ ಆಹಾರವನ್ನು ಪರಿಶೀಲಿಸುವ ವ್ಯವಸ್ಥೆ ಈಗಲೂ ಜಾರಿಯಲ್ಲಿ ಇಲ್ಲ. ಇದ್ದರೂ ಅದು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ.

ಮಕ್ಕಳ ಪೌಷ್ಟಿಕಾಂಶವನ್ನು ಹೆಚ್ಚಿಸುವ ದೃಷ್ಟಿಯಿಂದ ಜಾರಿಗೊಳಿಸಲಾಗಿರುವ ಬಿಸಿಯೂಟ ವ್ಯವಸ್ಥೆಯಲ್ಲಿ ಕೂಡ ಆಹಾರ ಪರಿಶೀಲಿಸುವ ವ್ಯವಸ್ಥೆ ಸೂಕ್ತ ರೀತಿಯಲ್ಲಿ ಇಲ್ಲ. ಇಸ್ಕಾನ್, ಅದಮ್ಯ ಚೇತನದಂತಹ ಸಂಸ್ಥೆಗಳು ಅಥವಾ ಒಂದೇ ಕಡೆ ಅಡುಗೆ ಮಾಡಿ ಶಾಲೆಗಳಿಗೆ ವಿತರಿಸುವ ಕಡೆ ಇಂತಹ ವ್ಯವಸ್ಥೆ ಇದೆ. ಆದರೆ ಶಾಲೆಗಳಲ್ಲಿಯೇ ಆಹಾರ ತಯಾರಿಸಿ ಮಕ್ಕಳಿಗೆ ಬಡಿಸುವ ಕಡೆ ಇಂತಹ ವ್ಯವಸ್ಥೆ ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಅದಕ್ಕಾಗಿಯೇ ‘ಬಿಸಿಯೂಟ ತಿಂದು ಮಕ್ಕಳು ಅಸ್ವಸ್ಥ’ ಎನ್ನುವ ಸುದ್ದಿ ಆಗಾಗ ಬರುತ್ತಲೇ ಇರುತ್ತದೆ. ಇದನ್ನು ತಪ್ಪಿಸಬೇಕು.

ಮದುವೆ ಸಮಾರಂಭಗಳಲ್ಲಿ ಸಾವಿರಾರು ಮಂದಿ ಊಟ ಮಾಡುತ್ತಾರೆ. ಮಠಗಳಲ್ಲಿ, ಮಂದಿರಗಳಲ್ಲಿ ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆಯಾಗುತ್ತದೆ. ಜಾತ್ರೆಗಳಲ್ಲಿಯೂ ಭಾರಿ ಸಂಖ್ಯೆಯ ಜನರಿಗೆ ಆಹಾರ ವಿತರಣೆಯಾಗುತ್ತದೆ. ಅಲ್ಲೆಲ್ಲಾ ಆಹಾರ ಪರೀಕ್ಷೆ ಮಾಡುವ ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಅಗತ್ಯವಿದೆ. ಇದನ್ನು ನಂಬಿಕೆಯ ಪ್ರಶ್ನೆಯಾಗಿ, ಧಾರ್ಮಿಕ ಪ್ರಶ್ನೆಯಾಗಿ ಯಾರೂ ನೋಡಬೇಕಾದ ಅಗತ್ಯವಿಲ್ಲ. ಇದು ಸುರಕ್ಷತೆಯ ಪ್ರಶ್ನೆ ಅಷ್ಟೆ.

‘ಮಲೇರಿಯಾ, ಕ್ಷಯ ರೋಗಗಳಿಗಿಂತ ಹೆಚ್ಚಾಗಿ ಕಳಪೆ ಆಹಾರದಿಂದ ಸಾಯುವವರ ಸಂಖ್ಯೆಯೇ ಹೆಚ್ಚು. ಕಳಪೆ ಆಹಾರವೇ ಹೆಚ್ಚು ಅಪಾಯಕಾರಿ’ ಎಂದು ವಿಶ್ವಸಂಸ್ಥೆ ವರದಿ ಹೇಳುತ್ತದೆ. ನೂರಕ್ಕೂ ಹೆಚ್ಚು ಜನರು ಊಟ ಮಾಡುವ ಎಲ್ಲ ಕಡೆ ಆಹಾರ ಪರೀಕ್ಷೆ ಕಡ್ಡಾಯ ಮಾಡುವುದು ಇಂದಿನ ತುರ್ತು. ಇದಕ್ಕೊಂದು ಕಾನೂನು ಜಾರಿಯಾಗಬೇಕು. ಅದನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತರಬೇಕು. ಅದು ಜನರಿಗೆ ಕಿರಿಕಿರಿಯಾಗದ ರೀತಿಯಲ್ಲಿಯೂ ಇರಬೇಕು.

ಅಧಿಕಾರದಲ್ಲಿ ಇರುವವರು ಇಂತಹ ವಿಷಯಗಳ ಬಗ್ಗೆ ಆದ್ಯತೆ ನೀಡಬೇಕಾಗಿದೆ. ಸ್ವಾಮೀಜಿ ಮಾತಿನಲ್ಲಿ ಇರುವ ಸತ್ಯವನ್ನು ಅರಿತುಕೊಂಡು ಹೊಸ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಮುಂದಾಗುವುದು ಒಳಿತು. ಅಧಿಕಾರದಲ್ಲಿ ಇರುವವರಿಗೆ ಹಲವಾರು ಸೌಲಭ್ಯಗಳಿವೆ. ಅದು ಹಲವಾರು ವರ್ಷಗಳಿಂದ ಜಾರಿಗೆ ಬಂದಿದೆ. ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳ ಆಹಾರವನ್ನು ಪರೀಕ್ಷಿಸಲಾಗುತ್ತದೆ. ಇವೆಲ್ಲ ಅವರ ಸುರಕ್ಷತೆಗೆ ಕೈಗೊಂಡ ಕ್ರಮಗಳು. ಅದೇ ರೀತಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪ್ರಧಾನಿಗಳ ಸುರಕ್ಷತೆಗೆ ಹಲವಾರು  ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಅವೆಲ್ಲಾ ಇರಲಿ. ಆದರೆ ಅದು ಜನರಿಗೆ ಕಿರಿಕಿರಿಯಾಗದಿರಲಿ. ಜೊತೆಗೆ ಜನ ಸಾಮಾನ್ಯರ ಸುರಕ್ಷತೆಗೂ ಗಮನ ಇರಲಿ.

ಅಧಿಕಾರದಲ್ಲಿ ಇದ್ದೂ ಅತ್ಯಂತ ಸರಳವಾಗಿ ಬದುಕಿದ ಹಲವಾರು ವ್ಯಕ್ತಿಗಳು ಈಗಲೂ ನಮ್ಮ ನಡುವೆಯೇ ಇದ್ದಾರೆ. ವಿದೇಶಗಳಲ್ಲಿ ಅಂತಹ ಉದಾಹರಣೆಗಳು ಸಾಕಷ್ಟು ಇದ್ದರೂ ನಮ್ಮಲ್ಲಿ ಕಡಿಮೆ ಏನಲ್ಲ. ಮಾಣಿಕ್ ಸರ್ಕಾರ್ ಅವರು ಅತ್ಯಂತ ದೀರ್ಘ ಕಾಲ ತ್ರಿಪುರಾ ಮುಖ್ಯಮಂತ್ರಿಯಾಗಿದ್ದರೂ ಜನ ಸಾಮಾನ್ಯರಂತೆಯೇ ಬದುಕಿದರು. ಅಂತಹ ವ್ಯಕ್ತಿಗಳು ನಮಗೆ ಮಾದರಿಯಾಗಬೇಕು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಪ್ರವಾಸಕ್ಕೆ ಹೋದಾಗ ಅವರ ಭದ್ರತೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಉದಾಹರಣೆಗೆ ಸಾಣೆಹಳ್ಳಿಗೆ ಸಂಜೆ 6ಕ್ಕೆ ಉಪ ಮುಖ್ಯಮಂತ್ರಿ ಬರುವ ಕಾರ್ಯಕ್ರಮ ಇದ್ದರೂ ಬೆಳಿಗ್ಗೆಯಿಂದಲೇ ಪೊಲೀಸರು ಹೊಸದುರ್ಗದಿಂದ ಸಾಣೇಹಳ್ಳಿವರೆಗೂ ಕಾವಲು ನಿಂತಿದ್ದರು. ಸುರಕ್ಷತೆ ದೃಷ್ಟಿಯಿಂದ ಅದು ಅಗತ್ಯ. ಹೀಗೆ ಬಿಸಿಲಿನಲ್ಲಿ ಕಾದು ನಿಲ್ಲುವುದು ಅವರ ಕರ್ತವ್ಯ. ಆದರೆ ಹಾದಿಬದಿಯಲ್ಲಿ ನಿಂತ ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಉಪ ಮುಖ್ಯಮಂತ್ರಿ ರಾತ್ರಿ 10 ಗಂಟೆಗೆ ವಾಪಸು ಹೋದ ನಂತರ ಪೊಲೀಸ್ ಕಾನ್‌ಸ್ಟೆಬಲ್‌ಗಳು ಮನೆಗೆ ತೆರಳಲು ರಸ್ತೆಯಲ್ಲಿ ಬರುವ ಕಾರು, ಬೈಕು, ಆಟೊ, ಲಾರಿ, ಬಸ್ ಎಲ್ಲದಕ್ಕೂ ಕೈ ಮಾಡುತ್ತಿದ್ದರು. ಯಾರಾದರೂ ವಾಹನ ನಿಲ್ಲಿಸಿದರೆ ಸಾಕಪ್ಪ, ಊರಿಗೆ ಹೇಗಾದರೂ ತಲುಪಿದರೆ ಸಾಕು ಎನ್ನುವ ಪರಿಸ್ಥಿತಿ ಅವರಿಗೆ ಬರಬಾರದು. ಪೊಲೀಸ್ ಕಾನ್‌ಸ್ಟೆಬಲ್‌ಗಳ ಬಗ್ಗೆ ಕೂಡ ಜನರಿಗೆ ಒಳ್ಳೆಯ ಅಭಿಪ್ರಾಯ ಏನೂ ಇಲ್ಲ. ಯಾಕೆಂದರೆ ಇವರೂ ಕೂಡ ಹಲವಾರು ಬಾರಿ ಜನರೊಂದಿಗೆ ವಿಪರೀತವಾಗಿಯೇ ನಡೆದುಕೊಳ್ಳುತ್ತಾರೆ. ಅಧಿಕಾರಿಗಳು ಮತ್ತು ಅಧಿಕಾರದಲ್ಲಿ ಇರುವವರು ಇವರನ್ನು ಸರಿಯಾಗಿ ನೋಡಿಕೊಂಡರೆ ಈ ಸಮಸ್ಯೆ ಕೊಂಚವಾದರೂ ಕಡಿಮೆಯಾಗಬಹುದು. ಉಪ ಮುಖ್ಯಮಂತ್ರಿ ಅಥವಾ ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳಿಗೆ ಎಷ್ಟು ಸುರಕ್ಷತೆ ಬೇಕೋ ಅಷ್ಟೇ ಸುರಕ್ಷತೆ ಪೊಲೀಸ್ ಕಾನ್‌ಸ್ಟೆಬಲ್‌ಗೂ ಬೇಕು. ಸಾಮಾನ್ಯ ಪ್ರಜೆಗೂ ಬೇಕು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಪ್ರಧಾನಿ, ರಾಷ್ಟ್ರಪತಿ ಮುಂತಾದವರು ರಸ್ತೆಯಲ್ಲಿ ಸಾಗುವಾಗ ಅವರಿಗೆ ಜೀರೊ ಟ್ರಾಫಿಕ್ ವ್ಯವಸ್ಥೆ ಇದೆ. ಇದು ಅಗತ್ಯ. ಆದರೆ ಇದರಿಂದ ಸಾಮಾನ್ಯ ಜನರಿಗೆ ಕಿರಿಕಿರಿಯಾಗಬಾರದು. ಬೆಂಗಳೂರಿನಲ್ಲಿ ವಿಧಾನಸೌಧದ ಸುತ್ತಮುತ್ತ, ದೆಹಲಿಯಲ್ಲಿ ಸಂಸತ್ ಭವನದ ಸುತ್ತಮುತ್ತ ಇಂತಹ ಕಿರಿಕಿರಿ ಜಾಸ್ತಿ. ಇದನ್ನು ತಡೆಯುವುದು ಹೇಗೆ ಎನ್ನುವುದರ ಬಗ್ಗೆಯೂ ಅಧಿಕಾರದಲ್ಲಿ ಇರುವವರು ಆಲೋಚಿಸಬೇಕು. ರಾಮಲಿಂಗಾ ರೆಡ್ಡಿ ಅವರು ಗೃಹ ಸಚಿವರಾಗಿದ್ದಾಗ ಜೀರೊ ಟ್ರಾಫಿಕ್ ಕೈಬಿಟ್ಟಿದ್ದರು. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಜನರು ರೋಸಿಹೋಗಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ತಿರುಗಾಟದಿಂದ ಅದು ಇನ್ನಷ್ಟು ಹದಗೆಟ್ಟರೆ ಜನಸಾಮಾನ್ಯರ ಸಹನೆಯ ಕಟ್ಟೆ ಸಹಜವಾಗಿಯೇ ಒಡೆಯುತ್ತದೆ.

‘ದಾರಿಯಲ್ಲಿ ಹೋಗುವಾಗ ಬೆಕ್ಕು ಅಡ್ಡಬಂದರೆ ಅಪಶಕುನ ಎನ್ನುತ್ತಾರೆ. ಆದರೆ ನಮ್ಮ ದೇಶದಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿದ್ದು ನಾಯಿ ಅಡ್ಡ ಬಂದಿದ್ದರಿಂದ’ ಎಂಬ ಸಂದೇಶ ವಾಟ್ಸ್‌ ಆ್ಯಪ್‌ನಲ್ಲಿ ಪದೇ ಪದೇ ಹರಿದಾಡುತ್ತದೆ. ಇದು ನಿಜ. ನಮ್ಮಲ್ಲಿ ಯಾವಾಗಲೂ ಅನಗತ್ಯವಾದ ವಿಷಯಗಳೇ ಹೆಚ್ಚು ಚರ್ಚೆಗೆ ಒಳಗಾಗುತ್ತವೆ. ಅಗತ್ಯ ವಿಷಯಗಳು ಅದರ ಅಡಿಯಲ್ಲಿ ಬಿದ್ದು ಸತ್ತು ಹೋಗುತ್ತವೆ.

ಬರಹ ಇಷ್ಟವಾಯಿತೆ?

 • 24

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !