ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಕೋಟಾ ಪ್ರವಾಸಿ ಮಂದಿರದ ಬಳಿಯ ಬಸು ಹೋಟೆಲ್‌ ಬಜಿ, ಚೋಡಾ, ರೈಸ್‌ಗೆ ಫೇಮಸ್‌..!

Last Updated 10 ಮೇ 2019, 19:47 IST
ಅಕ್ಷರ ಗಾತ್ರ

ತಿಕೋಟಾ:ಗ್ರಾಮದ ಪ್ರವಾಸಿ ಮಂದಿರದ ಬಳಿ ವಿಜಯಪುರ–ಅಥಣಿ ಹೆದ್ದಾರಿ ಬದಿಯಿರುವ ಬಸು ಹೋಟೆಲ್‌ ಗರಂ ಗರಂ ಬಜಿ, ಚುರುಮುರಿ ಚೋಡಾ, ರೈಸ್‌ಗೆ ಖ್ಯಾತಿಯಾಗಿದೆ.

ನಿತ್ಯ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಈ ಹೋಟೆಲ್‌ ಕಾರ್ಯಾಚರಿಸಲಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ವಾಹನ ಪ್ರಯಾಣಿಕರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಬಹುತೇಕರು ಇಲ್ಲಿಯೇ ತಮ್ಮ ವಾಹನ ನಿಲ್ಲಿಸಿಕೊಂಡು, ಊಟ–ಉಪಾಹಾರ ಮಾಡುವ ಚಿತ್ರಣ ನಿತ್ಯವೂ ಗೋಚರಿಸುತ್ತದೆ. ಇದರ ಜತೆಯಲ್ಲೇ ಊರವರು, ಆಜುಬಾಜಿನ ಹಳ್ಳಿ ಜನರು ಬಸು ಹೋಟೆಲ್‌ಗೆ ಭೇಟಿ ನೀಡುವುದು ಸಹಜ.

ಒಂದೇ ಧಾರಣೆ:

ಬಜಿ, ಚೋಡಾ, ಒಂದು ಪ್ಲೇಟ್‌ ರೈಸ್‌ ಈ ಮೂರರಲ್ಲಿ ಯಾವುದೇ ಒಂದನ್ನು ಖರೀದಿಸಿದರೂ ಧಾರಣೆ ಒಂದೇ. ₹ 20ಕ್ಕೆ ಒಂದು ಪ್ಲೇಟ್. ಯಾರಿಗೆ ಯಾವ ತಿನಿಸು ಬೇಕು ಅದನ್ನು ಖರೀದಿಸಬಹುದು.

ಮಧ್ಯಮ ವರ್ಗದವರು, ಬಡವರು, ಕೂಲಿ ಕಾರ್ಮಿಕರಿಗೆ ಅಚ್ಚುಮೆಚ್ಚಿನ ಹೋಟೆಲ್‌ ಇದಾಗಿದೆ. ₹ 20ಕ್ಕೆ ಹೊಟ್ಟೆ ತುಂಬುವಷ್ಟು ತಿನಿಸು ಇಲ್ಲಿ ಸಿಗಲಿದೆ. ಬಸು ಹೋಟೆಲ್‌ನ ರುಚಿಗೆ ಮಾರು ಹೋದ ಸಿರಿವಂತರು ಸಹ ತಮ್ಮ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ನಿಲ್ಲಿಸಿಕೊಂಡು, ಇಲ್ಲಿ ಬಜಿ, ಚೋಡಾ ಸವಿಯುವುದು ವಿಶೇಷ.

ಬಸವರಾಜ ಮಲ್ಲಪ್ಪ ಅಥಣಿ ಈ ಹೋಟೆಲ್‌ ಮಾಲೀಕ. ಈತನ ಹುಟ್ಟೂರು ತಿಕೋಟಾ. ಬಸು ಎಂದೇ ಈತ ಖ್ಯಾತಿ. ಆರಂಭದಲ್ಲಿ 407 ವಾಹನ ಚಾಲಕ. ತಿಕೋಟಾ ಭಾಗದ ದಾಳಿಂಬೆ, ದ್ರಾಕ್ಷಿಯನ್ನು ಬೆಂಗಳೂರು, ಚೆನ್ನೈ, ಮಂಗಳೂರು, ಹೈದರಾಬಾದ್‌ ನಗರಗಳಿಗೆ ಸಾಗಿಸುತ್ತಿದ್ದ.

ಸಣ್ಣ ಅಪಘಾತವೊಂದರಲ್ಲಿ ಕಾಲು ಮುರಿದುಕೊಂಡ ಬಸವರಾಜ, ನಾಲ್ಕು ತಿಂಗಳು ಮನೆಯಲ್ಲೇ ಇರಬೇಕಾಯಿತು. ವಿಶ್ರಾಂತಿ ಪಡೆಯುತ್ತಾ ಮನೆಯಲ್ಲೇ ಇರುವಾಗ, ಡ್ರೈವರ್ ಕೆಲಸ ಬಿಟ್ಟು ಬಿಡಬೇಕು ಎಂಬ ನಿರ್ಧಾರಕ್ಕೆ ಬಂದ. ಬಸವರಾಜ 30 ಕೆ.ಜಿ. ದ್ರಾಕ್ಷಿಯನ್ನು ಸೈಕಲ್ ಮೂಲಕ ತಂದು ತಿಕೋಟಾ ಪಟ್ಟಣದ ಪ್ರವಾಸಿ ಮಂದಿರದ ರಸ್ತೆ ಬದಿ ಕುಳಿತುಕೊಂಡು ಮಾರಾಟ ಮಾಡಲು ಆರಂಭಿಸಿದ.

10 ವರ್ಷದ ಹಿಂದೆ ₹ 500 ಬಂಡವಾಳ ಹಾಕಿ, ದ್ರಾಕ್ಷಿ ಮಾರಲು ಆರಂಭ ಮಾಡಿದ ಈತ, ದ್ರಾಕ್ಷಿ ಜತೆ ಎಳನೀರು ಮಾರಲು ಶುರು ಮಾಡಿದ. ನಂತರ ಸಣ್ಣ ಗೂಡಂಗಡಿ ಕಟ್ಟಿಕೊಂಡು, ಚಹಾ–ಕಾಫಿ ಮಾರಾಟ ಮಾಡುತ್ತಾ, ಇಂದು ರುಚಿಕರ ಆಹಾರ ಮಾಡುವ ಹೋಟೆಲ್ ಆರಂಭಿಸಿ, ಈ ಭಾಗದಲ್ಲಿ ಖ್ಯಾತನಾಗಿದ್ದಾನೆ.

ಸಂಪರ್ಕ ಸಂಖ್ಯೆ: 7760075749

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT