ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಊಟವೇ ಫಿಟ್‌ನೆಸ್‌ಗೆ ರಹದಾರಿ: ಮೋಕ್ಷಿತಾ ಪಾರು ಮನದ ಮಾತು

ಮಹಿಳಾ ವಿಶೇಷ
Last Updated 7 ಮಾರ್ಚ್ 2019, 7:07 IST
ಅಕ್ಷರ ಗಾತ್ರ

ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಲು ಫಿಟ್‌ನೆಸ್‌ ಅತಿಮುಖ್ಯ ಎನ್ನುವಮೋಕ್ಷಿತಾ ಪಾರು ಎಂತಲೇ ಪರಿಚಿತವಾಗಿರುವವರು. ಪಾರು ಧಾರಾವಾಹಿಯಲ್ಲಿ ಅಪ್ಪನ ಮುದ್ದಿನ ಮಗಳಾಗಿ ಎಲ್ಲರಿಗೂ ಒಳಿತನ್ನೇ ಬಯಸುವ ಹುಡುಗಿಯಾಗಿ ಕಾಣಿಸಿಕೊಂಡಿರುವ ಅವರ ‘ಫಿಟ್‌ನೆಸ್‌ ಮಂತ್ರ’ದ ಬಗ್ಗೆ ವಿವರಿಸಿದ್ದಾರೆ.

* ಫಿಟ್‌ನೆಸ್‌ ಏಕೆ ಮುಖ್ಯ?

ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿರಲು ಫಿಟ್‌ನೆಸ್‌ ಅತಿಮುಖ್ಯ ಇದು ನಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ. ತೆಳ್ಳಗೆ ಬೆಳ್ಳಗೆ ಇರುವುದಕ್ಕಿಂತ ಪ್ರಮುಖವಾಗಿ ಆರೋಗ್ಯವಾಗಿರುವುದೇ ಫಿಟ್‌ನೆಸ್‌.

* ನೀವು ಅನುಸರಿಸುವ ಆಹಾರ ಪದ್ಧತಿ...

ಮನೆ ಊಟಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಶೂಟಿಂಗ್‌ ಸಮಯದಲ್ಲಿಯೂ ಮನೆ ಊಟ ಕೊಂಡೊಯ್ಯುತ್ತೇನೆ. ನಾನು ಮಂಗಳೂರಿನವಳು ಆಗಿರುವುದರಿಂದ ಅಲ್ಲಿನ ಎಲ್ಲಾ ಬಗೆಯ ಸಸ್ಯಹಾರ ಇಷ್ಟವಾಗುತ್ತದೆ. ಬೇಳೆಸಾರು ತುಂಬಾ ಇಷ್ಟ. ಊಟದಲ್ಲಿ ಅದು–ಇದು ಬೇಡ ಎಂದು ಹೇಳುವುದಿಲ್ಲ. ಅಮ್ಮನ ಕೈರುಚಿಯ ಎಲ್ಲಾ ಖಾದ್ಯಗಳನ್ನು ಇಷ್ಟ ಪಟ್ಟು ತಿನ್ನುತ್ತೇನೆ.ಜಂಕ್‌ಫುಡ್‌ಗೆ ಟಾಟಾ ಮಾಡಿ ತುಂಬಾ ಕಾಲವೇ ಆಯಿತು.

ನಿತ್ಯ ಸೇವಿಸುವ ಆಹಾರದಲ್ಲಿ ಹಣ್ಣು, ತರಕಾರಿ ಅಥವಾ ಮೊಳಕೆ ಕಾಳು ಇದ್ದೇ ಇರುತ್ತದೆ. ಪ್ರತಿದಿನ ಸೇಬು, ಬಾಳೆಹಣ್ಣು, ದಾಳಿಂಬೆ ಹಾಗೂ ಮೂಸಂಬಿ ಇದರೊಂದಿಗೆ ಆಯಾ ಋತುವಿನ ಹಣ್ಣು ಸೇವನೆ ರೂಢಿಗತವಾಗಿದೆ. ಇದೇ ನನ್ನ ಡಯೆಟ್‌ ಅಂತಲೂ ಹೇಳಬಹುದು.

* ವರ್ಕ್‌ಔಟ್‌ಗೆ ಜಿಮ್‌ ಮತ್ತು ಮನೆಯಲ್ಲಿ ಯಾವುದನ್ನು ಇಷ್ಟ ಪಡುವಿರಿ?

ಜಿಮ್‌ಗೆ ಮೊದಲ ಆದ್ಯತೆ. ನನಗೆ ವೇಟ್‌ಲಿಫ್ಟಿಂಗ್ ಅಂದರೆ ತುಂಬಾ ಇಷ್ಟ. ಅದರೊಂದಿಗೆ ಟ್ರೆಡ್‌ಮಿಲ್‌, ಸೈಕ್ಲಿಂಗ್‌ ಕೂಡ ಮಾಡುತ್ತೇನೆ. ಹಾಗಾಗಿ ಜಿಮ್‌ಗೆ ಹೋಗುವುದೆಂದರೆ ಇಷ್ಟ.

* ಶೂಟಿಂಗ್‌ ಹಾಗೂ ವರ್ಕ್‌ಔಟ್‌ಗೆ ಸಮಯ ಹೊಂದಾಣಿಕೆ ಹೇಗೆ ಮಾಡಿಕೊಳ್ಳುವಿರಿ?

ಮೊದಲೆಲ್ಲಾ ಪ್ರತಿದಿನ ಎರಡು ಗಂಟೆ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದೆ. ಈಗ ಶೂಟಿಂಗ್‌ ಇದ್ದರೆ ಜಿಮ್‌ಗೆ ಹೋಗಲು ಸಮಯವಿರುವುದಿಲ್ಲ. ಹಾಗಾಗಿ ರಜಾ ಇದ್ದ ದಿನ ಮಾತ್ರ ಜಿಮ್‌ಗೆ ಹೋಗುತ್ತೇನೆ. ಉಳಿದಂತೆ ಶೂಟಿಂಗ್‌ಗೆ ಹೋಗುವ ಮೊದಲು ವಾರ್ಮ್‌ ಅಪ್‌ ವ್ಯಾಯಾಮ ಮಾಡುತ್ತೇನೆ.

* ಫಿಟ್‌ನೆಸ್‌ನಲ್ಲಿ ನಿದ್ದೆಗೆ ಪ್ರಾಮುಖ್ಯತೆ ಇದೆಯೇ?

ಹೌದು. ನಮ್ಮ ಸೌಂದರ್ಯ ಕಾಪಾಡುವಲ್ಲಿ ನಿದ್ದೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ನನಗಂತು ನಿದ್ದೆ ಮಾಡುವುದು ಇಷ್ಟ. ಮೊದಲೆಲ್ಲಾ ಎಂಟು ಗಂಟೆ ಮಲಗುತ್ತಿದ್ದೆ. ಈಗ 6–7 ಗಂಟೆ ನಿದ್ದೆಗೆ ಮೀಸಲಿಡುತ್ತೇನೆ. ಸರಿಯಾಗಿ ನಿದ್ದೆ ಮಾಡದೇ ಇದ್ದರೇ ಇಡೀ ದಿನ ಚಟುವಟಿಕೆಯಿಂದಿರಲೂ ಆಗುವುದೇ ಇಲ್ಲ.‌ ನಮ್ಮ ಆರೋಗ್ಯ ಚೆನ್ನಾಗಿರಬೇಕೆಂದರೆ ಮೊಬೈಲ್‌ ಕಡಿಮೆ ಬಳಸಬೇಕು. ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಇದು ನನ್ನ ಫಿಟ್‌ನೆಸ್‌ ಕಾಪಾಡುವಲ್ಲಿ ಸಹಕಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT