ದೇಹ ಸೌಷ್ಠವಕ್ಕೆ ‘ವಿಜಯ’ ಮಂತ್ರ...

ಮಂಗಳವಾರ, ಏಪ್ರಿಲ್ 23, 2019
31 °C

ದೇಹ ಸೌಷ್ಠವಕ್ಕೆ ‘ವಿಜಯ’ ಮಂತ್ರ...

Published:
Updated:
Prajavani

ಮುಂಜಾನೆಯ ಚುಮು ಚುಮು ಚಳಿಯಲ್ಲಿ ಚಿರಯೌವನಿಗ ನಂತೆ ದೇಹವನ್ನು ಹುರಿಮಾಡಿಕೊಂಡು, ಮಕ್ಕಳು, ವಿದ್ಯಾರ್ಥಿಗಳು, ಯುವಕ–ಯುವತಿಯರು, ಗೃಹಿಣಿಯರು, ಮಧ್ಯ ವಯಸ್ಕರು ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ವ್ಯಾಯಾಮ ಹೇಳಿಕೊಡುವ ಮೂಲಕ ತಮ್ಮ ಬದುಕನ್ನು ಸಾರ್ಥಕ್ಯ ಪಡಿಸಿಕೊಳ್ಳುತ್ತಿದ್ದಾರೆ 65ರ ಹರೆಯದ ವಿಜಯ್ ಕುಮಾರ್.

ಬೆಂಗಳೂರಿನ ಬಸವೇಶ್ವರನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬೆಳಗ್ಗೆ 5.30ಕ್ಕೆ ವಿಜಯ್ ಅವರನ್ನು ಕಾಣಬಹುದು. ಸದಾ ಲವಲವಿಕೆಯಿಂದ ಕೂಡಿರುವ ವಿಜಯ್‌ ಅವರನ್ನು ಸ್ಥಳೀಯರು ‘ವರ್ಕೌಟ್ ವಿಜಯ್’ ಎಂದು ಪ್ರೀತಿಯಿಂದ ಕರೆಯುತ್ತಾರೆ. ನಿತ್ಯ 80 ರಿಂದ 90ಕ್ಕೂ ಹೆಚ್ಚು ಜನರು ಇವರ ಮಾರ್ಗದರ್ಶನದಲ್ಲಿ ಕಸರತ್ತು ಮಾಡುತ್ತಾರೆ. 

ಕೆಲಸ ಮಾಡುವ ಯಾವುದೇ ವ್ಯಕ್ತಿಗಳು ಜೀವನದಲ್ಲಿ ಮುಂದೆ ಬರುತ್ತಾರೆ, ಕಾಯಕ ಮಾಡುವುದನ್ನು ನಿಲ್ಲಿಸಿದರೆ ಆಲಸ್ಯ ಅವರನ್ನು ಆವರಿಸುತ್ತದೆ ಇದರ ಪರಿಣಾಮ ಸಾಮಾಜಿಕ ಮತ್ತು ಕೌಟುಂಬಿಕವಾಗಿ ತಾತ್ಸಾರಕ್ಕೆ ಗುರಿಯಾಗುತ್ತಾರೆ. ಮನುಷ್ಯ ಲವಲವಿಕೆಯಿಂದ ಕೆಲಸ ಮಾಡಬೇಕಾದರೆ ವ್ಯಾಯಾಮ ಅತ್ಯಗತ್ಯ ಎಂದು ಹೇಳುವ ವಿಜಯ್ ತಮ್ಮ ಇಳಿ ವಯಸ್ಸಿನಲ್ಲೂ ಉಪಜೀವನಕ್ಕಾಗಿ ಕೋರಿಯರ್‌ ಕೆಲಸ ಮಾಡುತ್ತಿದ್ದಾರೆ. ವಿಜಯ್ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. ತಮ್ಮ ಶಾಲಾ ದಿನಗಳಲ್ಲಿ ರಾಜ್ಯಮಟ್ಟದ ರನ್ನಿಂಗ್ ರೇಸ್‌ನಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಗೆದ್ದವರು. ಬಡತನದ ಕಾರಣ ಓಟವನ್ನು ನಿಲ್ಲಿಸಿ ಹೊಟ್ಟೆ ಪಾಡಿಗಾಗಿ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದವರು. ತನ್ನಂತೆ ಬಡಮಕ್ಕಳು ಕ್ರೀಡಾ ಅವಕಾಶಗಳಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಕಳೆದ 30 ವರ್ಷಗಳಿಂದ ವಿವಿಧ ಕ್ರೀಡೆಗಳಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ಉಚಿತವಾಗಿ ವ್ಯಾಯಾಮ ಹೇಳಿಕೊಡುತ್ತಿದ್ದಾರೆ.  

‘ಬಡತನವನ್ನು ಉಂಡು ಬೆಳೆದವನಾಗಿರುವುದರಿಂದ ಬಡಮಕ್ಕಳಿಗೆ ಹೆಚ್ಚಿನ ಆದ್ಯತೆ ಕೊಡುತ್ತೇನೆ, ಇಂದಿನ ದಿನಗಳಲ್ಲಿ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಬರುವವರಿಗೆ ಉತ್ತಮ ಅವಕಾಶಗಳನ್ನು ನೀಡುತ್ತಿದೆ. ಆಗಾಗಿ ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟು ಅವರಿಂದ ವರ್ಕೌಟ್ ಮಾಡಿಸುತ್ತೇನೆ. ಪ್ರಸ್ತುತ 60ಕ್ಕೂ ಹೆಚ್ಚು ಕ್ರೀಡಾ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಇವರಲ್ಲಿ ಹಲವರು ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ  ಪದಕ ಗೆದಿದ್ದಾರೆ ಎಂದು ವಿಜಯ್ ಹೇಳುತ್ತಾರೆ.

ರಾಷ್ಟ್ರಗೀತೆಯಿಂದ ಆರಂಭ...

ಬೆಳಗ್ಗೆ 5.30ರ ಸುಮಾರಿಗೆ 90ಕ್ಕೂ ಹೆಚ್ಚು ಜನರು ಕ್ರೀಡಾಂಗಣ ಸೇರುತ್ತಾರೆ. ರಾಷ್ಟ್ರಗೀತೆಯ ಬಳಿಕ ವರ್ಕೌಟ್ ಆರಂಭವಾಗುತ್ತದೆ. ಮೊದಲಿಗೆ ವಾರ್ಮ್‌ಅಪ್‌ ಮಾಡಿಸಿ, ಐದಾರು ಸುತ್ತು ಓಡಿಸಿದ ಬಳಿಕ ವ್ಯಾಯಾಮ ಮಾಡಿಸಲಾಗುತ್ತದೆ. ವಿದ್ಯಾರ್ಥಿಗಳು ಮತ್ತು ಯುವಕರಿಗೆ ಕಠಿಣ ಶ್ರಮದ ವ್ಯಾಯಾಮಗಳನ್ನು ವಿಜಯ್ ಸಹಾ ಯಕರು ಹೇಳಿ ಕೊಡುತ್ತಾರೆ. ಗೃಹಿಣಿಯರು, ಹಿರಿಯ ನಾಗರಿಕರಿಗೆ ಸರಳವಾದ ವ್ಯಾಯಾಮಗಳನ್ನು ವಿಜಯ್ ಅವರೇ ಮಾಡಿಸುತ್ತಾರೆ. 

ನೀವು ಯಾಕೆ ಉಚಿತವಾಗಿ ಹೇಳಿಕೊಡುತ್ತೀರಾ ಎಂಬ ಪ್ರಶ್ನೆಗೆ ’ಪ್ರೀತಿಯೇ’ ಇದಕ್ಕೆ ಕಾರಣ ಎಂದು ವಿಜಯ್ ಹೇಳುತ್ತಾರೆ. ಮಕ್ಕಳ ಮೊಗದಲ್ಲಿ ತೇಲುವ ನಗು, ಯುವಕರು, ಗೃಹಿಣಿಯರು, ಹಿರಿಯರು ತೋರುವ
ಆತ್ಮೀಯತೆ ಮತ್ತು ವಿಶ್ವಾಸದ ಮುಂದೆ ದುಡ್ಡು ಯಾವ ಲೆಕ್ಕ? ಒಂದು ಪಕ್ಷ ಹಣ ಪಡೆದು ಹೇಳಿಕೊಟ್ಟರೆ ಆ ಪ್ರೀತಿ, ವಿಶ್ವಾಸ ಅವರಿಂದ ದೊರೆಯಲು ಸಾಧ್ಯವೇ ಎನ್ನುತ್ತಾರೆ ಅವರು!

ವಾತಾವರಣ ಬದಲಾವಣೆಗಾಗಿ ವಾರಾಂತ್ಯದಲ್ಲಿ ಟ್ರಕ್ಕಿಂಗ್ ಹೋಗುವುದು ವಿಜಯ್ ತಂಡದ ಒಂದು ಹವ್ಯಾಸ. ಬೆಳಗ್ಗೆ ಕಸರತ್ತು ಮಾಡಿದರೇ ಬೆವರು ತಾನಾಗಿಯೇ ಹರಿಯುತ್ತದೆ, ಈ ವೇಳೆ ದೇಹಕ್ಕೆ ಶುದ್ಧ ಗಾಳಿ ದೊರೆತರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬ ಕಾರಣಕ್ಕೆ ಕಬ್ಬನ್ ಪಾರ್ಕ್, ಲಾಲ್ ಬಾಗ್‌, ನಂದಿ ಬೆಟ್ಟ, ಶಿವಗಂಗೆಗೆ ಟ್ರಕ್ಕಿಂಗ್ ಕರೆದುಕೊಂಡು ಹೋಗಿ ಬೆಳಗ್ಗೆ 9 ಗಂಟೆಯ ಒಳಗೆ ವಾಪಾಸಾಗುತ್ತೇವೆ. ದೇಹ ಚುರುಕಾಗಿ, ಮನಸ್ಸು ಉಲ್ಲಾಸಭರಿತವಾಗಿರಬೇಕಾದರೆ ಸ್ವಲ್ಪ ಹೊತ್ತು ವ್ಯಾಯಾಮ ಮಾಡಲೇಬೇಕು. ಕೋಪ ಮತ್ತು ಸಿಟ್ಟಿಗೂ ವ್ಯಾಯಾಮ ರಾಮಬಾಣ ಎಂದು ವಿಜಯ್ ಸಲಹೆ ನೀಡುತ್ತಾರೆ.  

ತೂಕ ಕಳೆದುಕೊಂಡೆ...
ವಿಜಯ್ ಸರ್ ವರ್ಕೌಟ್ ಮಾಡಿಸುವುದರಿಂದ ನಮಗೆ ಸಾಕಷ್ಟು ಅನುಕೂಲತೆಗಳಿಗಾಗಿವೆ. ಇಲ್ಲಿ ಎಲ್ಲರ ಜೊತೆಗೆ ಸೇರುವುದರಿಂದ ಖಿನ್ನತೆಯಂತಹ ಮಾನಸಿಕ ತೊಂದರೆಗಳು ನಿವಾರಣೆಯಾಗುತ್ತವೆ. ಎಷ್ಟೋ ಜನರಿಗೆ ತೂಕ ಇಳಿಸಿ ಕೊಳ್ಳುವ ಸಲುವಾಗಿ ಜೀಮ್‌ಗೆ ಹೋಗಲು ಹಣ ಇರುವುದಿಲ್ಲ, ಅಂತಹ ಸಾಕಷ್ಟು ಜನರು ವಿಜಯ್ ಸರ್ ಮಾರ್ಗದರ್ಶನದಲ್ಲಿ ತೂಕ ಇಳಿಸಿ ಕೊಂಡಿದ್ದಾರೆ. ನಿತ್ಯ ವ್ಯಾಯಾಮ ಮಾಡುವುದರಿಂದ ನಾವು ಕಾಯಿಲೆಗಳನ್ನು ದೂರ ಇಡಬಹುದು. ಇದರಿಂದ ಆಸ್ಪತ್ರೆ ಖರ್ಚು ಉಳಿತಾಯವಾಗುತ್ತದೆ. ಇಲ್ಲಿಗೆ ಬಂದಾಗಿನಿಂದ ನನ್ನ ತೂಕ ಕೂಡ ಕಡಿಮೆಯಾಗಿದೆ. ನಿಜಕ್ಕೂ ಅವರ ಈ ಸೇವೆ ಶ್ಲಾಘನೀಯವಾದುದು.
–ಕಾವ್ಯಾಗೌಡ, ಸಾಫ್ಟ್‌ವೇರ್ ಎಂಜಿನಿಯರ್‌.

ಬಡವರ ಬಗೆಗಿನ ಕಾಳಜಿ...
ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿರುವ ವಿಜಯ್ ಸರ್ ಎಲ್ಲರಿಗೂ ಉಚಿತವಾಗಿ ವ್ಯಾಯಾಮ ಹೇಳಿ ಕೊಡುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅವರಿಗೆ ವಿಶೇಷ ತರಬೇತಿ ಕೊಟ್ಟು ಕ್ರೀಡೆಯಲ್ಲಿ ಮುಂದುವರೆಯುವಂತೆ ಪ್ರೋತ್ಸಾಹ ನೀಡುತ್ತಾರೆ. ಹಿರಿಯ ನಾಗರಿಕರಿಗೆ ಮುತುವರ್ಜಿವಹಿಸಿ ವ್ಯಾಯಾಮ ಮಾಡಿಸುತ್ತಾರೆ. ಹಣವೇ ಪ್ರಧಾನವಾಗಿರುವ ಇಂದಿನ ಕಾಲಘಟ್ಟದಲ್ಲಿ ಅವರ ಸೇವೆ ಮಾದರಿಯಾದುದು.
–ಶ್ರೀಹರಿ, ಗುತ್ತಿಗೆದಾರ

 

ಬರಹ ಇಷ್ಟವಾಯಿತೆ?

 • 7

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !