ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ನಾಲ್ಕು ವಿರುದ್ಧಾಹಾರಗಳ ಸೇವನೆ ನಿಯಂತ್ರಿಸಿದ್ದಲ್ಲಿ ಆರೋಗ್ಯ ಕ್ಷೇಮ

Published 28 ಜೂನ್ 2023, 9:22 IST
Last Updated 28 ಜೂನ್ 2023, 9:22 IST
ಅಕ್ಷರ ಗಾತ್ರ

ಆಹಾರ ಸೇವನೆಯ ಬಗ್ಗೆ ಹಲವರಲ್ಲಿ ತಪ್ಪು ಕಲ್ಪನೆಗಳಿರುತ್ತವೆ. ಯಾವ ಹೊತ್ತಿಗೆ ಏನು ಸೇವಿಸಬೇಕು, ಯಾವುದರ ಜೊತೆಗೆ ಏನನ್ನು ತಿನ್ನಬಹುದು ಅಥವಾ ತಿನ್ನಬಾರದು ಎಂಬ ಗೊಂದಲ ಸಹಜ.

ವಿರುದ್ಧ ಆಹಾರಗಳನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೌದು, ಕೆಲವು ಆಹಾರಗಳನ್ನು ಒಟ್ಟಿಗೆ ಸೇವಿಸಬಾರದು. ಯಾವುದೇ ಆಹಾರ ಜೊತೆಜೊತೆಗೆ ಸೇವಿಸುವಾಗ ಆಹಾರ ವೈರುಧ್ಯದ ಬಗ್ಗೆ ಎಚ್ಚರ ಅಗತ್ಯ. ಒಟ್ಟಿಗೆ ಸೇವಿಸಬಾರದ ಆಹಾರಗಳ ಕುರಿತ ಕೆಲವು ಮಾಹಿತಿ ಇಲ್ಲಿವೆ.

ಊಟದ ಜೊತೆ ಹಣ್ಣು:

ದೇಹಕ್ಕೆ ಹೆಚ್ಚಿನ‌ ಪೋಷಕಾಂಶ ಸಿಗಲಿ ಎಂಬ ಕಾರಣಕ್ಕೆ ಊಟದ ಜೊತೆ ಹಣ್ಣು ಸೇವಿಸುತ್ತೇವೆ. ಆದರೆ ಪೌಷ್ಟಿಕ ತಜ್ಞರ ಪ್ರಕಾರ ಇದು ತಪ್ಪು. ಹೀಗೆ ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಪೌಷ್ಟಿಕ ತಜ್ಜರ ವಾದ. ಹಣ್ಣುಗಳನ್ನು ಪ್ರತ್ಯೇಕವಾಗಿಯೇ ಸೇವಿಸುವುದು ಉತ್ತಮ‌. ಅದರಿಂದ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಸಿಗುತ್ತದೆ.

ಕೊಬ್ಬು ಸಹಿತ ಮಾಂಸ ಮತ್ತು ಚೀಸ್ (cheese):

ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಚೀಸ್ ಬಳಕೆ ಹೆಚ್ಚುತ್ತಿದೆ. ಚೀಸ್ ಬಳಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ. ಅಲ್ಲದೆ ಚೀಸ್‌ನಲ್ಲಿ ಕ್ಯಾಲ್ಸಿಯಂ ಹೆಚ್ಚಿದ್ದರಿಂದ ಮೂಳೆ ಬೆಳವಣಿಗೆಗೂ ಉತ್ತಮ. ಹಾಗಂತ ಚೀಸ್ ಅನ್ನು ಹೆಚ್ಚು ಬಳಸುವುದು ಅಪಾಯ. ಅದರಲ್ಲಿಯೂ ಹೆಚ್ಚು ಕೊಬ್ಬು ಸಹಿತ ಮಾಂಸದ ಜೊತೆ ಬಳಸಲೇಬಾರದು.

ಈ ಎರಡು ಆಹಾರ (ಚೀಸ್ ಮತ್ತು ಮಾಂಸ) ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಸೋಡಿಯಂ ಪ್ರಮಾಣ ಹೆಚ್ಚುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳ ಉಲ್ಬಣಕ್ಕೆ ಕಾರಣವಾಗುತ್ತದೆ.

ಒಂದು ವೇಳೆ ಮಾಂಸದ ಜೊತೆ ಚೀಸ್ ಬಳಸಲೇ ಬೇಕೆಂದರೆ ಲೋ ಫ್ಯಾಟ್ ಚೀಸ್ ಬಳಸುವುದು ಉತ್ತಮ ಎನ್ನುತ್ತಾರೆ ಆಹಾರ ತಜ್ಜರು.

ಹಾಲು ಮತ್ತು ಹುಳಿ ಭರಿತ ಹಣ್ಣುಗಳು:

ಕಿತ್ತಳೆ ಸೇರಿದಂತೆ ಯಾವುದೇ ತರದ ಹುಳಿ ಭರಿತ (ಸಿಟ್ರಸ್) ಹಣ್ಣುಗಳನ್ನು ಹಾಲಿನೊಂದಿಗೆ ಸೇರಿಸಿ ಕುಡಿಯುವುದು ಒಳ್ಳೆಯ ಅಭ್ಯಾಸವಲ್ಲ. ಹಣ್ಣಿನಲ್ಲಿರುವ ಸಿಟ್ರಸ್ ಆ್ಯಸಿಡ್ ಹಾಲನ್ನು ಮೊಸರನ್ನಾಗಿ ಪರಿವರ್ತಿಸುತ್ತದೆ. ಇದು ನೇರವಾಗಿ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹಾಲು ಕುಡಿದು ತುಂಬ ಸಮಯದ ನಂತರವೇ ಹುಳಿ ಭರಿತ ಹಣ್ಣುಗಳನ್ನು ಸೇವಿಸುವುದು ಉತ್ತಮ.

ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ:

ಕಬ್ಬಿಣಾಂಶ ಮತ್ತ ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಾಗಿವೆ. ಆದರೆ ಈ ಎರಡು ಪೋಷಕಾಂಶಗಳಿರುವ ಆಹಾರವನ್ನು ಒಟ್ಟಿಗೆ ಸೇವಿಸುವುದರಿಂದ ದೇಹಕ್ಕೆ ಯಾವುದೇ ಪ್ರಯೋಜನವಿಲ್ಲ. ಈ ಎರಡು ಪೋಷಕಾಂಶಗಳನ್ನು ದೇಹವು ಒಟ್ಟಿಗೆ ಹೀರಿಕೊಳ್ಳುವುದಿಲ್ಲ. ಇದರ ಬದಲು ಕಬ್ಬಿಣಾಂಶವನ್ನು ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಅನ್ನು ವಿಟಮಿನ್ ಡಿ ಯೊಂದಿಗೆ ಸೇರಿಸಿ ಸೇವಿಸಿದರೆ ದೇಹಕ್ಕೆ ಬೇಕಾದ ಪೋಷಕಾಂಶ ಸಿಗುತ್ತದೆ.

ಈ ರೀತಿ ವಿರುದ್ಧ ಆಹಾರಗಳನ್ನು ಸೇವಿಸಿದ ಎಲ್ಲರಿಗೂ ತೊಂದರೆ ಕಾಣಿಸಬೇಕೆಂದಿಲ್ಲ. ಕೆಲವರಿಗೆ ಸಣ್ಣ ಪ್ರಮಾಣದ ತೊಂದರೆ ಕಾಣಿಸಿಕೊಳ್ಳಬಹುದು. ಆದರೆ ಇವುಗಳಿಂದ ದೂರವಿರುವುದು ಉತ್ತಮ ಎನ್ನುತ್ತಾರೆ ಆಹಾರ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT