ಊಟ ಬಲ್ಲವರಿಗೆ ಫಿಟ್‌ನೆಸ್ ಕಷ್ಟವಲ್ಲ!

7
ಭಾರತ ಫುಟ್‌ಬಾಲ್ ತಂಡದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು

ಊಟ ಬಲ್ಲವರಿಗೆ ಫಿಟ್‌ನೆಸ್ ಕಷ್ಟವಲ್ಲ!

Published:
Updated:
Deccan Herald

‘ನಾಲಿಗೆಗೆ ರುಚಿಸುವ ಆಹಾರವೆಲ್ಲವೂ ಒಳ್ಳೆಯದಲ್ಲ. ರುಚಿಕರ ಖಾದ್ಯಗಳು ರುಚಿ ಹತ್ತಿಸಿ ಹೊಟ್ಟೆ ತುಂಬಿಸುತ್ತವೆ. ಆದರೆ ಅದರಿಂದ ದೈಹಿಕ ಕ್ಷಮತೆಗೆ ಯಾವುದೇ ಲಾಭ ನೀಡುವುದಿಲ್ಲ. ನಾನೊಬ್ಬ ಫುಟ್‌ಬಾಲ್‌ ಆಟಗಾರ, ನನ್ನ ದೇಹವೇ ನನ್ನ ಆಯುಧ ಅದನ್ನು ಫಿಟ್‌ ಇಡಲು ರುಚಿಗಿಂತ, ಪೌಷ್ಟಿಕ ಆಹಾರಕ್ಕೆ ಮಹತ್ವ ಕೊಡುತ್ತೇನೆ’–

ಭಾರತ ಫುಟ್‌ಬಾಲ್ ತಂಡದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ನುಡಿಗಳಿವು. ಮೂರು ವರ್ಷಗಳಿಂದ ಭಾರತ ತಂಡಕ್ಕೆ ಮತ್ತು  2017ರಿಂದ ಬೆಂಗಳೂರು ಫುಟ್‌ಬಾಲ್ ತಂಡಕ್ಕೆ ಗೋಲ್‌ಕೀಪರ್ ಆಗಿರುವ ಗುರು ತಮ್ಮ ಚುರುಕಿನ ಆಟದ ಮೂಲಕ ಹಲವು ಆಭಿಮಾನಿಗಳನ್ನು ಗಳಿಸಿದ್ದಾರೆ. ಗೋಲುಪೆಟ್ಟಿಗೆಯ ಮುಂದೆ ಚಿರತೆಯಂತೆ ಡೈವ್ ಹೊಡೆಯುವ ಪಂಜಾಬಿ ಹುಡುಗ ಫಿಟ್‌ನೆಸ್‌ ವಿಷಯದಲ್ಲಿ ಭಾರೀ ಶಿಸ್ತಿನ ವ್ಯಕ್ತಿ. ಈಚೆಗೆ ರೆಡ್‌ ಬುಲ್‌ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ  ‘ಪ್ರಜಾವಾಣಿ –ಫಿಟ್‌ನೆಸ್‌’ ಗೆ ಸಂದರ್ಶನ ನೀಡಿದ ಅವರು ತಮ್ಮ ಚುರುಕಿನಾಟದ ಗುಟ್ಟು ಬಿಚ್ಚಿಟ್ಟರು.

‘ನಾವು ತಿನ್ನುವ ಆಹಾರವನ್ನು ಎರಡು ವಿಭಾಗಗಳಲ್ಲಿ ವಿಂಗಡಿಸುತ್ತೇನೆ ಒಂದು ಖರಾಬ್ ಖಾನಾ(ಒಳ್ಳೆಯದಲ್ಲದ್ದು), ಮತ್ತೊಂದು ಅಚ್ಛಾ ಖಾನಾ (ಒಳ್ಳೆಯದು). ಕರಾಭ್ ಖಾನಾ ಎಂದರೆ ಸಕ್ಕರೆ, ಕರಿದ ಪದಾರ್ಥಗಳು, ಬಟರ್ ಚಿಕನ್, ಬಿಳಿ ಅನ್ನ, ಮೈದಾ ರೋಟಿ, ಬ್ರೆಡ್, ಬನ್, ಜಂಕ್‌ ಫುಡ್‌ಗಳು. ಇವು ತಿನ್ನಲು ರುಚಿಕರ. ತಿನ್ನುತ್ತಲೇ ಇರಬೇಕು ಎನಿಸುತ್ತದೆ. ಇವುಗಳಿಂದ ಹೊಟ್ಟೆ ತುಂಬುವ ಅನುಭವ ಆಗುತ್ತದೆ ಬಿಟ್ಟರೆ, ಉಳಿದಂತೆ ಯಾವುದೇ ಲಾಭ ಇಲ್ಲ. ಆದರೆ, ಹಸಿ ತರಕಾರಿ, ಕುದಿಸಿದ ಚಿಕನ್. ಸಲಾಡ್‌ಗಳನ್ನು ತಿನ್ನಲು ನಾವು ಇಷ್ಟಪಡುವುದಿಲ್ಲ. ಆದರೆ ಇವು ಫಿಟ್‌ನೆಸ್‌ ಕಾಪಾಡಿಕೊಳ್ಳಲು ಅತ್ಯಗತ್ಯ. ನನ್ನಂತಹ ಆಟಗಾರರು ರುಚಿಯನ್ನು ತ್ಯಾಗ ಮಾಡಲೇಬೇಕು. ರುಚಿಯಲ್ಲದ ಆದರೆ, ಒಳ್ಳೆಯದಾದ ಊಟಕ್ಕೆ ಒತ್ತು ನೀಡಬೇಕು. ಆಪರೂಪಕ್ಕೊಮ್ಮೆ ಖರಾಬ್ ಖಾನಾ ಕೂಡ ತಿನ್ನುತ್ತೇನೆ’ ಎಂದ ಗುರುಪ್ರೀತ್ ನಕ್ಕರು.

6.4 ಅಡಿ ಎತ್ತರವಿರುವ ಗುರುಪ್ರೀತ್ ಮೂಲತಃ ಪಂಜಾಬ್‌ನ ಮೊಹಾಲಿಯವರು. ಅವರ ಅಪ್ಪ ಮತ್ತು ಅಮ್ಮ ಇಬ್ಬರೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು. ಬಾಲ್ಯದಿಂದಲೇ ಫುಟ್‌ಬಾಲ್‌ನತ್ತ ಆಕರ್ಷಿತರಾದವರು. ಥಮ್ಮ ಚಾಕಚಕ್ಯತೆಯ ಆಟದ ಮೂಲಕವೇ ಭಾರತ ತಂಡದಲ್ಲಿ ಆಡುವ ಮಟ್ಟಕ್ಕೆ ಬೆಳೆದಿದ್ದಾರೆ.

‘ಪ್ರತಿದಿನ ಬೆಳಿಗ್ಗೆ ಮೂರು ತಾಸು ವರ್ಕೌಟ್‌ ಇರುತ್ತದೆ. ಜಾಗಿಂಗ್, ಸ್ಟ್ರೆಚ್ಚಿಂಗ್ ಜೊತೆಗೆ ಜಿಮ್ನಾಷಿಯಂನಲ್ಲಿ ಬೆವರು ಹರಿಸುತ್ತೇವೆ. ನುರಿತ ಟ್ರೇನರ್‌ಗಳ ಮಾರ್ಗದರ್ಶನದಲ್ಲಿ ವೇಟ್ ಟ್ರೇನಿಂಗ್, ಮಸಲ್ ಟೋನಿಂಗ್‌ ಇರುತ್ತದೆ.  ನಮ್ಮ ಆಟದ ಅಭ್ಯಾಸದಷ್ಟೇ ಪ್ರಮಾಣದಲ್ಲಿ ಫಿಟ್‌ನೆಸ್‌ ವರ್ಕೌಟ್ ಕೂಡ ಇರುತ್ತದೆ. ಗಾಯಗಳಿಂದ ಬಚಾವಾಗಲು ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಮುಖ್ಯ’ ಎಂದು ಗುರು ಹೇಳುತ್ತಾರೆ.

ರೆಡ್‌ಬುಲ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಪೆನಾಲ್ಟಿ ಶೂಟೌಟ್‌ ಸ್ಪರ್ಧೆಯಲ್ಲಿ ಅವರು ಆಸಕ್ತರಿಗೆ ಹಲವು ಸಲಹೆಗಳನ್ನು ನೀಡುತ್ತಿದ್ದಾರೆ. ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌)ನಲ್ಲಿ ಬಿಎಫ್‌ಸಿ ತಂಡದ ಪರ ಮಿಂಚುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !