ಸ್ಮರಣಶಕ್ತಿ ಹೆಚ್ಚಿಸುವ ಬೆಳ್ಳುಳ್ಳಿ

ಶುಕ್ರವಾರ, ಏಪ್ರಿಲ್ 19, 2019
22 °C

ಸ್ಮರಣಶಕ್ತಿ ಹೆಚ್ಚಿಸುವ ಬೆಳ್ಳುಳ್ಳಿ

Published:
Updated:

ಅಡುಗೆಯ ರುಚಿ, ಘಮ ಹೆಚ್ಚಿಸುವ ಬೆಳ್ಳುಳ್ಳಿ ಹಲವು ಔಷಧೀಯ ಗುಣಗಳನ್ನು ಹೊಂದಿರುವುದು ಗೊತ್ತೇ ಇದೆ. ಇತ್ತೀಚಿನ ಸಂಶೋಧನೆಯೆಂದರೆ ಅದರಲ್ಲಿರುವ ಅಲ್ಲಿಲ್‌ ಸಲ್ಫೈಡ್‌ ಎಂಬ ರಾಸಾಯನಿಕ ಅಂಶ ಮೆದುಳಿಗೆ ಹಾಗೂ ಸಣ್ಣಕರುಳಿನ ಆರೋಗ್ಯಕ್ಕೂ ಉಪಯುಕ್ತ ಎಂಬುದು. ಈ ಅಂಶ ವಯಸ್ಸಾದವರ ಮೆದುಳಿನ ಅಲ್ಪಾವಧಿ ಹಾಗೂ ದೀರ್ಘಾವಧಿ ಸ್ಮರಣಶಕ್ತಿಯನ್ನು ಹೆಚ್ಚಿಸಬಲ್ಲದು. ಹಾಗೆಯೇ ಕರುಳಿನ ಉರಿಯೂತವನ್ನು ಕಡಿಮೆ ಮಾಡುವ ಶಕ್ತಿಯೂ ಇದಕ್ಕಿದೆ ಎನ್ನುತ್ತಾರೆ ವಿಜ್ಞಾನಿಗಳು.

ಸದ್ಯ ಇಲಿಯ ಮೇಲೆ ನಡೆಸಿರುವ ಪ್ರಯೋಗ ಯಶಸ್ವಿಯಾಗಿದ್ದು, ಇದು ಮಾನವರ ಮೇಲೂ ಪ್ರಯೋಜನ ಬೀರಲಿದೆ ಎಂಬುದು ಅವರ ಅಂಬೋಣ.

ಈಗಾಗಲೇ ಬೆಳ್ಳುಳ್ಳಿ ಒಂದು ಸೂಪರ್‌ಫುಡ್‌ ಎಂಬುದು ಸಾಬೀತಾಗಿದೆ. ಪೌಷ್ಟಿಕಾಂಶಗಳ ಆಗರವಾಗಿರುವ ಅಡುಗೆಯಲ್ಲಿ ನಿತ್ಯ ಬಳಸುವ ಈ ಸಂಬಾರು ಪದಾರ್ಥ ಆ್ಯಂಟಿಆಕ್ಸಿಡೆಂಟ್‌ಗಳಿಂದಾಗಿ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ನಿತ್ಯ ಸೇವಿಸುತ್ತ ಬಂದರೆ 5–6 ತಿಂಗಳಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಹಿಂದಿನ ಪ್ರಯೋಗಗಳಿಂದ ಸಾಬೀತಾಗಿದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್‌ (ಎಲ್‌ಡಿಎಲ್‌) ಅನ್ನು ಕಡಿಮೆ ಮಾಡುತ್ತದೆ.

ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಅಲ್ಝ್‌ಮೇರ್‌, ಡಿಮೆನ್ಶಿಯಾದಂತಹ ಮರೆವಿನ ಕಾಯಿಲೆಯ ಸಾಧ್ಯತೆಯನ್ನು ಕಡಿಮೆ ಮಾಡಬಲ್ಲವು.

ಮಹಿಳೆಯರ ಆರೋಗ್ಯದ ವಿಷಯದಲ್ಲೂ ಈ ಬೆಳ್ಳುಳ್ಳಿ ಸಾಕಷ್ಟು ಪ್ರಯೋಜನಕಾರಿ. ಈಸ್ಟ್ರೋಜೆನ್‌ ಹಾರ್ಮೋನ್‌ ಮಟ್ಟವನ್ನು ಹೆಚ್ಚಿಸುವ ಮೂಲಕ ಎಲುಬಿನ ನಾಶವನ್ನು ತಡೆಗಟ್ಟುತ್ತದೆ. ಋತುಬಂಧ ಸಮೀಪಿಸುತ್ತಿರುವ ಮಹಿಳೆಯರು ನಿತ್ಯ ಕೆಲವು ಎಸಳುಗಳನ್ನು ತುಪ್ಪದಲ್ಲಿ ಹುರಿದು ಸೇವಿಸಬಹುದು.

ಸಾಂಕ್ರಾಮಿಕ ರೋಗ ಸೋಂಕದಂತೆ ಕಾಪಾಡುವ ಗುಣವೂ ಈ ಸೂಪರ್‌ಫುಡ್‌ಗಿದೆ.

ಬೆಳ್ಳುಳ್ಳಿಯನ್ನು ನೆಗಡಿ ಹಾಗೂ ಜ್ವರಕ್ಕೂ ಬಳಸಬಹುದು ಗೊತ್ತೇ? ಹಿಂದಿನಿಂದಲೂ ನೆಗಡಿ ಅಥವಾ ಶೀತಕ್ಕೆ ಬೆಳ್ಳುಳ್ಳಿಯನ್ನು ಬಳಸುವ ಸಂಪ್ರದಾಯವಿದೆ. ಇದು ಶೀತದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ಅತಿ ಶೀಘ್ರವಾಗಿ ಗುಣಮುಖರಾಗಬಹುದು. ನಿತ್ಯ ಬಳಸುವ ರೂಢಿಯಿಟ್ಟುಕೊಂಡರೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನೆಗಡಿ ಬರದಂತೆ ತಡೆಯುತ್ತದೆ.

ಈ ಸೂಪರ್‌ಫುಡ್‌ ಅನ್ನು ಎಣ್ಣೆಯ ರೂಪದಲ್ಲೂ ಬಳಸಬಹುದು. ಚರ್ಮಕ್ಕೆ ಮತ್ತು ಉಗುರಿಗೆ ತಗಲುವ ಫಂಗಸ್‌ ಸೋಂಕಿಗೆ ಈ ಎಣ್ಣೆ ರಾಮಬಾಣ.

ಹೇಗೆ ತೆಗೆದುಕೊಳ್ಳಬೇಕು?

ಬೆಳ್ಳುಳ್ಳಿಯಲ್ಲಿರುವ ಅಲ್ಲಿನೇಸ್‌ ಎಂಬ ಕಿಣ್ವ ಅದರಲ್ಲಿರುವ ಅಲ್ಲಿನ್‌ ಅನ್ನು ಅಲ್ಲಿಸಿನ್‌ ಎಂಬ ಲಾಭಕರ ರಾಸಾಯನಿಕವಾಗಿ ಬದಲಾಯಿಸಬಲ್ಲದು. ಬೆಳ್ಳುಳ್ಳಿಯನ್ನು ಬಿಸಿ ಮಾಡಿದರೆ ಈ ಕಿಣ್ವದ ಕ್ರಿಯಾಶೀಲತೆ ಕಡಿಮೆಯಾಗುತ್ತದೆ. ಆದರೆ ಭಾರತೀಯರು ಹಿಂದಿನಿಂದಲೂ ರೂಢಿಸಿಕೊಂಡು ಬಂದ ಸಂಪ್ರದಾಯದಂತೆ ಬೆಳ್ಳುಳ್ಳಿಯನ್ನು ಜಜ್ಜಿ ಅಥವಾ ಸಣ್ಣದಾಗಿ ಹೆಚ್ಚಿ ಸೇವಿಸುವುದರಿಂದ ಔಷಧೀಯ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ದೇಹವನ್ನು ಸೇರುತ್ತವೆ. ಒಂದು ವೇಳೆ ಬೇಯಿಸುವ ಅಥವಾ ಹುರಿಯುವ ಅವಶ್ಯಕತೆಯಿದ್ದರೆ ಜಾಸ್ತಿ ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ಬಳಸಿ.

ಮುನ್ನೆಚ್ಚರಿಕೆ

ಇದನ್ನು ಹಸಿಯಾಗಿ ಸೇವಿಸಿದರೆ ನಾಲಿಗೆ ಸುಟ್ಟ ಅನುಭವವಾಗುತ್ತದೆ. ಅಲ್ಲಿಸಿನ್‌ನಲ್ಲಿ ಆ್ಯಸಿಡ್‌ ಅಂಶ ಇರುವುದರಿಂದ ಇದು ಜೀರ್ಣಾಂಗ ವ್ಯೂಹಕ್ಕೆ ಬಾಧೆ ಉಂಟು ಮಾಡಬಹುದು. ಆ್ಯಸಿಡಿಟಿ ಸಮಸ್ಯೆ ಇರುವವರಿಗೆ ಹೊಟ್ಟೆಯಲ್ಲಿ ಉರಿಯಾಗಬಹುದು. ಇಂಥವರು ಸೇವಿಸುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !