ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನಪೂರ್ಣೇಶ್ವರಿಯಲ್ಲಿ ಆರೋಗ್ಯಕರ ಆಹಾರ

ನಾಲತವಾಡ ಪಟ್ಟಣದ ವಿಶೇಷ; ತರಹೇವಾರಿ ಉಪಾಹಾರದ ಆಗರ
Last Updated 22 ಡಿಸೆಂಬರ್ 2018, 19:44 IST
ಅಕ್ಷರ ಗಾತ್ರ

ನಾಲತವಾಡ:ಗರಿಗರಿಯಾದ ಉದ್ದಿನ ವಡೆ, ಮೃದುವಾದ ಇಡ್ಲಿ, ಸೆಟ್ ದೋಸೆ, ಮಸಾಲೆ ದೋಸೆ, ಸಿರಾ, ಉಪ್ಪಿಟ್ಟು, ಅವಲಕ್ಕಿ, ರೈಸ್ ಬಾತ್... ಘಮ್‌ ಎಂದು ಪರಿಮಳ ಬೀರುವ ಸಾಂಬರ್, ಚಟ್ನಿ...

ಇವೆಲ್ಲಾ ನಸುಕಿನ ಆರು ಗಂಟೆಗೆ ಸಿದ್ಧವಾಗೋದು ನಮ್ಮೂರ ಹೆಮ್ಮೆಯ ಉಪಹಾರ ಗೃಹ ಅನ್ನಪೂರ್ಣೇಶ್ವರಿಯಲ್ಲಿ. ಇಲ್ಲಿ ಸಿಗುವ ಪ್ರತಿಯೊಂದು ಆಹಾರವೂ ಶುಚಿ–ರುಚಿಯಾಗಿರುವುದು ವಿಶೇಷ. ಅದೂ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ಲಭ್ಯ.

ಹೋಟೆಲ್‌ ಮಾಲೀಕ ವೀರೇಶ ಪೇಟ್ಕರ್‌ ಮೂಲತಃ ಟೆಕ್ಸಟೈಲ್ ಉದ್ಯಮಿ. ದೂರದ ಸೂರತ್, ಮುಂಬೈನಿಂದ ಬಟ್ಟೆ ಖರೀದಿಸಿ ತಂದು, ಇಲ್ಲಿರುವ ತಮ್ಮ ಕಾಳಿಕಾದೇವಿ ಕ್ಲಾಥ್‌ ಮರ್ಚಂಟ್ ಮೂಲಕ ಮಾರುತ್ತಿದ್ದರು. ಕಾರಣಾಂತರಗಳಿಂದ ಕೈ ಸುಟ್ಟುಕೊಂಡ ಬಳಿಕ, ತಮ್ಮ ತಾಯಿ, ಪತ್ನಿಯ ಸಹಕಾರದೊಂದಿಗೆ ಹೋಟೆಲ್ ಆರಂಭಿಸಿದರು.

ಪಟ್ಟಣದಲ್ಲಿ ಇವರಷ್ಟು ರುಚಿಕರವಾಗಿ ಉಪಾಹಾರ, ತಿಂಡಿ–ತಿನಿಸಿನ ತಯಾರಕರು ಮತ್ತೊಬ್ಬರಿಲ್ಲ. ಇಲ್ಲಿ ಸವಿದ ಉಪಾಹಾರ ಎಂದೆಂದೂ ಮರೆಯದ ಸ್ವಾದದ ನೆನಪು ಚಿರಸ್ಥಾಯಿಯಾಗುಳಿಯಲಿದೆ. ಒಮ್ಮೆ ಭೇಟಿ ಕೊಟ್ಟವರು, ಮತ್ತೊಮ್ಮೆ ಬಂದು ಇಲ್ಲಿ ಉಪಾಹಾರ ಸವಿಯುವುದು ವಿಶೇಷ.

ನಸುಕಿನ ನಾಲ್ಕಕ್ಕೆ ಹೋಟೆಲ್‌ ಕೆಲಸ ಆರಂಭವಾದರೂ ಉಪಾಹಾರ ಪೂರೈಕೆಯಾಗುವುದು 6 ಗಂಟೆ ಬಳಿಕವೇ. ಹೋಟೆಲ್‌ ಸನಿಹದಲ್ಲಿರುವ ತಮ್ಮ ಮನೆಯಿಂದ ಉಪಾಹಾರಗಳನ್ನು ತಯಾರಿಸಿ ತಂದಾಗಲೇ. ತಮ್ಮ ಮನೆಯಲ್ಲೇ ತಿಂಡಿಗಳನ್ನು ತಯಾರಿಸುವುದರಿಂದ ಗ್ರಾಹಕ ಆರೋಗ್ಯದ ಕಾಳಜಿಯನ್ನೂ ಸಹ ಇವರು ಗಮನದಲ್ಲಿಟ್ಟುಕೊಂಡಿರುತ್ತಾರೆ. ಶುಚಿ–ರುಚಿಯಲ್ಲಿ ರಾಜಿ ಇಲ್ಲವೆನ್ನುತ್ತಾರೆ. ಕೊಂಚವೂ ವ್ಯತ್ಯಾಸವಾಗಬಾರದು ಎಂದು ಇವರ ಪತ್ನಿಯೇ ಉಪಾಹಾರ ತಯಾರಿಸುತ್ತಾರೆ.

ಉಪಾಹಾರ ಧಾರಣೆಯೂ ಏನೂ ಹೆಚ್ಚಿಲ್ಲ. ಉಪ್ಪಿಟ್ಟು, ಸಿರಾ, ಅವಲಕ್ಕಿ, ರೈಸ್‌ಬಾತ್ ಬೆಲೆ ಕೇವಲ ₹ 10. 3 ಇಡ್ಲಿ, 2 ವಡೆ, ಮಸಾಲ, ಸೆಟ್‌ ದೋಸೆ ಬೆಲೆ ₹ 20. ಈ ಮೊದಲು ₹ 10, ₹ 15 ಇದ್ದ ಈ ತಿನಿಸುಗಳ ಬೆಲೆಯನ್ನು ಇದೀಗ ಕೆಲವೇ ದಿನಗಳ ಹಿಂದೆ ಹೆಚ್ಚಿಸಲಾಗಿದೆ.

ಅನ್ನಪೂರ್ಣೇಶ್ವರಿಯಲ್ಲಿನ ರಸಕವಳದ ಸವಿ ಸವಿಯದವರಿಲ್ಲ. ಪರಿಮಳ ಭರಿತ, ತರತರ ತರಕಾರಿಯುಕ್ತ ಸಾಂಬರ್‌ನ್ನು ಸಾಕೆನ್ನುವಷ್ಟು ಸವಿದು ತೃಪ್ತರಾಗಬಹುದು. ತಿಪಟೂರಿನ ತೆಂಗು ಇವರ ಚಟ್ನಿ, ಸಾಂಬರ್‌ನ ರುಚಿ ಹೆಚ್ಚಿಸಿದೆಯಂತೆ. ಯಾರಿಗೂ ಹೇಳದ ಗುಟ್ಟೆಂದರೆ ಇಂಗು, ಮೆಣಸು, ಜೀರಗಿ, ಮೆಂತೆ, ಏಲಕ್ಕಿ, ದಾಲ್ಚಿನ್ನಿಗಳ ಸಮಾಗಮದ ತಮ್ಮ ಮನೆಯಲ್ಲರೆದ ಮಸಾಲೆಯನ್ನೇ ಹೋಟೆಲ್ ಅಡುಗೆಗೆ ಬಳಸುತ್ತೇವೆ ಎನ್ನುತ್ತಾರೆ ವೀರೇಶ.

ಗ್ರಾಹಕರ ಒತ್ತಡಕ್ಕೆ ಮಣಿದು ಈಚೆಗೆ ಊಟದ ವ್ಯವಸ್ಥೆಯನ್ನು ಮಾಡುವುದಾಗಿ ಮಾಲೀಕ ವೀರೇಶ ಹೇಳಿಕೊಂಡಿದ್ದಾರೆ. ಸಣ್ಣ ಪುಟ್ಟ ಪಾರ್ಟಿಗಳಿಗೆ, ನಾಮಕರಣ, ಗೃಹ ಪ್ರವೇಶ, ಉತ್ಸವಗಳಿಗೆ ಬೇಕಾದ ಅವರವರ ಬಜೆಟ್‌ಗೆ ಅನುಗುಣವಾಗಿ ಊಟ, ಉಪಾಹಾರ ನೀಡುತ್ತಾರೆ ಇವರು.

ಸಂಪರ್ಕ ಸಂಖ್ಯೆ: 7996530219/6361670828

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT