ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ: ಜೀವನದ ಕಾಮನಬಿಲ್ಲು

Last Updated 15 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಕಾಮನ ಹುಣ್ಣಿಮೆ : ಪ್ರೇಮಿಗಳ ಹಬ್ಬ

ಪ್ರೇಮಿಗಳ ದಿನಾಚರಣೆ ಭಾರತದಲ್ಲಿ ಪ್ರಾಚೀನ ಕಾಲದಿಂದಲೇ ಆಚರಣೆಯಲ್ಲಿ ಸಾಗಿಬಂದಿದೆ. ಅದುವೇ ಹೋಳಿಹಬ್ಬ.

ಅನಂಗ, ಅಂಗಜ, ಅಲಹಂಬ, ಮಾರ, ಮನ್ಮಥ ಮನಸಿಜ, ಮದನ, ಕಾಮ, ಕಬ್ಬುವಿಲ್ಲ, ಪ್ರದ್ಯುಮ್ನ – ಹೀಗೆ ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳೂವ ಮನ್ಮಥನು ಭಾರತೀಯ ಪ್ರೇಮಿಗಳಿಗೆ ಬಹುಪ್ರಿಯನಾದ ದೇವ. ಉಲ್ಲಾಸ, ಚೈತನ್ಯ, ಕಲಾತ್ಮಕತೆ, ರಸಿಕತೆ, ಸಾಹಸ, ಪ್ರೀತಿ-ಪ್ರೇಮ, ಸಂತಾನಪ್ರಾಪ್ತಿ, ಲೈಂಗಿಕತೃಪ್ತಿ ಮುಂತಾದ ಬದುಕಿನ ಎಲ್ಲ ಆಸೆಗಳ ಆಯಾಮಗಳಿಗೆ ಇವನೇ ಒಡೆಯ. ಅಂಥ ಕಾಮನ ಸ್ಮರಣೆ ಮಾಡುವ ಹಬ್ಬವೇ ಹೋಳಿಹುಣ್ಣಿಮೆ. ಕಾಮನ ಹಬ್ಬವೆಂದೂ ರತಿ-ಮನ್ಮಥರ ಹಬ್ಬವೆಂದೂ ಕರೆಯಲ್ಪಡುವ ಹೋಳಿಹಬ್ಬವು ಅಭೂತಪೂರ್ವ ಪ್ರೇಮಿಗಳ ದಿನಾಚರಣೆಯಾಗಿದೆ.
ಈ ಹಬ್ಬ ಪೌರ್ಣಿಮೆಯ ದಿನ ಬರುತ್ತದೆ. ಪೂರ್ಣ ಚಂದ್ರನು ಕಲಾಧರ, ಅವನು ರಸಿಕತೆಗೆ ಹಾಗೂ ರಾಸಲೀಲೆಗೆ ಪ್ರೇರಕನೂ ಪೂರಕನೂ ಆಗಿದ್ದಾನೆ. ಶ್ರೀಕೃಷ್ಣ-ರಾಧೆಯರು ಈ ಹಬ್ಬದಲ್ಲಿ ಓಕಳಿ ಆಡುತ್ತಿದ್ದರೆಂದುಭಾಗವತದಲ್ಲಿ ಪ್ರಸ್ತಾಪವಾಗಿದೆ. ಕನಕದಾಸರು ಅವರ ‘ಮೋಹನತರಂಗಿಣಿ’ ಕಾವ್ಯದಲ್ಲಿ, ಕೃಷ್ಣಾಗಮನದಿಂದ ಸಂತಸಗೊಂಡ ಕೃಷ್ಣನ ಸತಿಯರು ಕೋಲಾಟದ ಮೂಲಕ ಹೋಳಿ ಹಬ್ಬವನ್ನು ಆಚರಿಸುತ್ತಾರೆಂದು ವರ್ಣಿಸಿದ್ದಾರೆ.

ಮಾನಸಿಕ ಆರೋಗ್ಯಕ್ಕೆ ಪೂರಕ

ಯಾವ ಆಚರಣೆಗಳನ್ನು ನಾವು ಅಶ್ಲೀಲವೆಂದು ಪರಿಗಣಿಸುತ್ತೇವೆಯೋ, ನಿಷಿದ್ಧವೆಂದು ನಿಬಂಧನೆ ಹೇರುತ್ತಿರುವೆಯೋ ಅದರ ಬಗ್ಗೆಯೇ ಇಂದ್ರಿಯಗಳು ಹೆಚ್ಚು ಮಮಕಾರವನ್ನು ಹೊಂದುತ್ತವೆಯಷ್ಟೆ. ಆದರೆ ಅವುಗಳಿಂದಲೇ ಸಂತೋಷ ಪಡೆಯಲು ಪಂಚೇಂದ್ರಿಯಗಳು ತವಕ ಪಡುತ್ತವೆ. ಅಂಥವುಗಳಿಂದ ಮನಸ್ಸನ್ನು ಅತಿಯಾಗಿ ನಿಗ್ರಹಿಸಿದರೆ, ಅದರಿಂದ ಮಾನಸಿಕ ಹಾನಿ ಉಂಟಾಗುವ ಸಂಭವವಿರುತ್ತದೆ. ಅಂಥ ಒಂದು ಸಂದರ್ಭವನ್ನಾದರೂ, ಕೊನೆಯ ಪಕ್ಷ ಒಂದು ದಿನವ್ನನಾದರೂ ಮುಕ್ತವಾಗಿರಿಸಿದರೆ, ಮಾನಸಿಕ ಉದ್ರೇಕದ ಅಪಾಯ ತಪ್ಪಿಸಬಹುದಾಗಿದೆ. ಆದ್ದರಿಂದ ಮನುಷ್ಯನ ಮಾನಸಿಕ ಆರೋಗ್ಯದ ದೃಷ್ಟಿಯಿಂದ ನಮ್ಮ ಪೂರ್ವಿಕರು ರತಿ-ಮನ್ಮಥ ಎಂಬ ಪ್ರೇಮಿಗಳ ಹೆಸರಿನಲ್ಲಿ ಈ ಹೋಳಿಹಬ್ಬವನ್ನು ರತಿ-ಮನ್ಮಥರ ಪ್ರೇಮದಿನವೆಂದು ಆಚರಿಸುತ್ತ ಬಂದಿದ್ದಾರೆ

ಲೇಖಕರು:ಡಿ. ಎ. ಉಪಾಧ್ಯ

***

‘ಬೇಡರ ವೇಷ’

ಅಚ್ಚಕೆಂಪುಬಣ್ಣದ ಉದ್ದ ತೋಳಿನ ಅಂಗಿ, ಮೊಣಕಾಲು ಮುಟ್ಟುವ ದೊಗಲೆ ಚಡ್ಡಿ, ಕಾಲಿಗೆ ಗೆಜ್ಜೆ, ಬೆನ್ನಿಗೆ ಉದ್ದುದ್ದ ನವಿಲು ಗರಿಗಳ ಪದರು, ಕುತ್ತಿಗೆಗೆ ನೋಟಿನ ಮಾಲೆ, ಕಿಡಿಕಾರುವ ಕಣ್ಣು, ಮೂಗಿನ ಮೇಲೊಂದು ಹತ್ತಿಯುಂಡೆ, ಕೆಂಡಕಾರುವ ಮುಖದ ಮೇಲೆ ಬಿಳಿ–ಹಳದಿಬಣ್ಣದ ಗೆರೆಗಳ ನಡುವೆ ಕಡುಗಪ್ಪಿನ ದಪ್ಪ ಮೀಸೆಯ ಬೇಡ ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ಗುರಾಣಿ ಝಳಪಿಸುತ್ತ ಬಂದರೆ, ಸುತ್ತುವರಿದು ನಿಂತ ಪ್ರೇಕ್ಷಕರ ಎದೆಯಲ್ಲಿ ನಡುಕ. ಜಾನಪದಶೈಲಿಯ ರುದ್ರನರ್ತನವೇ ಬೇಡ‌ರ ವೇಷದ ವಿಶೇಷತೆ. ಶಿರಸಿಯಲ್ಲಿ ಎರಡು ವರ್ಷಕ್ಕೊಮ್ಮೆ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆ ನಡೆಯುತ್ತದೆ. ಜಾತ್ರೆ ಇಲ್ಲದ ವರ್ಷ ಇಲ್ಲಿ ಬೇಡರ ವೇಷದ ಬೆರಗು. ಈ ಬಾರಿ ಮಾ.17ರಿಂದ ಆರಂಭವಾಗುವ ಬೇಡರ ವೇಷ ಪ್ರದರ್ಶನ ಹೋಳಿಯ ರಂಗು ಎರಚಿಕೊಳ್ಳುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ.

ಲೇಖಕರು:ಸಂಧ್ಯಾ ಹೆಗಡೆ ಆಲ್ಮನೆ

***

ಶಾಪವಿಮೋಚನೆಗಾಗಿ ಉರುಳುಸೇವೆ!

ಹೋಳಿ ಬಂತೆಂದರೆ ಬಣ್ಣದಾಟ ಸಾಮಾನ್ಯ. ಆದರೆ, ಬೆಳಗಾವಿಯ ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ಮಂದಿರದ ಆವರಣದಲ್ಲಿ ಹೋಳಿ ಹಬ್ಬದಂದು ಸಾವಿರಾರು ಭಕ್ತರು ಶಾಪ ವಿಮೋಚನೆಗಾಗಿ ಉರುಳು ಸೇವೆ ಮಾಡಿ ಅಶ್ವತ್ಥಾಮನನ್ನು ಆರಾಧಿಸುವುದು ವಿಶೇಷ.

ದಕ್ಷಿಣ ಭಾರತದಲ್ಲೇ ಹೆಸರುವಾಸಿಯಾದ ಈ ದೇಗುಲದ ಬಳಿ ಹೋಳಿಯಂದು ಉರುಳುಸೇವೆ ಮಾಡಿದರೆ ಶಾಪದಿಂದ ಮುಕ್ತರಾಗುತ್ತೇವೆ ಎನ್ನುವ ನಂಬಿಕೆ ಇದೆ. ಇದು ಕುಂದಾನಗರಿಯ ಹೋಳಿಯ ವೈಶಿಷ್ಟ್ಯತೆಯಾಗಿದೆ. ಇದು ಪುಟ್ಟ ದೇಗುಲವಾದರೂ ಶ್ರದ್ಧಾಕೇಂದ್ರವಾಗಿ ಗುರುತಿಸಿಕೊಂಡಿದೆ. ಬೆಳಗಿನ ಜಾವ 5ಕ್ಕೆ ಪೂಜೆ ನೆರೆವೇರಿಸಿ ನಂತರ ಬಣ್ಣ ಆಡಲಾಗುತ್ತದೆ. ಮಧ್ಯಾಹ್ನ 12ರ ನಂತರ ರಂಗೇರುತ್ತದೆ. ಜೈನ ಮಂದಿರದಿಂದ ಅಶ್ವತ್ಥಾಮ ಮಂದಿರವರೆಗೆ ಭಕ್ತರು ಉರುಳು ಸೇವೆ ಮಾಡಿ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ.

ಈ ದೇಗುಲದ ಮುಂದೆ ಹೋಳಿಯಲ್ಲಿ ಮಾತ್ರ ಉರುಳುಸೇವೆ ಮಾಡುತ್ತಾರೆ. ಉಳಿದ ದಿನಗಳಲ್ಲಿ ಪೂಜೆ, ಪುನಸ್ಕಾರಗಳಷ್ಟೇ ನಡೆಯುತ್ತಿವೆ. ಇಲ್ಲಿ ದೀಪಕ್ಕೆ ಎಣ್ಣೆ ಹಾಕಿ ಅದನ್ನು ಹಚ್ಚಿಕೊಂಡರೆ ಗಾಯ, ಕಜ್ಜಿ ಬೇಗ ವಾಸಿಯಾಗುತ್ತದೆ ಎಂಬ ನಂಬಿಕೆಯೂ ಇದೆ.

‘ದೇಶದಲ್ಲಿ ಅಶ್ವತ್ಥಾಮಗಳು ದೇವಾಲಯಗಳು ಅಪರೂಪ. ಈ ದೇವಸ್ಥಾನಕ್ಕೆ 200 ವರ್ಷಗಳ ಇತಿಹಾಸವಿದೆ. ಹೋಳಿಹಬ್ಬದಂದು ಉರುಳು ಸೇವೆ ಮಾಡುವವರ ಸಂಖ್ಯೆ ವರ್ಷಕ್ಕೆ ಜನ ಹೆಚ್ಚುತ್ತಿದೆ’ ಎನ್ನುತ್ತಾರೆ ಅಲ್ಲಿನ ಅರ್ಚಕರು.

ಸವದತ್ತಿಯಲ್ಲಿ ಮಕ್ಕಳು ಮನೆಗಳ ಮುಂದೆ ತಮಟೆ ಬಾರಿಸಿ ಸಂಭ್ರಮಿಸುವುದು ವಿಶೇಷ.

ಲೇಖಕರು: ಎಂ. ಮಹೇಶ

***

ಬಾಗಲಕೋಟೆಯಲ್ಲಿ ‘ಬಂದ್‌’

ಘಟಪ್ರಭೆಯ ತಟದಲ್ಲಿ ಮಾರ್ಚ್ 20ರಿಂದ 23ರವರೆಗೆ ನಾಲ್ಕು ದಿನಗಳ ಕಾಲ ಹೋಳಿಹಬ್ಬದ ಸಂಭ್ರಮ ಗರಿಗೆದರಲಿದೆ.ಪುಣೆಯ ಮರಾಠ ಪೇಶ್ವೆಗಳು ನಂತರ ಬ್ರಿಟಿಷರ ಆಡಳಿತದ ಅವಧಿಯಲ್ಲಿ ಬಾಗಲಕೋಟೆಯಲ್ಲಿ ಹೋಳಿಹುಣ್ಣಿಮೆಗೆ ಹೆಚ್ಚಿನ ಮಹತ್ವ ಲಭಿಸಿತು ಎಂದು ಊರಿನ ಹಿರಿಯರು ಸ್ಮರಿಸುತ್ತಾರೆ. ಆಗೆಲ್ಲಾ ಐದು ದಿನಗಳ ಕಾಲ ಊರತುಂಬಾ ಬಣ್ಣದ ಬಂಡಿಗಳ ಓಡಾಡಿಸಿ ದಿನವಿಡೀ ಓಕುಳಿಯಲ್ಲಿ ಮಿಂದೆದ್ದು ಸಂಜೆ ಇಳಿಬಿಸಿಲಿಗೆ ಘಟಪ್ರಭೆಯ ಒಡಲಲ್ಲಿ ಮೈಚಾಚುತ್ತಿದ್ದ ದಿನಗಳ ನೆನಪಿಸಿಕೊಂಡು ಪುಳಕಗೊಳ್ಳುತ್ತಾರೆ. ಹೋಳಿ ಆಚರಣೆ ಐದರ ಬದಲಿಗೆ ನಾಲ್ಕು ದಿನಕ್ಕೆ ಇಳಿದಿದೆ. ಆದರೂ ಸಂಭ್ರಮ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಮೊದಲ ದಿನ ನಗರದ ಬೀದಿ ಬೀದಿಗಳಲ್ಲಿ ಕಾಮಣ್ಣನ ಸುಡುವ ಕಾರ್ಯ ಜೋರಾಗಿ ನಡೆಯುತ್ತದೆ. ದಹನದ ವೇಳೆ ಹಿರಿ–ಕಿರಿಯರು ಎಂಬ ಭೇದವಿಲ್ಲದೇ ಅತ್ತು ಕರೆದು, ಹಲಗಿ ಬಡಿದು ಕಾಮಣ್ಣನಿಗೆ ವಿದಾಯ ಹೇಳುತ್ತಾರೆ. ಸೋಗು ಹಾಕುತ್ತಾರೆ. ಮರುದಿನ ಬೆಳಗಿನ ಜಾವ ಕಿಲ್ಲಾ ಪ್ರದೇಶದಲ್ಲಿ ಅಧಿಕೃತವಾಗಿ ಬಣ್ಣದಾಟ ಶುರುವಾಗುತ್ತದೆ. ಹೋಳಿ ಆಚರಣೆ ದಿನ ಮೂರು ದಿನ ಮಾರುಕಟ್ಟೆ, ಶಾಲಾ–ಕಾಲೇಜುಗಳಿಗೆ ರಜೆ ಕೊಡಲಾಗುತ್ತದೆ; ಅಂಗಡಿ–ಮುಂಗಟ್ಟು ಬಂದ್ ಆಗುತ್ತವೆ.

ಲೇಖಕರು: ವೆಂಕಟೇಶ್ ಜಿ.ಎಚ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT