ಬುಧವಾರ, ಜೂನ್ 3, 2020
27 °C

ನಸುಕಿನಲ್ಲೇ ಬಿಸಿ ಬಿಸಿ ಇಡ್ಲಿಯ ಸವಿರುಚಿ..!

ಶರಣಬಸಪ್ಪ ಶಿ.ಗಡೇದ Updated:

ಅಕ್ಷರ ಗಾತ್ರ : | |

Prajavani

ತಾಳಿಕೋಟೆ: ನಸುಕಿನಲ್ಲೇ ಬಿಸಿ ಬಿಸಿ ಇಡ್ಲಿ, ರುಚಿಯಾದ ಚಟ್ನಿ ಸವಿಯಬೇಕು ಎಂದರೇ, ಪಟ್ಟಣದ ಬಸ್‌ ನಿಲ್ದಾಣದ ಬಳಿ ಬರಬೇಕು. ಇಲ್ಲಿ ಸಿಗುವ ಇಡ್ಲಿ–ಚಟ್ನಿಯ ವಿಶೇಷವೇ ಅಂಥಹದ್ದು. ಸಾಂಬಾರಿದ್ದರೂ ಹೆಚ್ಚಿನವರಿಗೆ ಚಟ್ನಿಯೇ ಅಚ್ಚುಮೆಚ್ಚು.

ಬೆಳಿಗ್ಗೆ ಆರು ಗಂಟೆಗೆ ಬಸ್ ನಿಲ್ದಾಣದ ಎಡ ಭಾಗದಲ್ಲಿ ಒತ್ತುಗಾಡಿಯೊಂದು ನಿಂತಿರುತ್ತದೆ. ಇಲ್ಲಿ ಇಡ್ಲಿಯೊಂದಿಗೆ ಬಿಸಿ ಬಿಸಿ ದೋಸೆ, ಮಸಾಲೆ ಅನ್ನವೂ ಸಿದ್ಧವಿರುತ್ತದೆ. ಯಾವುದನ್ನೇ ಖರೀದಿಸಿದರೂ; ಒಂದು ಪ್ಲೇಟ್‌ಗೆ ₹ 10. ಕಡಿಮೆ ದರಕ್ಕೆ ಗುಣಮಟ್ಟ ಹಾಗೂ ಹೆಚ್ಚಿನ ಆಹಾರವೂ ಸಿಗುವುದು ಇಲ್ಲಿನ ವಿಶೇಷ.

ಐದು ವರ್ಷಗಳಿಂದ ಒಂದು ದಿನವೂ ತಪ್ಪದೇ ಇಡ್ಲಿ ಅಂಗಡಿ ನಡೆಸುತ್ತಿರುವವರು ಚಬನೂರ ಗ್ರಾಮದಿಂದ ಬಂದು ಇಲ್ಲಿ ನೆಲೆಸಿರುವ ಸಿದ್ದು ಭೀಮಣ್ಣ ಹೊಳಕುಂದಿ.

ಬೆಳಿಗ್ಗೆ ಆರು ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ವ್ಯಾಪಾರ. ಈ ನಾಲ್ಕು ತಾಸಿನ ಅವಧಿಯೊಳಗೆ ಎಲ್ಲವೂ ಖಾಲಿ ಖಾಲಿ. ಇಲ್ಲಿ ಸಿಗುವ ಇಡ್ಲಿ, ದೋಸೆ, ಮಸಾಲೆ ಅನ್ನಕ್ಕಾಗಿ ಬಸ್ ನಿಲ್ದಾಣದ ಚಾಲಕರು, ನಿರ್ವಾಹಕರು, ಕಾಲೇಜಿಗೆ ಬಂದ ವಿದ್ಯಾರ್ಥಿಗಳು, ಪ್ರಯಾಣಿಕರು, ಪಟ್ಟಣದ ಜನರು ಮುಗಿ ಬೀಳುತ್ತಾರೆ. ಮನೆಗೂ ಕಟ್ಟಿಸಿಕೊಂಡು ಹೋಗುತ್ತಾರೆ.

ಸಿದ್ದು ಮಡದಿ ಬೋರಮ್ಮ ಮನೆಯಲ್ಲೇ ನಸುಕಿನ ನಾಲ್ಕಕ್ಕೆ ಚಾಕರಿ ಚಾಲೂ ಮಾಡ್ತ್ವಾರೆ. ಐದು ಕೆ.ಜಿ. ಹಿಟ್ಟಿನ ಐನೂರಕ್ಕೂ ಹೆಚ್ಚು ಇಡ್ಲಿ, ಐದು ಕೆ.ಜಿ. ಅಕ್ಕಿಯ ಮಸಾಲೆ ರೈಸ್‌, 5 ಕೆ.ಜಿ. ದೋಸೆ ಹಿಟ್ಟು, ಇವಕ್ಕೆ ಬೇಕಾದ ಚಟ್ನಿ, ಪಲ್ಯ ಸಾಂಬಾರು ಸಿದ್ಧ ಮಾಡುತ್ತಾರೆ.

ನಸುಕಿನ ನಾಲ್ಕು ತಾಸಿನ ಅವಧಿಯೊಳಗೆ ಮೂರ್ನಾಲ್ಕು ಸಾವಿರ ರೂಪಾಯಿಯ ವ್ಯಾಪಾರ ಮಾಡುವ ಸಿದ್ದು ಹೊಳಕುಂದಿ ಓದಿದ್ದು ಐದನೇ ತರಗತಿ. ಪೂರ್ವಾರ್ಜಿತ ಪುಟ್ಟ ಜಮೀನಿನಲ್ಲಿ ಹೊಟ್ಟೆ ತುಂಬದೇ ಚಿಂತೆಗೀಡಾದ ಸಂದರ್ಭದಲ್ಲಿ ಹೋಟೆಲ್‌ ಉದ್ಯಮಕ್ಕೆ ಕೈ ಹಿಡಿದು ಕರೆ ತಂದವರು ಇವರ ಮಾವ ಸಿಂದಗಿಯ ರೇವಣಸಿದ್ದಪ್ಪ ಕುಡಕೆ (ಅವರೂ ಕೂಡ ಇಡ್ಲಿ ಚಟ್ನಿಗೆ ಪ್ರಸಿದ್ಧಿ).

ಸಿಂದಗಿಗೆ ಕರೆದೊಯ್ದು ಒಂದು ವಾರ ತಮ್ಮಲ್ಲಿಟ್ಟುಕೊಂಡು, ಇಡ್ಲಿ-ಚಟ್ನಿ ತಯಾರಿಸುವ ವಿಧಾನ ಹೇಳಿಕೊಟ್ಟರು. ಸಾಲದೆಂಬಂತೆ ಅವರೇ ಒಂದು ವಾರ ತಾಳಿಕೋಟೆಗೆ ಬಂದು, ವ್ಯಾಪಾರದ ಗುಟ್ಟುಗಳನ್ನು ಕಲಿಸಿಕೊಟ್ಟರು.

ಬಿಡುವಿನ ಅವಧಿಯಲ್ಲಿ ತಮ್ಮ ಜಮೀನು ಕೆಲಸ. ಸಂಜೆಗೆ ಮತ್ತೆ ನಾಳಿನ ಸಿದ್ಧತೆಯಲ್ಲಿ ತೊಡಗುತ್ತಾರೆ. ಹೀಗೆ ಪ್ರತಿ ದಿನ ಕಾಯಕದಲ್ಲಿ ಕೈಲಾಸ ಕಾಣುತ್ತಾ, ಸ್ವಯಂ ಉದ್ಯೋಗಕ್ಕೆ ಮಾದರಿಯಾಗಿ ಬಸ್ ನಿಲ್ದಾಣದ ಬಳಿ ಬೆಳಗಿನ ಜಾವ ರುಚಿರುಚಿಯಾದ ಇಡ್ಲಿ ದೋಸೆಗೆ ಹೆಸರಾಗಿದ್ದಾರೆ ಸಿದ್ದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.