ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದ ಹುಡುಗ ‘ಗ್ಲೋಬಲ್ ಶೆಫ್‌’

197 ತಿನಿಸು ತಯಾರಿಕೆ, ಹಡಗಿನ ಮೇಲೂ ಅಡುಗೆ, 60 ಗಂಟೆ ಅಡುಗೆ ಮಾಡಿದ ಮಂಡ್ಯ ಹುಡುಗ
Last Updated 23 ಜನವರಿ 2019, 19:30 IST
ಅಕ್ಷರ ಗಾತ್ರ

ಅಮ್ಮನಿಗೆ ಅಡುಗೆಮನೆ ಎಂದರೆ ಪ್ರಯೋಗ ಶಾಲೆ ಇದ್ದಂತೆ, ಆದರೆ ಮಗನಿಗೆ ಅಡುಗೆಮನೆಯೇ ನಿಜವಾದ ಶಾಲೆ. ಆತ ಕಲಿತದ್ದೆಲ್ಲವೂ ಅಡುಗೆಮನೆಯಲ್ಲೇ. ಹೊಸರುಚಿ ಹುಡುಕಾಟದ ಮನೋಭಾವ ಮಗನಲ್ಲೂ ಮೂಡಿತು. ಬಾಣಸಿಗನಾಗುವ ಕನಸಿನ ಹಿಂದೆ ಓಡಿದ ಆತ ಸತತ 60 ಗಂಟೆ ಅಡುಗೆ ಮಾಡಿ ಮೂರು ವಿಶ್ವದಾಖಲೆ ಮಾಡಿದ.

ಮಂಡ್ಯದ ಹುಡುಗ ಎಂ.ಶರತ್‌ ಕುಮಾರ್‌ ಅವರಿಗೆ ಈಗಿನ್ನು 25 ವರ್ಷ ವಯಸ್ಸು. ಅಡುಗೆಮನೆ ಎಂದರೆ ಅವರಿಗೆ ವರ್ಕೌಟ್‌ ಮಾಡುವ ವ್ಯಾಯಾಮ ಶಾಲೆ, ನೃತ್ಯ ಶಾಲೆ ಕೂಡ. ಸೌಟು ಹಿಡಿದು ನಿಂತರೆ 10 ನಿಮಿಷಕ್ಕೊಂದರಂತೆ ತಿನಿಸು ತಯಾರಿಸಬಲ್ಲರು. ಮಂಡ್ಯದ ಪೇಟೆಬೀದಿ ಮನೆಯ ಕೋಣೆಯಲ್ಲಿ ಆರಂಭವಾದ ಅವರ ಅಡುಗೆ ಕೆಲಸ ಅಮೆರಿಕ, ಬ್ರೆಜಿಲ್‌, ಮೆಕ್ಸಿಕೊ ಕಿಚನ್‌ವರೆಗೂ ಸಾಗಿದೆ. ಅವರೀಗ ‘ಗ್ಲೋಬಲ್‌ ಶೆಫ್‌’.

ಇಡೀ ವಿಶ್ವದಲ್ಲಿ ಅತಿ ಹೆಚ್ಚು ಗಂಟೆಗಳ ಕಾಲ ಅಡುಗೆ ಮಾಡಿದ ಕೀರ್ತಿ ಶರತ್‌ ಪಾಲಿಗೆ ಸಿಕ್ಕಿದೆ. ‘ಲಾಂಗೆಸ್ಟ್‌ ಕುಕ್ಕಿಂಗ್‌ ಮ್ಯಾರಥಾನ್‌’ನಲ್ಲಿ ಭಾಗವಹಿಸಿದ್ದ ಅವರು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌, ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ ಹಾಗೂ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾರೆ.

ಅತಿ ಹೆಚ್ಚು ತಿನಿಸು ತಯಾರಿಸಿದ ಕೀರ್ತಿಗೂ ಶರತ್‌ ಪಾತ್ರರಾಗಿದ್ದಾರೆ. 60 ಗಂಟೆಯಲ್ಲಿ ಅವರು 197 ಖಾದ್ಯ ತಯಾರಿಸಿದ್ದಾರೆ. 40 ಗಂಟೆ ಅಡುಗೆ ಮಾಡಿ ದಾಖಲೆ ನಿರ್ಮಿಸಿದ್ದ ಅಮೆರಿಕದ ಸ್ಪೆರಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲೆ ಮಾಡಿದ್ದ ರಾಜ್‌ ಮೋಹನ್‌ ದಾಖಲೆ ಮುರಿದಿದ್ದಾರೆ. ಗಿನ್ನಿಸ್‌ ದಾಖಲೆ ಮಾಡುವ ಗುರಿಯೊಂದಿಗೆ ತಾಲೀಮು ನಡೆಸುತ್ತಿರುವ ಶರತ್‌ ಈಗ ಅಮ್ಮನೊಂದಿಗೆ ಮಂಡ್ಯದಲ್ಲಿ ಹೊಸ ರುಚಿಯ ಹುಡುಕಾಟದಲ್ಲಿ ತೊಡಗಿದ್ದಾರೆ.

ಕಳೆದ ವರ್ಷ (2018) ಏಪ್ರಿಲ್ 27 ರಿಂದ 29ರವರೆಗೆ ಬೆಂಗಳೂರಿನಲ್ಲಿ ಸ್ಪರ್ಧೆ ನಡೆದಿತ್ತು. ವಿಶ್ವದ ಹಲವು ಸ್ಟಾರ್‌ ಹೋಟೆಲ್‌ ಬಾಣಸಿಗರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಈ ಯುವಕನ ಅಡುಗೆ ಕಲೆಗೆ ತೀರ್ಪುಗಾರರು ತಲೆದೂಗಿದರು. ಒಂದು ದಿನ ದಕ್ಷಿಣ ಭಾರತ ಶೈಲಿಯ ಇಡ್ಲಿ, ದೋಸೆ, ವಡೆ, ಸಾಂಬಾರ್‌, ಚಟ್ನಿ ಮಾಡಿದರೆ ಇನ್ನೊಂದು ದಿನ ಉತ್ತರ ಭಾರತ ಶೈಲಿಯ ಪರೋಟ, ರೈಸ್‌ ಬಾತ್‌ಗಳನ್ನು ತಯಾರಿಸಿದರು. ಮತ್ತೊಂದು ದಿನ ದಕ್ಷಿಣ–ಉತ್ತರ ಭಾರತದ ತಿನಿಸುಗಳನ್ನು ಸೇರಿಸಿ ಭಾವೈಕ್ಯ ಮೆರೆದರು. ಇನ್ನೊಂದು ಚೈನೀಸ್‌, ಇಟಾಲಿಯನ್‌, ಅಮೆರಿಕನ್‌ ಶೈಲಿಯ ತಿನಿಸು ತಯಾರಿಸಿ ಗಮನ ಸೆಳೆದರು. ಮೇ ತಿಂಗಳಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಶರತ್‌ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದರು.

ಹಡಗಿನಲ್ಲೂ ಅಡುಗೆ

ವಿಶ್ವದ ಯಾವುದೇ ಭಾಗಕ್ಕೆ ತೆರಳಿದರೂ ಶರತ್‌ಗೆ ಹುಟ್ಟೂರಿನ ಅಡುಗೆ ಮನೆಯೇ ಸ್ಫೂರ್ತಿ. ಎಂ.ಮಂಜುಳಾ– ಡಿ.ಜಿ.ಮೋಹನ್‌ ದಂಪತಿಯ ಹಿರಿಯ ಪುತ್ರನಾಗಿರುವ ಶರತ್‌ ಸೇಂಟ್‌ ಜಾನ್‌ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿದರು. ನಂತರ ಮಾಂಡವ್ಯ ಕಾಲೇಜಿನಲ್ಲಿ ಪಿಯು ಮುಗಿಸಿ ತಮ್ಮ ಕನಸು ಅರಸಿ ಬೆಂಗಳೂರಿಗೆ ತೆರಳಿದರು. ಎಂ.ಎಸ್‌.ರಾಮಯ್ಯ ಹೋಟೆಲ್‌ ನಿರ್ವಹಣಾ ಸಂಸ್ಥೆಯಲ್ಲಿ ಪದವಿಗೆ ಸೇರಿದ ಅವರು ಅಲ್ಲಿ ಒಬ್ಬ ವೃತ್ತಿಪರ ಬಾಣಸಿಗನಾಗಿ ರೂಪುಗೊಂಡರು.

ಪದವಿ ಮುಗಿದ ತಕ್ಷಣ ಅವರು ಬೆಂಗಳೂರಿನ ‘ರಿಟ್ಜ್‌ ಕಾರ್ಟನ್‌’ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಬಾಣಸಿಗನಾಗಿ ಕೆಲಸಕ್ಕೆ ಸೇರಿದರು. ನಂತರ ಅಮೆರಿಕದ ‘ಕಾರ್ನಿವಾಲ್‌’ ಹೋಟೆಲ್‌ನಲ್ಲಿ ದುಡಿಯುವ ಅವಕಾಶ ಸಿಕ್ಕಿತು. ಈ ಹೋಟೆಲ್‌ ಹಡಗಿನಲ್ಲಿತ್ತು. ಒಂದು ವರ್ಷ ಸಮುದ್ರದ ಮೇಲೆಯೇ ಇದ್ದರು. ಆ ಹೋಟೆಲ್‌ ವಿಶ್ವದ ಹಲವು ರಾಷ್ಟ್ರಗಳಲ್ಲಿದ್ದ ಕಾರಣ ಮೆಕ್ಸಿಕೊ, ಬ್ರೆಜಿಲ್‌ನಲ್ಲೂ ಕೆಲಸ ಮಾಡುವ ಅವಕಾಶ ಸಿಕ್ಕಿತು.

ಸದ್ಯ ಶರತ್‌ಕುಮಾರ್‌ ‘ಯೆಲ್ಲೋ ಟೈ ಹಾಸ್ಪಿಟಾಲಿಟಿ’ ಕಂಪನಿಯಲ್ಲಿ ಕಾರ್ಪೊರೇಟ್‌ ಶೆಫ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಕಂಪನಿ ನಡೆಸುವ ಹೋಟೆಲ್‌ಗಳು ಬೆಂಗಳೂರು ಸೇರಿ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿವೆ. ಆಗಾಗ ಹಲವು ರಾಷ್ಟ್ರಗಳಿಗೆ ಪ್ರಯಾಣ ಮಾಡುತ್ತಾರೆ.

ಶರತ್‌ ತಂದೆ ಮಂಡ್ಯದ ಪೇಟೆ ಬೀದಿಯಲ್ಲಿ ಹಗ್ಗ, ದಾರ, ಕುಣಿಕೆ ಸೇರಿ ಕೃಷಿ ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ ನಡೆಸುತ್ತಿದ್ದಾರೆ. ಮಗನ ಅಡುಗೆ ಕಲೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ ಎಂದು ಎಂದೂ ನಿರೀಕ್ಷಿಸಿದವರಲ್ಲ. ಆದರೆ ಮಗನ ಸಾಧನೆಗೆ ಪೋಷಕರ ಮನಸ್ಸು ತುಂಬಿ ಬಂದಿದೆ.

ಹುಟ್ಟೂರಲ್ಲಿ ದಾಖಲೆ ಮಾಡುವಾಸೆ

ಅಡುಗೆ ಕಲೆಯಲ್ಲಿ ಹಲವು ದಾಖಲೆ ಬರೆದಿರುವ ಶರತ್‌ ಕುಮಾರ್‌ ಸಕ್ಕರೆ ನಗರ ಮಂಡ್ಯದಲ್ಲಿ ವಿಶ್ವ ದಾಖಲೆ ಮಾಡುವ ತಯಾರಿಯಲ್ಲಿದ್ದಾರೆ. ಕನಸುಗಳನ್ನು ಕೊಟ್ಟ ಹುಟ್ಟೂರಿನ ಜನರ ಮುಂದೆ ಸಾಧನೆ ಮಾಡಬೇಕೆಂಬ ಹಂಬಲ ಅವರಲ್ಲಿದೆ. ಅದಕ್ಕಾಗಿ ಅವರು ಹಲವು ಯೋಜನೆಗಳನ್ನು ತಯಾರಿಸಿದ್ದಾರೆ.

‘ಈಗ ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಬಂದಿದ್ದೇನೆ. ನಮ್ಮ ಊರಿನಿಂದ ಶೀಘ್ರವೇ ವಿಶ್ವ ದಾಖಲೆ ಮಾಡುವ ಉದ್ದೇಶವಿದೆ. ಅದಕ್ಕಾಗಿ ಗೆಳೆಯರ ಜೊತೆಗೂ ಮಾತನಾಡುತ್ತಿದ್ದೇನೆ. ಶೀಘ್ರ ಇಲ್ಲೊಂದು ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ’ ಎನ್ನುತ್ತಾರೆ ಶರತ್‌ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT