ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭ್ಯರು ಸಾರ್‌.. ನಾವು ಸಭ್ಯರು..

ಮೆಟ್ರೊ ರೈಲು ಪ್ರಯಾಣಿಕರ ಪ್ರಯಾಣ ಸಭ್ಯತೆ: ಹೀಗೊಂದು ಅಧ್ಯಯನ
Last Updated 10 ಮಾರ್ಚ್ 2019, 19:38 IST
ಅಕ್ಷರ ಗಾತ್ರ

ಪ್ರತಿನಿತ್ಯ ನಾಲ್ಕು ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಪ್ರಯಾಣಿಕರನ್ನು 281 ಟ್ರಿಪ್‌ಗಳ ಮೂಲಕ ವಿವಿಧ ಗಮ್ಯಗಳಿಗೆ ತಲುಪಿಸುವ ನಮ್ಮ ಮೆಟ್ರೊ ವಿವಿಧತೆಯಲ್ಲಿ ಏಕತೆ ಸಾಬೀತುಪಡಿಸುವ ವೇದಿಕೆ.

ದೇಶ, ಭಾಷೆ, ಧರ್ಮ, ವಯೋಮಾನ ಹಾಗೂ ವೃತ್ತಿಗಳ ಪ್ರಯಾಣಿಕರು ಒಟ್ಟಿಗೆ ಪಯಣಿಸುವುದು ಬಹುತ್ವದ ಪ್ರತೀಕ. ಮನಸ್ಥಿತಿಗಳ ಅಧ್ಯಯನಕ್ಕೆ ರೈಲುಗಳಲ್ಲಿ ದರ್ಶನವಾಗುವ ಬದುಕಿನ ರೀತಿ-ರಿವಾಜುಗಳೇ ಅತ್ಯುತ್ತಮ ಸಾಮಗ್ರಿ. ಅದರಲ್ಲೂ ಭಾರತೀಯರ 'ಪ್ರಯಾಣ ಸಭ್ಯತೆ' ಮಟ್ಟ ತಿಳಿಯಲು ಮೆಟ್ರೊ ರೈಲುಗಳಿಗಿಂತ ಮತ್ತೊಂದು ವೇದಿಕೆ ಇಲ್ಲ.

ರೈಲುಗಳಲ್ಲಿ ಕಂಡು ಬರುವ ರಿವಾಜುಗಳು 'ಪ್ರಯಾಣ ಸಭ್ಯತೆ'ಯ ಕೆಳ ಮಟ್ಟವನ್ನು ಸೂಚಿಸುತ್ತವೆ. ಇದರ ಒಂದು ಮಜಲನ್ನು ಹೀಗೂ ನೋಡಬಹುದು.ರೈಲುಗಳಲ್ಲಿ ಪಯಣಿಸುವವರಲ್ಲಿ ಶೇಕಡಾ 90 ಪ್ರಯಾಣಿಕರು ಮೊಬೈಲ್ ಫೋನ್‌ಗಳಲ್ಲಿಯೇ ಮಗ್ನರಾಗಿರುತ್ತಾರೆ. ಕೆಲವರು ಮೊಬೈಲ್ ಫೋನ್ ಉಪಯೋಗಿಸುವವರು, ಉಳಿದವರು ಮೊಬೈಲ್ ಫೋನ್‌ಗಳಲ್ಲಿ ಸಹ ಪ್ರಯಾಣಿಕರು ಏನೇನು ಮಾಡುತ್ತಿದ್ದಾರೆ ಎಂಬುದನ್ನು ಕದ್ದು-ಮುಚ್ಚಿ ನೋಡುವವರು. ಒಂದು ವರ್ಗ ಮೊಬೈಲ್‌ನಲ್ಲಿ ಮಾತನಾಡುವುದು, ಚಾಟ್ ಮಾಡುವುದು, ವಿಡಿಯೋ-ಚಿತ್ರ ನೋಡುವುದು ಹಾಗೂ ಜಾಲತಾಣಗಳಲ್ಲಿ ಹುಡುಕಾಟದಲ್ಲಿ ಮಗ್ನ. ಇನ್ನೊಂದು ವರ್ಗ ಅದನ್ನು ಕದ್ದು-ಮುಚ್ಚಿ ನೋಡುವುದು. ವಿಪರ್ಯಾಸವೆಂದರೆ, ಈ ಎರಡೂ ವರ್ಗಗಳ ಪ್ರಯಾಣಿಕರಿಗೆ ಉಳಿದವರು ತಮ್ಮನ್ನು ಗಮನಿಸುತ್ತಿದ್ದಾರೆ ಎಂಬುದರ ಪರಿವೆಯೇ ಇರುವುದಿಲ್ಲ.

‘ನಾನು ಪ್ರತಿನಿತ್ಯ ಮೈಸೂರು ರಸ್ತೆಯಿಂದ ಇಂದಿರಾನಗರಕ್ಕೆ ಪ್ರಯಾಣಿಸುತ್ತೇನೆ. ಕೆಲವೊಮ್ಮೆ ಅಸಹ್ಯ ಅನಿಸುವ ವಿಷಯಗಳು ಬೇಡವೆಂದರೂ ಕಿವಿಗೆ ಬೀಳುತ್ತವೆ. ಮೆಲುದನಿಯಲ್ಲಿ ಮಾತನಾಡಿ ಎಂದು ವಿನಂತಿಸಿದರೂ ಪ್ರಯೋಜನವಾಗದು. ಇದರಲ್ಲಿ ಬಹುತೇಕರು ವಿದ್ಯಾರ್ಥಿ-ವಿದ್ಯಾರ್ಥಿನಿಯರು. ಕೆಲವೊಂದು ವಿಷಯಗಳನ್ನು ಕೇಳಿಸಿಕೊಂಡರೆ ನೈತಿಕತೆಯ, ಕೌಟುಂಬಿಕ ಸಂಬಂಧಗಳು ಹಾಗೂ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಅನುಮಾನಗಳು ಮೂಡುತ್ತವೆ’ ಎಂಬ ಅರಣಿಮಾ ಅವರ ಮಾತು ನೈಜತೆಗೆ ಹಿಡಿದ ಕನ್ನಡಿ.

ಮನೋವೈದ್ಯರ ಪ್ರಕಾರ ಕೆಲವು ಖಾಸಗಿಯಾಗಿಯೇ ನೋಡಬೇಕಾದ ಸಂದೇಶಗಳು ಹಾಗೂ ಚಿತ್ರ-ವಿಡಿಯೋಗಳ ಸಾರ್ವಜನಿಕ ವೀಕ್ಷಣೆ 'ಪ್ರಯಾಣ ಸಭ್ಯತೆ'ಗೆ ವಿರುದ್ಧ. ಕದ್ದು ಮುಚ್ಚಿ ನೋಡುವುದು ಸಭ್ಯತೆ ಅಲ್ಲ ಎನ್ನುವುದು ತಿಳಿದಿದ್ದರೂ
ಕದ್ದು-ಮುಚ್ಚಿ ನೋಡುವುದು ನೈತಿಕ ಅಧಃಪತನದ ಸಂಕೇತ.

ಈ ಪ್ರಯಾಣಿಕರಲ್ಲಿ ಇನ್ನೊಂದು ವರ್ಗವಿದೆ. ಇವರು ಎಷ್ಟು ಸಾಧ್ಯವೋ ಅಷ್ಟು ಜೋರಾದ ದನಿಯಲ್ಲಿ ಮಾತನಾಡುತ್ತಾರೆ. ಇನ್ನೂ ಕೆಲ ಯುವಕ-ಯುವತಿಯರು ತಮ್ಮ ಇರುವಿಕೆಯನ್ನು ನಿರೂಪಿಸುವ ಸಲುವಾಗಿ ಹಾಗೂ ಸಹ ಪ್ರಯಾಣಿಕರ ಗಮನವನ್ನು ತಮ್ಮ ಕಡೆಗೆ ಸೆಳೆಯುವ ಸಲುವಾಗಿ ಎತ್ತರದ ದನಿಯಲ್ಲಿ ಮಾತನಾಡುತ್ತಾರೆ. ಈ ವರ್ತನೆಗಳು ಕೂಡ ಸಭ್ಯತೆಯ ಲಕ್ಷಣಗಳಲ್ಲ.

ಅಭಯ ಆಸ್ಪತ್ರೆಯ ಮನೋವೈದ್ಯ ಡಾ. ಎ ಜಗದೀಶ್ ಪ್ರಕಾರ ಭಾರತಿಯರು ಪ್ರಯಾಣ ಸಭ್ಯತೆಯಲ್ಲಿ ಹಿಂದುಳಿದಿದ್ದಾರೆ. ಐರೋಪ್ಯ ದೇಶಗಳಲ್ಲಿ 'ಪ್ರಯಾಣ ಸಭ್ಯತೆ'ಗೆ ಹೆಚ್ಚಿನ ಮಹತ್ವವಿದೆ. 'ಪ್ರಯಾಣ ಸಭ್ಯತೆ' ಎಂದರೆ ಸಹ ಪ್ರಯಾಣಿಕರಿಗೆ ತೊಂದರೆ ಮಾಡದಿರುವುದು. ಜೋರಾಗಿ ಮಾತನಾಡದಿರುವುದು. ಕದ್ದು-ಮುಚ್ಚಿ ಸಹಪ್ರಯಾಣಿಕರನ್ನು ನೋಡದಿರುವುದು. ಅನಗತ್ಯವಾಗಿ ಅವರೊಡನೆ ಮಾತನಾಡದೇ ಇರುವುದು ಹಾಗೂ ಪ್ರಯಾಣವನ್ನು ಒಂದು ಉತ್ತಮ ಅನುಭವವನ್ನಾಗಿಸಲು ಸಾಧ್ಯವಿರುವಷ್ಟು ಪ್ರಯತ್ನಿಸುವುದು. ಅಲ್ಲಿ ಸಹಪ್ರಯಾಣಿಕರ ಜೊತೆ ಶುಭಾಶಯ ವಿನಿಮಯದ ನಂತರ ಯಾವುದೇ ಮಾತು-ಕತೆ ನಡೆಯುವುದಿಲ್ಲ.

‘ಕಳೆದ ಕೆಲ ದಶಕಗಳಿಂದೀಚೆಗೆ 'ಪ್ರಯಾಣ ಸಭ್ಯತೆ' ಭಾರತೀಯರಲ್ಲಿಯೂ ಗಮನಾರ್ಹವಾಗಿ ಸುಧಾರಿಸಿದೆ. ಈಗೀಗ ಪ್ರಯಾಣದ ಸಂದರ್ಭಗಳಲ್ಲಿ ಅಪರಿಚಿತರೊಡನೆ ಅನಗತ್ಯ ಮಾತುಗಳು ಕಡಿಮೆಯಾಗಿವೆ. ಇದು ಖಂಡಿತವಾಗಿ ಮಾನಸಿಕ ಕಾಯಿಲೆಯಲ್ಲ’ ಎಂದು ಒತ್ತಿ ಹೇಳುವ ಡಾ ಜಗದೀಶ್ ಇದನ್ನು ಗೀಳು ಅಥವಾ ರೆಸ್ಟ್‌ಲೆಸ್‌ನೆಸ್ ಎಂದು ಗುರುತಿಸುತ್ತಾರೆ.

‘ದಶಕಗಳ ಹಿಂದೆ ಮಾನಸಿಕವಾಗಿ ಎಂಗೇಜ್ ಆಗುವ ಸಲುವಾಗಿಯೋ ಅಪರಿಚಿತರೊಡನೆ ಸಂಬಂಧವೇ ಇಲ್ಲದ ವಿಷಯಗಳನ್ನು ಮಾತನಾಡುವುದು ಸಾಮಾನ್ಯವಾಗಿತ್ತು. ಈಗ ಸುಲಭವಾಗಿ ಮೊಬೈಲ್ ಫೋನ್‌ಗಳು ಲಭ್ಯವಿರುವುದರಿಂದ ಮಾನಸಿಕವಾಗಿ ಎಂಗೇಜ್ ಆಗಲು ಎಲ್ಲರೂ ಹಪಹಪಿಸುತ್ತಾರೆ. ಬಸ್ ಅಥವಾ ಟ್ರೇನ್‌ ಹತ್ತಿದ ನಂತರ ಮೊಬೈಲ್ ಬಳಕೆ ಶುರು ಮಾಡುತ್ತಾರೆ. ಒಂದೇ ಒಂದು ಸೆಕೆಂಡ್ ತಡವಾದರೂ ಕೆಲವರು ರೆಸ್ಟ್‌ಲೆಸ್‌ ಆಗುತ್ತಾರೆ. ಇನ್ನೂ ಕೆಲವರು ಮೊಬೈಲ್ ಫೋನ್ ಉಪಯೋಗಿಸುತ್ತಲೇ ಬಸ್ ಅಥವಾ ಟ್ರೇನ್‌ ಹತ್ತುತ್ತಾರೆ. ಅಪರಿಮಿತ ವೇಗದಲ್ಲಿ ಮೊಬೈಲ್ ಉಪಯೋಗಿಸುವವರೂ ಇದ್ದಾರೆ. ಅದು ಕೂಡ ರೆಸ್ಟ್‌ಲೆಸ್‌ನೆಸ್ ಸಂಕೇತ’ ಎನ್ನುತ್ತಾರೆ ಡಾಕ್ಟರ್‌.

ಇದಕ್ಕೆಲ್ಲ ಪರಿಹಾರ ಇಲ್ಲ. ಇದು ಕಾಯಿಲೆಯಲ್ಲವಾದ್ದರಿಂದ ಔಷಧಿಯಿಲ್ಲ. ‘ಪ್ರಯಾಣ ಸಭ್ಯತೆ’ ವಿಷಯ ಮನೆಯಿಂದಲೇ ಆರಂಭವಾಗಬೇಕು. ಪಾಲಕರು ಮಕ್ಕಳಿಗೆ ಬಸ್ ಹಾಗೂ ರೈಲುಗಳಲ್ಲಿ ಪ್ರಯಾಣಿಸುವಾಗ ಹೇಗೆ ವರ್ತಿಸಬೇಕೆಂಬುದನ್ನು ಹೇಳಿಕೊಡಬೇಕು. ಜೋರಾಗಿ ಮಾತನಾಡುವ ಪ್ರಯಾಣಿಕರನ್ನು ಕಂಡಾಗ ತರಾಟೆಗೆ ತೆಗೆದುಕೊಂಡು ಇಂತಹ ವರ್ತನೆ ‘ಪ್ರಯಾಣ ಸಭ್ಯತೆ’ಯಲ್ಲ ಎಂದು ಮನವರಿಕೆ ಮಾಡಿಕೊಡಬೇಕು. ಸಾರ್ವಜನಿಕವಾಗಿ ಗುರಿಯಾಗುವ ಪ್ರಯಾಣಿಕರು ಅಂಥ ವರ್ತನೆಯನ್ನು ಪುನರಾವರ್ತನೆಗೊಳಿಸುವ ಸಾಧ್ಯತೆ ಕಡಿಮೆಯಿರುತ್ತದೆ’ ಎನ್ನುವುದು ಅವರ ಸಲಹೆ.

**

ಈಗೀಗ ಪ್ರಯಾಣದ ಸಂದರ್ಭಗಳಲ್ಲಿ ಅಪರಿಚಿತರೊಡನೆ ಅನಗತ್ಯ ಮಾತುಗಳು ಕಡಿಮೆಯಾಗಿವೆ. ಖಂಡಿತವಾಗಿ ಮಾನಸಿಕ ಕಾಯಿಲೆಯಲ್ಲ. ಇದು ಗೀಳು ಅಥವಾ ರೆಸ್ಟ್‌ಲೆಸ್‌ನೆಸ್. ದಶಕಗಳ ಹಿಂದೆ ಮಾನಸಿಕವಾಗಿ ಎಂಗೇಜ್ ಆಗುವ ಸಲುವಾಗಿಯೋ ಅಪರಿಚಿತರೊಡನೆ ಸಂಬಂಧವೇ ಇಲ್ಲದ ವಿಷಯಗಳನ್ನು ಮಾತನಾಡುವುದು ಸಾಮಾನ್ಯವಾಗಿತ್ತು. ಈಗ ಸುಲಭವಾಗಿ ಮೊಬೈಲ್ ಫೋನ್‌ಗಳು ಲಭ್ಯವಿರುವುದರಿಂದ ಮಾನಸಿಕವಾಗಿ ಎಂಗೇಜ್ ಆಗಲು ಎಲ್ಲರೂ ಹಪಹಪಿಸುತ್ತಾರೆ. ಬಸ್ ಅಥವಾ ಟ್ರೇನ್‌ ಹತ್ತಿದ ನಂತರ ಮೊಬೈಲ್ ಬಳಕೆ ಶುರು ಮಾಡುತ್ತಾರೆ. ಒಂದೇ ಒಂದು ಸೆಕೆಂಡ್ ತಡವಾದರೂ ಕೆಲವರು ರೆಸ್ಟ್‌ಲೆಸ್‌ ಆಗುತ್ತಾರೆ. ಕೆಲವರು ಮೊಬೈಲ್ ಫೋನ್ ಉಪಯೋಗಿಸುತ್ತಲೇ ಬಸ್ ಅಥವಾ ಟ್ರೇನ್‌ ಹತ್ತುತ್ತಾರೆ. ಅಪರಿಮಿತ ವೇಗದಲ್ಲಿ ಮೊಬೈಲ್ ಉಪಯೋಗಿಸುವವರೂ ಇದ್ದಾರೆ. ಅದು ಕೂಡ ರೆಸ್ಟ್‌ಲೆಸ್‌ನೆಸ್ ಸಂಕೇತ
– ಡಾ.ಜಗದೀಶ್, ಅಭಯ ಆಸ್ಪತ್ರೆಯ ಮನೋವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT