ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಲಾರಿ ಹೋಟೆಲ್‌ನ ಚುರುಮುರಿ ಚೂಡಾ..!

Last Updated 26 ಏಪ್ರಿಲ್ 2019, 19:46 IST
ಅಕ್ಷರ ಗಾತ್ರ

ತಾಂಬಾ:ಚುರುಮುರಿ ಚೂಡಾಗೆ ಗ್ರಾಮದ ಮೈಲಾರಿ ಮಣಗಿರಿ ಹೋಟೆಲ್ ತುಂಬಾ ಫೇಮಸ್ಸಾಗಿದೆ. ಮುಂಜಾನಿ ನಾಷ್ಟಾ ಬಿಟ್ಟರೇ, ದಿನವಿಡಿ ಇಲ್ಲಿ ಚೂಡಾದ್ದೇ ಘಮಲು.

ಮೈಲಾರಿ ಹಲ ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದಾರೆ. ಇವರಲ್ಲಿ ತಯಾರಾಗುವ ಚುರುಮುರಿ ಚೂಡಾಗೆ ತಾಂಬಾದಲ್ಲಷ್ಟೇ ಅಲ್ಲ; ಸುತ್ತಮುತ್ತಲಿನ ಹಳ್ಳಿಗಳಲ್ಲೂ ಭಾರಿ ಬೇಡಿಕೆಯಿದೆ.

ನಿತ್ಯವೂ ವಿವಿಧ ಕೆಲಸಗಳ ನಿಮಿತ್ತ ತಾಂಬಾ ಗ್ರಾಮಕ್ಕೆ ಬರುವ ಬಂಥನಾಳ, ವಾಡೆ, ಸುರಗಿಹಳ್ಳಿ, ಗೂಗಿಹಾಳ, ಬನ್ನಟ್ಟಿ, ಶಿವಪುರ, ಗೊರನಾಳ, ಕೆಂಗನಾಳ, ಬೆನಕನಹಳ್ಳಿ, ಚಿಕ್ಕರೂಗಿ, ಕಡ್ಲೇವಾಡ, ಗಂಗನಹಳ್ಳಿ, ಹಿಟ್ನಳ್ಳಿ, ತಾಂಬಾ ತಾಂಡಾ ಸೇರಿದಂತೆ ಹಲ ಊರುಗಳ ಜನರು ಮೈಲಾರಿ ಹೋಟೆಲ್‌ನ ಕಾಯಂ ಗ್ರಾಹಕರು.

ಮುಂಜಾನೆ ಬಂದರೆ ಪೂರಿ–ಬಾಜಿ, ಚುರುಮುರಿ ಸೂಸಲಾ, ಬಜಿ ನಾಷ್ಟಾ ಮಾಡ್ತ್ವಾರೆ. ಮಧ್ಯಾಹ್ನದ ಮೇಲೆ ಬಂದರೆ ಚುರುಮುರಿ ಚೂಡಾ, ಬಜಿ ಕಾಯಂ ಉಪಾಹಾರ. ರಾತ್ರಿ ಎಂಟರ ತನಕವೂ ಚುರುಮುರಿ ಚೂಡಾ ಗರಂ ಗರಂ ತಯಾರಾಗಿ, ಗ್ರಾಹಕರ ಬಾಯಿರುಚಿ ತಣಿಸುತ್ತದೆ. ವಿವಿಧ ಹಳ್ಳಿಗಳ ಬಹುತೇಕರು ತಾವು ತಿನ್ನುವ ಜತೆ, ಊರಿಗೆ ಮರಳುವಾಗ ಪಾರ್ಸೆಲ್ ಕೊಂಡೊಯ್ಯುವುದು ಸಹಜ.

ಗ್ರಾಮೀಣ ಪ್ರದೇಶದಲ್ಲಿ ಯುವಕರು, ಯುವತಿಯರು ಚೂಡಾ ಪಾರ್ಟಿ ಆಯೋಜಿಸಿದರೆ, ಮನೆಯಲ್ಲೇ ತಯಾರಿಸುವ ಗೋಜಿಗೆ ಹೋಗಲ್ಲ. ಬೈಕ್‌ಗಳಲ್ಲಿ ಗೆಳೆಯರಿಬ್ಬರು ತಾಂಬಾಗೆ ಬಂದು, ಮೈಲಾರಿ ಹೋಟೆಲ್‌ನಿಂದ ಚುರುಮುರಿ ಚೂಡಾ ಕೊಂಡೊಯ್ಯುವುದು ವಿಶೇಷ.

ತಾಂಬಾದಲ್ಲಿ ಹಲವು ಹೋಟೆಲ್‌ಗಳಿವೆ. ಆದರೂ ಬಹುತೇಕರು ಮೈಲಾರಿ ಹೋಟೆಲ್‌ಗೆ ಭೇಟಿ ಕೊಡ್ತ್ವಾರೆ. ಇಲ್ಲಿ ಶುಚಿ–ರುಚಿಯ ಜತೆಗೆ, ಧಾರಣೆಯೂ ಕಡಿಮೆ. ಆದ್ದರಿಂದ ಗ್ರಾಹಕರು ಹೆಚ್ಚಿರುತ್ತಾರೆ. ನಿತ್ಯವೂ ಕನಿಷ್ಠ 200ಕ್ಕೂ ಹೆಚ್ಚು ಮಂದಿ ಚೂಡಾ ಸವಿಯುತ್ತಾರೆ.

ನಾಲ್ಕು ಪೂರಿ–ಬಾಜಿಯ ಧಾರಣೆ ₹ 20. ಚುರುಮುರಿ ಸೂಸಲಾದ ಬೆಲೆ ₹ 15. ನಾಲ್ಕು ಬಜಿಯ ದರ ₹ 15. ₹ 20ಕ್ಕೆ ಒಂದು ಚುರುಮುರಿ ಚೂಡಾ ಖರೀದಿಸಿದರೆ, ಇಬ್ಬರು ಹೊಟ್ಟೆ ತುಂಬಾ ತಿನ್ನಬಹುದು. ಇದು ಈ ಹೋಟೆಲ್‌ನ ವಿಶೇಷತೆ.

ಮೈಲಾರಿ ಮಣಗಿರಿ ನಿತ್ಯವೂ ಒಂದು ಚೀಲದಿಂದ ಒಂದೂವರೆ ಚೀಲಕ್ಕೂ ಹೆಚ್ಚು ಚುರುಮುರಿ ಚೂಡಾ ಮಾಡ್ತ್ವಾರೆ. ಅದಿಷ್ಟು ಖಾಲಿಯಾಗುತ್ತದೆ. ಬೋಗುಣಿಯಲ್ಲಿ ಖಾಲಿಯಾದಂತೆ ಗರಂ ಗರಂ ಚೂಡಾ ಮಾಡೋದು ಇವರಿಗೆ ಕರಗತ. ಇದನ್ನು ಸವಿಯಲಿಕ್ಕಾಗಿಯೇ ಜನರು ಪಾಳಿ ಹಚ್ತ್ವಾರೆ.

ಗ್ರಾ.ಪಂ. ಮಗ್ಗುಲಲ್ಲೇ ‘ಮೈಲಾರಿ’:

ಮೈಲಾರಿ ಮಣಗಿರಿ ಆರಂಭದ ದಿನಗಳಲ್ಲಿ ತಾಂಬಾದ ಊರೊಳಗೆ ಹೋಟೆಲ್‌ ನಡೆಸುತ್ತಿದ್ದರು. ಮೂರ್ನಾಲ್ಕು ವರ್ಷದ ಹಿಂದೆ ಗ್ರಾಮ ಪಂಚಾಯ್ತಿ ಸನಿಹಕ್ಕೆ ತಮ್ಮ ಹೋಟೆಲ್ ಸ್ಥಳಾಂತರಿಸಿದರು. ಆಗಿನಿಂದಲೂ ಇವರಿಗೆ ಶುಕ್ರದೆಸೆ.

ಹೋಟೆಲ್ ಬಾಗಿಲು ತೆರೆಯುತ್ತಿದ್ದಂತೆ ಗ್ರಾಹಕರು ದಾಂಗುಡಿಯಿಡುತ್ತಾರೆ. ಗ್ರಾಮ ಪಂಚಾಯ್ತಿ, ಸರ್ಕಾರಿ ಶಾಲೆ, ನೆಮ್ಮದಿ ಕೇಂದ್ರ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಶಾಖೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಕನ್ನಡ ಹೆಣ್ಣು ಮಕ್ಕಳ ಶಾಸಕರ ಸರ್ಕಾರಿ ಮಾದರಿ ಶಾಲೆಗೆ ಸಮೀಪದಲ್ಲೇ ಮೈಲಾರಿ ಹೋಟೆಲಿದೆ. ವಿವಿಧ ಕೆಲಸಗಳ ನಿಮಿತ್ತ ಇಲ್ಲಿಗೆ ಭೇಟಿ ನೀಡುವ ಬಹುತೇಕರು ಮಣಗಿರಿ ಹೋಟೆಲ್‌ಗೆ ಬರುವುದು ವಾಡಿಕೆ.

ನಸುಕಿನ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಮೈಲಾರಿ ಹೋಟೆಲ್‌ ಕಾರ್ಯಾಚರಿಸುತ್ತದೆ. ಪತಿ–ಪತ್ನಿ ಇಬ್ಬರೇ ಎಲ್ಲವನ್ನೂ ಸಂಭಾಳಿಸೋದು ವಿಶೇಷ. ಆಗಾಗ್ಗೆ ಪುತ್ರನೂ ಸಾಥ್ ನೀಡ್ತ್ವಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT