ಊಟವಿಲ್ಲದೆ ಬದುಕಬಹುದೇ?

7

ಊಟವಿಲ್ಲದೆ ಬದುಕಬಹುದೇ?

Published:
Updated:
Deccan Herald

ದಶೋಪನಿಷತ್ತುಗಳಲ್ಲಿ ಒಂದಾದ ಛಾಂದೋಗ್ಯ.ಅಪ್ಪ ಉದ್ದಾಲಕ, ಮಗ ಶ್ವೇತಕೇತುವಿಗೆ ಪಾಠ ಮಾಡುವ ಪ್ರಸಂಗ ಅದರಲ್ಲಿದೆ. ‘ಮೊದಲು ಹದಿನೈದು ದಿನ ಉಪವಾಸವಿರಿಸಿ, ವೇದಮಂತ್ರಗಳನ್ನು ಪಠಿಸಲು ಹೇಳುತ್ತಾನೆ. ಮಗ ಹಸಿವಿನಿಂದ ಕುಂದಿ, ನಿತ್ರಾಣನಾಗಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾನೆ. ಆಗ ಅಪ್ಪ ಅವನಿಗೆ ಊಟ ಮಾಡಿಬಂದು, ಬಳಿಕ ಮಂತ್ರಗಳನ್ನು ಪಠಿಸಲು ಸೂಚಿಸುತ್ತಾನೆ. ತದನಂತರ ತೇಜಸ್ಸು, ಶಕ್ತಿ ಪಡೆದು ಅನ್ನವೇ ಬ್ರಹ್ಮ ಎಂದು ಅವನು ಉದ್ಗರಿಸುತ್ತಾನೆ. ಇದು ಸುಮಾರು 2500 ಸಾವಿರ ವರ್ಷಕ್ಕೂ ಹಿಂದೆ ನಡೆದ ಪಾಠ. ಪ್ರಾಯಶಃ ಇದು ಮೊದಲ ಆಹಾರವಿಜ್ಞಾನದ ಪಾಠವೆಂದರೆ ತಪ್ಪಾಗಲಾರದು.

ಹಾಗೆಯೇ ಬುದ್ಧ ತನ್ನ ಏಳುವರ್ಷದ ಸತತವಾದ ಕಠಿಣ ತಪಸ್ಸಿನ ಫಲವಾಗಿ ಹೊಟ್ಟೆ ಬೆನ್ನಿಗೆ ಅಂಟಿಕೊಂಡು, ಮೂಳೆಗಳನ್ನು ಲೆಕ್ಕ ಹಾಕಬಲ್ಲಂಥ ಸ್ಥಿತಿಗೆ ತಲುಪಿದ್ದ. ಆಗ ಸುಜಾತ ಎಂಬುವಳು ಅವನಿಗೆ ಗಂಜಿ ಕೊಡುತ್ತಾಳೆ. ಅದನ್ನು ಕುಡಿದ ಬುದ್ಧ ಚೈತನ್ಯವನ್ನು ಪಡೆಯುತ್ತಾನೆ. ಒಂದು ವೇಳೇ ಅವನು ತನ್ನ ಉಪವಾಸವನ್ನು ಮುಂದುವರಿಸಿದಿದ್ದರೆ, ಆಗ ಅವನಿಗೆ ಸಾವು ಸಿಗುತ್ತಿತ್ತೆ ವಿನಾ ನಿರ್ವಾಣವಲ್ಲ ಎನಿಸುತ್ತದೆ. . ತೈತ್ತಿರೀಯ ಉಪನಿಷತ್ತಿನಲ್ಲಿ ಕೋಶಗಳನ್ನು ವಿವರಿಸುತ್ತಾ ಅನ್ನಮಯಕೋಶದಿಂದಲೇ ಪ್ರಾರಂಭವಾಗಿ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಕೋಶದ ಮೂಲಕ ಆನಂದಮಯಕೋಶಕ್ಕೆ ತಲುಪುವುದನ್ನು ವಿವರಿಸುತ್ತದೆ. ಅನ್ನವಿಲ್ಲದೆ, ಪ್ರಾಣವಿಲ್ಲ, ಪ್ರಾಣವಿಲ್ಲದೆ ಯಾವ ಮನಸ್ಸೂ, ವಿಜ್ಞಾನವೂ, ಆನಂದವೂ ಇಲ್ಲವೇ ಇಲ್ಲ. ಇತ್ತೀಚೆಗೆ ಪತ್ರಿಕೆಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ಊಟವಿಲ್ಲದೆ, ಕೇವಲ ಪ್ರಾಣಾಯಾಮ ಮತ್ತು ಸೂರ್ಯನನ್ನು ನೋಡಿ, ಹದಿನೆಂಟು ವರ್ಷ ಬದುಕಿರುವವನ ಬಗೆಗೆ ವರದಿಯಾಯಿತು. ಈ ವ್ಯಕ್ತಿ ವಿದೇಶದಿಂದ ಕರ್ನಾಟಕಕ್ಕೆ ಚಿಕಿತ್ಸೆಗಾಗಿ ಬಂದಿದ್ದರು. ಅವರೇ ಹೇಳಿದಂತೆ ಕೇವಲ ನೀರು ಮಾತ್ರ ಕುಡಿದು ಪ್ರಾಣಾಯಾಮ ಮಾಡಿಕೊಂಡು ಯಾವುದೇ ತೊಂದರೆಯಿಲ್ಲದೆ ಬದುಕುತ್ತಿದ್ದೇನೆ ಎಂದು. ಇಂತಹ ವಿಷಯಗಳ ಬಗ್ಗೆ ಮುಕ್ತ ವಿಶ್ಲೇಷಣೆ ನಡೆಯಬೇಕು.

ಆದರೂ ಸಾರ್ವತ್ರಿಕ ಸತ್ಯದ ವಿರುದ್ಧ ಇಂತಹ ವಿಷಯಗಳು ಹೊರಬಂದಾಗ, ನಮ್ಮ ಆಲೋಚನೆಗಳು ಭಾರತೀಯ ತರ್ಕಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಅನುಮಾನ ಮತ್ತು ಅರ್ಥಾಪತ್ತಿಯನ್ನು ಉಪಯೋಗಿಸುವುದು ಸಹಜವೇ. ಅಲ್ಲಿ ದೇವದತ್ತ ದಪ್ಪ ಇದ್ದಾನೆ, ಆದರೆ ಊಟ ಮಾಡುವುದಿಲ್ಲ ಎಂಬ ಮಾತನ್ನು ನೋಡಬಹುದು. ಅವನು ಯಾರಿಗೂ ತಿಳಿಯದೆ ರಾತ್ರಿ ಕದ್ದು ಊಟ ಮಾಡುತ್ತಾನೆ ಎಂದು ಆ ವಾಕ್ಯವೇ ಸೂಚಿಸುತ್ತದೆ. ಪ್ರತ್ಯಕ್ಷ ಪ್ರಮಾಣಗಳಿಗೆ ನಿಲುಕದ್ದನ್ನು ಅನುಮಾನ ಮತ್ತು ಅರ್ಥಾಪತ್ತಿಗಳ ಮೂಲಕ ತಿಳಿಯಬೇಕು ಎನ್ನುವುದನ್ನು ಸಾವಿರಾರು ವರ್ಷಗಳ ಮೊದಲೇ ನಮ್ಮಲ್ಲಿ ಹೇಳಿದ್ದರೂ ನಾವು ಮಾತ್ರ ಇಂದು ಅಂತ ತಿಳಿವಳಿಕೆಯನ್ನು ಬಳಸುವುದು ಕಡಿಮೆಯಾಗಿದೆ ಎನಿಸುತ್ತದೆ.

ಇದುವರೆಗೂ ಉಪವಾಸ ಮಾಡುವವರನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿರುವ ಉದಾಹರಣೆಗಳು ಕಡಿಮೆಯೆಂದೇ ಹೇಳಬಹುದು. ಸ್ಕಾಟ್‍ಲ್ಯಾಂಡ್‍ನಲ್ಲಿ 382 ದಿನ ಉಪವಾಸ ಮಾಡಿದ ವ್ಯಕ್ತಿಯನ್ನು ಅಲ್ಲಿಯ ವಿಶ್ವವಿದ್ಯಾಲಯ ತಪಾಸಣೆಗೆ ಒಳಪಡಿಸಿದ ಬಗ್ಗೆ ಮಾಹಿತಿಗಳಿವೆ. ಆತನ ರಕ್ತದಲ್ಲಿನ ಸಕ್ಕರೆಯ ಅಂಶ 30 ಎಂ.ಜಿ./ಡಿ.ಎಲ್. ಗೆ ಇಳಿದದ್ದು ಮತ್ತು ತೂಕ ಸುಮಾರು 107 ಕೆಜಿಯಿಂದ 82ಕ್ಕೆ ಇಳಿದದ್ದು ವರದಿಯಾಗಿದೆ. ಎರಡು ವರ್ಷಗಳ ಹಿಂದೆ ಮುಂಬೈಯಲ್ಲಿ ಜೈನ ಮುನಿಯೊಬ್ಬರು 423 ದಿನಗಳು ಉಪವಾಸ ಮಾಡಿದ ಉಲ್ಲೇಖವಿದೆ.

ಉಪವಾಸಕ್ಕೆ ತೊಡಗಿದಾಗ ದೇಹ ಮೊದಲು ತನಗೆ ತಾನೇ ಸೂಚನೆಯನ್ನು ರವಾನಿಸಿಕೊಂಡು ತನ್ನ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಿಧಾನಗೊಳಿಸಿಕೊಳ್ಳುತ್ತದೆ. ಆಹಾರವನ್ನು ತಿನ್ನದಿರುವುದರಿಂದ ಪಚನಕ್ರಿಯೆಗೆ ಶಕ್ತಿ ಬೇಕಾಗಿಲ್ಲ. ಆದರೆ ಉಸಿರಾಟ, ರಕ್ತಸಂಚಲನ ಮತ್ತು ನೀರನ್ನು ಶುದ್ಧೀಕರಿಸಲು ಶಕ್ತಿ ಬೇಕಾಗುತ್ತದೆ. ಅದು ಅತ್ಯಂತ ಕಡಿಮೆಯೆಂದರೆ, 600ರಿಂದ 700 ಕ್ಯಾಲೋರಿಯಾದರೂ ಒಂದು ದಿನಕ್ಕೆ ಬೇಕಾಗುತ್ತದೆ. ಮನುಷ್ಯನ ದೇಹ ಕೇವಲ ಪ್ರೊಟೀನ್, ಕಾರ್ಬೋಹೈಡ್ರೇಟ್ ಮತ್ತು ಫ್ಯಾಟ್‍ಗಳ ಮೂಲಕವೇ ಶಕ್ತಿಯನ್ನು ಪಡೆಯುವಂತದ್ದು. ದೇಹದಲ್ಲಿ ಶಕ್ತಿ ಶೇಖರಣೆಯಾಗಿರುವುದು ಹೆಚ್ಚಾಗಿ ಕೊಬ್ಬಿನ ರೂಪದಲ್ಲಿ. ಹಾಗಾಗಿ ಸಂಗ್ರಹಿಸಿದ್ದ ಕೊಬ್ಬಿನ ಶಕ್ತಿಯನ್ನು ದೇಹ ಉಪಯೋಗಿಸಿಕೊಳ್ಳಲು ಆರಂಭಿಸುತ್ತದೆ. ಒಂದು ಕೆಜಿ ಕೊಬ್ಬು 9000 ಕ್ಯಾಲೋರಿಯನ್ನು ಕೊಡುತ್ತದೆ. ಅಂದರೆ ಸುಮಾರು 13 ದಿನಗಳ ಕಾಲ ಸಮಯವನ್ನು ತಳ್ಳಬಹುದು! ಹೀಗೆ ಬೊಜ್ಜಿರುವ ವ್ಯಕ್ತಿ ಉಪವಾಸಕ್ಕೆ ಕುಳಿತು 70 ಕೆಜಿ ಕೊಬ್ಬನ್ನು ಕರಗಿಸಿದರೆ ಅವನು ಸುಮಾರು ಎರಡು ವರ್ಷ ಬದುಕಬಹುದೇನೋ – ಎಂದು ಕ್ಯಾಲೋರಿಗಳನ್ನು ಗಮನದಲ್ಲಿಟ್ಟುಕೊಂಡು ಹೇಳಬಹುದು. ಆದರೆ ದೈಹಿಕವಾಗಿ ಬೇರೆ ರೀತಿಯಲ್ಲಿ ತೊಂದರೆಯಾಗದೇ ಇರದು. ಹೀಗಾಗಿ ಉಪವಾಸವನ್ನು ಇದರ ಹೊರತಾಗಿಯೂ ನೋಡುವುದು ಈಗಿರುವ ವೈಜ್ಞಾನಿಕ ವಿಧಾನದಿಂದ ಸಾಧ್ಯವಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !