ಗುರುವಾರ , ಮೇ 19, 2022
20 °C

ಕ್ಷೇಮ ಕುಶಲ: ಆಹಾರ ವಿಹಾರದಲ್ಲಿರಲಿ ಶಿಸ್ತು

ಡಾ. ವಿಜಯಲಕ್ಷ್ಮಿ ಪಿ. Updated:

ಅಕ್ಷರ ಗಾತ್ರ : | |

Prajavani

‘ಶಾಲೆಗೆ ಮಗನನ್ನು ಬಿಟ್ಟು ಬರಿತೀನಿ’ ಅಂತ ಹೊರಟಳು ಶಾಲಿನಿ. ಆಗ ಎದುರುಮನೆ ಪದ್ದಮ್ಮ ‘ಕೊರೊನಾ ಮತ್ತೆ ಬರ್ತಾ ಇದೆಯಂತೆ, ಮತ್ತೆ ನಿನ್ನ ಮಗೂನ ಶಾಲೆಗೆ ಕಳಿಸ್ತೀಯಾ’ ಅಂತ ಕೇಳಿದರು. ಇದನ್ನೇ ಯೋಚನೆ ಮಾಡ್ತಾ ಹೋಗ್ತಾ ಇದ್ದಾಗ ನಾನು ತಾತನ ಕೊಠಡಿಯಲ್ಲಿ ಓದಿದ್ದ ‘ಜನಪದೋಧ್ವಂಸ ರೋಗಗಳ’ ಬಗ್ಗೆ ನೆನಪಾಯ್ತು. ತಾತ ಹೇಳ್ತಾ ಇದ್ದ ಕಾರಣಗಳೂ ನೆನಪಾದವು: ‘ನೋಡು ಮರಿ, ಮನುಷ್ಯ ಪ್ರಕೃತಿಗೆ ಏನೇನು ಕೆಡಕು ಮಾಡ್ತಾನೋ ಅದರ ಪರಿಣಾಮ ಗಾಳಿ, ನೀರು, ಭೂಮಿ, ಇತರೆ ಪ್ರಾಣಿಪಕ್ಷಿಗಳ ಸಂಕುಲ, ಪರಿಸರ ಎಲ್ಲವೂ ಒಂದಲ್ಲಾ ಒಂದು ದಿನ ತಿರುಗಿ ಬೀಳತ್ತೆ. ಆಗ ಅವನು ತನ್ನ ಇರುವಿಕೆಗೂ ಒದ್ದಾಡಬೇಕಾಗತ್ತೆ. ಆಗ ಇಡೀ ಜನಪದಕ್ಕೆ ಮಾರಕ ಆಗುವ ರೋಗಗಳು ಬರತ್ತೇಂತ. ಈಗ ಅಂತಹದ್ದೇ ಪರಿಸ್ಥಿತಿ ಬಂದಿರೋದು. ಮನುಷ್ಯ ತನ್ನ ಆಹಾರ, ನಿದ್ರೆ ಹಾಗೂ ಜೀವನಶೈಲೀನ ಸರಿಯಾಗಿ ಇಟ್ಟುಕೊಂಡರೆ, ತನಗೆ ವಿಹಿತವಾದ ಆಹಾರವನ್ನ ಹಿತವಾಗಿ ಮಿತವಾಗಿ, ಪರಿಸರಕ್ಕೆ ಅನುಗುಣವಾದ ಆಹಾರ ಸೇವಿಸಿದ್ರೆ ಈ ರೋಗಗಳಿಂದ ಪಾರಾಗಿ ಸ್ವಸ್ಥಜೀವನ ನಡೆಸಬಹುದು’.

ಆಹಾರಸೇವನೆ ಮಾಡಬೇಕಾದರೆ ಒಂದು ಪೂಜೆ ಅನ್ನುವ ಮನೋಭಾವದಲ್ಲಿ ಶುದ್ಧವಾದ ಪರಿಸರದಲ್ಲಿ ಸೇವಿಸಬೇಕು. ಆಗ ದುರಾಹಾರ, ದುರಾಚಾರದ ಕಡೆ ಮನಸ್ಸು ಹೋಗುವುದಿಲ್ಲ. ಬೇಜಾರಾದಾಗ, ಆತಂಕ ಆದಾಗೆಲ್ಲಾ ಏನಾದರೂ ತಿನ್ನುವುದು, ಕುಡಿಯುವುದು ಅಥವಾ ಧೂಮಪಾನ ಮಾಡುವುದು, ತಿಂದ ಆಹಾರ ಜೀರ್ಣ ಆಗುವ ಮೊದಲು ಸ್ನಾನ ಮಾಡುವುದು ಎಂದರೆ ತಿಂಡಿ ತಿಂದು ಅಥವಾ ಊಟ ಮಾಡಿ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆ ಸಂಬಂಧಪಟ್ಟ ರೋಗಗಳು, ರಕ್ತಸಂಬಂಧಿ, ಹೃದಯ ಸಂಬಂಧಿ, ರಕ್ತನಾಳ ಸಂಬಂಧಿ, ಚರ್ಮಸಂಬಂಧಿ ರೋಗಗಳ ಉತ್ಪತ್ತಿಗೆ ಕಾರಣ ಆಗತ್ತದೆ. ಆದ್ದರಿಂದಲೇ ನಮ್ಮ ಹಿರಿಯರು ಸ್ನಾನ ಮಾಡಿ ಬೆಳಗಿನ ಆಹಾರಸೇವನೆ ಮಾಡಬೇಕೆಂದು ಹೇಳಿರುವುದು; ಮತ್ತು ಪ್ರತಿಬಾರಿ ಆಹಾರಸೇವನೆಗೆ ಮೊದಲು ಕೈಕಾಲು ತೊಳೆದು ಸೇವಿಸಬೇಕು ಎಂದು.

ಒಂದು ಸಲ ಸೇವಿಸಿದ ಆಹಾರದ ಪ್ರಮಾಣ ಎಷ್ಟು ಇರಬೇಕು ಅಂದರೆ ಇನ್ನೊಂದು ಸಲದ ಆಹಾರದ ಕಾಲಕ್ಕೆ ಜೀರ್ಣ ಆಗಿರಬೇಕು. ಅತಿಯಾಗಿ ತಿನ್ನುವುದು, ಹಾಗೆಯೇ ಅತಿಯಾದ ಉಪವಾಸವೂ ಒಳ್ಳೆಯದ್ದಲ್ಲ. ಡಯಟ್ ಅನ್ನುವ ಹೆಸರಿನಲ್ಲಿ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನ ಸೇವಿಸದೆ ಕೊರತೆ ಮಾಡುವುದೂ ಸಲ್ಲದು.

ನಮ್ಮ ಜೀರ್ಣಶಕ್ತಿಯನ್ನು ಅನುಸರಿಸಿ, ವಾಸಿಸುವ ಪ್ರದೇಶದಲ್ಲಿ ಆಯಾಯ ಕಾಲದಲ್ಲಿ ಬೆಳೆದಿರುವ ತರಕಾರಿ ಹಣ್ಣುಗಳನ್ನು, ಸೇವಿಸುವುದು ಆರೋಗ್ಯವನ್ನೂ ರೋಗನಿರೋಧ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಆಯಾಯ ದಿನ ತಯಾರಿಸಿದ ಆಹಾರವನ್ನು ಆಯಾಯ ದಿನವೇ ಸೇವಿಸಬೇಕು. ತಂಪು ಪೆಟ್ಟಿಗೆಯಲ್ಲಿಟ್ಟು ಎರಡು, ಮೂರು ದಿನ ಸೇವಿಸುವುದು ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ.

ಕೆಲವು ಆಹಾರ ಪದಾರ್ಥಗಳು ಆರೋಗ್ಯಕರವಾದರೂ ಸಹ ಒಂದಕ್ಕೊಂದು ಬೆರೆತರೆ ದುಷ್ಪರಿಣಾಮವನ್ನು ಬೀರುತ್ತವೆ.

ಉದಾ: ಹಾಲು ಮತ್ತು ಮಜ್ಜಿಗೆ ಅಥವಾ ಮೊಸರನ್ನು ಬೆರಸಿ ಸೇವಿಸುವುದು; ಹಣ್ಣುಗಳೊಡನೆ ಹಾಲನ್ನು; ನುಗ್ಗೆಕಾಯಿ, ನುಗ್ಗೆಸೊಪ್ಪು, ಮೂಲಂಗಿಯೊಂದಿಗೆ ಹಾಲನ್ನು; ಹಾಲನ್ನದೊಡನೆ ಉಪ್ಪು, ಉಪ್ಪಿನಕಾಯಿ, ಸಾರು, ಸಾಂಬಾರನ್ನು ಸೇರಿಸಿ ಸೇವಿಸುವುದು; ಮೀನು ಅಥವಾ ಮಾಂಸಾಹಾರದೊಡನೆ ಹಾಲನ್ನು, ಪನ್ನೀರು, ಚೀಸ್‌ಗಳನ್ನು ಸೇವಿಸುವುದು; ಹಗಲು ಹೆಪ್ಪು ಹಾಕಿದ ಅರೆ ಮೊಸರಿನ ಸೇವನೆ – ಹೀಗೆ ಕೆಲವು ಆಹಾರ ಪದಾರ್ಥಗಳು ಸ್ವತಃ ಆರೋಗ್ಯಕಾರಕಗಳಾದರೂ ಹಾಲಿನೊಡನೆ ಬೆರೆತಾಗ ರೋಗವನ್ನು ಉತ್ಪತ್ತಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಮೊಳಕೆ ಕಾಳಿನ ಜೊತೆಗೆ ಅಥವಾ ಉದ್ದು ಹಾಕಿ ತಯಾರಿಸಿದ ಪದಾರ್ಥಗಳ ಜೊತೆಗೆ ಮಾಂಸಾಹಾರ ಸೇವನೆ ನಿಷಿದ್ಧ. ಮೀನಿನೊಡನೆ ಸಕ್ಕರೆ, ಬೆಲ್ಲ, ಕಬ್ಬಿನ ಹಾಲು ಮತ್ತು ಇವುಗಳಿಂದ ತಯಾರಿಸಿದ ಪದಾರ್ಥಗಳು ರೋಗಕಾರಕವೇ ಸರಿ.

ಹೀಗೆಯೇ ಬಿಸಿನೀರೂ ಆರೋಗ್ಯಕರವೇ; ಕುದಿಸಿದ, ಕುದಿಸಿ ತಣಿಸಿದ ಬಿಸಿನೀರಿನ ಸೇವನೆ ಸದಾ ಆರೋಗ್ಯಕರ, ಕುದಿಸಿದ ನೀರಾದರೂ ಪದೇ ಪದೇ ಬಿಸಿ ಮಾಡಿ ಸೇವಿಸುವುದು ಒಳ್ಳೆಯದಲ್ಲ. ಆದರೆ ಬಿಸಿ ಮಾಡಿದ ಬಿಸಿನೀರು ಅರೆಬೆಂದ ಅನ್ನದಂತೆ ರೋಗಕಾರಕ. ಬಿಸಿ ನೀರಿನೊಡನೆ, ಬಿಸಿ ಪದಾರ್ಥದೊಡನೆ ಜೇನು ಸೇವಿಸಿದರೆ ಮಾಂಸಖಂಡಗಳು, ರಕ್ತನಾಳಗಳು ತೆಳ್ಳಗಾಗಿ ಅಂತರ್ ರಕ್ತಸ್ರಾವವಾಗುತ್ತದೆ.

ವ್ಯಾಯಾಮ ಮಾಡುವುದು ಆರೋಗ್ಯವನ್ನು ಕಾಪಾಡುತ್ತದೆ. ವ್ಯಾಯಾಮವನ್ನು ನಮ್ಮ ದೇಹವು ಬೆವರುವವರೆಗೆ ಅಥವಾ ಮೇಲುಸಿರು ಬರುವವರೆಗೆ ಮಾಡಬಹುದೇ ಹೊರತು ಹೆಚ್ಚು ಮಾಡುವುದರಿಂದ ಹೃದಯದ ಮಾಂಸಖಂಡಗಳನ್ನು ದುರ್ಬಲಗೊಳಿಸುತ್ತದೆ. ಸೇವಿಸಿದ ಆಹಾರ ಜೀರ್ಣವಾಗುವ ಮೊದಲೇ ವ್ಯಾಯಾಮ ಮಾಡಿದರೆ ಸಂಧಿಗಳು, ಮಾಂಸಖಂಡಗಳು, ಕರುಳು, ಹೃದಯಗಳು ದುರ್ಬಲಗೊಂಡು ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ; ಸಂಧಿವಾತ, ಹೃದ್ರೋಗವೇ ಮೊದಲಾದ ರೋಗಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಹಗಲು 8 ಅಥವಾ 10 ಗಂಟೆಯವರೆಗೂ ನಿದ್ರಿಸುವುದು, ರಾತ್ರಿ ನಿದ್ರೆ ಕೆಟ್ಟು ಹಗಲು ನಿದ್ರೆ ಮಾಡುವುದು, ಕೆಲವು ದಿನ ಹಗಲು ನಿದ್ರೆ ಕೆಲವೊಮ್ಮೆ ರಾತ್ರಿ ನಿದ್ರಿಸುವುದು ಇವೆಲ್ಲವೂ ಮೆದಳು, ನರಗಳ ಸಮೂಹ, ಹಾರ್ಮೋನ್ ಸ್ರವಿಸುವಿಕೆ ಇವುಗಳ ಮೇಲೆ ನೇರವಾಗಿ ಪರಿಣಾಮ ಬೀರಿ ರೋಗಗಳ ಉತ್ಪತ್ತಿಗೆ ಕಾರಣವಾಗುತ್ತದೆ.

ಸಮಯೋಚಿತವಾದ ಆಹಾರ, ವ್ಯಾಯಾಮ, ನಿದ್ರೆಯ ಪಾಲನೆಯೇ ಸ್ವಾಸ್ಥ್ಯವರ್ಧನೆಯ ಮೂಲಮಂತ್ರ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು