ಶುಕ್ರವಾರ, ಏಪ್ರಿಲ್ 23, 2021
27 °C

ಆಹಾರೋದ್ಯಮ: ಸಾಕಾರಗೊಂಡ ಸ‍ಪ್ನಾ ಕನಸು

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಬಾಲ್ಯದಿಂದಲೂ ಉದ್ಯಮಿಯಾಗುವ ಕನಸು ಕಂಡವರು ಬೆಂಗಳೂರಿನ ಸಪ್ನಾ ಅರುಣ್‌. ಅದರಲ್ಲೂ ಆಹಾರೋತ್ಪನ್ನಗಳನ್ನು ತಯಾರಿಸುವ ಒಲವು ಅವರಲ್ಲಿ ಹೆಚ್ಚಿತ್ತು. ಆ ಕಾರಣಕ್ಕೆ ಅವರು ಆಯ್ಕೆ ಮಾಡಿಕೊಂಡಿದ್ದು ನೈಸರ್ಗಿಕ ಅಂಶಗಳಿರುವ ಆಹಾರ ಖಾದ್ಯಗಳನ್ನು ತಯಾರಿಸುವ ಮಾರ್ಗವನ್ನು. ಸದ್ಯ ಬೊನ್ ಭೋಜನಂ-ಮದರ್‌ಹುಡ್‌ ಫುಡ್ಸ್‌ ಎಂಬ ಕಂಪನಿಯ ಮೂಲಕ ಪ್ರಿಸರ್ವೇಟಿವ್‌ಗಳನ್ನು ಬಳಸದ ‘ರೆಡಿ ಟು ಕುಕ್‌’ ಆಹಾರ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುವ ಹಾದಿಯಲ್ಲಿ ಸಾಗುತ್ತಿದ್ದಾರೆ.

2018ರಲ್ಲಿ ದೋಸೆ, ಇಡ್ಲಿ, ರಾಗಿಮುದ್ದೆ ಹಿಟ್ಟಿನಂತಹ ರೆಡಿ ಟು ಕುಕ್ ಉತ್ಪನ್ನಗಳನ್ನು ತಯಾರಿಸುವ ಉದ್ಯಮ ಆರಂಭಿಸಿದರು ಸಪ್ನಾ. ಮೊದಲು ಮನೆಯ ಗ್ಯಾರೇಜ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಉದ್ಯಮ ಈಗ ಯಶಸ್ಸಿನ ಹಾದಿಯತ್ತ ಸಾಗುತ್ತಿದೆ. ಸಪ್ನಾ ಒಬ್ಬರೇ ಆರಂಭಿಸಿದ್ದ ಈ ಕಂಪನಿಯಲ್ಲಿ ಇಂದು 40 ಮಂದಿ ಕೆಲಸಗಾರರಿದ್ದಾರೆ. ಇವರಲ್ಲಿ ಶೇ 80ರಷ್ಟು ಮಹಿಳೆಯರೇ ಎಂಬುದು ವಿಶೇಷ. ಸಪ್ನಾ ಅವರ ಈ ಉದ್ಯಮದೊಂದಿಗೆ ಕೈ ಜೋಡಿಸಿದ್ದಾರೆ ಪತಿ ಅರುಣ್‌.

ರೆಡಿ ಟು ಕುಕ್ ಯೋಚನೆ ಹೊಳೆಯಲು ಕಾರಣ
ಅರುಣ್ ಕೆಲ ತಿಂಗಳುಗಳ ಕಾಲ ವಿದೇಶದಲ್ಲಿದ್ದರು. ಅಲ್ಲಿ ಅವರನ್ನು ಊಟದ ಸಮಸ್ಯೆ ಕಾಡಿತ್ತು. ಆಗ ಅವರಿಗೆ ಶೇ 100 ರಷ್ಟು ನೈಸರ್ಗಿಕವಾಗಿ ರೆಡಿ ಟು ಕುಕ್ ಆಹಾರ ಪದಾರ್ಥಗಳನ್ನು ತಯಾರಿಸುವ ಯೋಚನೆ ಹೊಳೆದಿತ್ತು. ಪತ್ನಿಯ ಕನಸೂ ಪತಿ ಯೋಚನೆಯೂ ಒಂದೇ ಆಗಿದ್ದರಿಂದ ಅವರ ಉದ್ಯಮಕ್ಕೆ ಒಂದು ಸ್ಪಷ್ಟ ರೂಪು ಸಿಕ್ಕಿತ್ತು. ಆರಂಭದ ದಿನಗಳಲ್ಲಿ ಸಿದ್ಧ ಮಸಾಲೆಗಳನ್ನು ತಯಾರಿಸುತ್ತಿದ್ದ ಇವರು ಮುಂದೆ ‘ರೆಡಿ ಟು ಕುಕ್ ವಂಡರ್ ಬಾಕ್ಸ್ ಕಿಟ್‌’ಗಳನ್ನು ತಯಾರಿಸಲು ಆರಂಭಿಸಿದರು. ಈ ಕಿಟ್‌ನಲ್ಲಿ ಒಂದು ಖಾದ್ಯ ತಯಾರಿಸಲು ಬೇಕಾಗುವ ಎಲ್ಲಾ ಪದಾರ್ಥಗಳು ಇರುತ್ತವೆ. ಉದಾಹರಣೆಗೆ ಬಿರಿಯಾನಿ ಮಾಡಬೇಕು ಎಂದರೆ ಅಕ್ಕಿ, ತರಕಾರಿ, ಬಿರಿಯಾನಿ ಮಸಾಲೆ ಎಲ್ಲವೂ ಸಿದ್ಧವಿರುತ್ತವೆ. ಅದಕ್ಕೆ ಸಮ ಪ್ರಮಾಣದ ನೀರು ಸೇರಿಸಿ ವಿಷಲ್ ಕೂಗಿಸಿದರೆ ಬಿರಿಯಾನಿ ರೆಡಿ ಆಗುತ್ತದೆ.

‘ರೆಡಿ ಟು ಈಟ್‌ನಲ್ಲಿ ಪ್ರಿಸರ್ವೇಟಿವ್‌ ಇರುತ್ತದೆ, ಆದರೆ ಎಲ್ಲರೂ ತಾಜಾ ಹಾಗೂ ನೈಸರ್ಗಿಕ ಆಹಾರ ಸೇವಿಸಬೇಕು ಎನ್ನುವ ಆಶಯವಿತ್ತು. ಹೀಗಾಗಿ ಯಾವುದೇ ಪ್ರಿಸರ್ವೇಟಿವ್‌ ಸೇರಿಸದೆ ರೆಡಿ ಟು ಕುಕ್‌ ಖಾದ್ಯಗಳನ್ನು ತಯಾರಿಸಿದ್ದೇವೆ’ ಎನ್ನುತ್ತಾರೆ ಸಪ್ನಾ.

ರಾಗಿಮುದ್ದೆ ಹಿಟ್ಟು
ಬೆಂಗಳೂರಿನ ಕುಂಬಳಗೋಡಿನಲ್ಲಿ ಬೊನ್‌ ಭೋಜನಂನಲ್ಲಿ ದೋಸೆಹಿಟ್ಟು, ಇಡ್ಲಿಹಿಟ್ಟು, ರಾಗಿಮುದ್ದೆ ಹಿಟ್ಟು, ತರಕಾರಿ ಸಲಾಡ್‌ ಹೆಚ್ಚು ಜನಪ್ರಿಯ. ಈ ಬಗ್ಗೆ ಮಾತನಾಡುವ ಸಪ್ನಾ ‘ಸುಮ್ಮನೆ ಇಡ್ಲಿ, ದೋಸೆಹಿಟ್ಟು ತಯಾರಿಸುವ ಬದಲು ಆರೋಗ್ಯಕ್ಕೆ ಉತ್ತಮವೆಂದು ಪಾಲಕ್‌, ಕ್ಯಾರೆಟ್‌, ಬೀಟ್‌ರೂಟ್‌ಗಳನ್ನು ಈ ಹಿಟ್ಟಿನೊಂದಿಗೆ ಮಿಶ್ರಣ ಮಾಡಿದ್ದೇವೆ. ಇದರಿಂದ ರೈತರಿಗೂ ನೆರವಾಗುತ್ತದೆ ಎನಿಸಿತು. ಬಿಸಿಬೇಳೆ ಬಾತ್ ಕೂಡ ಇದೆ. ಇಡ್ಲಿ ಬೇಯಿಸಿದಷ್ಟೇ ಸುಲಭವಾಗಿ ರಾಗಿಮುದ್ದೆ ತಯಾರಿಸಲು ರಾಗಿಮುದ್ದೆ ಹಿಟ್ಟು ತಯಾರಿಸಿದ್ದೇವೆ. ಇದು ನಮ್ಮದೇ ವಿಶೇಷ’ ಎನ್ನುತ್ತಾರೆ. 

ಇಡ್ಲಿಗೆ ರೆಡಿ ಟು ಈಟ್ ಚಟ್ನಿ ಹಾಗೂ ತರಕಾರಿ ಸಂಬಾರ್ ಅನ್ನು ಕೂಡ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಕೊಬ್ಬರಿ ಚಟ್ನಿ, ಪುದಿನ ಕೊತ್ತಂಬರಿ ಸೊಪ್ಪಿನ ಚಟ್ನಿ, ಟೊಮೆಟೊ ಈರುಳ್ಳಿ ಚಟ್ನಿ, ಮಸಾಲೆ ದೋಸೆ ಕೆಂಪು ಚಟ್ನಿ ಮುಂತಾದವು ಬೊನ್‌ ಭೋಜನಂನಲ್ಲಿ ಲಭ್ಯವಿವೆ. ಇದರೊಂದಿಗೆ ತರಕಾರಿ ಸಲಾಡ್ ಕೂಡ ಇದೆ.

ಭವಿಷ್ಯದ ಯೋಜನೆಗಳು
ಮಹಿಳೆಯರೇ ನಡೆಸಿಕೊಂಡು ಹೋಗುವ ರೆಸ್ಟೊರೆಂಟ್ ಹಾಗೂ ಕ್ಲೌಡ್ ಕಿಚನ್‌ ಪರಿಕಲ್ಪನೆಗಳನ್ನು ಆರಂಭಿಸುವ ಯೋಜನೆಯನ್ನು ಸಪ್ನಾ ಹಾಕಿಕೊಂಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ವೈಟ್‌ಫೀಲ್ಡ್‌ನಲ್ಲಿ ಈಗಾಗಲೇ ಕ್ಲೌಡ್ ಕಿಚನ್‌ ಪರಿಕಲ್ಪನೆಯನ್ನು ಪರಿಚಯಿಸಿರುವ ಇವರು ಆ ಮೂಲಕ ಮಹಿಳಾ ಉದ್ಯಮಿಗಳನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯೊಂದಿಗೆ ಕೈ ಜೋಡಿಸುವ ಹಂಬಲವೂ ಇವರಿಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು