ಆಹಾರ ಸಂರಕ್ಷಣೆ: ವರವೋ? ಶಾಪವೋ?

7

ಆಹಾರ ಸಂರಕ್ಷಣೆ: ವರವೋ? ಶಾಪವೋ?

Published:
Updated:

ಆಧುನಿಕ ಆಹಾರ ಸಂರಕ್ಷಣಾ ವಿಧಾನವನ್ನು ಕ್ರಿಸ್ತಪೂರ್ವದಲ್ಲಿ ಈಜಿಪ್ಟಿನಲ್ಲಿ ನಡೆಸುತ್ತಿದ್ದ ಹೆಣಸಂರಕ್ಷಣೆಗೆ ಹೋಲಿಸುವುದುಂಟು. ‘Mummification of food is modern food preservation’. ಇದು ಅತಿಶಯೋಕ್ತಿ ಎಂದು ತೋಚುವುದು ಸಹಜ. ಆದರೆ, ಇತ್ತೀಚಿನ ಕೆಲವು ಘಟನೆಗಳನ್ನು ಗಮನಿಸಿದರೆ, ಈ ಆರೋಪ ಸರಿ ಎಂದೆನಿಸದಿರದು. ಮೀನಿಗೆ ಫಾರ್ಮಲಿನ್ ದ್ರಾವಣವನ್ನು ಬೆರೆಸಿ, ಹೆಚ್ಚು ಕಾಲ ಇಡುವಂತೆ ಮಾಡುತ್ತಿರುವುದು ಇತ್ತೀಚೆಗೆ ಅಸ್ಸಾಂನಿಂದ ಹಿಡಿದು, ಕೇರಳ–ಗೋವಾದವರೆಗೆ ಸುದ್ದಿಯಾಗಿದೆ. ಅನೇಕ ಕಡೆ, ಆಹಾರ ಸಂರಕ್ಷಣಾ ಅಧಿಕಾರಿಗಳು ತಪಾಸಣೆ ಮಾಡಿ, ಸಾವಿರಾರು ಟನ್ ಮೀನನ್ನು ನಾಶ ಮಾಡಿದ್ದಾರೆ. ಪ್ರಾಣಿದೇಹದ ಭಾಗಗಳನ್ನೂ ವಿವಿಧ ಪ್ರಾಣಿಪ್ರಭೇದಗಳನ್ನೂ ನೂರಾರು ವರ್ಷ ಸುರಕ್ಷಿತವಾಗಿ ಇಡಲು ಫಾರ್ಮಲಿನ್ ದ್ರಾವಣವನ್ನು ಪ್ರಯೋಗಾಲಯಗಳಲ್ಲಿ ಬಳಸುವುದನ್ನು ಕಾಣುತ್ತೇವೆ. ಸತ್ತ ಪ್ರಾಣಿಯು ಕೆಡದಂತೆ ಈ ದ್ರಾವಣ ಕಾಪಾಡುತ್ತದೆ. ಆದರೆ, ಇದೇ ಫಾರ್ಮಲಿನ್ ನಾವು ತಿನ್ನುವ ಆಹಾರಕ್ಕೆ ಸಿಂಪಡಣೆಯಾದಲ್ಲಿ ನಮ್ಮ ಆರೋಗ್ಯಕ್ಕೆ ಮಾರಕವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಕ್ಯಾನ್ಸರ್‌ಕಾರಕ ಎಂದು ಪರಿಗಣಿಸಿದೆ. ಇದನ್ನು ಪತ್ತೆ ಹಚ್ಚಲು ಕೊಚ್ಚಿಯ ‘ಸೆಂಟ್ರಲ್ ಇನ್ಸ್‌ಟಿಟ್ಯೂಟ್‌ ಆಫ್ ಫಿಷರಿ ಟೆಕ್ನಾಲಜಿ’ ಕಡಿಮೆ ಬೆಲೆ ಸಿಗುವ ಕಿಟ್ ಒಂದನ್ನು ರೂಪಿಸಿದೆ. ಫಾರ್ಮಲಿನ್ ದ್ರಾವಣವನ್ನು ಅನಿಲರೂಪದಲ್ಲಿ ಆಹಾರಧಾನ್ಯಗಳಿಗೆ ಹೊಗೆ ಹಾಕಿ (fumigate) ಕೀಟಗಳಿಂದ ಸಂರಕ್ಷಿಸಲು ಇಂದಿಗೂ ಕಾನೂನಿನ ಅನುಮತಿಯೊಂದಿಗೆ ಬಳಸುವುದುಂಟು. ಅನಿಲರೂಪದ ಫಾರ್ಮಲಿನನ್ನು ಹೊಗೆ ರೂಪದಲ್ಲಿ ಸಿಂಪಡಿಸಿ ಅನಂತರ ಅದನ್ನು ಹೊರ ಹಾಕುವುದು ಸಾಧ್ಯ. ಆದರೆ, ಅದೇ ದ್ರವರೂಪದ ಫಾರ್ಮಲಿನ್‌ನಲ್ಲಿ ಅದ್ದಿ, ಮೀನುಗಳನ್ನು ಸಂರಕ್ಷಿಸಿದಾಗ, ಅದನ್ನು ಹೊರತೆಗೆಯುವುದು ಸಾಧ್ಯವಿಲ್ಲ. ಇದರ ಜೊತೆಗೆ ಈ ಫಾರ್ಮಲಿನನ್ನು ಮೀನುಗಳಲ್ಲಿ ಪತ್ತೆ ಹಚ್ಚುವುದು, ಅದರಲ್ಲೂ ಕಲಬೆರಕೆ ಎಂದು ಪತ್ತೆಹಚ್ಚುವುದು ಕಷ್ಟ. ಕಾರಣ ಅತ್ಯಲ್ಪ ಪ್ರಮಾಣದಲ್ಲಿ ಮೀನುಗಳಲ್ಲಿ ಮತ್ತು ಆಹಾರಧಾನ್ಯಗಳಲ್ಲಿ ಈ ರಾಸಾಯನಿಕ ಸ್ವಾಭಾವಿಕವಾಗಿ ಅತ್ಯಲ್ಪ ಪ್ರಮಾಣದಲ್ಲಿ (PPM- parts per million) ಇರುವುದುಂಟು. ಇಂಥದೇ ಸಮಸ್ಯೆಯನ್ನು ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ಬಳಸುವ ಇಥಲೀನ್ ಗ್ಯಾಸ್ ಅನ್ನು ಕಂಡುಹಿಡಿಯುವುದರಲ್ಲಿಯೂ ಕಾಣಬಹುದು. ಕಾರಣ, ಹಣ್ಣುಗಳಲ್ಲಿ ಸ್ವಾಭಾವಿಕವಾಗಿಯೇ ಈ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಆದರೆ ಒಳಗಿನಿಂದಲೇ ಉತ್ಪತ್ತಿಯಾಗುವ ರಾಸಾಯನಿಕವನ್ನು ಹಣ್ಣಿಗೋ ಮೀನಿಗೋ ಹೊರಗಿನಿಂದ ಸಿಂಪಡಿಸಬಹುದು ಎನ್ನುವ ವಾದ ಸಮಂಜನವಲ್ಲ. ಉದಾಹರಣೆಗೆ, ನಮ್ಮ ಹೊಟ್ಟೆಯಲ್ಲಿ ಆಹಾರ ಜೀರ್ಣವಾಗಲು ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಹೀಗೆಂದು ನಾವು ಹೈಡ್ರೋಕ್ಲೋರಿಕ್ ಆಮ್ಲವನ್ನು ಕುಡಿಯಲು ಸಾಧ್ಯವಿಲ್ಲವಷ್ಟೆ.

ಈಗ ನಾವು ಗೋದಾಮಿನಲ್ಲಿ ಆಹಾರಸಂರಕ್ಷಣೆಗೆ ಹೊಗೆ ಹಾಕಲು ಬಳಸುತ್ತಿರುವ ಮೀಥೈಲ್ ಬ್ರೋಮೈಡ್, ಅಲ್ಯೂಮಿನಿಯಮ್ ಫಾಸ್ಫೈಡ್ ಕೂಡ ಅನೇಕ ದೇಶಗಳಲ್ಲಿ ನಿಷೇಧಿಸಲ್ಪಟ್ಟಿವೆ. ಆಹಾರ ಸಂರಕ್ಷಣೆ ಮತ್ತು ಬಣ್ಣ–ರುಚಿಗಳಿಗೆ ರಾಸಾಯನಿಕಗಳನ್ನು ಬಳಸಲು ನಮ್ಮ ಆಹಾರ ಸುರಕ್ಷತಾ ಕಾಯಿದೆ ಅವಕಾಶ ಒದಗಿಸಿದೆ. ಈ ಪಟ್ಟಿಯಲ್ಲಿರುವ ರಾಸಾಯನಿಕಗಳ ಸಂಖ್ಯೆ ಸುಮಾರು 12 ಸಾವಿರವನ್ನು ದಾಟುತ್ತದೆ. ಅವೆಲ್ಲವೂ ಅಸುರಕ್ಷಿತವಲ್ಲದಿದ್ದರೂ, ಸುಮಾರಷ್ಟನ್ನು ಕೈಬಿಡಬೇಕಾದ ಕಾಲ ಬಂದಿದೆ. ಇತ್ತೀಚೆಗಷ್ಟೇ ಮೈದಾಗೆ ಬಳಸುತ್ತಿದ್ದ ಪೊಟ್ಯಾಸಿಯಂ ಬ್ರೋಮೈಡ್‌ ಅನ್ನು ನಿಷೇಧಿಸಲಾಯಿತು. ಈಗಲೂ ಮೈದಾಕ್ಕೆ ಬಳಸುವ ಬೆನ್ಜೈಲ್ ಫರಾಕ್ಸೈಡ್ ಮತ್ತು ಕಾರ್ಬೊಮೈಡ್ (ಯೂರಿಯಾ) ಬಗ್ಗೆ ಗಮನ ಹರಿಸಬೇಕಾಗಿದೆ. ಒಂದು ವರದಿಯ ಪ್ರಕಾರ ಇಂತಹ ರಾಸಾಯನಿಕಗಳು ಗೋಧಿಯಲ್ಲಿನ ಪ್ರೊಟೀನ್‍ಗಳ ಜೊತೆ ಸಮ್ಮಿಶ್ರಣಗೊಂಡು ‘ಅಲೆಕ್ಸನ್’ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇಲಿಗಳಿಗೆ ಮಧುಮೇಹವನ್ನು ಉಂಟುಮಾಡಲು ಪ್ರಯೋಗಾಲಯದಲ್ಲಿ ಬಳಸುವ ರಾಸಾಯನಿಕವೇ ಅಲೆಕ್ಸನ್. ಕೆಲವನ್ನು ಅಲೆಕ್ಸನ್ ಅನ್ನೇ ಮೈದಾಕ್ಕೆ ಕೂಡ ಬಳಸುತ್ತಾರೆ ಎಂದು ಸುದ್ದಿಯಾಗಿದೆ. ಅದು ಸುಳ್ಳು ಸುದ್ದಿ. ಮನುಕುಲದಲ್ಲಿ ಪ್ರಯಾಣ, ಸಮುದ್ರಯಾನ, ಯುದ್ಧ ಹೆಚ್ಚಾದಂತೆಲ್ಲ ಆಹಾರವನ್ನು ಸಂರಕ್ಷಿಸುವ ಅವಶ್ಯಕತೆಯೂ ಹೆಚ್ಚಾಗುತ್ತಹೋಯಿತು. ಇದರಿಂದ ಅನೇಕ ಪ್ರಯೋಜನಕಾರಿ ತಂತ್ರಜ್ಞಾನವೂ ಸೃಷ್ಟಿಯಾಯಿತು. ಉದಾಹರಣೆಗೆ ಇಂದು ಹಾಲನ್ನು ಟೆಟ್ರಾಪ್ಯಾಕಿನಲ್ಲಿ ಆರು ತಿಂಗಳು ಶೇಖರಿಸಿ ಇಡಬಹುದು – ಯಾವುದೇ ರಾಸಾಯನಿಕವನ್ನು ಬಳಸದೆಯೇ – ಎನ್ನುವುದು ಹೆಗ್ಗಳಿಕೆಯ ವಿಷಯವೇ. ಹಾಗೆಯೇ ನಾವು ಹಿಂದೆ, ಆಹಾರ ಸಂರಕ್ಷಣೆಗೆ ಸೀಸಾ, ಆರ್ಸನಿಕ್ ಮುಂತಾದ ಅತ್ಯಂತ ಹಾನಿಕಾರಕ ರಾಸಾಯನಿಕಗಳನ್ನು ಸಹ ಬಳಸುತ್ತಿದ್ದೆವು. ಈಗ ಅವುಗಳ ಬಳಕೆಯನ್ನು ಕೈಬಿಟ್ಟಿದ್ದೇವೆ. ಭೌತಶಾಸ್ತ್ರಜ್ಞರೊಬ್ಬರು ಮಾರ್ಮಿಕವಾಗಿ ಹೇಳುವಂತೆ – ‘science progresses one funeral at a time’.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !