ಗುರುವಾರ , ಏಪ್ರಿಲ್ 9, 2020
19 °C

ಚಕ್ಕುಲಿ, ನಿಪ್ಪಟ್ಟು ಮಾರಾಟಕ್ಕೆ ಟ್ರಕ್ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್ಯ– ವೈಶ್ಯ ಸಮುದಾಯದ ಸಾಂಪ್ರದಾಯಿಕ ತಿನಿಸುಗಳಾದ ಚಕ್ಕುಲಿ, ನಿಪ್ಪಟ್ಟಿನಂತಹ ಕುರುಕಲು ತಿಂಡಿಗಳನ್ನು ಟ್ರಕ್‌ಗಳಲ್ಲಿ ಮಾರಾಟ ಮಾಡುವ ದಿನಗಳು ದೂರವಿಲ್ಲ!

ಕರ್ನಾಟಕ ಆರ್ಯ– ವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು ವಾಹನಗಳಿಗೆ ಸಾಲ ನೀಡುವಂತಹ ಸ್ವ–ಉದ್ಯೋಗ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಸಮುದಾಯದ ನಿರುದ್ಯೋಗಿಗಳು ಚಕ್ಕುಲಿ, ನಿಪ್ಪಟ್ಟು ಮಾರಾಟ ಮಾಡುವ ವ್ಯವಹಾರ ಆರಂಭಿಸಲು ಟ್ರಕ್ ಮತ್ತಿತರ ವಾಹನಗಳನ್ನು ಕೊಳ್ಳಲು ₹5 ಲಕ್ಷದಿಂದ ₹10 ಲಕ್ಷದವರೆಗೂ ಸಾಲ ನೀಡುವ ಯೋಜನೆಯನ್ನು ರೂಪಿಸಿದೆ.

‘ನಮ್ಮ ಸಮುದಾಯದ ಜನರು ವಿಶೇಷವಾಗಿ ಚಕ್ಕುಲಿ, ನಿಪ್ಪಟ್ಟು ಹಾಗೂ ಚಾಟ್ಸ್‌ಗಳನ್ನು ತಯಾರಿಸುತ್ತಾರೆ. ಮಾಲ್‌ಗಳು ಹಾಗೂ ಇತರೆಡೆ ಇಂತಹ ಆಹಾರ ಪದಾರ್ಥಗಳ ಮಾರಾಟದಿಂದಾಗಿ ಅದರ ಮೂಲ ಸ್ವಾದ ಮರೆಯಾಗುತ್ತಿದೆ. ಹಳೆಯ ಶೆಟ್ಟರ ಅಂಗಡಿಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಹಾಗಾಗಿ ವಾಹನಗಳ ಮೇಲೆ ಚಾಟ್ಸ್ ಮಾರಾಟ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ’ ಎಂದು ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಹೇಳುತ್ತಾರೆ.

‘ಈಗ ಆರಂಭಿಸಲು ಉದ್ದೇಶಿಸಿರುವ ಸ್ವ–ಉದ್ಯೋಗ ಯೋಜನೆಯು ಸಮುದಾಯದ ಆಹಾರದ ವಿಶೇಷತೆಯನ್ನು ಸಂರಕ್ಷಿಸಿಕೊಳ್ಳುವುದು ಹಾಗೂ ಇನ್ನಷ್ಟು ಕಡೆಗೆ ವಿಸ್ತರಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಲ್ಲಿ ಮೂರು ಚಕ್ರದ ವಾಹನ ಕೊಳ್ಳಲು ₹5 ಲಕ್ಷ, ದೊಡ್ಡ ಪ್ರಮಾಣದ ವಾಹನ ಖರೀದಿಗೆ ₹10 ಸಾಲ ನೀಡಲಾಗುತ್ತದೆ’ ಎಂದರು.

ಈ ರೀತಿ ಸಾಲ ನೀಡುವ ವ್ಯವಸ್ಥೆ ಕಳೆದ ವರ್ಷದಿಂದ ಜಾರಿಯಲ್ಲಿದೆ. ಈಗಾಗಲೇ ₹1 ಲಕ್ಷ ಸಾಲ ನೀಡುತ್ತಿದ್ದು, ಶೇ 20ರಷ್ಟು ಸಬ್ಸಿಡಿ (₹20 ಸಾವಿರ) ಕೊಡುತ್ತಿದ್ದು, ಉಳಿದ ₹80 ಸಾವಿರ ಸಾಲಕ್ಕೆ ಶೇ 4ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಸಮುದಾಯದ ಶೇ 10ರಷ್ಟು ಜನರು ಇನ್ನೂ ಸಂಕಷ್ಟದ ಸ್ಥಿತಿಯಲ್ಲೇ ಇದ್ದಾರೆ. ಈಗ ಆರಂಭಿಸುತ್ತಿರುವ ಸಾಲ ಯೋಜನೆಯು ಮುಂದಿನ ದಿನಗಳಲ್ಲಿ ಸಮುದಾಯವನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲಿದೆ ಎಂದು ಅವರು ಸಮರ್ಥಿಸಿಕೊಂಡರು.

‘ವಾಹನಗಳಿಗೆ ಸಾಲ ನೀಡುವ ಯೋಜನೆಯ ಪ್ರಸ್ತಾವವನ್ನು ಸ್ವೀಕರಿಸಿದ್ದು, ಸರ್ಕಾರದ ಹಂತದಲ್ಲಿ ಚರ್ಚಿಸಿದ ನಂತರ ನಿರ್ಧರಿಸಲಾಗುವುದು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು