‘ಅಡುಗೆ ಮಾಡ್ತೇನಂದ್ರೆ ಮನೇಲಿ ರೇಗಿಸ್ತಾರೆ’

7

‘ಅಡುಗೆ ಮಾಡ್ತೇನಂದ್ರೆ ಮನೇಲಿ ರೇಗಿಸ್ತಾರೆ’

Published:
Updated:
Deccan Herald

ನನಗೆ ಅಡುಗೆ ಮಾಡುವುದು, ಹೊಸ ಹೊಸ ಅಡುಗೆ ಕಲಿಯುವುದು ಅಂದ್ರೆ ತುಂಬ ಇಷ್ಟ. ಆದ್ರೆ ಅಡುಗೆ ಕಲಿಯುವ ಅವಕಾಶವೇ ಸಿಕ್ಕಿಲ್ಲ. ಮುಂಚೆ ಕಾಲೇಜು, ಓದು ಆಯಿತು. ಈಗ ಸಿನಿಮಾ, ಶೂಟಿಂಗ್‌ ಎಂದು ಬ್ಯುಸಿಯಾಗಿದ್ದೇನೆ. ಇದರ ನಡುವೆ ಅಡುಗೆ ಕಲಿಯೋಕೆ ಆಗಲೇ ಇಲ್ಲ. 

ನನಗೆ ಸಣ್ಣಂದಿನಿಂದಲೂ ಅಡುಗೆ ಮಾಡಲು ಭಯ. ಯಾರದ್ದಾದರೂ ಸಹಾಯ ತೆಗೆದುಕೊಂಡು ಅಡುಗೆ ಮಾಡ್ತೀನಿ ಎಂದರೆ ಮನೆಯಲ್ಲಿ ಅಪ್ಪ– ಅಮ್ಮನಿಂದ ಹಿಡಿದು ಎಲ್ಲರೂ ರೇಗಿಸೋರೇ. ‘ನಾವು ತಿನ್ನುವ ಹಾಗೇ ಇರುತ್ತದಾ? ಆಮೇಲೆ ಆರಾಮವಾಗಿ ಇರ್ತೀವಾ? ಹೇಗೆ ಅಡುಗೆ ಮಾಡೋದು ಗೊತ್ತಾ? ಇಂತಹ ಕಮೆಂಟ್‌ಗಳೆಲ್ಲಾ ಬರುತ್ತವೆ. ನನ್ನ ಉತ್ಸಾಹವೂ ಹಾಗೇ ಇಳಿದುಹೋಗುತ್ತದೆ. 

ನಾನು ಮೊದಲ ಬಾರಿ ಅಡುಗೆ ಪ್ರಯೋಗ ಮಾಡಿದ್ದು ಚಿಕನ್‌ ಘೀ ರೋಸ್ಟ್‌. ಮಂಗಳೂರು ಕಡೆ ಮಾಡುವ ಹಾಗೇ, ಆದರೆ ಯೂಟ್ಯೂಬ್‌ ನೋಡಿಕೊಂಡು ಮಾಡಿದ್ದೆ. ರುಚಿ ಚೆನ್ನಾಗಿ ಬಂದಿತ್ತು. ಅಪ್ಪ– ಅಮ್ಮನೂ ಹೊಗಳಿದ್ದರು. 

ಮನೆಯಲ್ಲಿ ಸಾಮಾನ್ಯವಾಗಿ ಮಾಡುವಂತಹ ಅಡುಗೆಗಳನ್ನು ನಾನು ಕಲಿತಿಲ್ಲ. ಆದರೆ ಯೂಟ್ಯೂಬ್‌ ನೋಡಿಕೊಂಡು ಕೆಲ ಅಡುಗೆಗಳನ್ನು ಮಾಡುತ್ತೇನೆ. ಈಗ ಬೆಂಗಳೂರಿನಲ್ಲಿ ಇರುವುದರಿಂದ ಅಮ್ಮ ಊರಿಗೆ ಹೋದಾಗ ನಾನೇ ಅಡುಗೆ ಮಾಡಿಕೊಳ್ಳುವುದು ಅನಿವಾರ್ಯ. ಅದಕ್ಕೆಲ್ಲಾ ನನ್ನದೇ ರೆಸಿಪಿ. ಆದರೆ ಕೊನೆಗೆ ಎಲ್ಲನೂ ರುಚಿಯಾಗೇ ಇರುತ್ತದೆ. ನಾನು ಮಾಡಿದ ಅಡುಗೆ ತಿನ್ನುವವರು ಅದರ ಹೆಸರು ಕೇಳಬಾರದು. ಈಗ ಮಾರುಕಟ್ಟೆಯಲ್ಲಿ ರೆಡಿ ಟು ಈಟ್‌ ಸಿಗುತ್ತಲ್ವಾ? ಅಮ್ಮ ಇಲ್ಲದಿದ್ದಾಗ ಅದನ್ನೇ ತಗೆದುಕೊಂಡು ಬಂದು ಮಾಡಿಕೊಳ್ಳುತ್ತೇನೆ. ನಾನೇ ಏನಾದರೂ ವಿಶೇಷವಾಗಿ ತಿನ್ನಬೇಕು ಎಂದಾಗ ಇದ್ದೇ ಇದೆಯಲ್ವಾ ಯೂಟ್ಯೂಬ್‌ ಅಡುಗೆ ಪ್ರಯೋಗ. 

ನಾನು ಸಿಹಿತಿಂಡಿಗಳನ್ನು ಚೆನ್ನಾಗಿ ಮಾಡುತ್ತೇನೆ. ಕ್ಯಾರಮಲ್‌ ಕಸ್ಟರ್ಡ್‌, ಕೇಕ್‌ ಮಾಡುತ್ತೇನೆ. ನನಗೆ ಮಂಗಳೂರು ಕಡೆಯ ಎಲ್ಲಾ ಅಡುಗೆಗಳು ಇಷ್ಟ. ಚಿಕನ್, ಮೀನು ಖಾದ್ಯಗಳೆಂದರೆ ಪ್ರಾಣ. ನಮ್ಮನೆಯಲ್ಲಿ ಮಂಗಳೂರು ಶೈಲಿಯ ಅಡುಗೆಯೇ ಇರುತ್ತದೆ. ಊಟಕ್ಕೆ ಮೀನು ಖಾದ್ಯ ಇರಲೇಬೇಕು. ಇಲ್ಲದಿದ್ದರೆ ಊಟ ಪೂರ್ಣವಾಗುವುದೇ ಇಲ್ಲ. ಫಿಶ್‌ ಫ್ರೈ, ಚಿಕನ್‌ ಘೀ ರೋಸ್ಟ್‌, ಚಿಕನ್ ಸುಕ್ಕ ನನ್ನ ಫೇವರಿಟ್‌. 

ನನಗೆ ರುಚಿರುಚಿಯಾಗಿ ಅಡುಗೆ ಮಾಡುವುದನ್ನು ಕಲಿಯಬೇಕು ಎಂಬ ಆಸೆ ಇದೆ. ಇನ್ನು ಒಂದು ವರ್ಷದೊಳಗೆ ಅಡುಗೆ ಕಲಿಯಲೇಬೇಕು. ನಾನು ಮದುವೆಯಾಗುವ ಹುಡುಗನಿಗೆ ಅಡುಗೆ ಗೊತ್ತಿರಲೇಬೇಕು. ಒಂದು ವೇಳೆ ನಾನು ಅಡುಗೆ ರುಚಿಯಾಗಿ ಮಾಡಲು ಆಗದಿದ್ದರೆ ಗಂಡನಿಗೆ ಅಡುಗೆ ಗೊತ್ತಿದ್ರೆ ಒಳ್ಳೆಯದಲ್ವಾ?

ಚಿಕನ್‌ ಘೀ ರೋಸ್ಟ್‌

ಬೇಕಾಗುವ ಸಾಮಗ್ರಿಗಳು: ಬೋನ್ ಲೆಸ್ ಚಿಕನ್ ಅರ್ಧ ಕೆ.ಜಿ , ಒಣ ಕೆಂಪು ಮೆಣಸು 15-20,  ಕರಿಮೆಣಸಿನ ಪುಡಿ ಅರ್ಧಚಮಚ, ಅರಶಿಣ ಪುಡಿ– ಅರ್ಧ ಚಮಚ, ಬೆಳ್ಳುಳ್ಳಿ 5 ಎಸಳು, ಕರಿಬೇವಿನ ಎಲೆ, ಚಿಕ್ಕ ಶುಂಠಿ ತುಂಡು, ರುಚಿಗೆ ತಕ್ಕ ಉಪ್ಪು, ಮೊಸರು ಅರ್ಧ ಕಪ್, ನಿಂಬೆ ಗಾತ್ರದ ಹುಣಸೆಹಣ್ಣು, ತುಪ್ಪ 200ಮಿ.ಲೀ

ತಯಾರಿಸುವ ವಿಧಾನ: ಹುಣಸೆ ಹಣ್ಣಿನ ರಸ ಮಾಡಿ ಅದರಲ್ಲಿ ಒಣ ಕೆಂಪು ಮೆಣಸನ್ನು ಒಂದು ರಾತ್ರಿ ನೆನೆಹಾಕಬೇಕು. ನಂತರ ಆ ಒಣ ಕೆಂಪು ಮೆಣಸು, ಶುಂಠಿ, ಬೆಳ್ಳುಳ್ಳಿ, ಸ್ವಲ್ಪ ಕರಿಮೆಣಸು ಹಾಕಿ ಚೆನ್ನಾಗಿ ಪೇಸ್ಟ್ ಮಾಡಬೇಕು. ತುಪ್ಪ ಹಾಕಿ ತುಪ್ಪ ಬಿಸಿಯಾದಾಗ ಸ್ವಲ್ಪ ಕರಿಬೇವಿನ ಎಲೆ ಮತ್ತು ಈ ಮೆಣಸಿನ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಬೇಕು. ತುಪ್ಪ ಮಿಶ್ರಣದ ಮೇಲ್ಭಾಗದಲ್ಲಿ ತೇಲುವಂತೆ ಇರಬೇಕು. ನಂತರ ಅದಕ್ಕೆ ಚಿಕನ್‌, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಮೊಸರು ಹಾಕಿ ಬೇಯಿಸಬೇಕು. ಆಗಾಗ ಸೌಟ್‌ನಿಂದ ಚಿಕನ್ ಅನ್ನು ತಿರುಗಿಸುತ್ತಾ ಇರಬೇಕು. ಮಿಶ್ರಣ ತುಂಬಾ ಗಟ್ಟಿಯಾಗಿದ್ದರೆ  ಸ್ವಲ್ಪ ಮೊಸರು ಹಾಕಿ ಚೆನ್ನಾಗಿ ಮಿಶ್ರಮಾಡಿ ಚಿಕನ್ ಬೇಯಿಸಬೇಕು. ಚಿಕನ್ ಬೆಂದ ತಕ್ಷಣ ಉರಿಯಿಂದ ತೆಗೆಯಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !