ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮದ್ದು: ಬೆಲ್ಲ...ತಿನ್ನಲೂ ರುಚಿ ಆರೋಗ್ಯಕ್ಕೂ ಉತ್ತಮ

Last Updated 3 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಬೆಲ್ಲ... ಇದನ್ನು ಕೇಳಿದಾಕ್ಷಣ ಬಾಯಲ್ಲಿ ನೀರೂರುತ್ತದೆ. ಬೆಲ್ಲ ಕಬ್ಬಿನ ರಸದಿಂದ ಪಡೆಯುವ ಸಂಸ್ಕರಿಸದ ಸಕ್ಕರೆಯ ಜನಪ್ರಿಯ ಸಾಂಪ್ರದಾಯಿಕ ರೂಪ. ನೈಸರ್ಗಿಕ ಸಿಹಿಕಾರಕ ಅಂಶ ಹೊಂದಿರುವ ಬೆಲ್ಲ ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಹಾಗೂ ಇದು ಸಕ್ಕರೆಗೆ ಬದಲಿಯಾಗಿದೆ. ಪುರಾತನ ಆಯುರ್ವೇದ ಕಾಲದಿಂದಲೂ ಬೆಲ್ಲವನ್ನು ವೈದ್ಯಕೀಯ ಉಪಯೋಗಗಳಿಗಾಗಿ ಬಳಸುತ್ತಿದ್ದರು.

ಸಕ್ಕರೆಯು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಸಕ್ಕರೆಯು ಪೋಷಕಾಂಶ, ಖನಿಜ ಹಾಗೂ ಸಸ್ಯ ರಾಸಾಯನಿಕ ಅಂಶಗಳನ್ನು ಹೊಂದಿರುವುದಿಲ್ಲ. ಆ ಕಾರಣಕ್ಕೆ ಸಕ್ಕರೆ ಬದಲಾಗಿ ಬೆಲ್ಲವನ್ನು ಬಳಸಲಾಗುತ್ತದೆ.

ಬೆಲ್ಲ ಹಾಗೂ ಆರೋಗ್ಯ

ಬೆಲ್ಲವು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ. ಹಲವು ಜಾನಪದ ಹಾಗೂ ಆಯರ್ವೇದ ಔಷಧಿ ತಯಾರಿಕೆಯಲ್ಲಿ ಬೆಲ್ಲವನ್ನು ಬಳಸಲಾಗುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಿದ್ದು, ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದೆ. ಭಾರತೀಯ ಸಾಂಪ್ರದಾಯಿಕ ಸಿಹಿಕಾರಕವಾದ ಬೆಲ್ಲವು ಉಸಿರಾಟದ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವಾಗಿದೆ. ಬ್ರಾಂಕೈಟಿಸ್‌ ಹಾಗೂ ಆಸ್ತಮಾ ಚಿಕಿತ್ಸೆಗೆ ಇದನ್ನು ಬಳಸಲಾಗುತ್ತದೆ. ಜೊತೆಗೆ ಜೀರ್ಣಕಾರಿ ಸಮಸ್ಯೆ, ನೆಗಡಿ, ಕೆಮ್ಮಿಗೂ ಇದು ಉತ್ತಮ ಔಷಧಿ.

ನೈಸರ್ಗಿಕ ಸೂಕ್ಷ್ಮ ಪೋಷಕಾಂಶಗಳು

ಬೆಲ್ಲವು ದೇಹಕ್ಕೆ ಬೇಕಾಗುವ ಖನಿಜಾಂಶಗಳನ್ನು ಪೂರೈಸುತ್ತದೆ. ಬೆಲ್ಲವನ್ನು ಸಂಸ್ಕರಿಸದ ಕಾರಣ ಇದು ತನ್ನಲ್ಲಿ ನೈಸರ್ಗಿಕ ಅಂಶಗಳನ್ನು ಉಳಿಸಿಕೊಳ್ಳುತ್ತದೆ. ಅಲ್ಲದೇ ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಸತು ಹಾಗೂ ಮ್ಯಾಂಗನಿಸ್ ಅಂಶವು ಅಧಿಕವಿದೆ.

ಹಸಿವು ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಬೆಲ್ಲದಲ್ಲಿ ಜೀರ್ಣಕಾರಿ ಉತ್ತೇಜಕ ಅಂಶವಿದ್ದು ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹಸಿವು ಹಾಗೂ ಜೀರ್ಣಕ್ರಿಯೆಯನ್ನು ಹೆಚ್ಚುವಂತೆ ಮಾಡುತ್ತದೆ. ಬೆಲ್ಲದಲ್ಲಿರುವ ಸಿಹಿಕಾರಕ ಅಂಶವು ಹೊಟ್ಟೆಯಲ್ಲಿ ಅಸಿಟಿಕ್ ಆಮ್ಲವಾಗಿ ಬದಲಾಗುತ್ತದೆ. ಇದು ಹಸಿವು ಹೆಚ್ಚಲು ಸಹಕಾರಿಯಾಗಿದೆ.

ಮಲಬದ್ಧತೆ ನಿವಾರಣೆಗೆ ಸಹಕಾರಿ‌

ಬೆಲ್ಲದಲ್ಲಿ ಮೆಗ್ನಿಶಿಯಂನಂತಹ ಖನಿಜಾಂಶಗಳು ಹೇರಳವಾಗಿವೆ. ಬೆಲ್ಲವು ದೇಹಕ್ಕೆ ಬೇಕಾಗುವ ಶೇ 40 ಮೆಗ್ನಿಶಿಯಂ ಖನಿಜಾಂಶವನ್ನು ಬಿಡುಗಡೆ ಮಾಡುತ್ತದೆ. ಇದು ಕರುಳಿನ ಆರೋಗ್ಯವನ್ನು ವೃದ್ಧಿಸುವಂತೆ ಮಾಡುತ್ತದೆ. ಬೆಲ್ಲದಲ್ಲಿರುವ ಸತು ಹಾಗೂ ಸೆಲೆನಿಯಂ ಅಂಶವು ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿದೆ.

ಸಾಮಾನ್ಯ ಶೀತ ಹಾಗೂ ದೀರ್ಘಕಾಲದ ಕೆಮ್ಮಿಗೆ ಪರಿಹಾರ

ಸಾಮಾನ್ಯ ಶೀತ ಹಾಗೂ ದೀರ್ಘಕಾಲದ ಕೆಮ್ಮು ನಿವಾರಣೆಗೆ ಬೆಲ್ಲ ಜನಪ್ರಿಯ ಆಯುರ್ವೇದ ಔಷಧಿ. ಇದು ಗಂಟಲಿನ ಕಿರಿಕಿರಿಯನ್ನು ನಿವಾರಿಸುತ್ತದೆ. ಕೆಮ್ಮು, ಆಸ್ತಮಾ ಚಿಕಿತ್ಸೆಯಲ್ಲೂ ಬೆಲ್ಲದ ಮಹತ್ವ ದೊಡ್ಡದು. ಬೆಲ್ಲದ ನಿರಂತರ ಸೇವನೆಯು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಧೂಮಪಾನ, ದೂಳಿನ ವಾತಾವರಣದಲ್ಲಿ ಕೆಲಸ ಮಾಡುವವರು ಬೆಲ್ಲ ಸೇವಿಸುವುದು ಉತ್ತಮ ಎಂದು ಅಧ್ಯಯನವೊಂದು ಸಾಬೀತು ಪಡಿಸಿದೆ. ಒಣಶುಂಠಿ ಹಾಗೂ ಕಾಳುಮೆಣಸಿನೊಂದಿಗೆ ಬೆಲ್ಲವನ್ನು ಸೇವಿಸುವುದು ಪ್ರಬಲ ಔಷಧಿ.

ಮೂತ್ರನಾಳ ಸಮಸ್ಯೆಗೂ ಪರಿಹಾರ

ಕಬ್ಬು ಒಂದು ಉತ್ತಮ ಮೂತ್ರವರ್ಧಕ. ಮೂತ್ರ ಹರಿವಿನಲ್ಲಿ ಸಮಸ್ಯೆ ಇರುವವರು ಹೆಚ್ಚು ಹೆಚ್ಚು ಬೆಲ್ಲ ಸೇವಿಸಬೇಕು. ಜೊತೆಗೆ ಇದು ಮೂತ್ರಕೋಶದ ಉರಿಯೂತ ಕಡಿಮೆ ಮಾಡುವ ಮೂಲಕ ಸರಾಗ ಮೂತ್ರ ವಿಸರ್ಜನೆಗೆ ಸಹಾಯ ಮಾಡುತ್ತದೆ. ಆಯುರ್ವೇದ ವೈದ್ಯರು ಮೂತ್ರದ ಹರಿವನ್ನು ಸುಧಾರಿಸಲು ಬಿಸಿಹಾಲಿನಲ್ಲಿ ಕರಗಿಸಿದ ಬೆಲ್ಲವನ್ನು ಕುಡಿಯಲು ಶಿಫಾರಸು ಮಾಡುತ್ತಾರೆ.

ಮೈಗ್ರೇನ್‌ ಹಾಗೂ ತಲೆನೋವಿಗೂ ಮದ್ದು

ಬೆಲ್ಲದೊಂದಿಗೆ ಹಸುವಿನ ತುಪ್ಪವನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಮೈಗ್ರೇನ್ ಹಾಗೂ ತಲೆನೋವನ್ನು ನಿವಾರಿಸಬಹುದು. 10 ಗ್ರಾಂ ಬೆಲ್ಲ, 5 ಮಿಲಿಲೀಟರ್‌ ಹಸುವಿನ ತುಪ್ಪವನ್ನು ಬೆರೆಸಿ ಪ್ರತಿದಿನ ಬೆಳಿಗ್ಗೆ ಹಾಗೂ ಮಲಗುವ ಮೊದಲು ಸೇವಿಸುವುದು ಒಳ್ಳೆಯದು.

(ಲೇಖಕರು ಆಯುರ್ವೇದ ವೈದ್ಯರು, ಆಯುರ್ವೇದಿಸಂ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT