ಮನೆ–ಮಂದಿಯ ಆತಿಥ್ಯ; ರುಚಿ–ಶುಚಿಯ ಬಿಸಿಯೂಟ, ಪ್ಲಾಸ್ಟಿಕ್‌ ಮುಕ್ತ ಖಾನಾವಳಿ

7
ಮುದ್ದೇಬಿಹಾಳದಲ್ಲೊಂದು ಪರಿಸರ ಸ್ನೇಹಿ ಖಾನಾವಳಿ

ಮನೆ–ಮಂದಿಯ ಆತಿಥ್ಯ; ರುಚಿ–ಶುಚಿಯ ಬಿಸಿಯೂಟ, ಪ್ಲಾಸ್ಟಿಕ್‌ ಮುಕ್ತ ಖಾನಾವಳಿ

Published:
Updated:
Deccan Herald

ಮುದ್ದೇಬಿಹಾಳ: ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಸಿದ್ಧರಾಮೇಶ್ವರ ಲಿಂಗಾಯತ ಖಾನಾವಳಿ ಮೂರು ದಶಕಗಳಿಂದಲೂ ರುಚಿ–ಶುಚಿಯಾದ ಬಿಸಿಯೂಟ ನೀಡುವ ಮೂಲಕ ಮನೆ ಮಾತಾಗಿದೆ.

ಖಾನಾವಳಿಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ. ಗುಣಮಟ್ಟದಲ್ಲಿ ರಾಜಿಯಿಲ್ಲ. ಇಲ್ಲಿನ ರುಚಿಗೆ ಮಾರುಹೋಗದವರಿಲ್ಲ. ಕೆಂದೂಳಿ ಸಹೋದರರು ಇದನ್ನೆಂದು ಲಾಭದಾಯಕ ವೃತ್ತಿ ಎಂದುಕೊಂಡಿಲ್ಲ. ದಾಸೋಹ ಸೇವೆ ಎಂದೇ ಪರಿಗಣಿಸಿದ್ದಾರೆ. ಪಾರ್ಸೆಲ್‌ಗೆ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ ಬಳಸಲ್ಲ. ಪರಿಚಯದವರಿಗೆ ತಮ್ಮದೇ ಡಬ್ಬಿ ಕೊಡುತ್ತಾರೆ.

ಒಮ್ಮೆ ಇಲ್ಲಿ ಊಟ ಮಾಡಿದವರು ಮತ್ತೆಂದೂ ಬೇರೆ ಖಾನಾವಳಿ, ಹೋಟೆಲ್‌ನತ್ತ ತಮ್ಮ ಚಿತ್ತ ಹರಿಸಲ್ಲ. ಸಂತೃಪ್ತ ಭಾವ ಹೊಂದುತ್ತಾರೆ. ಬೆಲೆಯೂ ಬಹಳಿಲ್ಲ. ₹ 50ಕ್ಕೆ ಎರಡು ರೊಟ್ಟಿ ಅಥವಾ ಚಪಾತಿ, ಎರಡು ವಿಧದ ಪಲ್ಲೆ, ಉಪ್ಪಿನಕಾಯಿ, ಮೊಸರು, ಹಪ್ಪಳ, ಅನ್ನ, ಸಾರು. ಇನ್ನೂ ಪ್ರತಿ ಅಮವಾಸ್ಯೆಗೊಮ್ಮೆ ₹ 60ಕ್ಕೆ ಎರಡು ಹೋಳಿಗೆ, ತುಪ್ಪದೂಟ. ಮಂಗಳವಾರ ಶಾವಿಗೆ ಪಾಯಸದ ಊಟ.

30 ವರ್ಷಗಳ ಹಿಂದೆ ರೇವಣಸಿದ್ದಪ್ಪ ಬಸ್ ನಿಲ್ದಾಣದ ಮುಂದೆಯೇ ಊಟ ಮತ್ತು ಉಪಾಹಾರ ನೀಡುವ ‘ಅಶೋಕ ಕೆಫೆ’ ನಡೆಸುತ್ತಿದ್ದರು. ಇವರ ನಿಧನದ ನಂತರ ನಧಾಪ ಕಾಂಪ್ಲೆಕ್ಸ್‌, ನಂತರ ರೇಷ್ಮೆ ಕಾಂಪ್ಲೆಕ್ಸ್‌ನಲ್ಲಿ ಹದಿನೈದು ವರ್ಷಗಳಿಂದ ಖಾನಾವಳಿ ನಡೆಸುತ್ತಿದ್ದಾರೆ ಇವರ ಪುತ್ರರಾದ ಕೆಂದೂಳಿ ಸಹೋದರರು.

ಇವರದ್ದು ವಿನಮ್ರ ಸೇವೆ. ಮನೆ ಮಂದಿಯೇ ಪರಿಚಾರಕರು. ನಿತ್ಯ ಮಧ್ಯಾಹ್ನ 12.30ಕ್ಕೆ ಆರಂಭವಾಗುವ ಊಟ 3.30ಕ್ಕೆ ಮುಗಿಯುತ್ತದೆ. ನಂತರ ಸಂಜೆ 7.30ರಿಂದ ರಾತ್ರಿ 9.30ರ ತನಕ ನಡೆಯಲಿದೆ. ಇಲ್ಲಿ ಶುದ್ಧ ಕುಡಿಯುವ ನೀರನ್ನೇ ನೀಡುತ್ತಾರೆ. ಈಚೆಗೆ ಸುಮಧುರ ಸಂಗೀತದ ಜತೆಗೆ ದೊಡ್ಡ ಟಿವಿಯನ್ನೂ ಅಳವಡಿಸಿದ್ದಾರೆ.

ನಸುಕಿನಿಂದಲೇ ಖಾನಾವಳಿ ಕೆಲಸ ಆರಂಭ. ಒಂದೆಡೆ ಅಡುಗೆಗೆ ಬಳಸುವ ಧಾನ್ಯಗಳ ಸ್ವಚ್ಛತೆ ನಡೆದರೆ, ಇನ್ನೊಂದೆಡೆ ಅಡುಗೆಯ ತಯಾರಿ. ತಾಜಾ ತರಕಾರಿ ಖರೀದಿಗೆ ಬಜಾರ್‌ಗೆ ಹೋಗುವವರು ಇನ್ನೊಬ್ಬರು. ಎಲ್ಲವನ್ನೂ ಸ್ವಚ್ಛಗೊಳಿಸಿದ ಬಳಿಕವೇ ಅಡುಗೆಗೆ ಚಾಲನೆ.

ಇವರ ಗುಣಮಟ್ಟಕ್ಕೆ ಮನಸೋತಿರುವ ಬಾಲಾಜಿ ಸಕ್ಕರೆ ಕಾರ್ಖಾನೆಯವರು ತಮ್ಮ ಮೆಸ್‌ ನಿರ್ವಹಣೆಯನ್ನು ಕೆಂದೂಳಿ ಸಹೋದರರಿಗೆ ನೀಡಿದ್ದಾರೆ. ಇದರ ಜತೆಗೆ ಔತಣಕೂಟಗಳಿಗೂ ಇವರು ಊಟ ನೀಡುತ್ತಾರೆ. ಹೊರಗೋದರೆ ಒಂದು ತಾಟಿಗೆ ₹ 70ರಿಂದ 100 ದರ ವಿಧಿಸುತ್ತಾರೆ. ಗಣಪತಿ ವಿಸರ್ಜನೆ ಸಮಯ ಎಲ್ಲರಿಗೂ ಉಚಿತವಾಗಿ ಹೋಳಿಗೆ, ಕಡುಬಿನ ಊಟ ನೀಡುವುದು ಆರಂಭದಿಂದಲೂ ನಡೆದಿದೆ.

‘ಇವರಪ್ಪನ ಕಾಲದಿಂದಲೂ ಖಾನಾವಳಿಯಲ್ಲಿ ಊಟ ಮಾಡುತ್ತಿರುವೆ. ರುಚಿಯಾದ ಊಟ ನೀಡುತ್ತಾರೆ. ಕಮರ್ಷಿಯಲ್‌ ಮಾತಿಲ್ಲ. ಇಲ್ಲಿನ ಕೋಸಂಬರಿ, ಹಸಿ ಮೆಣಸಿನಕಾಯಿ ಚಟ್ನಿಯ ರುಚಿ ಅತ್ಯದ್ಭುತ. ಹಳೆಯ ಕನ್ನಡ, ಹಿಂದಿ ಚಲನಚಿತ್ರ ಗೀತೆಗಳನ್ನು ಕೇಳುತ್ತಾ ಊಟ ಮಾಡುವುದೇ ನಮಗೆಲ್ಲ ಸಂಭ್ರಮ’ ಎನ್ನುತ್ತಾರೆ ಅಮೀನಸಾಬ್ ಮುಲ್ಲಾ.

ಸಂಪರ್ಕ ಸಂಖ್ಯೆ: 9480175250 9980175250

 

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !