ಮೆಕ್‌ಡೊನಾಲ್ಡ್ಸ್‌ನಲ್ಲಿ ಪ್ಲಾಸ್ಟಿಕ್‌ ಸ್ಟ್ರಾ ಇನ್ನಿಲ್ಲ!

7
ಕಾಳಜಿ

ಮೆಕ್‌ಡೊನಾಲ್ಡ್ಸ್‌ನಲ್ಲಿ ಪ್ಲಾಸ್ಟಿಕ್‌ ಸ್ಟ್ರಾ ಇನ್ನಿಲ್ಲ!

Published:
Updated:

ಫಾಸ್ಟ್‌ಫುಡ್‌ ಕ್ಷೇತ್ರದ ದೈತ್ಯ, ಅಮೆರಿಕ ಮೂಲದ ‘ಮೆಕ್‌ಡೊನಾಲ್ಡ್ಸ್‌’ನಲ್ಲಿ ಬಾಯಲ್ಲಿ ನೀರೂರಿಸುವ ಸಿದ್ಧ ಆಹಾರಗಳನ್ನು ಸೇವಿಸಿ, ಪಾನೀಯಗಳನ್ನು ದಾರಿಯುದ್ದಕ್ಕೂ ಕುಡಿಯುತ್ತಾ ಹೋಗುವುದೆಂದರೆ ಕೆಲವರಿಗೆ ಸ್ವರ್ಗಸುಖ. ಆದರೆ ಇನ್ನು ಮುಂದೆ ಹೀಗೆ ‘ಸುರ್‌’ ಅಂತ ಸ್ಟ್ರಾದಲ್ಲಿ ಪಾನೀಯ ಕುಡಿಯುವ ಸುಖಕ್ಕೆ ಸಂಚಕಾರ ಬರಲಿದೆ!

ನಿಜ, ಮೆಕ್‌ಡೊನಾಲ್ಡ್ಸ್‌ ಇನ್ನು ಪ್ಲಾಸ್ಟಿಕ್‌ ಸ್ಟ್ರಾಗಳಿಗೆ ಗುಡ್‌ಬೈ ಹೇಳಲಿದೆಯಂತೆ. ಬ್ರಿಟನ್‌ ದೇಶವೊಂದರಲ್ಲೇ ಅದರ ಶಾಖೆಗಳಲ್ಲಿ ಪ್ರತಿದಿನ 10.8 ಲಕ್ಷ ಸ್ಟ್ರಾಗಳು ಖರ್ಚಾಗುತ್ತವಂತೆ!  ಇದು, ಪ್ರಪಂಚದಲ್ಲಿರುವ ಅಷ್ಟೂ ಶಾಖೆಗಳಲ್ಲೇ ಅತ್ಯಧಿಕ ಪ್ರಮಾಣದ ಸ್ಟ್ರಾ ಬಳಕೆ ಎಂದೂ ಕಂಪೆನಿ ಹೇಳಿಕೊಂಡಿದೆ. ಕಂಪೆನಿ ಹೇಳಿಕೊಂಡಂತೆ ನಡೆದರೆ ಬ್ರಿಟನ್‌ನ ಶಾಖೆಗಳಲ್ಲಿ ಇದೇ ಸೆಪ್ಟೆಂಬರ್‌ನಿಂದ ಕಾಗದದ ಸ್ಟ್ರಾಗಳು ಬಳಕೆಗೆ ಬರಲಿವೆ. ಮುಂದಿನ ದಿನಗಳಲ್ಲಿ ಇತರ ದೇಶಗಳಲ್ಲಿಯೂ ಈ ಪರಿಸರಪ್ರಜ್ಞೆ ಅನುಷ್ಠಾನಕ್ಕೆ ಬರಲಿದೆಯಂತೆ. ಅಂದರೆ ನಮ್ಮ ನಿಮ್ಮೂರಿನ ಮೆಕ್‌ಡೊನಾಲ್ಡ್ಸ್‌ನಲ್ಲಿಯೂ!

ಕಂಪೆನಿ ಬಳಸುವ ಸ್ಟ್ರಾಗಳನ್ನು ಪಾಲಿಪ್ರೊಪಿಲಿನ್‌ ಮತ್ತು ಪಾಲಿಸ್ಟರಿನ್‌ ಎಂಬ ಪ್ಲಾಸ್ಟಿಕ್‌ಗಳಿಂದ ತಯಾರಿಸಲಾಗುತ್ತದೆ. ಈ ಎರಡೂ ಮಾದರಿಗಳನ್ನು ಸಂಸ್ಕರಿಸದೇ ಇದ್ದರೆ ಅವು ಭೂಮಿಯಲ್ಲಿ ಕರಗಲು ನೂರಾರು ವರ್ಷಗಳು ಬೇಕಾಗುತ್ತವಂತೆ. ಅಲ್ಲದೆ, ಈ ಸ್ಟ್ರಾಗಳ ‘ಜೀವಿತಾವಧಿ’ಯೂ ಅತ್ಯಲ್ಪ. ಹಾಗಾಗಿ, ಅತ್ಯಂತ ಕಡಿಮೆ ಅವಧಿಯೊಳಗೆ ಬಳಸಿ, ಸಂಸ್ಕರಿಸುವ ಬದಲು ಬಳಕೆಯನ್ನೇ ಕೈಬಿಡುವುದು ಸೂಕ್ತ ಎಂಬ ಜಾಣ ಲೆಕ್ಕಾಚಾರ ಹಾಕಿದೆ ಮೆಕ್‌ಡೊನಾಲ್ಡ್ಸ್‌.

ಇನ್ನೂ ಕೆಲವು ಫಾಸ್ಟ್‌ಫುಡ್‌ ಕಂಪೆನಿಗಳೂ ಮೆಕ್‌ಡೊನಾಲ್ಡ್ಸ್‌ ಕ್ರಮವನ್ನೇ ಅನುಕರಿಸಲು ಮುಂದಾಗಿರುವುದು ವಿಶೇಷ. ಕೋಸ್ತಾ ಕಾಫಿ ಮತ್ತು ಪ್ರೆಟ್ ಎ ಮ್ಯಾಂಗರ್‌ ಎಂಬ ಕಂಪೆನಿಗಳು ಈ ವರ್ಷಾಂತ್ಯದೊಳಗೆ ಪ್ಲಾಸ್ಟಿಕ್‌ ಸ್ಟ್ರಾಗಳಿಗೆ ಗುಡ್‌ಬೈ ಹೇಳುವ ತೀರ್ಮಾನ ಪ್ರಕಟಿಸಿವೆ. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !