ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಮನೆಯ ಓರಣಕ್ಕೆ ಮಿತ ಪಾತ್ರೆಗಳು

ಕಿಚನ್‌ ಟಿಪ್ಸ್‌
Last Updated 13 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬ್ಯಾಂಕ್‌ ಉದ್ಯೋಗಿ ಸೌಜನ್ಯಳಿಗೆ ಪಾತ್ರೆಗಳ ಮೇಲೆ ವಿಪರೀತ ಒಲವು. ಮಾಲ್‌, ಮಳಿಗೆ ಹೀಗೆ ಎಲ್ಲೇ ಹೋದರೂ ಬಗೆಬಗೆಯ ಪಾತ್ರೆಗಳನ್ನು ತಂದು ಮನೆಯಲ್ಲಿ ಕೂಡಿ ಹಾಕುವ ಅಭ್ಯಾಸ. ಅದರಲ್ಲೂ ಒಂದೇ ರೀತಿ ಚಮಚಗಳು, ಫೋರ್ಕ್‌ಗಳು, ಹಾಲು ಕಾಯಿಸುವ ಪಾತ್ರೆ, ಒಂದೇ ಗಾತ್ರದ ಕುಕರ್‌ಗಳು... ಹೀಗೆ ಅಡುಗೆಮನೆಯ ತುಂಬಾ ಪಾತ್ರೆಗಳನ್ನು ತುಂಬಿಸಿಡುತ್ತಾಳೆ. ಮೂವರೇ ಇರುವ ಈ ಮನೆಗೆ ಇಷ್ಟೊಂದು ಪಾತ್ರೆಗಳ ಅವಶ್ಯಕತೆಯಾದರೂ ಏನು ಎಂಬ ಪ್ರಶ್ನೆಯನ್ನು ಮನೆಗೆ ಬಂದವರೆಲ್ಲಾ ಸೌಜನ್ಯಳ ಬಳಿ ಕೇಳಿದಾಗ, ಆ ಕ್ಷಣಕ್ಕೆ ಅವಳಿಗೆ ಹೌದಲ್ವಾ ಎನ್ನಿಸಿದರೂ ಮತ್ತೆ ಹೊರಗಡೆ ಹೋದಾಗ ಪಾತ್ರೆ ತರುವುದನ್ನು ಬಿಡುವುದಿಲ್ಲ.

ಸೌಜನ್ಯಳಂತೆ ಹಲವು ಮಹಿಳೆಯರಿಗೆ ಇದೊಂದು ಅಭ್ಯಾಸ. ಕಂಡ ಕಂಡಲ್ಲಿ ಸಿಕ್ಕ ಸಿಕ್ಕ ಪಾತ್ರೆಗಳನ್ನು ತಂದು ಅಡುಗೆಮನೆ ತುಂಬಿಸುತ್ತಾರೆ. ಅಡುಗೆಮನೆಯಲ್ಲಿ ಇರುವಂತಹ ಪಾತ್ರೆಗಳನ್ನೇ ಪುನಃ ಪುನಃ ತರುತ್ತಾರೆ.

ಆದರೆ ಅವಶ್ಯವಿದ್ದಷ್ಟೇ ಪಾತ್ರೆಗಳನ್ನು ಇರಿಸಿಕೊಂಡರೆ ಕಿರಿಕಿರಿಯೂ ಕಡಿಮೆ, ತೊಳೆಯುವುದೂ ಸುಲಭ. ಅವುಗಳನ್ನು ಸುಂದರವಾಗಿ ನಿರ್ದಿಷ್ಟ ಜಾಗದಲ್ಲಿ ಕ್ರಮಬದ್ಧವಾಗಿ ಜೋಡಿಸಿಟ್ಟುಕೊಳ್ಳಬಹುದು. ಅಲ್ಲದೇ ಅಡುಗೆಮನೆಯ ಅಂದವನ್ನೂ ಹೆಚ್ಚಿಸಬಹುದು.

ಚಮಚ: ಕೆಲವು ಮನೆಗಳಲ್ಲಿ ಊಟದ ಟೇಬಲ್, ಅಡುಗೆಮನೆ ಎಲ್ಲಿ ನೋಡಿದರೂ ಚಮಚಗಳದ್ದೇ ಕಾರುಬಾರು. ಚಮಚದ ಸ್ಟ್ಯಾಂಡ್ ತುಂಬಿದ್ದರೂ ಇನ್ನಷ್ಟು ಚಮಚಗಳನ್ನು ತಂದಿಟ್ಟುಕೊಂಡಿರುತ್ತಾರೆ.

ಅದೂ ಒಂದೇ ರೀತಿಯ, ಗಾತ್ರದ ಮರದ ಅಥವಾ ಸ್ಟ್ರೀಲ್‌ ಚಮಚಗಳು, ಫೋರ್ಕ್‌ಗಳು. ಒಂದೇ ಗಾತ್ರದ ಚಮಚ ಇರಿಸಿಕೊಳ್ಳುವ ಬದಲು ಒಂದು 4 ಟೀ ಚಮಚ ಹಾಗೂ 2 ಟೇಬಲ್ ಚಮಚ ಇರಿಸಿಕೊಂಡರೆ ಉತ್ತಮ. ‌

ಚಾಕು: ಮನೆಯಲ್ಲಿ ಸಾಮಾನ್ಯವಾಗಿ ಚಾಕು ಅವಶ್ಯಕತೆ ಬೀಳುವುದು ತರಕಾರಿ. ಮಾಂಸ ಕೊಯ್ಯಲು ಹಾಗೂ ಹಣ್ಣುಗಳನ್ನು ಕತ್ತರಿಸುವಾಗ. ಆ ಕಾರಣಕ್ಕೆ ಒಂದು ದಪ್ಪ ಗಾತ್ರದ ಹಾಗೂ ಇನ್ನೊಂದು ಹರಿತವಾದ ಸಪೂರ ಗಾತ್ರದ ಚಾಕುಗಳನ್ನು ಇರಿಸಿಕೊಂಡರೆ ಸಾಕು.

ಹಿಡಿಕೆ ತಪ್ಪಲೆ: ಹಾಲು, ನೀರು ಕಾಯಿಸಲು ಹಿಡಿಕೆ ಇರುವ ತಪ್ಪಲೆ ಅಥವಾ ಪಾತ್ರೆಯನ್ನು ಉಪಯೋಗಿಸುವುದು ಸಾಮಾನ್ಯ. ಆದರೆ ಕೆಲವರು ಹಾಲು ಕಾಯಿಸಲು, ಬಿಸಿನೀರು ಮಾಡಲು ಹೀಗೆ ಒಂದೊಂದಕ್ಕೆ ಒಂದೊಂದು ಪಾತ್ರೆ ಇಟ್ಟುಕೊಂಡಿರುತ್ತಾರೆ. ಅದರ ಬದಲು ಮಧ್ಯಮ ಗಾತ್ರದ ಒಂದು ಪಾತ್ರೆ ಹಾಲು ಹಾಗೂ ನೀರು ಕಾಯಿಸಲು, ಟೀ ಮಾಡಲು ಇನ್ನೊಂದು ಚಿಕ್ಕ ಪಾತ್ರೆ ಇರಿಸಿಕೊಂಡರೆ ಉತ್ತಮ. ಇದರಲ್ಲೇ ಎರಡನ್ನೂ ಸಂಭಾಳಿಸಬಹುದು.

ಕುಕರ್‌: ಭಾರತೀಯರ ಅಡುಗೆಮನೆಯಲ್ಲಿ ಕುಕರ್‌ಗೆ ಪ್ರಥಮ ಸ್ಥಾನ. ಆದರೆ ಕೆಲವರ ಅಡುಗೆಮನೆಯಲ್ಲಿ ಕುಕರ್‌ಗಳೇ ತುಂಬಿ ಹೋಗಿರುತ್ತವೆ. ಬೇಳೆ ಬೇಯಿಸಲು ಒಂದು, ಅನ್ನ ಮಾಡಲು ಒಂದು, ಪಲ್ಯ ಬೇಯಿಸಲು ಇನ್ನೊಂದು ಹೀಗೆ ಕುಕರ್‌ಗಳ ರಾಶಿಯೇ ಇರುತ್ತದೆ.

ಅದರ ಬದಲು ಅನ್ನ ಮಾಡಲು ಒಂದು ಕುಕರ್‌, ತರಕಾರಿ ಮತ್ತು ಬೇಳೆ ಬೇಯಿಸಲು ಪ್ರೆಷರ್‌ ಪ್ಯಾನ್‌ ಸಾಕು. ಈ ಪ್ಯಾನ್‌ನಲ್ಲೇ ಪಲ್ಯ, ಹುಳಿ ಕೂಡಮಾಡಬಹುದು. ಈಗೆಲ್ಲಾ ವಿಭಕ್ತ ಕುಟುಂಬವಾದ ಕಾರಣ ಮಧ್ಯಮ ಗಾತ್ರದ ಕುಕರ್ ಸಾಕು, ಇದರಿಂದ ಜಾಗವನ್ನೂ ಉಳಿಸಬಹುದು, ಬಳಸುವುದೂ ಸುಲಭ.

ಕರಿಯಲು, ಹುರಿಯಲು ಒಂದು ಫ್ರೈಯಿಂಗ್‌ ಪ್ಯಾನ್‌, ದೋಸೆ, ರೊಟ್ಟಿಗೆ ತವಾ ಇದ್ದರೆ ಸಾಕಷ್ಟಾಯಿತು. ಮಿಕ್ಸರ್‌ನಲ್ಲೇ ಚಾಪರ್‌ ಜಾರ್‌ ಕೂಡ ಬರುತ್ತದೆ, ಹೀಗಾಗಿ ಅದನ್ನೇ ಖರೀದಿಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT