ಸ್ಟಾರ್‌ ಹೋಟೆಲಿನಲ್ಲಿ ‘ಸ್ಟ್ರೀಟ್‌ಫುಡ್‌’

7

ಸ್ಟಾರ್‌ ಹೋಟೆಲಿನಲ್ಲಿ ‘ಸ್ಟ್ರೀಟ್‌ಫುಡ್‌’

Published:
Updated:

ಸ್ಟ್ರೀಟ್‌ ಫುಡ್‌ ಎಂದ ತಕ್ಷಣ ಪಾನಿಪುರಿ, ಮಸಾಲೆಪುರಿ, ಬೇಲ್‌ಪುರಿ ಕಣ್ಮುಂದೆ ಬರುತ್ತದೆ. ಇತ್ತೀಚೆಗೆ ಈ ಚಾಟ್‌ ಪಟ್ಟಿಗೆ ಇನ್ನಷ್ಟು ರುಚಿಗಳು ಸೇರಿಕೊಂಡಿವೆ. ಅದು ಬಿಟ್ಟರೆ ಬಿಸಿಬಿಸಿ ಬೋಂಡಾ, ಪಕೋಡಾ, ವಡೆ ಮುಂತಾದ ಲೋಕಲ್‌ ತಿನಿಸುಗಳು ನೆನಪಾಗುತ್ತವೆ. ಇವೆಲ್ಲವೂ ಭಿನ್ನ ರುಚಿಯಲ್ಲಿ ಸ್ಟಾರ್‌ ಹೋಟೆಲಿನಲ್ಲಿ ಸಿಗುವ ಸಮಯ ಬಂದಿದೆ. ಈ ಮಳೆಗಾಲದ ಸಂಜೆಗೆ ಸರಿಹೊಂದುವಂತೆ ರೆಸಿಡೆನ್ಸಿ ರಸ್ತೆಯಲ್ಲಿರುವ ದಿ ಗೇಟ್‌ ವೇ ಹೋಟೆಲ್‌ ರುಚಿಕರವಾದ ಚಾಟ್‌ಗಳನ್ನು ‘ಸ್ಟ್ರೀಟ್‌ ಫುಡ್‌ ಫೆಸ್ಟಿವಲ್‌’ ಹೆಸರಿನಲ್ಲಿ ನೀಡುತ್ತಿದೆ. ಆಗಸ್ಟ್‌ 30ರವರೆಗೂ ಈ ಬೀದಿ ತಿಂಡಿಗಳ ಹಬ್ಬ ನಡೆಯಲಿದೆ.

ಬೀದಿ ಬದಿ ತಿಂಡಿಗಳು ಎಂದ ತಕ್ಷಣ ಗಾಡಿಗಳ ನೆನಪಾಗುತ್ತದೆ. ಹೋಟೆಲಿನ ಡೈನಿಂಗ್ ರೂಂ ಪ್ರವೇಶಿಸುತ್ತಿದ್ದಂತೆ ಅಲ್ಲೊಂದು ಅಲಂಕೃತವಾದ ಗಾಡಿ ಎದುರಾಗುತ್ತದೆ. ಗಾಡಿಯಲ್ಲಿ ಗಾಜಿನ ಭರಣಿಗಳು. ಭರಣಿಯೊಳಗೆ ಗರಿಗರಿಯಾದ ಪೂರಿ, ಸೇವ್‌, ಕಡ್ಲೆಪುರಿ, ಹುರಿದ ಶೇಂಗಾ, ನಿಪ್ಪಟ್ಟು, ಕಚೋರಿ, ಸಮೋಸಾ... ನೋಡುತ್ತಿದ್ದಂತೆ ಬಾಯಲ್ಲಿ ನೀರೂರುತ್ತದೆ.

ಗೇಟ್‌ ವೇ ಹೋಟೆಲಿನ ಮುಖ್ಯ ಶೆಫ್‌ ತುಷಾರ್‌ ಕುಮಾರ್ ದಾಸ್‌ ಅಷ್ಟೇ ಪ್ರೀತಿಯಿಂದ ಸ್ಟ್ರೀಟ್‌ ಫುಡ್‌ ಫೆಸ್ಟಿವಲ್‌ನ ವಿಶೇಷಗಳನ್ನು ವಿವರಿಸುತ್ತಾ  ಮುಖ್ಯ ಕಿಚನ್‌ ಬಳಿಯಿರುವ ಚಾಟ್‌ ಸೆಂಟರ್‌ಗೆ ಕರೆದೊಯ್ದರು. ಅಲ್ಲಿ ಈ ಫೆಸ್ಟಿವಲ್‌ ಉಸ್ತುವಾರಿ ಹೊತ್ತಿರುವ ಶೆಫ್‌ ಲಖನ್‌ ಸಿಂಗ್‌ ಎದುರುಗೊಳ್ಳುತ್ತಾರೆ. ಬಂದವರು ಎಲ್ಲ ಚಾಟ್‌ಗಳ ರುಚಿ ಸವಿಯಬೇಕು ಎಂಬುದು ಅವರ ಆಕಾಂಕ್ಷೆ. ಮೆನು ಟೇಬಲ್‌ ಮೇಲಿದ್ದರೂ ಆರ್ಡರ್‌ ಮಾಡುವುದಕ್ಕೂ ಮುನ್ನವೇ ವಿಶೇಷ ಲಸ್ಸಿ ತಂದಿಟ್ಟರು. ಮೊದಲಿಗೆ ಚೋಲೆ ಕಚೋರಿ ರುಚಿ ನೋಡಿ ಎಂದು ತಂದಿಟ್ಟರು. ಅದು ತಿಂದು ಮುಗಿಯುವ ಮೊದಲೇ ಚಿಕನ್‌ ರೋಲ್ಸ್‌ ಬಂತು, ನಂತರ ಕೀಮಾ ಸಮೋಸಾ ಸರದಿ. ಸಮೋಸಾ ಜೊತೆ ನೆಂಚಿಕೊಳ್ಳಲು ಕೊಟ್ಟ ಆಮ್‌ ಸಾಸ್‌ (ಮಾವಿನ ತಿರುಳನ್ನು ಒಣಗಿಸಿ ಶೇಖರಿಸಿಟ್ಟು ಅದರಲ್ಲಿ ತಯಾರಿಸಿದ ಸಾಸ್‌) ಸ್ವಲ್ಪ ಹುಳಿ, ಸ್ವಲ್ಪ ಸಿಹಿಯಿಂದಾಗಿ ಸಮೋಸಾ ರುಚಿ ಇನ್ನಷ್ಟು ಹೆಚ್ಚಿಸಿತ್ತು. ನಂತರದ ಸರದಿ ಪಾನಿಪುರಿ, ಬೇಲ್‌ಪುರಿ, ಮೆಣಸು ಬಜ್ಜಿಯದು.

ಆಲು ಹೂರಣದ ಮೆಣಸು ಬಜ್ಜಿ, ಆಮ್‌ ರಸ:  ಮೆಣಸು ಬಜ್ಜಿ ನೋಡುವುದಕ್ಕೂ ಆಕರ್ಷಕ, ಅದನ್ನು ತಯಾರಿಸುವ ವಿಧಾನವೂ ವಿಶೇಷವಾಗಿದೆ. ಮೆಣಸಿನ ತಿರುಳು ತೆಗೆದು ಆಲೂಗೆಡ್ಡೆಯ ಹೂರಣ ತುಂಬಿ, ಹೊರಭಾಗಕ್ಕೆ ಸಮೋಸ ಶೀಟನ್ನು ಸುರುಳಿಯಂತೆ ಸುತ್ತಿ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇಷ್ಟು ಸವಿಯುವ ಹೊತ್ತಿಗೆ ಹೊಟ್ಟೆ ತುಂಬಿತ್ತು. ಆದರೂ, ಶೆಫ್‌ಗೆ ಆತಿಥ್ಯ ನೀಡುವ ಹಸಿವು ಕುಂದಿರಲಿಲ್ಲ.

ಆಮ್‌ ರಸ ಸೇವಿಸಲೇಬೇಕು ಎಂದು ಚಿಕ್ಕದೊಂದು ಗಾಜಿನ ಲೋಟದಲ್ಲಿ ಅರ್ಧದಷ್ಟು ಮಾವಿನ ಹಣ್ಣಿನ ರಸ ತಂದಿಟ್ಟರು. ಅಷ್ಟಕ್ಕೇ ಅವರು ತೃಪ್ತರಾಗಲಿಲ್ಲ. ಬಿಸಿಬಿಸಿ ಜಿಲೇಬಿ ತಂದಿಟ್ಟು, ‘ಇವತ್ತು ಒಂದು ದಿನ ಅಷ್ಟೇ ಅಲ್ವಾ.. ತಿನ್ನಿ ಮೇಡಂ’ ಎಂದು ಟೇಬಲ್‌ ಪಕ್ಕದಲ್ಲೇ ನಿಂತಿದ್ದರು.

*

ಕಳೆದ ವರ್ಷವೂ ಸ್ಟ್ರೀಟ್‌ ಫುಡ್‌ ಫೆಸ್ಟಿವಲ್‌ ಮಾಡಿದ್ದೆವು. ಇನ್ನೂ ಹಲವು ಚಾಟ್‌ಗಳು ಇದ್ದವು. ಆದರೆ, ಜನ ಕೆಲವು ಚಾಟ್‌ಗಳನ್ನು ಇಷ್ಟಪಡಲಿಲ್ಲ. ಅದಕ್ಕಾಗಿ ಪ್ರತಿದಿನ ಸಿದ್ಧಪಡಿಸಿದ ಪದಾರ್ಥಗಳು ವ್ಯರ್ಥವಾಗುತ್ತಿದ್ದವು. ಯಾವುದನ್ನು ಹೆಚ್ಚು ಇಷ್ಟಪಟ್ಟು ತಿಂದಿದ್ದರೋ ಅವುಗಳನ್ನು ಮಾತ್ರ ಈ ವರ್ಷದ ಪಟ್ಟಿಯಲ್ಲಿ ಉಳಿಸಿಕೊಂಡೆವು.
–ತುಷಾರ್‌, ಹೋಟೆಲಿನ ಮುಖ್ಯ ಶೆಫ್‌


ಗೋಲ್ಗಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !