ಭಾನುವಾರ, ನವೆಂಬರ್ 29, 2020
25 °C
ಸಿಹಿಯ ವೈವಿಧ್ಯತೆಯ ಅನಾವರಣ

Pv Web Exclusive| ಹಬ್ಬದ ಸಿರಿಯಲ್ಲಿ ಬಗೆ ಬಗೆ ಸಿಹಿ

ಸುಮಾ ಬಿ Updated:

ಅಕ್ಷರ ಗಾತ್ರ : | |

Prajavani

ಆಯಾ ಪ್ರಾದೇಶಿಕತೆ, ಸಮುದಾಯಗಳ ಕಾರಣದಿಂದ ರಾಜ್ಯದ ಒಂದೊಂದು ಭಾಗದಲ್ಲಿಯೂ ಒಂದೊಂದು ಸಿಹಿ ಖಾದ್ಯ ಪ್ರಮುಖವಾಗಿ ಗುರುತಿಸಿಕೊಂಡಿದೆ. ಈ ಸಿಹಿ ಖಾದ್ಯಗಳು ಆಯಾ ಭಾಗದ ಹಬ್ಬ, ಶುಭ ಸಮಾರಂಭಗಳಲ್ಲಿ ಮೆನುವಿನಲ್ಲಿ ಅಗ್ರಗಣ್ಯವಾಗಿ ಬೆಳಗುತ್ತವೆ. ನವರಾತ್ರಿ, ದೀಪಾವಳಿಯ ಈ ಹೊತ್ತಿನಲ್ಲಿ ಯಾವ ಭಾಗದಲ್ಲಿ ಯಾವ ಸಿಹಿ ಅಡುಗೆ ಪ್ರಸಿದ್ಧವಾಗಿದೆ ಎನ್ನುವ ಮಾಹಿತಿ ನೀಡುತ್ತದೆ ಈ ಲೇಖನ. ನಾಲಿಗೆಯಲ್ಲಿ ರಸ ಸ್ರವಿಸುತ್ತಲೇ ಸಿಹಿ ಖಾದ್ಯಗಳ ಬಗ್ಗೆ ಓದಿ, ತಯಾರಿಸಲು ಅಡುಗೆ ಮನೆಗಳತ್ತ ಕಾಲ್ಕೀಳಿ.

***

ಈಗೇನಿದ್ದರೂ ಹಬ್ಬಗಳ ಸಂಭ್ರಮ. ನವರಾತ್ರಿ, ದೀಪಾವಳಿ ಹಬ್ಬಗಳು ಸಾಲುಗಟ್ಟಿವೆ. ಕೊರೊನಾ ಪ್ರತಿವರ್ಷದ ಹಬ್ಬದ ಆಹ್ಲಾದವನ್ನು ಕಿತ್ತುಕೊಂಡರೂ ಮನೆಯಲ್ಲೇ ಭರಪೂರ ಅಡುಗೆ ಮಾಡಿ ನೈವೇದ್ಯ ತೋರಿಸಿ ಹೊಟ್ಟೆಗೆ ಇಳಿಸಲು ಅಡ್ಡಿ ಇಲ್ಲ ಎನ್ನಿ. ಹಬ್ಬ ಎಂದಕೂಡಲೇ ಸಿಹಿಖಾದ್ಯಗಳ ಸಂಭ್ರಮ. ಹಬ್ಬ ಎನ್ನುವುದೇ ಸಿಹಿ ಎನ್ನುವುದರ ಸೂಚನೆ ಅಲ್ಲವೇ.

‘ಸಿಹಿ’ ಈ ಪದ ಮಕ್ಕಳಾದಿಯಾಗಿ ಹಿರಿಯರ ಕಿವಿ ಮೇಲೆ ಬೀಳುತ್ತಲೇ ನಾಲಿಗೆಯಲ್ಲಿ ರಸವೊಂದು ಸ್ರವಿಸುತ್ತದೆ. ಹಬ್ಬಗಳ ಸಮಯದಲ್ಲಿ ‘ಸಿಹಿ’ ಅಡುಗೆ ತಯಾರಿಗಾಗಿ ಪದಾರ್ಥಗಳ ಖರೀದಿ ವಾರದ ಹಿಂದೆಯೇ ಆಗಿರುತ್ತದೆ. ಯಾವ ಸಿಹಿ ತಯಾರಿಸಬೇಕು ಎನ್ನುವುದೂ ನಿರ್ಧಾರವಾಗಿರುತ್ತದೆ. ಕೆಲವರಿಗೆ ಸಿಹಿಖಾದ್ಯ ಅಷ್ಟಾಗಿ ರುಚಿಸುವುದಿಲ್ಲ. ಆದರೆ ‘ಹಬ್ಬ’ದ ವಿಶೇಷ ಸಂದರ್ಭ ಅವರಲ್ಲೂ ಸ್ವಲ್ಪವನ್ನಾದರೂ ಸಿಹಿ ತಿನ್ನಬೇಕು ಎನ್ನುವ ಭಾವ ಮೂಡಿಸುತ್ತವೆ. ಇಲ್ಲವೇ ಮನೆಯವರೇ, ‘ಅಯ್ಯೋ ಹಬ್ಬದಲ್ಲಿ ಸಿಹಿ ತಿನ್ನದಿದ್ದರೆ ಹೇಗೆ, ಸ್ವಲ್ಪವಾದರೂ ಹಾಕಿಸಿಕೊಳ್ಳಿ’ ಎಂದು ಪ್ರೀತಿಯಿಂದ ಉಣಬಡಿಸುವರು.

ಅದೇ ಸಿಹಿಯನ್ನೇ ಚಪ್ಪರಿಸುವವರಿಗೆ, ಸಿಹಿ ಪ್ರಿಯರಿಗಿದು ‘ಹಬ್ಬವೇ’ ಸರಿ. ಪ್ರತಿ ಹಬ್ಬದಲ್ಲಿಯೂ ಕರ್ನಾಟಕದ ಒಂದೊಂದು ಭಾಗದಲ್ಲಿ ಒಂದೊಂದು ಖಾದ್ಯ ಪಾರಮ್ಯ ಮೆರೆದಿದೆ. ಪ್ರದೇಶದಿಂದ ಪ್ರದೇಶಕ್ಕೆ ಸಿಹಿ ಆಹಾರದ ಮೆನು ಬದಲಾಗುತ್ತದೆ. ಈ ಆಹಾರ ವೈವಿಧ್ಯವೂ ಒಂದು ಭಾಗದವರು ಮತ್ತೊಂದು ಭಾಗಕ್ಕೆ ಹೋದರೆ ಬಾಯಲ್ಲಿ ನೀರೂರುವಂತೆ ಮಾಡುತ್ತದೆ.


ಸಿಹಿ ಕಡುಬು

ಮೈಸೂರು ಭಾಗದಲ್ಲಿ ಒಂದು ಬಗೆಯ ಸಾಂಪ್ರದಾಯಿಕ ತಿನಿಸು ಪ್ರಸಿದ್ಧಿಯಾಗಿದ್ದರೆ, ಕಲ್ಯಾಣ ಕರ್ನಾಟಕದಲ್ಲಿ ಮೊತ್ತೊಂದು ಬಗೆಯ ಸಿಹಿ ಖಾದ್ಯ ಮನೆಮಾತಾಗಿರುತ್ತದೆ. ಮಧ್ಯ ಕರ್ನಾಟಕಕ್ಕೆ ಬಂದರೆ ಇನ್ನೊಂದು ರೀತಿಯದ್ದು. ಹೀಗೆ ಪ್ರತಿ ಸ್ಥಳದಲ್ಲೂ ಸಿಹಿ ಖಾದ್ಯಗಳು ವೈವಿಧ್ಯ, ವಿಭಿನ್ನ.

ಈಗಂತೂ ಹೋಟೆಲ್‌, ಯುಟ್ಯೂಬ್‌ಗಳ ಪ್ರಭಾವದಿಂದ ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗೂ ಎಲ್ಲ ಕಡೆಯೂ ಎಲ್ಲ ಬಗೆಯ ತಿನಿಸುಗಳೂ ಲಭ್ಯವಿರುತ್ತವೆ. ಮಂಗಳೂರು ಬನ್ಸ್ ಮೈಸೂರಿನಲ್ಲೂ, ಮೈಸೂರು ಪಾಕ್‌ (ಹಾಗೆ ನೋಡಿದರೆ ಮೈಸೂರಿನ ಹೆಸರಿಗೂ ಮೈಸೂರು ಪಾಕ್‌ಗೂ ಸಂಬಂಧವಿಲ್ಲ. ಅದರ ಮೂಲ ಮೆಸ್ಸೂರ್ ಪಾಕ್) ಧಾರವಾಡದಲ್ಲೂ, ಬೆಳಗಾಂ ಕುಂದಾ ಬೆಣ್ಣೆ ನಗರಿ ದಾವಣಗೆರೆಯಲ್ಲೂ, ಧಾರವಾಡ ಪೇಡೆ ಕರಾವಳಿಯ ಬೇಕರಿಗಳಲ್ಲೂ ಲಭ್ಯ. ಅನುಕೂಲ ಶಾಸ್ತ್ರಕ್ಕೆ ಎಲ್ಲವೂ ಒಗ್ಗಿಕೊಂಡಿವೆ. ಆದರೆ, ನೈಜ ಸ್ವಾದ ಆಸ್ವಾದಿಸಲು ಖಾದ್ಯಗಳ ‘ಸ್ವಸ್ಥಾನ’ಕ್ಕೇ ತೆರಳಬೇಕು.

ಒತ್ತಡದ ಬದುಕಿನಲ್ಲಿ ಬಹುತೇಕ ಸಾಂಪ್ರದಾಯಿಕ ಅಡುಗೆಗಳು ಕಣ್ಮರೆಯಾಗಿವೆ. ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಪ್ರಕಾರ ಕರ್ನಾಟಕದಲ್ಲಿ ಈ ಹಿಂದೆ ಇದ್ದ 1,500 ಸಾಂಪ್ರದಾಯಿಕ ಅಡುಗೆಗಳ ಸಂಖ್ಯೆ ಈಗ 150ಕ್ಕೆ ಇಳಿದಿದೆ. ಅವುಗಳ ಜಾಗವನ್ನು ಈಗ ಜಂಕ್‌ ಫುಡ್‌, ವಿದೇಶಿ ಖಾದ್ಯಗಳು ಆಕ್ರಮಿಸಿವೆ. ಅದೇನೆ ಇರಲಿ, ಕರ್ನಾಟಕದ ವಿವಿಧೆಡೆ ಹಬ್ಬದ ಅಡುಗೆ ಎಂದರೆ ಇದೇ ಎಂದು ಹೇಳುವ ‘ಸಿಗ್ನೇಚರ್‌ ಡಿಶ್‌’ ಹುಡುಕುವ ಪ್ರಯತ್ನ ಇಲ್ಲಿದೆ.

ಮೊದಲು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಬರೋಣ. ಅತಿ ಹೆಚ್ಚು ಖಾರ ಪ್ರಿಯರು; ಹಾಗೆಯೇ ಅತಿ ಹೆಚ್ಚು ಸಿಹಿ ಪ್ರಿಯರು ಇಲ್ಲಿಯವರೇ. ಖಾರ ಎಷ್ಟು ಕಟುವಾಗಿ ತಿನ್ನುವರೋ ಸಿಹಿಯನ್ನೂ ಇತರೆಡೆಗಿಂತ ಎರಡು ಹಿಡಿ ಹೆಚ್ಚೇ ಸವಿಯುವರು. ‘ಕುಟ್ಟಿದ ಗೋಧಿ ಹುಗ್ಗಿ’ ಈ ಭಾಗದ ಪ್ರಸಿದ್ಧ ಸಿಹಿ ಖಾದ್ಯ. ಬಡವರಿಂದ ಸಿರಿವಂತರಾದಿಯಾಗಿ ಎಲ್ಲರಿಗೂ, ಎಲ್ಲ ಸಮಯದಲ್ಲೂ ಒಗ್ಗಿಕೊಳ್ಳುವ ಹುಗ್ಗಿ ಇದು. ಆದ್ದರಿಂದಲೇ ಇದು ‘ಒಗ್ಗು ಹುಗ್ಗಿ’ ಎಂತಲೂ ಕರೆಸಿಕೊಂಡಿದೆ. ಅನಾದಿ ಕಾಲದಿಂದಲೂ ಇದರ ಪ್ರಭಾವ ಕುಂದಿಲ್ಲ. ಬದಲಾಗಿ ಕರ್ನಾಟಕದ ಇತರೆಡೆಗೂ ಇದರ ಕಂಪು ಪಸರಿಸಿದೆ. ಮದುವೆ, ಮುಂಜಿಯಿಂದ ಹಿಡಿದು ತಿಥಿಯೂಟಕ್ಕೂ ಗೋಧಿ ಹುಗ್ಗಿ ಹಾಜರಿ ಇರಲೇಬೇಕು. ಇಡೀ ದಿನ ಗೋಧಿ ನೆನೆಸಿಟ್ಟು ಒರಳುಕಲ್ಲಿಗೆ ಹಾಕಿ ಕುಮ್ಮಿ ಮೇಲಿನ ಸಿಪ್ಪೆ ತೆಗೆದು, ಬೆಲ್ಲ, ತುಪ್ಪ, ಒಣ ಕೊಬ್ಬರಿ ಹದವಾಗಿ ಬೆರೆಸಿ ಹುಗ್ಗಿ ತಯಾರಿಸಿದರೆ ಅದರ ಸ್ವಾದವೇ ಬೇರೆ.


ಉಂಡೆ

ಇನ್ನು ‘ಮಾದಲಿ’ ಈ ಭಾಗದ ಇನ್ನೊಂದು ವಿಶಿಷ್ಟ ಖಾದ್ಯ. ಮಾದಲಿ ಮಾಡುವುದರಲ್ಲೇ ಸೊಗಸು ಅಡಗಿದೆ. 70–80 ದಶಕದಲ್ಲಿ ಊರ ಗೌಡರಷ್ಟೇ ತಯಾರಿಸಿ ಗ್ರಾಮಕ್ಕೆ ಹಂಚುತ್ತಿದ್ದರು. ಸಿರಿವಂತರು ಮಾತ್ರ ಮಾಡುತ್ತಿದ್ದ ಖಾದ್ಯವಿದು. ಈಗ ಎಲ್ಲರ ಅಡುಗೆಮನೆಗಳನ್ನೂ ಹೊಕ್ಕಾಗಿದೆ. ಸಿರಾ (ಕೇಸರಿಭಾತ್‌), ಹೋಳಿಗೆಗಳೂ ಇಲ್ಲಿ ಸ್ಥಾನ ಪಡೆದಿವೆ. ಸಿರಾ ಈ ಭಾಗದಲ್ಲಿ ಒಂದು ಕಾಲದಲ್ಲಿ ಅತಿ ಶ್ರೀಮಂತರ ಅಡುಗೆ ಮನೆಯ ಖಾದ್ಯ ಎಂದೆನಿಸಿತ್ತು. ಬಳಿಕ ಬೂಂದಿ ಆ ಸ್ಥಾನವನ್ನು ಆಕ್ರಮಿಸಿಕೊಂಡಿತು. ಮದುವೆ ಸಮಾರಂಭಗಳಲ್ಲಿ ಬೂಂದಿ ಹಾಜರಿ ಕಡ್ಡಾಯವಾಗಿತ್ತು. ಈ ಸ್ಥಾನವನ್ನು ಮತ್ತೆ ‘ಗೋಧಿ ಹುಗ್ಗಿ’ ತನ್ನ ವಶಕ್ಕೆ ಪಡೆದಿದೆ. ಆದ್ದರಿಂದ ಉತ್ತರ ಕರ್ನಾಟಕದ ‘ಸಿಗ್ನೇಚರ್‌ ಸಿಹಿ ಖಾದ್ಯ’ವಾಗಿ ಈ ಹುಗ್ಗಿ ಮೆರೆಯುತ್ತಿದೆ.

ಇನ್ನು ದಸರಾ ಹಬ್ಬದ ಆಕರ್ಷಣೆ ಮೈಸೂರಿಗೆ ಬನ್ನಿ. ಇಲ್ಲಿ ಪಾಯಸಗಳದ್ದೇ ಕಾರುಬಾರು. ನವದುರ್ಗೆಯರಿಗೆ ನವಖಾದ್ಯಗಳು ನವರಾತ್ರಿಯೂ ತಯಾರಾಗುತ್ತಿರುತ್ತವೆ. ಒಂದೊಂದು ದುರ್ಗೆಗೆ ಒಂದೊಂದು ಬಗೆಯ ಪಾಯಸ. ನವರಾತ್ರಿ ಮಾತ್ರವಲ್ಲ; ಬೇರೆ ಹಬ್ಬಗಳಲ್ಲೂ ಪಾಯಸಗಳದ್ದೇ ಸಂತೆ. ಸಜ್ಜಿಗೆ ಇಲ್ಲಿನ ಬಹುಬಳಕೆಯ, ಬಲು ಸುಲಭದ, ಬಲು ಇಷ್ಟದ ಖಾದ್ಯ. ಖೀರ್‌ ಅಕ್ಕಿ ಪಾಯಸ, ಹೆಸರು ಬೇಳೆ ಪಾಯಸ, ಕಡ್ಲೆ ಬೇಳೆ ಪಾಯಸ, ಗೋಧಿ ತರಿ ಪಾಯಸ, ಅಕ್ಕಿ ತರಿ ಪಾಯಸ, ಗಸಗಸೆ ಪಾಯಸ, ಶಾವಿಗೆ ಪಾಯಸ, ಹಾಲ್‌ ಪಾಯಸ, ಸಬ್ಬಕ್ಕಿ ಪಾಯಸ, ಅಕ್ಕಿ– ಹಾಲು ಪಾಯಸ, ಬೆಲ್ಲ– ಕಾಯಿತುರಿ ಪಾಯಸ, ಕಡ್ಲೆಹಿಟ್ಟು– ಅಕ್ಕಿ ಹಿಟ್ಟು ಪಾಯಸ, ಹಲಸಿನ ಹಣ್ಣಿನ ಪಾಯಸ ಹೀಗೆ ನೂರಾರು ಬಗೆಯ ಪಾಯಸಗಳು ಇಲ್ಲಿ ಮೇಳೈಸುತ್ತವೆ.

ಸಾಂಪ್ರದಾಯಿಕ ಅಡುಗೆಮನೆಗಳಲ್ಲಿ ಈಗಲೂ ಒಬ್ಬಟ್ಟುಗಳು (ಹೋಳಿಗೆ) ತಮ್ಮ ಸ್ಥಾನ ಬಿಟ್ಟುಕೊಟ್ಟಿಲ್ಲ. ಸಕ್ಕರೆ ಒಬ್ಬಟ್ಟು, ಬೇಳೆ ಒಬ್ಬಟ್ಟು, ಬೆಲ್ಲದ ಒಬ್ಬಟ್ಟು, ಕಾಯಿ ಒಬ್ಬಟ್ಟು ಇಲ್ಲಿನ ಸಾಂಪ್ರದಾಯಿಕ ಸಿಹಿ ಖಾದ್ಯಗಳು. ಬದಲಾದ ಜೀವನಶೈಲಿಗೆ ಪಾಯಸಗಳು ಅವುಗಳಲ್ಲಿ ಬೆರೆತುಹೋಗಿವೆ. ಕಜ್ಜಾಯ ಬಾಯಲ್ಲಿ ನೀರೂರಿಸುವ ಇಲ್ಲಿಯ ಮತ್ತೊಂದು ಸಿಹಿ ಖಾದ್ಯ.

ಮಧ್ಯ ಕರ್ನಾಟಕಕ್ಕೆ ಬಂದರೆ ಅನಾದಿ ಕಾಲದಿಂದಲೂ ಹೋಳಿಗೆಯದ್ದೇ ಸಾಮ್ರಾಜ್ಯ. ಎಲ್ಲಿಗೇ ಹೋದರೂ, ಯಾವ ಹಬ್ಬ ಇದ್ದರೂ, ಯಾರೇ ಬೀಗರು ಬಂದರೂ ಹೋಳಿಗೆ ಹಾಜರಿ ಹಾಕುತ್ತದೆ. ಬೀಗರು ಮನೆಗೆ ಬಂದರೆ ಮಾಂಸಾಹಾರಿಗಳು ಕುರಿ, ಕೋಳಿ ಬಾಡೂಟ ಹಾಕುವರು. ಸಸ್ಯಾಹಾರಿಗಳು ಹೋಳಿಗೆ ಸಿದ್ಧಗೊಳಿಸುವರು. ಕುರಿ, ಕೋಳಿಯಷ್ಟೇ ಶ್ರೀಮಂತ ಖಾದ್ಯ ಈ ಹೋಳಿಗೆ (ಖರ್ಚು ಕಡಿಮೆ). ಕುಟುಂಬದಲ್ಲಿ ಏನಾದರೂ ಶುಭ ಗಳಿಗೆ ಬಂದರೆ ಸ್ನೇಹಿತರು ‘ಮೊದಲು ಹೋಳಿಗೆ ಊಟ ಹಾಕಿಸು’ ಎನ್ನುತ್ತಾರೆ. ಅಷ್ಟರ ಮಟ್ಟಿಗೆ ಇಲ್ಲಿ ಹೋಳಿಗೆ ಬೆಸೆದುಕೊಂಡಿದೆ. ಕರಿಗಡುಬು, ಕುಚ್‌ ಕಡುಬು ಹೋಳಿಗೆಯ ಕವಲುಗಳು.

ಕಡಲೆ ಬೇಳೆ ಹೋಳಿಗೆ, ತೊಗರಿ ಬೇಳೆ ಹೋಳಿಗೆ, ಎಣ್ಣೆ ಹೋಳಿಗೆ, ಕಾಯಿ ಹೋಳಿಗೆ, ಗೆಣಸು ಹೋಳಿಗೆ, ಸಜ್ಜುಕದ ಹೋಳಿಗೆ, ಖರ್ಜೂರದ ಒಬ್ಬಟ್ಟು ಹೀಗೆ ತರಾವರಿ ಹೋಳಿಗಗಳು ರೂಪು ತಾಳಿವೆ. ಅವೆಲ್ಲ ಬೇಳೆ ಹೋಳಿಗೆಯ ಸಹೋದರರೇ. ಮೈಸೂರು ಭಾಗದಲ್ಲಿ ಕರೆಸಿಕೊಳ್ಳುವ ಒಬ್ಬಟ್ಟಿಗೂ, ಮಧ್ಯ ಕರ್ನಾಟಕದ ಹೋಳಿಗೆಗೂ ಸಾಮ್ಯತೆ ಇದೆ. ಇವೆರಡೂ ಒಂದೇ ಎಂದು ವಾದಿಸುವವರೂ ಇದ್ದಾರೆ. ಎರಡೂ ಬೇರೆ ಬೇರೆ ಎಂಬ ವಾದವೂ ಇದೆ. ಅವೆರಡೂ ಒಂದೆಯೇ ಅಥವಾ ಬೇರೆ ಬೇರೆಯೆ ಎಂಬ ಬಗ್ಗೆ ಈಗಲೂ ಜಿಜ್ಞಾಸೆ ಇದೆ.


ಎರೆಯಪ್ಪ

ಇನ್ನು ಭೂಮಿ ಹುಣ್ಣಿಮೆ ಹಬ್ಬದಲ್ಲಿ ಮಾಡುವ ಚಿನ್ನಿಕಾಯಿ ಕಡುಬು, ಎಣ್‌ಮುಳುಕ, ಎರೆಯಪ್ಪ (ಮಲೆನಾಡಿನ ಸಿಹಿ ತಿನಿಸು) ಮಲೆನಾಡಿಗರ ಸಿಹಿ ಭಕ್ಷ್ಯಗಳು. ಒತ್ತುಶ್ಯಾವಿಗೆ, ಬಾಳೆಹಣ್ಣಿನ ದೋಸೆ, ಗೋಧಿ ಹಲ್ವಾ, ರಾಗಿ ಕಿಲಾಸ... ಹೀಗೆ ಮೆನುವಿನಲ್ಲಿ ಸಹಿ ಪದಾರ್ಥಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಮಲೆನಾಡಿನ ಹವ್ಯಕರ ಮನೆಗಳಲ್ಲಿ ಒಂದೊಂದು ಹಬ್ಬಗಳಲ್ಲಿ ಒಂದೊಂದು ಬಗೆಯ ಸಿಹಿ ಖಾದ್ಯಗಳು ತಯಾರಾಗುತ್ತವೆ. ಕಡುಬು, ಅಕ್ಕಿ ಪಾಯಸ, ಅತ್ರಸ, ಕಜ್ಜಾಯ, ಕರ್ಜಿಕಾಯಿ, ಬೇಳೆ ಒಬ್ಬಟ್ಟು, ವಿವಿಧ ಬಗೆಯ ಪಾಯಸಗಳೂ ಹಾಜರಿ ಹಾಕುತ್ತವೆ. ಉಳಿದ ಸಮುದಾಯಗಳ ಮನೆಗಳಲ್ಲಿ ಮತ್ತೊಂದು ಬಗೆಯ ಸಿಹಿ ಭಕ್ಷ್ಯಗಳು. ಹೀಗೆ ಈ ಆಹಾರದ ಭಿನ್ನತೆ ಆ ಸಮುದಾಯಗಳ ವೈವಿಧ್ಯವನ್ನು ತೋರುತ್ತದೆ.

ಘಟ್ಟದ ತಗ್ಗಿಗೆ (ಕರಾವಳಿ) ಬಂದರೆ ಅಲ್ಲಿಯ ಪಾಕ ವೈವಿಧ್ಯವೇ ಬೇರೆ. ಹಬೆಯಲ್ಲಿ ಬೆಂದ ಖಾದ್ಯಗಳು ಇಲ್ಲಿ ಪಾರಮ್ಯ ಮೆರೆದಿವೆ. ಹಾಲು ಪಾಯಸ, ಸಿಹಿ ಕಡುಬು, ಖಾರಾ ಕಡುಬು ಪ್ರತಿ ಹಬ್ಬದಲ್ಲೂ ಹಾಜರಿ ಹಾಕಲೇಬೇಕು. ವೈವಿಧ್ಯದ ಉಂಡೆಗಳನ್ನು ಸವಿಯಲು ಕರಾವಳಿಗೆ ಬರಬೇಕು. ಎಳ್ಳುಂಡೆ, ಗುಂಡಿಟ್ಟು, ನೆಲಕಡ್ಲೆ ಉಂಡೆ, ಹೊದ್ಲು ಉಂಡೆ, ರವೆ ಉಂಡೆ ಹೀಗೆ ಹಲವು ಬಗೆಯ ಉಂಡೆಗಳು ಸಿಹಿ ಪ್ರಿಯರ ಉದರ ತಣಿಸುತ್ತವೆ. ಶಿರಾ, ಎರೆಯಪ್ಪ, ಹಾಲು ಬಾಯಿ, ಹಯಗ್ರೀವ, ಗುಂಡ ಇಲ್ಲಿಯ ಇನ್ನಷ್ಟು ಸಿಹಿ ತಿನಿಸುಗಳು. ಈ ಭಾಗದಲ್ಲಿ ಎಲ್ಲ ಹಬ್ಬಗಳಲ್ಲೂ ಮಾಂಸಾಹಾರ ಇದ್ದೇ ಇರುತ್ತದೆ. ಹಾಗಾಗಿ ಇಂತಹದ್ದೇ ಸಿಗ್ನೇಚರ್‌ ಸಿಹಿ ಖಾದ್ಯ ಎಂದು ಗೆರೆ ಎಳೆಯಲು ಆಗದು.

ಬರಿ ಹಬ್ಬಗಳಿಗೆ ಸೀಮಿತವಾಗಿದ್ದ ಹೋಳಿಯನ್ನು ಉತ್ತರ ಕರ್ನಾಟಕ ಮತ್ತು ಮಧ್ಯಕರ್ನಾಟಕದ ಹೋಟೆಲ್‌ಗಳಲ್ಲೂ  ಸವಿಯಬಹುದು. ಉತ್ತರ ಮತ್ತು ಮಧ್ಯ ಕರ್ನಾಟಕದ ಮಂದಿ ರಾಜ್ಯದ ಯಾವುದೇ ಭಾಗಗಳಲ್ಲಿ ಹೋಟೆಲ್‌ಗಳನ್ನು ನಡೆಸುತ್ತಿದ್ದರೂ ವಾರಕ್ಕೆ ಒಮ್ಮೆ (ಸಾಮಾನ್ಯವಾಗಿ ಸೋಮವಾರ, ಶುಕ್ರವಾರ) ಹೋಳಿಗೆ ಊಟ ಎನ್ನುವ ಮೆನು ಎದ್ದು ಕಾಣುತ್ತದೆ. ಹೋಳಿಗೆ ಮಾಡುವ ದಿನಗಳಲ್ಲಿ ಪ್ರತಿ ದಿನಕ್ಕಿಂತ ಗ್ರಾಹಕರ ಸಂಖ್ಯೆಯೂ ಹೆಚ್ಚು.

ಹೀಗೆ ಒಂದೊಂದು ಭಾಗಗಳ ಸಿಹಿ ಖಾದ್ಯಗಳು ಜಿಹ್ವೆಯಲ್ಲಿ ರಸವನ್ನು ಉಕ್ಕಿಸುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು