ಉಪ್ಪಿಟ್ಟಿನಿಂದ ಆದ ಅವಮಾನ

7

ಉಪ್ಪಿಟ್ಟಿನಿಂದ ಆದ ಅವಮಾನ

Published:
Updated:
Deccan Herald

ಶಾಲಾ ದಿನಗಳಲ್ಲಿ ಬೇಸಿಗೆ ರಜೆಯೆಂದರೆ ನಮ್ಮ ಹಳ್ಳಿಯ ಗುಡ್ಡ, ಕೆರೆ, ಕಟ್ಟೆ ಅಂಗಳಗಳಲ್ಲಿ ಬೀಳುತ್ತ ಏಳುತ್ತ ಆಡುವುದೆಂದರೆ ಮಜವೋ ಮಜ. ಆ ದಿನಗಳಲ್ಲಿ ದನ ಕಾಯುವ ಪಾಳಿ ನಮ್ಮದಾಗುತ್ತಿತ್ತು. ಬೆಳಗ್ಗೆ ಎದ್ದು ಊಟ ಮುಗಿಸಿ ಐದಾರು ಸ್ನೇಹಿತರು ಅವರವರ ದನ, ಎಮ್ಮೆಗಳನ್ನು ಒಟ್ಟುಗೂಡಿಸಿಕೊಂಡು ಗುಡ್ಡಗಳತ್ತ ತೆರಳುತ್ತಿದ್ದೆವು. ಗುಡ್ಡದ ತಪ್ಪಲಲ್ಲಿ ಎಮ್ಮೆ, ದನಗಳನ್ನು ಮೇಯಲು ಬಿಟ್ಟು ಕಟ್ಟೆಗಳಲ್ಲಿ ಈಜುವುದು, ಲಗೋರಿ, ಚಿನ್ನಿದಾಂಡು ಆಡುತ್ತಿದ್ದೆವು. 

ಮಧ್ಯಾಹ್ನದ ಊಟಕ್ಕೆ ಬೇಕಾದ ಸಾಮಗ್ರಿಗಳನ್ನು ಮನೆಯಿಂದ ಒಯ್ದು ಮಂಡಕ್ಕಿ ಒಗ್ಗರಣೆ, ಉಪ್ಪಿಟ್ಟು, ಚಿತ್ರಾನ್ನ ಮಾಡಿ ಎಲ್ಲರ ಜೊತೆ ತಿನ್ನುವುದು ವಾಡಿಕೆ. ತಿಂಡಿ ತಯಾರಿಕೆಯಲ್ಲಿ ನಮ್ಮ ಗುಂಪಿನ ಒಬ್ಬ ಸ್ನೇಹಿತ ಸಿದ್ಧಹಸ್ತ. ಅವನು ಹೇಳಿದಂತೆ ನಾವೆಲ್ಲ ಕೇಳಬೇಕಿತ್ತು. ಅವನಿಗೆ ಭಾರಿ ಧಿಮಾಕು ಕೂಡ. ಒಂದು ದಿನ ಅವನು ‘ನಾನು ಈ ದಿನ ನಿಮ್ಮ ಒಟ್ಟಿಗೆ ಬರುವುದಿಲ್ಲ ಬೇರೆ ಕಡೆ ಹೋಗುತ್ತಿದ್ದೇನೆ’ ಎಂದು ಹೊರಟುಹೋದನು.

ಆ ದಿನದ ತಿಂಡಿ ಮಾಡುವವರು ಯಾರು ಎಂದು ಎಲ್ಲರೂ ಚಿಂತಾಕ್ರಾಂತರಾದಾಗ ನಾನು, ‘ಅದೇನು ಮಹಾ ಒಗ್ಗರಣೆ ಹಾಕುವುದು. ನಾನೇ ಮಾಡುತ್ತೇನೆ ಬನ್ನಿ’ ಎಂದೆ. ಮಧ್ಯಾಹ್ನದ ಹೊತ್ತಿಗೆ ತಿಂಡಿ ಸಿದ್ಧವಾಯಿತು. ಉಪ್ಪು, ಉಳಿ, ಖಾರದ ಸಮತೋಲನವಿಲ್ಲದ ಹಾಗೂ ಸೀದು ಹೋದ ರವೆಯ ಉಪ್ಪಿಟ್ಟು ಯಾರೂ ಬಾಯಿಗೆ ಇಡದ ಹಾಗೆ ಆಗಿತ್ತು. ಅವರೆಲ್ಲರೂ ಊರಿನಲ್ಲಿ ಸ್ನೇಹಿತರ ಮುಂದೆ ಈ ತಿಂಡಿಯ ಬಗ್ಗೆ ಅಪಹಾಸ್ಯ ಮಾಡತೊಡಗಿದರು. ಅದರಿಂದ ನನಗೆ ಬಹಳ ಅವಮಾನವಾಗಿ ತಲೆ ಎತ್ತದಂತಾಯಿತು. ಆದರೆ ಆ ಪ್ರಸಂಗದಿಂದ ಹಟ ಹುಟ್ಟಿ ಚೆನ್ನಾಗಿ ಅಡುಗೆ ಮಾಡುವುದನ್ನು ಕಲಿತೆ. ಈಗ ನಾನು ಮಾಡಿದ ಉಪ್ಪಿಟ್ಟೆಂದರೆ ಮನೆಯವರಿಗೆಲ್ಲಾ ಬಾಯಲ್ಲಿ ನೀರೂರುತ್ತದೆ!
– ಸ್ವ್ಯಾನ್ ಕೃಷ್ಣಮೂರ್ತಿ, ಚಾಮರಾಜಪೇಟೆ

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !