ಗುರುವಾರ , ಆಗಸ್ಟ್ 5, 2021
23 °C

ಮಹಿಳೆಯರ ಮೆಚ್ಚಿನ ಸಂಗಾತಿ ‘ತರಕಾರಿ ಚಾಪರ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲವೇ ನಿಮಿಷಗಳಲ್ಲಿ ಝಟ್‌–ಪಟ್‌ ಅಡುಗೆ ಮುಗಿಸಬೇಕಾ? ತರಕಾರಿ ಮತ್ತು ಹಣ್ಣಿನ ರುಚಿಕರ ಸಲಾಡ್‌ ತಯಾರಿಸಿ ಪುಟ್ಟ ಬಾಕ್ಸ್‌ನಲ್ಲಿ ತುಂಬಿಸಿಕೊಂಡು ಕಚೇರಿಗೆ ಒಯ್ಯಬೇಕಾ? ನಿಮ್ಮ ಮಕ್ಕಳಿಗೆ ಯಾವುದೇ ಪ್ರಿಸರ್ವೇಟಿವ್‌ ಇಲ್ಲದ ತಾಜಾ ಟೊಮೆಟೊ– ಚಿಲ್ಲಿ ಸಾಸ್‌ ತಯಾರಿಸಬೇಕಾ? ಅದಕ್ಕೆಲ್ಲ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಹೆಚ್ಚು ಸಮಯ ವ್ಯರ್ಥ ಮಾಡಬೇಕಾಗಿಲ್ಲ, ನಿಮಗೆ ಆಪ್ತ ಸಂಗಾತಿಯಂತೆ ನೆರವಾಗುತ್ತದೆ ಫುಡ್‌ ಪ್ರೊಸೆಸರ್‌.

ಹೌದು, ಕಳೆದ ಶತಮಾನದ 80ರ ದಶಕದಲ್ಲಿ ಮಿಕ್ಸರ್‌, ಗ್ರೈಂಡರ್‌ ಎಂದು ಭಾರತೀಯರ ಅಡುಗೆ ಮನೆಗೆ ಕಾಲಿಟ್ಟ ಈ ಅಪೂರ್ವ ಗೃಹ ಬಳಕೆ ಉಪಕರಣ ಮಹಿಳೆಯರ ಮೆಚ್ಚುಗೆ ಗಳಿಸಲು ಹೆಚ್ಚು ಸಮಯ ಬೇಕಾಗಲಿಲ್ಲ. ಗಂಟೆಗಟ್ಟಲೆ ಒರಳಿನ ಮುಂದೆ ದೋಸೆಗೆ/ ಇಡ್ಲಿಗೆ ರುಬ್ಬುವ ಕೆಲಸ ತಪ್ಪಿತಲ್ಲ ಎಂದು ಕ್ಷಣಾರ್ಧದಲ್ಲಿ ಕೆಲಸ ಮುಗಿಸಿದ ಗೃಹಿಣಿಯರು ಆಗ ತಾನೇ ಜನಪ್ರಿಯತೆ ಗಳಿಸುತ್ತಿದ್ದ ಟಿವಿ ಮುಂದೆ ಆ ಸಮಯ ಬಳಸಲಾರಂಭಿಸಿದರು. ಚಟ್ನಿ ಪುಡಿ, ಸಾರಿನ ಪುಡಿ ಎಂದು ಬೇಕಾದಾಗ ಮಾಡಿಕೊಂಡು ಬಾಟಲ್‌ ತುಂಬಿಸಿಟ್ಟುಕೊಳ್ಳುವ ಖುಷಿ. ಒಂದಿಷ್ಟು ವರ್ಷ ಮಿಕ್ಸರ್‌– ಗ್ರೈಂಡರ್‌ನಲ್ಲಿ ಹೆಚ್ಚು ವೈವಿಧ್ಯ ಕಂಡು ಬರಲಿಲ್ಲ. ಕ್ರಮೇಣ ಇದು ಫುಡ್‌ ಪ್ರೊಸೆಸರ್‌ ಅವತಾರ ತಾಳಿ ಉದ್ಯೋಗಸ್ಥ ಮಹಿಳೆಯರ ಕೆಲಸ ಹಗುರ ಮಾಡಿದೆ.

ಈಗಂತೂ ಮಾರುಕಟ್ಟೆಯಲ್ಲಿ, ಆನ್‌ಲೈನ್‌ನಲ್ಲಿ ವೈವಿಧ್ಯಮಯ ಫುಡ್‌ ಪ್ರೊಸೆಸರ್‌ಗಳು ಲಭ್ಯ. ಇವುಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿರುವುದು ಚಾಪರ್‌ ಮತ್ತು ಚಪಾತಿ ಹಿಟ್ಟಿನ ನೀಡರ್‌. ಅಂದರೆ ತರಕಾರಿ ಹೆಚ್ಚಿಕೊಡುವುದಲ್ಲದೇ, ನಿತ್ಯದ ಚಪಾತಿ ಹಿಟ್ಟನ್ನು, ಹೋಳಿಗೆ ಹೂರಣವನ್ನು ನಾದಿ ಕೊಡುವ ಪುಟ್ಟ ಸಾಧನ. ಆರಂಭದಲ್ಲಿ ಮಿಕ್ಸರ್‌ನಲ್ಲೇ ವಿವಿಧ ಜಾರ್‌ಗಳು, ಬ್ಲೇಡ್‌ಗಳು ಬಂದು ಆಕರ್ಷಿಸತೊಡಗಿದವು. ಆದರೆ ವಿದ್ಯುತ್‌ ಶಕ್ತಿಯಿಲ್ಲದೇ ಕೈಯಿಂದಲೇ ಹ್ಯಾಂಡಲ್‌ ತಿರುಗಿಸಿ ತರಕಾರಿ ಅಥವಾ ಮಾಂಸವನ್ನು ಹೆಚ್ಚುವ ಚಾಪರ್‌ ಹೆಚ್ಚು ಜನಪ್ರಿಯವಾಗಿದೆ.

ಹರಿತವಾದ ಚಾಕುವಿನಂತ ಬ್ಲೇಡ್‌ ಅನ್ನು ಹಾಕಿಕೊಂಡು ದೊಡ್ಡ ಗಾತ್ರದ ಅಂದರೆ ಎಲೆಕೋಸು, ಸೋರೆಕಾಯಿಯಂತಹ ತರಕಾರಿಯಾದರೆ ದೊಡ್ಡ ದೊಡ್ಡ ತುಂಡು ಮಾಡಿ ಜಾರ್‌ನಲ್ಲಿ ತುಂಬಿಸಿ, 3–4 ಸುತ್ತು ಹ್ಯಾಂಡಲ್‌ ತಿರುಗಿಸಿದರೆ ಪಲ್ಯಕ್ಕೆ ಒಗ್ಗರಣೆ ಹಾಕಬಹುದು. ಕೇಬಾಬ್‌ಗೆ ಮಾಂಸವನ್ನು ನಯವಾಗಿ ಅರೆಯಬಹುದು. ಹರಿತವಲ್ಲದ ಬ್ಲೇಡ್‌ ಹಾಕಿಕೊಂಡು ಗೋಧಿ ಹಿಟ್ಟು, ಉಗುರು ಬೆಚ್ಚಗಿನ ನೀರು, ಉಪ್ಪು ಹಾಕಿಕೊಂಡು ತಿರುಗಿಸಿದರೆ ಚಪಾತಿ ಲಟ್ಟಿಸಲು ಹಿಟ್ಟು ಸಿದ್ಧ. ಸಲಾಡ್‌ ತಿನ್ನಬೇಕೆಂದರೆ ಕ್ಷಣಾರ್ಧದಲ್ಲಿ ಮಾಡಿಕೊಂಡು ಮೆಲ್ಲಬಹುದು. ಗಟ್ಟಿಯಾದ ಕ್ಯಾರೆಟ್‌ ಸಣ್ಣನೆಯ ಚೂರಾಗುತ್ತದೆ. ಬಾದಾಮಿ, ಗೋಡಂಬಿಯನ್ನು ಚಿಕ್ಕ ಚೂರುಗಳನ್ನಾಗಿ ಮಾಡಿಕೊಳ್ಳಬಹುದು. ಸಾಸ್‌ಗೆ ಟೊಮೆಟೊ ಕತ್ತರಿಸಬಹುದು.

ಕೈಯಿಂದ ತಿರುಗಿಸುವ ಬದಲು ಹಗ್ಗ (ಡೋರಿ)ವನ್ನು ಎಳೆಯುವ ಚಾಪರ್‌ ಈಗ ಮಾರುಕಟ್ಟೆಯಲ್ಲಿ ಸುದ್ದಿ ಮಾಡಿದೆ. ಕಡಿಮೆ ವೆಚ್ಚದ ಇಂತಹ ಚಾಪರ್‌ ಮತ್ತು ನೀಡರ್‌ ಗೃಹಿಣಿಯರ, ಉದ್ಯೋಗಸ್ಥ ಮಹಿಳೆಯರ ಕೆಲಸವನ್ನು ಎಷ್ಟೋ ಹಗುರ ಮಾಡಿವೆ. 


ತರಕಾರಿ ಸಲಾಡ್‌

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು