ವಿಯೆಟ್ನಾಮ್‌ನಲ್ಲೂ ಹಲಸಿನ ಉಪ್ಪುಸೊಳೆ

7

ವಿಯೆಟ್ನಾಮ್‌ನಲ್ಲೂ ಹಲಸಿನ ಉಪ್ಪುಸೊಳೆ

Published:
Updated:

ಕನ್ನಡ ನಾಡಿನ ಕರಾವಳಿಯಲ್ಲಿ ಹಲಸಿನ ಕಾಯಿಸೊಳೆಯ ಸಾಂಪ್ರದಾಯಿಕ ಸಂರಕ್ಷಿತ ಉತ್ಪನ್ನವೊಂದಿದೆ. ತುಳುವಿನಲ್ಲಿ ಇದರ ಹೆಸರು ‘ಉಪ್ಪಾಡ್ ಪಚ್ಚಿಲ್’. ಕಾಯಿಸೊಳೆ – ಅಂದರೆ ಬಲಿತ ಹಣ್ಣಾಗದ ಹಲಸಿನ ಸೊಳೆಯನ್ನು ಇಲ್ಲಿ ದೋಸೆ, ಸಾಂಬಾರು ಇತ್ಯಾದಿಗಳಿಗೆ ಬಳಸುತ್ತಾರೆ. ಬೇಸಿಗೆ ಕೊನೆಗೆ ಧಾರಾಳವಾಗಿ ಸಿಗುವ ಕಾಯಿಸೊಳೆಯನ್ನು ಉಪ್ಪುನೀರಿನಲ್ಲಿ ಅದ್ದಿಡುತ್ತಾರೆ. ಹೀಗೆ ಉಪ್ಪುನೀರಿನಲ್ಲಿ ಆಹಾರವಸ್ತುವನ್ನು ಕೆಡದಂತೆ ಕಾಪಿಡುವುದನ್ನು ಬ್ರೈನಿಂಗ್ (brining) ಎನ್ನುತ್ತಾರೆ. ಕ್ರಮಪ್ರಕಾರ ತಯಾರಿಸಿದರೆ ಇದು ಒಂದು ವರ್ಷವಾದರೂ ಕೆಡುವುದಿಲ್ಲ. ಹಳ್ಳಿಗಳಲ್ಲಿ, ತರಕಾರಿ ಇಲ್ಲದಾದಾಗ ಇದೊಂದು ಆಪದ್ಬಾಂಧವ ತರಕಾರಿ.

ಕಾರ್ಕಳ, ಕರ್ನಾಟಕದ ಉಪ್ಪುಸೊಳೆ ರಾಜಧಾನಿ. ಇಲ್ಲಿನ ವ್ಯಾಪಾರಿಗಳು ಬಿಡಿಬಿಡಿಯಾಗಿ ಸಂಗ್ರಹಿಸಿಡುವ ಟನ್ನುಗಟ್ಟಲೆ ಉಪ್ಪಾಡ್ ಪಚ್ಚಿಲ್ ಬೆಂಗಳೂರು, ಮುಂಬಯಿಗಳಲ್ಲಿನ ದಕ್ಷಿಣ ಕನ್ನಡಿಗರಿಗೆ ಅಚ್ಚುಮೆಚ್ಚಿನ ತರಕಾರಿ. ಆದರೆ ಇದನ್ನು ಚೊಕ್ಕವಾಗಿ ಪ್ಯಾಕ್ ಮಾಡುವ, ಬ್ರ್ಯಾಂಡ್‌ ಮಾಡಿ ಮಾರುವ ಬಗ್ಗೆ ಯಾರೂ ಈವರೆಗೆ ಶ್ರಮಿಸಿಲ್ಲ.

ಇದೇ ಥರದ ಉಪ್ಪುಸೊಳೆ ವಿಯೆಟ್ನಾಮ್‌ನ ಒಂದು ಪ್ರದೇಶದಲ್ಲೂ ಜನಪ್ರಿಯ. ಮಧ್ಯ ವಿಯೆಟ್ನಾಮ್‌ನಲ್ಲಿ ಬಡತನ ಜಾಸ್ತಿಯಿದೆ. ಅಲ್ಲಿ ನಮ್ಮದೇ ರೀತಿಯಲ್ಲಿ ಅಕಾಲದ ಬಳಕೆಗಾಗಿ ಉಪ್ಪುಸೊಳೆ ಹಾಕಿಡುವುದು ಶತಮಾನಗಳಿಂದ ಬಂದ ಕ್ರಮ.

ಉಪ್ಪುಸೊಳೆಯನ್ನು ಅಲ್ಲಿ ನ್ಹಟ್ ಮಿಟ್ ಎನ್ನುತ್ತಾರೆ. ಮಿಟ್ ಅಂದರೆ ಹಲಸು. ನಮ್ಮಲ್ಲಿ ಹಲಸಿನ ಎರಡಾಗಿ ಸಿಗಿದ ಸೊಳೆಗಳನ್ನು ಉಪ್ಪುನೀರಿನಲ್ಲಿ ಹಾಕುತ್ತಾರೆ. ವ್ಯತ್ಯಾಸವೆಂದರೆ, ವಿಯೆಟ್ನಾಮ್‌ನಲ್ಲಿ ಮಿಟ್ ನ್ಹಟ್ ತಯಾರಿಗಾಗಿ ಹಲಸನ್ನು ಅತಿ ಚಿಕ್ಕದಾಗಿ ಹೆರೆಯುತ್ತಾರೆ. ಈ ಹೆರೆಯುವ ಕೆಲಸ ಮಾನವಶ್ರಮದಿಂದಲೇ ನಡೆಯುತ್ತದೆ. ಉಪ್ಪುನೀರಿನಲ್ಲಿ ಸಂರಕ್ಷಿಸಲು ಸೊಳೆ ಮಾತ್ರವಲ್ಲ, ಸೊಳೆಗಳ ನಡುವೆ ಇರುವ ಹುಲ್ಲು (ಬಿಳಿಯ ಸಪೂರ ಉದ್ದದ ಭಾಗ) ಬಳಸುತ್ತಾರೆ. ನ್ಹಟ್ ಮಿಟ್ ನೋಡಲು ಸಪೂರವಾದ ಉದ್ದನೆಯ ಎಳೆಗಳ ಹಾಗೆ ಕಾಣುತ್ತದೆ. ಹಲಸು ಎಂದು ಫಕ್ಕನೆ ಗೊತ್ತಾಗುವುದಿಲ್ಲ. 

ಸಾಂಪ್ರದಾಯಿಕವಾಗಿ ನ್ಹಟ್ ಮಿಟ್ ತಯಾರಿಗೆ ಮಣ್ಣಿನ ದೊಡ್ಡ ಹಂಡೆಗಳನ್ನು ಬಳಸುತ್ತಾರೆ. ನಮ್ಮಲ್ಲಿಯೂ ಹಿಂದೆ ಹೀಗೆ ದೊಡ್ಡ ಮಣ್ಣಿನ ಹಂಡೆಗಳಲ್ಲಿ ಉಪ್ಪು ಸೊಳೆ ಹಾಕುವ ರೂಢಿ ಇತ್ತು. ಈಗೀಗ ನಮ್ಮಲ್ಲಿನ ಸ್ವಸಹಾಯ ಸಂಘಗಳಂತೆ ವಿಯೆಟ್ನಾಮ್‌ನಲ್ಲಿ ಮಿಟ್ ನ್ಹಟ್‍ ಅನ್ನು ಸ್ವಲ್ಪ ಸುಧಾರಿತ ರೀತಿಯಲ್ಲಿ ಉತ್ಪಾದಿಸಿ ಮಾರುವ ಕ್ರಮ ಬಂದಿದೆ. ಉದಾಹರಣೆಗೆ, ಮಧ್ಯ ವಿಯೆಟ್ನಾಮ್‌ನ ಘೆ ಆನ್ ಪ್ರಾಂತದಲ್ಲಿ ತಯಾರಾಗುವ ನ್ಹಟ್ ಥಾನ್ಹ್ ಚೌಂಗ್ ಈ ಉತ್ಪನ್ನದ ಜನಪ್ರಿಯ ಟ್ರೇಡ್‍ಮಾರ್ಕು. ಥಾನ್ಹ್ ಚೌಂಗ್ ಎನ್ನುವುದು ಅಲ್ಲಿನ ಒಂದು ಊರಿನ ಹೆಸರು.

ಮಾರ್ಚ್- ಏಪ್ರಿಲ್ ನ್ಹಟ್ ಮಿಟ್ ತಯಾರಿಯ ಸೀಸನ್. ಇದು ವರ್ಷಕ್ಕೂ ಹೆಚ್ಚು ಕಾಲ ಹಾಳಾಗದೆ ಉಳಿಯುತ್ತದೆ. ಬಡಜನರಿಗೆ ಮೀನು ಅಥವಾ ಮಾಂಸ ಕೊಳ್ಳಲು ಆಗದ್ದರಿಂದ ಅವರು ಅನ್ನದ ಜತೆ ಇದನ್ನು ನೆಂಜಿಕೊಂಡು ಊಟಮಾಡುತ್ತಾರೆ. ನಾವು ಮಾಡುವ ಹಾಗೆಯೇ ಅಡುಗೆ ಮಾಡುವ ಮೊದಲು ಹೆಚ್ಚಿನ ಉಪ್ಪನ್ನು ಎರಡು ಮೂರು ಬಾರಿ ನೀರಿನಲ್ಲಿ ತೊಳೆಯುವ ಮೂಲಕ ತೆಗೆದುಬಿಡುತ್ತಾರೆ.

ನಮ್ಮಲ್ಲಿರುವಂತೆಯೇ ನ್ಹಟ್ ಮಿಟ್ ಕೂಡ ಮೂಲಭೂತವಾಗಿ ಮನೆ ಬಳಕೆಯ ಉತ್ಪನ್ನ. ಆದರೆ ಪ್ರವಾಸಿಗಳಿಗಾಗಿ, ಹೊರ ಊರಲ್ಲಿರುವ ಈ ಊರವರಿಗಾಗಿ ಇದು ಕೊಳ್ಳಲೂ ಸಿಗುತ್ತದೆ. ಕಿಲೋಗೆ ಅರ್ಧದಿಂದ ಒಂದು ಅಮೆರಿಕನ್ ಡಾಲರ್ ಬೆಲೆ.

ಶ್ರೀಲಂಕಾದಲ್ಲಿ ಉಪ್ಪುಸೊಳೆ ಒಂದು ಔದ್ಯಮಿಕ ಉತ್ಪನ್ನ. ಅಲ್ಲಿ ಏನಿಲ್ಲವೆಂದರೂ ಹತ್ತರಷ್ಟು ಕಂಪನಿಗಳು ಉಪ್ಪುಸೊಳೆಯನ್ನು ಬಾಟ್ಲಿಗಳಲ್ಲಿ ತುಂಬಿ ರಫ್ತು ಮಾಡುತ್ತಿವೆ. ಅಲ್ಲಿ ಕಾಯಿಸೊಳೆಯನ್ನು ಮಾತ್ರವಲ್ಲದೆ ಎಳೆ ಹಲಸು, ಬೀಜವನ್ನೂ ಉಪ್ಪಿನಲ್ಲಿ ಸಂರಕ್ಷಿಸಿ ಮಾರಾಟ ಮಾಡುತ್ತಾರೆ. ಉಪ್ಪುನೀರಿನಲ್ಲಿ ಕಾದಿಟ್ಟ ಹಲಸಿನ ಉತ್ಪನ್ನಗಳು ಶ್ರೀಲಂಕನ್ ಆಹಾರೋದ್ಯಮದ ಒಂದು ಮುಖ್ಯ ಘಟಕ.

ಮಧ್ಯ ವಿಯೆಟ್ನಾಮಿನ ರೆಸ್ಟೋರೆಂಟ್, ಹೋಟೆಲುಗಳಲ್ಲೂ ನ್ಹಟ್ ಮಿಟ್ ಬಳಸಿ ಕೆಲವು ತಯಾರಿಗಳನ್ನು ಮಾಡುತ್ತಾರೆ. ಸೂಪ್, ಸಲಾಡ್, ಮಾಂಸ, ಮೀನಿನ ಜತೆ ಸೇರಿಸಿದ ಖಾದ್ಯಗಳು ಇತ್ಯಾದಿ.

ಅದೇಕೋ, ನಮ್ಮ ದೇಶದಲ್ಲಿ ಹಲಸನ್ನು ಉಪ್ಪುನೀರಿನಲ್ಲಿ ಸಂರಕ್ಷಿಸಿ ಮಾರುವ ಔದ್ಯಮಿಕ ದೃಷ್ಟಿ ಇನ್ನೂ ಬಂದಿಲ್ಲ. ಇದಕ್ಕೆ ಇಲ್ಲಿ ಅವಕಾಶ ಧಾರಾಳವಾಗಿ ಇದೆ. ಒಂದಷ್ಟು ಈ ಬಗ್ಗೆ ಆರ್ ಆಂಡ್ ಡಿ ಆಗಬೇಕಾಗಿದೆ. ಬೆಂಗಳೂರು ಕೃಷಿ ವಿವಿ ಎಳೆ ಹಲಸು (ಗುಜ್ಜೆ) ಮತ್ತು ಕಾಯಿಸೊಳೆಯನ್ನು ಬ್ರೈನಿಂಗ್‌ ಮಾಡುವ ವಿಧಾನವನ್ನು ಅಭಿವೃದ್ಧಿ ಪಡಿಸಿದೆ. ನಮ್ಮ ಕೃಷಿ ವಿಜ್ಞಾನ ಕೇಂದ್ರ, ಸಂಶೋಧನಾ ಕೇಂದ್ರ, ಅಥವಾ ಅದಕ್ಕೂ ಹೆಚ್ಚಾಗಿ ಹಲಸು ಬೆಳೆದು ಹಾಳಾಗಿ ಹೋಗುವ ಊರುಗಳ ಕೃಷಿಕರ ಗುಂಪುಗಳು ಈ ನಿಟ್ಟಿನಲ್ಲಿ ಚಿಂತಿಸಬಹುದು.

ವಿಯೆಟ್ನಾಮ್‌ನಿಂದ ಮಾಹಿತಿ, ಚಿತ್ರ ಸಹಾಯ: ಡಾ. ಮಾಯ್ ವಾನ್ ಟ್ರಾಯ್

Tags: 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !