ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿಗಳಿಗೆ ನೀಡುತ್ತಿದ್ದ ಕೊಲಿಸ್ಟಿನ್‌ ಆ್ಯಂಟಿಬಯೊಟಿಕ್‌ ದಿಢೀರ್‌ ರದ್ದಾದದ್ದೇಕೆ?

Last Updated 28 ಜುಲೈ 2019, 1:40 IST
ಅಕ್ಷರ ಗಾತ್ರ

ಬೆಂಗಳೂರು: ಆಹಾರಕ್ಕಾಗಿ ಸಾಕಲಾಗುವ ಪ್ರಾಣಿಗಳಿಗೆ... ಅದರಲ್ಲೂ ಕುಕ್ಕುಟೋದ್ಯಮದಲ್ಲಿ ಕೋಳಿಗೆಗಳಿಗೆ ವ್ಯಾಪಕವಾಗಿ ನೀಡಲಾಗುತ್ತಿದ್ದ ಕೊಲಿಸ್ಟಿನ್‌ ಎಂಬ ಆ್ಯಂಟಿಕ್‌ ಬಯೋಟಿಕ್‌ನ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ಕೇಂದ್ರ ಸರ್ಕಾರ ಕಳೆದ ಸೋಮವಾರ ದಿಢೀರ್‌ ನಿಷೇಧಿಸಿತು.

ಆಹಾರ ತಜ್ಞರು, ವೈದ್ಯರಿಂದ ಪ್ರಶಂಸೆಗೆ ಒಳಗಾದ ಈ ನಿರ್ಧಾರದ ಬಗ್ಗೆ ಹೆಚ್ಚು ಸುದ್ದಿಯೇನೂ ಆಗಲಿಲ್ಲ. ಕೋಳಿಗಳಿಗೆ ರೋಗ ಬಾರದಿರಲು, ದಷ್ಟಪುಷ್ಟವಾಗಿ ಬೆಳೆಯಲು ಕೊಲಿಸ್ಟಿನ್‌ಸಲ್ಫೆಟ್‌ ಅನ್ನು ಕುಕ್ಕುಟೋದ್ಯಮದಲ್ಲಿ ಬಳಸಲಾಗುತ್ತಿತ್ತು. ಆದರೆ, ಈ ಆ್ಯಂಟಿಬಯೋಟಿಕ್‌ ಅನ್ನು ಮನುಷ್ಯರಿಗೆ ಕೊಡುವುದು ಯಾವಾಗ ಗೊತ್ತೇ? ಯಾವ ಆ್ಯಂಟಿಬಯೊಟಿಕ್‌ಗಳೂ ದೇಹದ ಮೇಲೆ ಪರಿಣಾಮ ಬೀರುತ್ತಿಲ್ಲ, ರೋಗ ನಿವಾರಣೆಯಾಗುತ್ತಿಲ್ಲ ಎಂದಾಗ ಅಂತಿಮ ಹಂತದಲ್ಲಿ ಬ್ರಹ್ಮಾಸ್ತ್ರವೋ ಎಂಬಂತೆ ಕೊಲಿಸ್ಟಿನ್‌ ಆ್ಯಂಟಿಬಯೊಟಿಕ್‌ ಅನ್ನು ಮುನುಷ್ಯರಿಗೆ ನೀಡಲಾಗುತ್ತದೆ.

ಸಾಮಾನ್ಯವಾಗಿ ಯಾವುದೇ ಪ್ರಕಾರದ ಆ್ಯಂಟಿಬಯೋಟಿಕ್‌ ಅನ್ನು ಒಂದು ಬಾರಿ ದೇಹಕ್ಕೆ ನೀಡಿದರೆ, ಅದಕ್ಕೆ ಪ್ರತಿಯಾಗಿ ದೇಹದಲ್ಲಿ ಪ್ರತಿರೋಧಕ ಶಕ್ತಿ ಬೆಳವಣಿಗೆಯಾಗುತ್ತದೆ. ಇನ್ನೊಂದು ಬಾರಿ ಅದೇ ಆ್ಯಂಟಿಬಯೊಟಿಕ್‌ ಅನ್ನು ನೀಡಿದರೆ ದೇಹದಲ್ಲಿ ಅದು ಕೆಲಸ ಮಾಡುವುದಿಲ್ಲ. ಆಗ ಬೇರೆ ಅ್ಯಂಟಿಬಯೊಟಿಕ್‌ಗಳನ್ನು ನೀಡಲಾಗುತ್ತದೆ. ಅವುಗಳೂ ಕೆಲಸ ಮಾಡದೇ ಹೋದಾಗ ಕೊಲಿಸ್ಟಿನ್‌ ಅ್ಯಂಟಿಬಯೊಟಿಕ್‌ ಅನ್ನು ಅಂತಿಮವಾಗಿ ನೀಡಲಾಗುತ್ತದೆ. ಆದರೆ, ಕೋಳಿಗಳಲ್ಲಿ ಕೊಲಿಸ್ಟಿನ್‌ ಬಳಸುತ್ತಿದ್ದುದ್ದರಿಂದ ಅದನ್ನು ಸೇವಿಸಿದ ಮನುಷ್ಯರಿಗೂ ಕೊಲಿಸ್ಟಿನ್‌ ಪರೋಕ್ಷವಾಗಿ ಸೇರುತ್ತಿತ್ತು. ಅದಕ್ಕೆ ದೇಹದಲ್ಲಿ ಪ್ರತಿರೋಧಕ ಶಕ್ತಿ ಬೆಳೆಯುತ್ತಿತ್ತು. ಆ್ಯಂಟಿಬಯೊಟಿಕ್‌ಗಳಲ್ಲಿ ಬ್ರಹ್ಮಾಸ್ತ್ರ ಎನಿಸಿಕೊಳ್ಳುತ್ತಿದ್ದ ಕೊಲಿಸ್ಟಿನ್‌ಗೆ ನಮ್ಮ ದೇಹದಲ್ಲಿ ಪ್ರತಿರೋಧ ಬೆಳೆಯುತ್ತಿರುವ ಕುರಿತ ವರದಿಗಳನ್ನು ಮನಗಂಡ ಕೇಂದ್ರ ಸರ್ಕಾರ ಸೋಮವಾರ ಅದರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿದೆ.

ಅಧ್ಯಯನಗಳ ಪ್ರಕಾರ ಮಲ್ಟಿ ಡ್ರಗ್‌ ರೆಸಿಸ್ಟೆಂಟ್‌ ಟಿ.ಬಿಗೆ (ಬಹು ಔಷದ ಪ್ರತಿರೋಧಕ ಕ್ಷಯರೋಗ) ದೇಶದಲ್ಲಿ ಪ್ರತಿವರ್ಷ 4.50 ಲಕ್ಷ ಸಾವು ಸಂಭವಿಸುತ್ತಿದೆ. ನಮ್ಮ ದೇಹಕ್ಕೆ ಪರೋಕ್ಷವಾಗಿ ಆ್ಯಂಟಿಬಯೊಟಿಕ್ ಸೇರುತ್ತಿರುವುದೇ ಈ ಸಮಸ್ಯೆಗೆ ಕಾರಣ. ಅಲ್ಲದೆ, ಬೇರೆಲ್ಲ ದೇಶಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ಅ್ಯಂಟಿಬಯೊಟಿಕ್‌ಗಳಿಗೆ ಮನುಷ್ಯರ ದೇಹದಲ್ಲಿ ಹೆಚ್ಚು ಪ್ರತಿರೋಧ ಬೆಳವಣಿಗೆಯಾಗಿದೆ ಎಂದು ವರದಿಗಳು ಹೇಳುತ್ತವೆ. ಈ ನಿಟ್ಟಿನಲ್ಲಿ ಕೊಲಿಸ್ಟಿನ್‌ ತಯಾರಿಕೆ, ಮಾರಾಟವನ್ನು ನಿಷೇಧಿಸಿರುವ ಸರ್ಕಾರದ ನಿರ್ಧಾರ ಅತ್ಯಂತ ಮಹತ್ವದ್ದು ಎನಿಸಿಕೊಂಡಿದೆ.

ಕೋಳಿಗಳನ್ನು ನೈಸರ್ಗಿಕವಾಗಿ ಬೆಳೆಸದೇ, ಆ್ಯಂಟಿಬಯೊಟಿಕ್‌ಗಳನ್ನು ನೀಡಿ ಆ ಮೂಲಕ ನಮ್ಮ ಆರೋಗ್ಯವನ್ನು ಪರೋಕ್ಷವಾಗಿ ಹದಗೆಡಿಸುವ ಈ ಪ್ರಕ್ರಿಯೆಯನ್ನೂ ಕಲಬೆರಕೆ ಅನ್ನಲು ಅಡ್ಡಿಯೇನಿಲ್ಲ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT