ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಚ್ಚು, ಸಜ್ಜಕ ಸುರಿದುಣ್ಣುವ ಸುಖವ...

Last Updated 16 ಅಕ್ಟೋಬರ್ 2019, 8:49 IST
ಅಕ್ಷರ ಗಾತ್ರ

ನುಚ್ಚುಣ್ಣುವ ಸುಖನೇ ಬ್ಯಾರೆ. ಬಿರುಬ್ಯಾಸಗಿ ಇರಬೇಕು. ಮಧ್ಯಾಹ್ನ ಶಕಿಗೆ ಊಟ ಒಲ್ಲೆ ಅನಿಸಿರಬೇಕು. ರಾತ್ರಿ ಮಜ್ಗಿಗೆ ಜೋಳದ ನುಚ್ಚು ನೆನೆ ಇಟ್ಟಿದ್ದನ್ನ, ಮಧ್ಯಾಹ್ನ, ಬೆವರಳಿಸ್ಕೊಂತ ಕುದಸೂದು.

ನಮ್ಮ ತಾಪನೇ ಅಲ್ಲಿ ಬುಗ್ಗೆಯೊಡೆದು, ಅರಳತಿರಬೇಕು. ಒಡದ ಜೋಳದ ಕಣಕಣನೂ ಅನ್ನದ್ಹಂಗ ಅರಳಿದಾಗ ಅದೆಲ್ಲಿಯದೋ ಚೇತನ ಅವಾಹನ ಆಗ್ತದ.

ಒಂದಷ್ಟು ಜೀರಗಿ, ಹಸಿಮೆಣಸಿನಕಾಯಿ, ಬಳ್ಳೊಳ್ಳಿ, ಒಳಕಲ್ಲಾಗ ಜಗಜಗ ಜಜ್ಜಿ, ಬಳ್ಳೊಳ್ಳಿ ಸಿಪ್ಪಿಯಿಂದ ಆ ಫಳಕು ಹೊರಗ ಇಣುಕಿರಬೇಕು. ಹಸಿಮೆಣಸಿನಿಂದ ಬೀಜಗಳು ಕಲ್ಲಿನ ಅಂಚಿಗೆ ಸಿಡದಿರಬೇಕು. ಕೊತ್ತಂಬರಿಯ ಘಮ ನಿಮ್ಮ ಕೈಗಂಟುವ ಹಂಗ ಆಗಿರಬೇಕು. ಇದಿಷ್ಟನ್ನೂ ಆ ಕುದಿನುಚ್ಚಿಗೆ ಹಾಕಿದಾಗ... ಆಹಹಾ... ಅಡುಗಿ ಮನಿಯಿಂದ, ಪಡಸಾಲ್ಯಾಗ ಫ್ಯಾನ್‌ ಕೆಳಗ, ಕೂಲರ್‌ ಮುಂದ ಕುಂತೋವ್ರ ಮೂಗು ಅರಳುಹಂಗ ವಾಸ್ನಿ ಹಬ್ತದ. ಅಷ್ಟೇ ಸಾಕು..

ಊಟ ಒಲ್ಲೆ ಅಂದೋರು, ತಾವೇ ಕೈಕಾಲು ತೊಳಕೊಂಡು ಬರಾಕ ಹೋಗಿರ್ತಾರ.
ಈ ಕುದಿನುಚ್ಚಿಗೆ ತಣ್ಣನೆಯ ಮಜ್ಜಿಗಿ ಸುರಕೊಂತ ಹೋಗೂದು. ಇಡ್ಲಿ ಹಿಟ್ಟಿನ ಹದಕ್ಕ ಬರೂತನ. ಅಷ್ಟೂ ಮಜ್ಜಿಗಿಯೊಳಗೇ ಕುದಿಸಿದರೂ ಇನ್ನೊಂದು ಡಬರಿ ಮಜ್ಗಿ ಮಾಡಿಟ್ಟಿರಲೇಬೇಕು. ಆ ಮಜ್ಜಿಗಿಗೂ ಜೀರಗಿ ಪುಡಿ, ಧನಿಯಾ ಪುಡಿ, ಕೊತ್ತಂಬರಿ ಸೊಪ್ಪು ಎಲ್ಲ ಬೆರಸಿರಬೇಕು. ಆಮೇಲಿಂದೇನು ಕೇಳ್ತೀರಿ.. ನಿಮ್ಮ ಕೈ.. ನಿಮ್ಮ ಬಾಯಿ..

ಅಗ್ದಿ ರಸಿಕರಾಗಿದ್ರ, ಗಂಗಾಳದಾಗ ಚಂದ್ರನ್ಹಂಗ ನುಚ್ಚು ಹಾಕ್ಕೊಂಡು, ಹಾಲ್ದೊರೆಯಂಥ ಬೆಳದಿಂಗಳು ಅದರ ಸುತ್ತ ಹರಡುಹಂಗ ಮಜ್ಗಿ ಸುರಕೊಂಡು, ಗಂಗಾಳೆತ್ತಿ ಕುಡದ್ರ.. ಮೀಸಿ ಅಂಚಿಗೆ ಜೋಳದ ಕಣದ ಮುತ್ತು ಕುಂತಿರಬೇಕು. ಹೊಟ್ಟಿಗೆ ಹಿತ ಅಂದ್ರ ಅದು. ತಣ್ಣಗ ಹೊಟ್ಟಿನೂ ತುಂಬ್ತದ. ವಜ್ಜಿನೂ ಅನಸೂದಿಲ್ಲ. ಹೊರಗಿನ ಬಿಸಿಲಿಗೆ ಸಣ್ಣದೊಂದು ಝೋಂಪು ಸೈತ ಬರ್ತದ.

ನಮ್ಮವ್ವ ಡಬರಿತುಂಬಾ ನುಚ್ಚು ಮಜ್ಗಿ ಮಾಡಿಟ್ರ, ನನ್ಮಕ್ಕಳು ದೇಸಿ ಸೂಪ್‌ ಮಸ್ತದ ಅಂತ ಕುಡದು, ಬಾವು ಬೆಕ್ಕಿನ್ಹಂಗ ಬಾಯಿ ಮಾಡ್ಕೊಂಡು, ವರಸ್ಕೊಂಡು ಮಾವಿನ ಮರದ ಕೆಳಗಿನ ಹೊರಸಿಗೆ ಅಡ್ಡ ಆದ್ರಂದ್ರ ಸಂಜೀತನಾ ನಮಗ ಬಿಡುವು ಅಂತನ ಅರ್ಥ.

ಏನ್ರೀ ಇದು.. ಥರಗುಟ್ಟುವ ಮಾಗಿ ಚಳಿ ಶುರು ಆಗಾತದ. ಬ್ಯಾಸಗಿ ಬಿಸಿಲಿನ ಕತಿ ತೊಗೊಂಡು ಕುಂತೇರಿ.. ಚಳಿ ಏರೂ ಮುಂದ ಎಲ್ಲಿ ನುಚ್ಚು, ಎಲ್ಲೀ ಮಜ್ಗಿ ಅಂತ ಹಣಿಗೆ ಗಂಟ ಹಾಕ್ಕೊಬ್ಯಾಡ್ರಿ. ನುಚ್ಚಿಗೆ ಮೆಣಸಿನ ಸಾರು ಸೈತ ಒಳ್ಳೆಯ ಜೊತೆಯಾಗ್ತದ.

ಚಳಿಗಾಲಕ್ಕ ಗಂಗಾಳೆತ್ತೂದಂದ್ರ
ಸಜ್ಜಕ ನೆನಪಾಗ್ತದ

ಸಜ್ಜಕ ಬರೇ ಔಷಧನೂ ಹೌದು. ಸಿರಿವಂತರ ಸಿಹಿ ಖಾದ್ಯನೂ ಹೌದು. ಔಷಧದಂದ್ರ ಬರೇ ಬೆಲ್ಲದ ನೀರಿಗೆ, ಶುಂಠಿ ಪುಡಿ, ಯಾಲಕ್ಕಿ ಹಾಕಿ ಕುದಿಯೂಮುಂದ ಗೋಧಿ ಕುಟ್ಟಿದ ರವಾ ಹಾಕಿದ್ರ ಸಾಕು... ಔಷಧನಿಸುವ ಸಜ್ಜಕ ತಯಾರು. ಒಂದು ಅಳತಿ ರವಾಕ್ಕ ಮೂರು ಲೋಟ ನೀರು ಹಾಕಿ ಕುದಸಬೇಕು ನೋಡ್ರಿ. ಬೆಲ್ಲ ನಿಮ್ಮ ನಿಮ್ಮ ರುಚಿಗೆ ತಕ್ಕಷ್ಟು. ನಮ್ಮಜ್ಜಗ ಹಿತವಾಗಿ ಬೇಕಾದ್ರ, ನಮ್ಮಜ್ಜಿಗೆ ಮಾತ್ರ ಬೆಲ್ಚ ಆಗಿರಬೇಕಿತ್ತು. ತುಟಿಗೆ ತುಟಿ ಅಂಟೂವಷ್ಟು ಸಿಹಿಯಾಗಿರಬೇಕಿತ್ತು. (ನಮ್ಮ ತುಟಿಗೆ ನಮ್ದ ತುಟಿ ಅಂಟೂವಷ್ಟ್ರಿ.. ಮತ್ತೇನರೆ ವಿಚಾರ ಮಾಡೂದು ಬ್ಯಾಡ...) ಇಂಥ ಸೂಪಿನಂಥ ಸಜ್ಜಕ ಮಲಗುವ ಮೊದಲು ಕುಡೀಬೇಕು. ಸುಡುಸುಡುವ ಸಜ್ಜಕ, ಒಲಿಯಿಂದ ಗಂಗಾಳಿಗೆ ಬರಬೇಕು.. ಗಂಗಾಳಿನಿಂದ ನೇರ ಗಂಟಲಕ್ಕಿಳಿಬೇಕು.

ಭಾಳಷ್ಟು ಸೀನಿ ‘ಸೀನಿಯರ್‌’ ಆದೋರಿಗೆ, ಹಣಿ ಬಿಸಿಯಾಗಿ, ನೆಗಡಿಯಿಂದ ತಲಿ ವಜ್ಜಿ ಆದೋರಿಗೆ ಇದನ್ನೊಂದು ಗಂಗಾಳನಾಗ ಹಾಕಿ, ಆರುವ ಮುನ್ನ ಕುಡ್ಯಾಕ ಹೇಳೂದು. ಕುಡದಿದ್ದು, ಗಂಟಲಿನಿಂದ ಹೊಟ್ಟಿಗಿಳಿಯೂದ್ರೊಳಗ ಹೊದ್ಕೊಂಡು ಮಲ್ಕೊಂಡು ಬಿಡೂದು. ಮರುದಿನ ಬೆಳಗ್ಗೆ ಏಳೂದ್ರೊಳಗ ಕಫ ಕರಗಿ, ಅರಾಮನಿಸ್ತದ.

ಇದ ಸಜ್ಜಕ, ಬಾಣಂತಿಗೆ ಮಾಡೂದಾದ್ರ.. ಎಚ್ಚನ ಬ್ಯಾರೆ. ಬೆಲ್ಲದ ನೀರು ಕುದಿಯೂಮುಂದ ಒಂದೆರಡು ಯಾಲಕ್ಕಿ ಬೆಲ್ಲ, ಶುಂಠಿ ಎರಡೂ ಕೂಡಿ ಹಾಕಿದ್ರ... ಆ ಎಚ್ಚ ಕುದಿಯೂಮುಂದ ಯಜ್ಞಕ್ಕ ಹವಿಸ್ಸು ಹಾಕಿದ್ಹಂಗ ಹಾಕ್ಕೊಂತ ಇರೂದ. ಮೊದಲು ಒಂದಷ್ಟು ಕಸಕಸಿ (ಗಸಗಸೆ) ಆಮೇಲೆ ಒಣ ಕೊಬ್ರಿ. ಆ ಕೊಬ್ರಿ ಸಣ್ಣಗೆ ಕುದಿಯೂಮುಂದ ಎಣ್ಣಿ ಬಿಡ್ತದ. ಅವಾಗ ಗೋಡಂಬಿ ಚೂರು, ಬದಾಮಿ ಚೂರು, ಕುಂಬಳಬೀಜದ ಚೂರು, ಚಿರೊಂಜಿ ಇವಿಷ್ಟೂ ಒಂದೊಂದೇ ಒಂದೊಂದೇ ಕುದಿಯುವ ಬೆಲ್ಲದೊಳಗ ಬೀಳ್ತಾವ. ತೇಲಾಡ್ತಾವ. ಹಂಗ ಕುದಿ ಬರೂಮುಂದ ಒಂದೆರಡು ಮಿಳ್ಳಿ ತುಪ್ಪ ಸುರೀತಾರ. ತುಪ್ಪ ನೀರಿನೊಳಗ ಬೆರಿಯೂತನ ಮತ್ತ ಕುದಸೂದು.

ಉಣ್ಣೂಮುಂದ ತುಪ್ಪ ಹಾಕಿದ್ರ ಗಂಟಲು ಗೊಸಗೊಸ ಅಂತದ, ಕೆಮ್ಮು ಬರ್ತದ ಅಂತ ಇಷ್ಟು ಕಾಳಜಿ ಮಾಡಿ, ತುಪ್ಪಾನ ಕೊತಕೊತ ಕುದಿಸಿಬಿಡ್ತಾರ. ಈ ಸಜ್ಜಕದ ವಾಸನಿ, ಮನಿಯೊಳಗ ಹರಡಿದ ಸಾಂಬ್ರಾಣಿ ವಾಸ್ನಿ ಎಲ್ಲಾ ಕೂಡಿ ಜೀವಸೃಷ್ಟಿಯಾದ ದಿವ್ಯಘಳಿಗೆಯನ್ನು ಸಂಭ್ರಮಿಸುವ ಹಂಗ ಅನಸ್ತದ. ಯಾಕಂದ್ರ ಸ್ನಾನ ಆದ ಕೂಡಲೇ ಕೊಡೂದು ಇದೇ ಸಜ್ಜಕಾನ ಕುಡಿಯಾಕ.

ಒಂದು ದೊಡ್ಡ ಡಬರಿ ತುಂಬಾ ಸಜ್ಜಕ ಮಾಡೂದಾದ್ರ ಒಂದು ಲೊಟ ಅಷ್ಟ ರವಾ ಹಾಕೂದು. ಅದು ಅಷ್ಟು ತಿಳಿಯಾಗಬೇಕು. ಬಾಣಂತಿಗೆ ಭಾಳ ಮಾತಾಡಾಕೂ ಬಿಡೂದಿಲ್ಲ. ಆಯಾಸ ಆಗ್ತದಂತ. ಇನ್ನ ಬಾಯಿ ವಾಸ್ನಿ ಬರಬಾರದು ಅಂತ ಒಂದಷ್ಟು ಸೋಂಪಿನ ಕಾಳನ್ನೂ ಹಾಕಿರ್ತಾರ. ಒಟ್ಟ ಸಜ್ಜಕ ಕಬ್ಬಿಣದಂಶ ಇರುವ ಪೌಷ್ಟಿಕ ಆಹಾರ ಆಗಿ ಬದಲಾಗೂದೆ ಹಿಂಗ.ಇದನ್ನೂ ಸುರ್‌ ಅಂತ ಹೀರ್ಕೊಂತ, ಬಾಯೊಳಗ ಮೆತ್ತಗಿನ ಹದದೊಳಗ ಕುದ್ದ ಒಣಹಣ್ಣು ತಿನ್ಕೊಂತ ಬಿಸಿಬಿಸಿಯಾಗಿರೂದು ಕುಡದ್ರ ಮತ್ತೇನೂ ಬ್ಯಾಡನಸ್ತದ. ಪೌಷ್ಟಿಕ ಆಹಾರ ಅನ್ನೂದು ಈ ಒಂದು ಗಂಗಾಳನಾಗ ತುಂಬಿ ತುಳಕ್ತದ.ಇಂಥದ್ದೇ ಸಜ್ಜಕ ಎಂಟೊಬ್ಬತ್ತು ತಿಂಗಳ ಮಗುವಿಗೆ ತಿನಸಾಕ ಶುರು ಮಾಡಿದ್ರ ಮೂಳೆ ಗಟ್ಟಿಯಾಗ್ತಾವ. ಮಕ್ಕಳು ಶಾಂತಗೆ ನಿದ್ದಿ ಮಾಡ್ತಾವ.

ನುಚ್ಚು, ಸಜ್ಜಕ ಇವೆರಡೂ ಎಂಥ ಆಹಾರ ಅಂದ್ರ ಹಲ್ಲಿರದೆ ಉಣ್ಣಾಕ ಕಲಿಯುವ ಎಳೆಯ ಮಗುವಿಗೂ, ಹಲ್ಲುದುರಿ ಬೊಚ್ಚು ಬಾಯಿ ಮಾಡ್ಕೊಂಡಿರುವ ಆಯಿ, ಮುತ್ಯಾಗೂ ಹೊಟ್ಟಿಗೆ ಹಿತ ಅನಿಸುವಂಥ ಆಹಾರ. ಬಾಣಂತನಕ್ಕೂ ಇದೇ ಆಹಾರ. ಸಾವಿಗೆ ಹೋಗಿ ಬಂದ್ರ, ಅತ್ತೋರ ಬಾಯಿಗೆ ಸಿಹಿ ಇರಲಿ ಅಂತನೂ ಇದನ್ನೇ ಕಳಸಿಕೊಡ್ತಾರ. ಹುಟ್ಟು ಸಾವಿನ ಜೀವನಚಕ್ರದೊಳಗ ಇವೆರಡೂ ಕೊನಿತನಾ ಬರ್ತಾವ. ಕುದಿಯೂಮುಂದ, ಕುಡಿಯೂ ಮುಂದ, ಜೀವನದ ತಾಪಗಳೇನೇ ಇದ್ರೂ ಹೊಟ್ಯಾಗ ಹಾಕ್ಕೊಂಡ್ರ ಸಮಾಧಾನ ಅನ್ನೂದು ಜೊತಿಬುತ್ತಿಯಾಗ್ತದ ಅನ್ನೂದಂತೂ ತಿಳಸ್ತಾವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT