ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರಿಯ ಆರೋಗ್ಯಕರ ಧಾನ್ಯ: ವಾಹ್‌! ಕೀನ್‌– ವಾ

Last Updated 24 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಆರೋಗ್ಯ ಔಷಧಿಯಲ್ಲಿಲ್ಲ, ಆಹಾರದಲ್ಲಿದೆ ಎನ್ನುವವರು ಸದಾ ಹುಡುಕಾಡುವುದು ಪೌಷ್ಟಿಕಾಂಶದಿಂದ ಕೂಡಿದ ಪದಾರ್ಥಗಳನ್ನು. ಸದ್ಯಕ್ಕಂತೂ ಬಹುತೇಕರು ತಡಕಾಡುವುದು ಆರೋಗ್ಯಕರ ತಿನಿಸುಗಳ ರೆಸಿಪಿಯನ್ನೇ. ಅದರಲ್ಲಂತೂ ಕೆಲವರಿಗೆ ಗೋಧಿಯಲ್ಲಿರುವ ಗ್ಲುಟೆನ್‌ ಅಲರ್ಜಿ. ಅಜೀರ್ಣ, ಮಲಬದ್ಧತೆಯಿಂದ ಹಿಡಿದು ಉಸಿರಾಟದಂತಹ ಗಂಭೀರ ಸಮಸ್ಯೆಯೂ ಗ್ಲುಟೆನ್‌ ಅಲರ್ಜಿ ಇರುವವರಿಗೆ ಎದುರಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಪಾಲಿಶ್‌ ಮಾಡಿದ ಬಿಳಿ ಅಕ್ಕಿ ಬಳಸಿದರೆ ಕಾರ್ಬೊಹೈಡ್ರೇಟ್‌ನಿಂದಾಗಿ ಬೊಜ್ಜು ಏರಬಹುದು ಎಂಬ ಆತಂಕ. ಹೀಗಾಗಿ ಹಲವರು ಸಿರಿಧಾನ್ಯ (ಮಿಲೆಟ್‌ )ಗಳ ಮೊರೆ ಹೋಗಿದ್ದಾರೆ. ಗ್ಲುಟೆನ್‌ ಇಲ್ಲದ, ಹೆಚ್ಚು ಪ್ರೊಟೀನ್‌, ಖನಿಜಾಂಶ, ಅಮಿನೊ ಆಮ್ಲ, ಕಬ್ಬಿಣದ ಅಂಶಗಳನ್ನು ಹೊಂದಿರುವ ಕೀನ್– ವಾ ಇಂತಹ ಜನಪ್ರಿಯ ಆರೋಗ್ಯಕರ ಧಾನ್ಯ ಎಂದೇ ಪರಿಗಣಿಸಲಾಗಿದೆ.

ಇದು ನಾರಿನಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು, ಕ್ಯಾಲ್ಸಿಯಂ, ಪೋಟ್ಯಾಸಿಯಂ, ವಿಟಮಿನ್‌ ಬಿ ಮತ್ತು ಇ ಹೊಂದಿದೆ. ಜೊತೆಗೆ ಒಂದಿಷ್ಟು ಆ್ಯಂಟಿಆಕ್ಸಿಡೆಂಟ್‌ಗಳು.

ದ.ಅಮೆರಿಕದಲ್ಲಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿರುವ ಕೀನ್‌– ವಾ ಧಾನ್ಯವಲ್ಲ, ಅದು ಗಿಡದಲ್ಲಿ ಬೆಳೆಯುವ ಬೀಜ. ಸದ್ಯಕ್ಕೆ ಸೂಪರ್‌ಫುಡ್‌ ಎಂದೇ ಪರಿಗಣಿಸಲಾಗುತ್ತಿದ್ದು, ಇದರ ಉತ್ಪನ್ನಗಳು ಎಲ್ಲಾ ಕಡೆ ಲಭ್ಯ. ಕೀನ್‌–ವಾ ಪೌಷ್ಟಿಕಾಂಶದ ಬಾರ್‌ ಕೂಡ ಬಹುತೇಕ ಸೂಪರ್‌ ಮಾರ್ಕೆಟ್‌ಗಳಲ್ಲಿ ಸಿಗುತ್ತದೆ.

ಬಿಳಿ, ಕೆಂಪು ಹಾಗೂ ಕಪ್ಪು ಬಣ್ಣದ ಕೀನ್‌–ವಾ ಲಭ್ಯವಿದ್ದು, ಇದರಲ್ಲಿರುವ ಫ್ಲೆವನಾಯ್ಡ್ಸ್‌ ವೈರಸ್‌, ಉರಿಯೂತದ ವಿರುದ್ಧ ನಮ್ಮ ದೇಹಕ್ಕೆ ಹೋರಾಟ ನಡೆಸುವ ಶಕ್ತಿ ಒದಗಿಸುತ್ತದೆ ಎನ್ನುತ್ತಾರೆ ತಜ್ಞರು.

ಇದರ ಗ್ಲೈಸಿಮಿಕ್‌ ಇಂಡೆಕ್ಸ್‌ ಅತ್ಯಂತ ಕಡಿಮೆ. ಹೀಗಾಗಿ ಮಧುಮೇಹ ಇರುವವರು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಬೊಜ್ಜು ಇರುವವರು ತಿಂದರೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಹೃದ್ರೋಗಿಗಳಿಗೂ ಒಳ್ಳೆಯದು. ಖನಿಜಾಂಶಗಳಾದ ಮ್ಯಾಗ್ನಿಶಿಯಂ, ಸತು, ಕಬ್ಬಿಣದ ಪ್ರಮಾಣ ಅಧಿಕವಿದ್ದು, ಮಹಿಳೆಯರು ತಮ್ಮ ಆರೋಗ್ಯಕ್ಕಾಗಿ ಇದನ್ನು ಸೇವಿಸಬಹುದು.

ಚಯಾಪಚಯ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಪ್ರೊಟೀನ್‌ ಹಾಗೂ ನಾರಿನಾಂಶ ಜಾಸ್ತಿ ಇರುವುದರಿಂದ ಬೇಗ ಹೊಟ್ಟೆ ತುಂಬಿದಂತಾಗುತ್ತದೆ. ಹೀಗಾಗಿ ಇದು ತೂಕ ಇಳಿಸಲು ಪರಿಣಾಮಕಾರಿ.

ಕೀನ್‌–ವಾ ಬಳಸುವುದಕ್ಕಿಂತ ಮುನ್ನ ಸಿರಿಧಾನ್ಯಗಳಾದ ಹಾರಕ, ನವಣೆಯಂತೆ ಕೆಲವು ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಬೇಕು. ಬೀಜದ ಮೇಲಿರುವ ಕಹಿ ಅಂಶವನ್ನು ಇದರಿಂದ ತೆಗೆದು ಹಾಕಬಹುದು.

ಬಳಸುವುದು ಹೇಗೆ?: ಒಂದು ಕಪ್‌ ಕೀನ್‌– ವಾ ಅನ್ನು ನೀರಿನಲ್ಲಿ 2–3 ಗಂಟೆ ಕಾಲ ನೆನೆ ಹಾಕಿ. ನೀರನ್ನು ಬಸಿದು ಇದಕ್ಕೆ 2 ಕಪ್‌ ನೀರು ಸೇರಿಸಿ ಕುದಿಸಿ. ಚೆನ್ನಾಗಿ ಅರಳಿ ಬೇಯುತ್ತದೆ. ಇದನ್ನು ಸಂಬಾರು, ಸಾರಿನ ಜೊತೆ ಕಲೆಸಿ ತಿನ್ನಬಹುದು ಅಥವಾ ವಿವಿಧ ರೀತಿಯ ಬಾಥ್‌ ಮಾಡಿ ಸೇವಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT