ಗುರುವಾರ , ಅಕ್ಟೋಬರ್ 29, 2020
19 °C

ಓಣಂ ಸಂಭ್ರಮಕ್ಕೆ ಅಡ ಪಾಯಸ, ಪುಳಿ ಇಂಜಿ

ಮನಸ್ವಿ Updated:

ಅಕ್ಷರ ಗಾತ್ರ : | |

ಕೇರಳಿಗರ ಸಾಂಪ್ರದಾಯಿಕ ಆಚರಣೆ ಓಣಂಗೆ ‘ಸದ್ಯ’ ಎಂಬ ಊಟದ ಥಾಲಿಯನ್ನು ತಯಾರಿಸುತ್ತಾರೆ. ಹಲವು ಬಗೆಯ ಖಾದ್ಯಗಳಿರುವ ಸದ್ಯ ಥಾಲಿ ಓಣಂ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಅದರಲ್ಲಿ ಅಡ ಪಾಯಸ, ಓಲನ್ ಹಾಗೂ ಪುಳಿ ಇಂಜಿ ವಿಶೇಷ. ಬಾಯಿಗೆ ಹಿತ ಎನ್ನಿಸುವ ಈ ಖಾದ್ಯಗಳನ್ನು ಅತಿ ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದು.   

ಅಡ ಪಾಯಸ

ಬೇಕಾಗುವ ಸಾಮಗ್ರಿಗಳು: ಅಡ – 50 ಗ್ರಾಂ (ಅಕ್ಕಿಯಿಂದ ತಯಾರಿಸಿ ಖಾದ್ಯ), ಬೆಲ್ಲ – 150 ಗ್ರಾಂ, ತೆಂಗಿನಹಾಲು – 250 ಮಿಲಿ ಲೀಟರ್, ‌ಒಣದ್ರಾಕ್ಷಿ – ಸ್ವಲ್ಪ, ಗೋಡಂಬಿ – ಸ್ವಲ್ಪ, ತುಪ್ಪ – 2 ಚಮಚ, ಏಲಕ್ಕಿಪುಡಿ – ಚಿಟಿಕೆ, ತೆಂಗಿನತುರಿ – 10 ಗ್ರಾಂ

ತಯಾರಿಸುವ ವಿಧಾನ: ಅಡಾವನ್ನು ನೀರಿನಲ್ಲಿ ಅರ್ಧ ಬೇಯಿಸಿ ನೀರು ಬಸಿಯಿರಿ. ಬೆಲ್ಲ ಹಾಗೂ ನೀರು ಸೇರಿಸಿ ಪಾಕ ತಯಾರಿಸಿ ತೆಳ್ಳಗಿನ ಬಟ್ಟೆಯಲ್ಲಿ ಸೋಸಿಕೊಳ್ಳಿ. ಆ ಪಾಕಕ್ಕೆ ಅಡಾವನ್ನು ಸೇರಿಸಿ ಚೆನ್ನಾಗಿ ಬೇಯಿಸಿ. ಅದಕ್ಕೆ ತೆಂಗಿನಹಾಲು, ಏಲಕ್ಕಿ ಪುಡಿ ಸೇರಿಸಿ ಒಂದು ಕುದಿ ಬರಿಸಿ. ಆದರೆ ಮತ್ತೆ ಬೇಯಿಸಬೇಡಿ. ನಂತರ ಇಳಿಸಿ ತುಪ್ಪದಲ್ಲಿ ಹುರಿದುಕೊಂಡ ದ್ರಾಕ್ಷಿ, ಗೋಡಂಬಿ ಹಾಗೂ ತೆಂಗಿನತುರಿ ಹಾಕಿ ಅಲಂಕರಿಸಿ.

**
 

ಪುಳಿ ಇಂಜಿ

ಬೇಕಾಗುವ ಸಾಮಗ್ರಿಗಳು: ಹುಣಸೆರಸ – 1 ಕಪ್, ‌ಶುಂಠಿ – 2 ಟೇಬಲ್‌ ಚಮಚ (ಹೆಚ್ಚಿಕೊಂಡಿದ್ದು), ಹಸಿಮೆಣಸು – 2 ಟೇಬಲ್ ಚಮಚ (ಹೆಚ್ಚಿಕೊಂಡಿದ್ದು), ಅರಿಸಿನ – 1/4 ಟೀ ಚಮಚ, ಮೆಂತ್ಯೆ ಕಾಳು – 1/4 ಚಮಚ, ಖಾರದಪುಡಿ – 1/4 ಚಮಚ, ಇಂಗು – 1/4 ಚಮಚ, ಬೆಲ್ಲ – 3 ಚಮಚ, ಎಳ್ಳೆಣ್ಣೆ – 1 ಟೇಬಲ್ ಚಮಚ, ಸಾಸಿವೆ – 1/4 ಚಮಚ, ಕರಿಬೇವು, ಉಪ್ಪು

ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಸಾಸಿವೆ ಹಾಗೂ ಮೆಂತ್ಯೆಕಾಳು ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಕರಿಬೇವು, ಇಂಗು, ಶುಂಠಿ ಹಾಗೂ ಹಸಿಮೆಣಸು ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಅರಿಸಿನ, ಹುಣಸೆರಸ, ಖಾರದಪುಡಿ, ಬೆಲ್ಲ ಹಾಗೂ ಉಪ್ಪು ಸೇರಿಸಿ ದೊಡ್ಡ ಉರಿಯಲ್ಲಿ ಕುದಿಸಿ. ಚೆನ್ನಾಗಿ ಕುದಿಸಿದ ಮೇಲೆ 15 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಮಂದ ಆಗುವವರೆಗೂ ಕುದಿಸಬೇಕು. ನಂತರ ಉಪ್ಪು ಸರಿಯಾಗಿದೆಯಾ ನೋಡಿ ಗ್ಯಾಸ್ ಆಫ್ ಮಾಡಿ. ಓಣಂ ಹಬ್ಬದ ವಿಶೇಷವಾಗಿರುವ ಪುಳಿ ಇಂಜಿಯನ್ನು ಫ್ರಿಜ್ಜ್‌ನಲ್ಲಿಟ್ಟು ಕೆಲವು ದಿನಗಳ ಕಾಲ ಬಳಸಬಹುದು.

*
 

ಓಲನ್‌

ಬೇಕಾಗುವ ಸಾಮಗ್ರಿಗಳು: ಕುಂಬಳ ಕಾಯಿ – 1 ಮಧ್ಯಮ ಗಾತ್ರದ್ದು, ಸಿಹಿಗುಂಬಳ ಹೋಳು – 1 ಕಪ್,‌ ಹಸಿಮೆಣಸು – 6 ಉದ್ದಕ್ಕೆ ಸೀಳಿಕೊಂಡಿದ್ದು, ತೆಂಗಿನಹಾಲು – 1 ಕಪ್,‌ ಅವರೆಕಾಳು – 1/4 ಕಪ್, ‌ (ಬೇಯಿಸಿಕೊಂಡಿದ್ದು), ಬೀನ್ಸ್ – ಸ್ವಲ್ಪ, ಕರಿಬೇವು – 5 ರಿಂದ 6 ಎಸಳು, ಉಪ್ಪು – ರುಚಿಗೆ ತಕ್ಕಷ್ಟು, ತೆಂಗಿನೆಣ್ಣೆ – 3 ಚಮಚ

ತಯಾರಿಸುವ ವಿಧಾನ: ಬೇಯಿಸಿಕೊಂಡ ಅವರೆಕಾಳಿನೊಂದಿಗೆ ಕುಂಬಳ ಕಾಯಿ ಹೋಳು, ಸಿಹಿಗುಂಬಳ ಹೋಳು, ಕತ್ತರಿಸಿದ ಬೀನ್ಸ್ ಹಾಗೂ ಹಸಿಮೆಣಸು ಸೇರಿಸಿ ಸ್ವಲ್ಪ ಹುರಿದುಕೊಳ್ಳಿ. ಅದಕ್ಕೆ ಬೇಕಾದಷ್ಟು ನೀರು ಸೇರಿಸಿ. ಮುಚ್ಚಳ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ. ನಂತರ ಒಂದು ಸುತ್ತು ಚೆನ್ನಾಗಿ ತಿರುಗಿಸಿ ಬೇಕಾದಷ್ಟು ಉಪ್ಪು ಹಾಗೂ ಕರಿಬೇವಿನ ಸೊಪ್ಪು ಹಾಕಿ. ಅದಕ್ಕೆ ತೆಂಗಿನಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಸ್ವಲ್ಪ ತೆಂಗಿನೆಣ್ಣೆ ಸೇರಿಸಿ ಚೆನ್ನಾಗಿ ಕುದಿಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು