ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗುಡೆ ಪುಳಿಮುಂಚಿ, ಒಣ ಸೀಗಡಿ ಚಟ್ನಿ

Last Updated 19 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಬಂಗುಡೆ ಪುಳಿಮುಂಚಿ

ಬೇಕಾಗುವ ಸಾಮಗ್ರಿಗಳು: ಬಂಗುಡೆ ಮೀನು– ಅರ್ಧ ಕೆ.ಜಿ., ಕೆಂಪುಮೆಣಸು–13, ಕೊತ್ತಂಬರಿ –2 ಟೇಬಲ್‌ ಚಮಚ, ಜೀರಿಗೆ–ಅರ್ಧ ಚಮಚ, ಸಾಸಿವೆ– ಕಾಲು ಚಮಚ, ಮೆಂತ್ಯೆ – ಕಾಲು ಚಮಚ, ಓಮ– ಅರ್ಧ ಚಮಚ, ಅರಿಸಿನಪುಡಿ– ಅರ್ಧ ಚಮಚ, ಬೆಳ್ಳುಳ್ಳಿ– 4 ಎಸಳು, ಈರುಳ್ಳಿ – ಸಣ್ಣ ಗಾತ್ರದ್ದು 2, ಹುಣಸೆಹಣ್ಣು– ಒಂದು ಲಿಂಬೆ ಗಾತ್ರದ್ದು, ಸ್ವಲ್ಪ ಕರಿಬೇವು, ಶುಂಠಿ, ಹಸಿಮೆಣಸು– 1 ಚಮಚ,

ತಯಾರಿಸುವ ವಿಧಾನ: ಕೆಂಪುಮೆಣಸು, ಕೊತ್ತಂಬರಿ, ಜೀರಿಗೆ, ಸಾಸಿವೆ, ಮೆಂತ್ಯೆ, ಓಮ ಇವುಗಳನ್ನು ಎಣ್ಣೆ ಹಾಕದೇ ಹುರಿಯಬೇಕು. ಹುರಿದ ಸಾಮಗ್ರಿಗಳನ್ನು ಈರುಳ್ಳಿ, ಬೆಳ್ಳುಳ್ಳಿ, ಅರಿಸಿನ, ಹುಣಸೆಹಣ್ಣು ಮತ್ತು ನೀರು ಹಾಕಿ ಚೆನ್ನಾಗಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಬಿಸಿ ಮಾಡಿದ ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ, ಕರಿಬೇವು ಮತ್ತು ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಬೇಕು. ಈರುಳ್ಳಿ ಕಂದು ಬಣ್ಣ ಬಂದ ಮೇಲೆ ರುಬ್ಬಿಕೊಂಡ ಮಸಾಲೆಯನ್ನು ಸೇರಿಸಬೇಕು. ಬೇಕಾದ ಹದಕ್ಕೆ ನೀರು ಹಾಕಿ ಕುದಿಸಬೇಕು. ಜಜ್ಜಿದ ಶುಂಠಿ ಮತ್ತು ಹಸಿಮೆಣಸನ್ನು ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು.

ಮಸಾಲೆ ಕುದಿ ಬಂದ ಮೇಲೆ ತೊಳೆದಿಟ್ಟ ಬಂಗುಡೆ ಮೀನನ್ನು ಹಾಕಬೇಕು. ಬಾಣಲೆಯ ಬಾಯಿ ಮುಚ್ಚಿ ಚಿಕ್ಕ ಉರಿಯಲ್ಲಿ ಐದು ನಿಮಿಷ ಮೀನನ್ನು ಬೇಯಿಸಿದರೆ ಪುಳಿಮುಂಚಿ ತಿನ್ನಲು ರೆಡಿಯಾಗುತ್ತದೆ. ನೀರು ದೋಸೆ ಮತ್ತು ಊಟ ಜೊತೆಗೆ ತಿನ್ನಲು ಇದು ರುಚಿಕರವಾಗಿರುತ್ತದೆ.

ಕಪ್ಪು ಪಾಂಫ್ರೆಟ್‌ ಸಾರು

ಬೇಕಾಗುವ ಸಾಮಗ್ರಿಗಳು: ಕಪ್ಪು ಪಾಂಫ್ರೆಟ್‌ ಮೀನು – 500 ಗ್ರಾಂ, ಒಣಮೆಣಸು–12, ‌ಕೊತ್ತಂಬರಿ–2 ಚಮಚ, ಜೀರಿಗೆ–ಅರ್ಧ ಚಮಚ, ಸಾಸಿವೆ– ಕಾಲು ಚಮಚ,ಓಮ– ಕಾಲು ಚಮಚ, ಮೆಂತ್ಯೆ– ಕಾಲು ಚಮಚ, ಈರುಳ್ಳಿ– ಎರಡು, ಹುಣಸೆಹಣ್ಣು– ಒಂದು ಲಿಂಬೆ ಗಾತ್ರದ್ದು, ಟೊಮೆಟೊ– 1, ಹಸಿಮೆಣಸು– 1, ಶುಂಠಿ– 1 ಇಂಚು, ಬೆಳ್ಳುಳ್ಳಿ– 6 ಎಸಳು

ತಯಾರಿಸುವ ವಿಧಾನ: ಒಣಮೆಣಸು, ಕೊತ್ತಂಬರಿ ಬೀಜ, ಜೀರಿಗೆ, ಸಾಸಿವೆ, ಮೆಂತ್ಯೆ, ಓಮ ಇವುಗಳನ್ನು ಎಣ್ಣೆ ಹಾಕದೇ ಹುರಿಯಬೇಕು. ಹುರಿದ ಸಾಮಗ್ರಿಗಳನ್ನು ನೀರು ಬೆರೆಸಿ ತೆಂಗಿನಕಾಯಿ, ಅರಿಸಿನ, ಹುಣಸೆಹಣ್ಣು, ಬೆಳ್ಳುಳ್ಳಿ, ಈರುಳ್ಳಿ ಸೇರಿಸಿ ಮಿಕ್ಸಿಯಲ್ಲಿ ಪೇಸ್ಟ್‌ ಮಾಡಿಕೊಳ್ಳಬೇಕು. ಬಾಣಲೆಗೆ ಮಸಾಲೆಯನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ನಂತರ ಟೊಮೆಟೊ, ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಜಜ್ಜಿದ ಶುಂಠಿ ಸೇರಿಸಬೇಕು. ಸಾರು ಕುದಿ ಬರುವಾಗ ತೊಳೆದಿಟ್ಟ ಮೀನನ್ನು ಹಾಕಬೇಕು. ಎರಡು ನಿಮಿಷ ಜೋರಾದ ಉರಿಯಲ್ಲಿ ಮೀನನ್ನು ಬೇಯಿಸಬೇಕು. ನಂತರ ಸ್ಟೌ ಬಂದ್ ಮಾಡಿ, ಬಾಣಲೆಯ ಮುಚ್ಚಳವನ್ನು ಮುಚ್ಚಿಡಬೇಕು. ಹತ್ತು ನಿಮಿಷದ ನಂತರ ಮುಚ್ಚಳ ತೆಗೆದರೆ, ರುಚಿಯಾದ ಪಾಂಫ್ರೆಟ್‌ ಸಾರು ಸವಿಯಲು ಸಿದ್ಧವಾಗಿರುತ್ತದೆ.

ಒಣ ಸೀಗಡಿ ಚಟ್ನಿ

ಬೇಕಾಗುವ ಸಾಮಗ್ರಿಗಳು: ಒಣ ಸೀಗಡಿ– ಅರ್ಧ ಕಪ್‌, ಒಣಮೆಣಸು– 3, ಹುಣಸೆಹಣ್ಣು, ಬೆಳ್ಳುಳ್ಳಿ– 2, ಅರಿಸಿನ – ಅರ್ಧ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ತೆಂಗಿನತುರಿ– ಅರ್ಧ ಕಪ್‌

ತಯಾರಿಸುವ ವಿಧಾನ: ಮೊದಲು ಒಣ ಸೀಗಡಿಯನ್ನು ಸ್ವಲ್ಪ ಹುರಿಯಬೇಕು. ನೀರು ಹಾಕದೇ ಕೆಂಪು ಮೆಣಸು, ಸ್ವಲ್ಪ ಹುಣಸೆಹಣ್ಣು, ಬೆಳ್ಳುಳ್ಳಿ, ಅರಿಸಿನ, ಉಪ್ಪು, ತೆಂಗಿನತುರಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಈ ಮಸಾಲೆಯನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಂಡು ನಂತರ ಹುರಿದ ಸೀಗಡಿಯನ್ನು ಸೇರಿಸಿದರೆ, ಚಟ್ನಿ ತಯಾರಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT