ಬಗೆ ಬಗೆ ಖಾದ್ಯಗಳ ‘ಬ್ರಾಹ್ಮಿನ್ಸ್‌ ಬೊಂಬಾಟ್‌ ಚಾಟ್‌’

7

ಬಗೆ ಬಗೆ ಖಾದ್ಯಗಳ ‘ಬ್ರಾಹ್ಮಿನ್ಸ್‌ ಬೊಂಬಾಟ್‌ ಚಾಟ್‌’

Published:
Updated:

ಜಿಟಿ ಜಿಟಿ ಮಳೆಯಿರಲಿ, ಮೋಡಕವಿದ ವಾತಾವರಣವಿರಲಿ, ಸುಡುವ ಬಿಸಿಲೇ ಇರಲಿ ಈ ಹೋಟೆಲ್ ಮುಂದೆ ಗಿಜಿಗುಡುವ ಆಹಾರ ಪ್ರಿಯರ ಸಾಲಿಗಂತೂ ಮುಕ್ತಿ ಇರುವುದಿಲ್ಲ. ಪುಟ್ಟದಾದ ಹೊಟೆಲ್‌ ಒಳಾಂಗಣದಲ್ಲಿ ಗೋಡೆಯನ್ನು ಅಲಂಕರಿಸುವ ಮೆನುವಿನ ಪಟ್ಟಿಯನ್ನು ಜನಸಂದಣಿಯ ನಡುವೆ ತುಸು ತ್ರಾಸಪಟ್ಟು ನೋಡಿದಾಗಲೇ ಅರಿವಿಗೆ ಬರುವುದು ಈ ಜನದಟ್ಟಣೆಗೆ ಅಸಲಿ ಕಾರಣ. 

ಹೌದು ಇಲ್ಲಿನ ಬಹುತೇಕ ಖಾದ್ಯಗಳ ಬೆಲೆ ₹ 10! ಮಲ್ಲೇಶ್ವರದ 7ನೇ ಅಡ್ಡರಸ್ತೆಯಲ್ಲಿರುವ ‘ಬ್ರಾಹ್ಮಿನ್ಸ್‌ ಬೊಂಬಾಟ್‌ ಚಾಟ್‌’ ಶುಚಿ, ರುಚಿ ಜೊತೆಗೆ ಅಗ್ಗದ ಬೆಲೆಯ ಕಾರಣದಿಂದಾಗಿ ಹಲವರ ಉದರಪ್ರಿಯ ತಾಣವಾಗಿದೆ. 

ಮುಸ್ಸಂಜೆಯ ಮಲ್ಲೇಶ್ವರದ ರಸ್ತೆಯಲ್ಲಿ ಸಾಗುವಾಗ ಎದುರಿಗಿದ್ದ ಜನಸಂದಣಿಯ ಕಾರಣಕ್ಕೆ ಆಕರ್ಷಿಸಿದ್ದು, ಈ ‘ಬ್ರಾಹ್ಮಿನ್‌ ಬೊಂಬಟ್‌ ಚಾಟ್‌’. ಖಾದ್ಯಗಳ ರುಚಿನೋಡುವ ಮನಸಾಗಿ ಸರತಿಯಲ್ಲಿ ನಿಂತು ₹ 10 ನೀಡಿ ಪುಳಿಯೋಗರೆ ಪಡೆದುಕೊಂಡೆ. ನಿರಾಭರಣ ಸುಂದರಿಯಂತಿದ್ದ ಪುಳಿಯೋಗರೆ ಬಾಯಿಗಿಟ್ಟರೆ, ಕರಿಬೇವು, ಜೀರಿಗೆ, ಸಾಸಿವೆ ಹಾಗೂ ಎಳ್ಳಿನ ಘಮ ಬಾಯಿಯನ್ನು ಆವರಿಸಿತ್ತು. ನೋಡುವ ಕಂಗಳಿಗೆ ಆಕರ್ಷಕವಾಗಿಲ್ಲದಿದ್ದರೂ ರುಚಿಮೊಗ್ಗುಗಳಿಗೆ ಕೊರತೆಯಂತೂ ಇರಲಿಲ್ಲ. ಬೆಲ್ಲ ಹಾಗೂ ಹುಣಸೆಹಣ್ಣಿನ ಹದವಾದ ಮಿಶ್ರಣ, ನಡುವಿನಲ್ಲಿ ಸಿಗುವ ಶೇಂಗಾಗಳ ಸವಿ ಪುಳಿಯೋಗರೆಯ ಸಾಂಪ್ರದಾಯಿಕ ಸ್ವಾದವನ್ನು ನೆನಪಿಸುತ್ತಿತ್ತು. 

ಉಪ್ಪು, ಕಾರ ಮತ್ತು ಹುಳಿಗಳ ಹದವಾದ ಮಿಳಿತದೊಂದಿಗೆ ಟೊಮೆಟೊವನ್ನು ಹೆಚ್ಚಾಗಿ ಬಳಸಿರುವ ಉಪ್ಪಿಟ್ಟು ಭಿನ್ನ ರುಚಿ ಹೊಂದಿತ್ತು. ಕೆಂಪು ಬಣ್ಣದ ಉಪ್ಪಿಟ್ಟನ್ನು ಹಸಿರು ಬಣ್ಣದ ಬೀನ್ಸ್‌, ಬಟಾಣಿಗಳು ಅಲಂಕರಿಸಿತ್ತು. ಬಾಯಿಗಿಟ್ಟೊಡನೆ ಆವರಿಸುವ ಟೊಮೊಟೊ ಘಮ ಹೊಸ ರುಚಿಗೆ ಕಾರಣವಾಗಿತ್ತು. 

ಚಿತ್ರಾನ್ನ, ಟೊಮೆಟೊಭಾತ್, ಕೇಸರಿಭಾತ್, ಜಿಲೇಬಿ, ಪಾಯಸ, ರೈಸ್‌ಭಾತ್, ವಾಂಗಿಭಾತ್, ಶಾವಿಗೆ ಭಾತ್, ಅವಲಕ್ಕಿ ಬೋಂಡಾ, ಬಜ್ಜಿ ಸೇರಿದಂತೆ ವಿವಿಧ ಖಾದ್ಯಗಳು ಲಭ್ಯ.

‘ಬ್ರಾಹ್ಮಿನ್ಸ್‌ ಬೊಂಬಾಟ್‌ ಚಾಟ್‌’ ಮಾಲೀಕ ಮಂಜುನಾಥ್‌ ಎನ್‌. ಮೂಲತಃ ನಂಜನಗೂಡಿನವರು. ಮಹಾನಗರಿಗೆ ಬಂದ ಆರಂಭದ ದಿನಗಳಲ್ಲಿ ಅವರು ಅನುಭವಿಸಿದ ಕಷ್ಟಗಳೇ ಹೋಟೆಲ್‌ ಆರಂಭಕ್ಕೆ ಸ್ಪೂರ್ತಿಯಂತೆ. ‘ಪ್ರಾರಂಭದಲ್ಲಿ ರಸ್ತೆ ಬದಿಗಳಲ್ಲಿ, ಸಿಗ್ನಲ್‌ಗಳಲ್ಲಿ ತಂಪು ಕನ್ನಡಕ ಮಾರುತಿದ್ದೆ. ಆಗೆಲ್ಲಾ ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಿತ್ತು. ಬೆಂಗಳೂರಿನ ದುಬಾರಿ ಜೀವನವೂ ಅರಿವಿಗೆ ಬಂತು. ನನ್ನಂತೆ ಇತರರು ತೊಂದರೆ ಅನುಭವಿಸಬಾರದು ಎನ್ನುವ ಉದ್ದೇಶದಿಂದ ಹೋಟೆಲ್‌ ಆರಂಭಿಸಿದೆ’ ಎನ್ನುತ್ತಾರೆ ಮಂಜುನಾಥ್‌.

ಬಡವರ್ಗದವರನ್ನೇ ಕೇಂದ್ರೀಕರಿಸಿ ಹೋಟೆಲ್‌ ಆರಂಭವಾದರೂ, ನಂತರ ದಿನಗಳಲ್ಲಿ ಮಧ್ಯಮ, ಶ್ರೀಮಂತ ವರ್ಗದ ಗ್ರಾಹಕರನ್ನು ತನ್ನ ರುಚಿ ಮತ್ತು ಶುಚಿಯ ಕಾರಣಕ್ಕಾಗಿ ಆಕರ್ಷಿಸಿದೆ.  ನಿತ್ಯ ಬೆಳಿಗ್ಗೆ 7.30ಕ್ಕೆ ಆರಂಭವಾಗುವ ಹೋಟೆಲ್‌ ರಾತ್ರಿ 10ರವರೆಗೆ ತೆರೆದಿರುತ್ತದೆ. ಸಮಯಕ್ಕೆ ತಕ್ಕಂತೆ  ಬೇರೆ, ಬೇರೆ ಮೆನು ಹಾಗೂ ದರ ಪಟ್ಟಿ ಇಲ್ಲಿದೆ. ಮಂಜುನಾಥ್ ಅವರ ತಾಯಿ ಗಿರಿಜಮ್ಮ ಅವರೇ ಇಲ್ಲಿ ಮುಖ್ಯ ಬಾಣಸಿಗರು.

‘ಹೋಟೆಲ್‌ ಆರಂಭದ ದಿನಗಳಲ್ಲಿ ದಿನವಿಡೀ ಎಲ್ಲ ಖಾದ್ಯಗಳನ್ನು ಪೂರೈಸುತ್ತಿದ್ದೆವು. ಪುಟ್ಟದಾದ ಜಾಗದಲ್ಲಿ ಆಗದಷ್ಟು ಜನರು ಬರುತ್ತಿದ್ದ ಕಾರಣ ದರದಲ್ಲಿ ಬದಲಾವಣೆ ತರಲಾಯಿತು ಎನ್ನುತ್ತಾರೆ’ ಮಾಲೀಕ ಮಂಜುನಾಥ್‌‌.

ಇನ್ನೂ ವಿವಿಧ ಖಾದ್ಯಗಳನ್ನು ಒಳಗೊಂಡು ವಿಶಾಲ ಪ್ರಾಂಗಣದಲ್ಲಿ ಅಗ್ಗದ ದರದಲ್ಲಿಯೇ ಇನ್ನೊಂದು ಹೋಟೆಲ್‌ ಆರಂಭಿಸುವ ಇಂಗಿತ ಮಂಜುನಾಥ್‌ ಅವರದ್ದು. ತುಪ್ಪದ ದೋಸೆ, ಬಾಳೆಎಲೆ ಊಟವನ್ನು ಬಡಿಸುವ ಹಂಬಲದೊಂದಿಗೆ ಮಲ್ಲೇಶ್ವರದಲ್ಲಿಯೇ ಶೀಘ್ರದಲ್ಲಿ ನೂತನ ಹೋಟೆಲ್‌ ಆರಂಭಿಸುವ ಉತ್ಸಾಹದಲ್ಲಿದ್ದಾರೆ. 

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !