ಗುರುವಾರ , ಏಪ್ರಿಲ್ 2, 2020
19 °C

ಮುದ್ದುಕೃಷ್ಣನಿಗೆ ಚಕ್ಕುಲಿ ಉಂಡೆಯ ನೈವೇದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರಾವಣ ಮಾಸದಲ್ಲಿ ಹಬ್ಬಗಳದ್ದೇ ಕಾರುಬಾರು. ತಿಂಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಹಬ್ಬ ಇದ್ದೇ ಇರುತ್ತದೆ. ವರಮಹಾಲಕ್ಷ್ಮೀ ಸಂಭ್ರಮ ಕಳೆಯುವ ಮೊದಲೇ ಕೃಷ್ಣಜನ್ಮಾಷ್ಟಮಿಯ ಆಗಮನವಾಗುತ್ತಿದೆ. ಕರಾವಳಿ ಭಾಗದಲ್ಲಿ ಕೃಷ್ಣಜನ್ಮಾಷ್ಟಮಿ ಬಲು ಜೋರು. ಮನೆಗಳಲ್ಲಿ ಚಕ್ಕುಲಿ, ಅಂಬೊಡೆ ಹಾಗೂ ಉಂಡೆಯಂತಹ ತಿಂಡಿಗಳ ದರ್ಬಾರು. ಬೆಣ್ಣೆಕೃಷ್ಣನ ಹುಟ್ಟಿನ ದಿನದಂದು ತಯಾರಿಸುವ ಒಂದಷ್ಟು ತಿಂಡಿಗಳನ್ನು ಇಲ್ಲಿ ಪರಿಚಯಿಸಿದ್ದಾರೆ ಸೀತಾ ಎಸ್. ನಾರಾಯಣ ಹಾಗೂ ಗೀತಾ ಎಸ್. ಭಟ್

**

ಎಳ್ಳಿನ ಚಿಗಳಿ

ಬೇಕಾಗುವ ಸಾಮಗ್ರಿಗಳು: ಎಳ್ಳು – 1ಕಪ್, ಶೇಂಗಾ – 1/2 ಕಪ್, ಬೆಲ್ಲ – 1ಕಪ್ 

ತಯಾರಿಸುವ ವಿಧಾನ: ಎಳ್ಳು ಹಾಗೂ ಶೇಂಗಾವನ್ನು ಬೇರೆ ಬೇರೆಯಾಗಿ ಹದವಾಗಿ ಹುರಿಯಿರಿ. ಆರಿದ ಮೇಲೆ ಬೆಲ್ಲದೊಂದಿಗೆ ಸೇರಿಸಿ ಪುಡಿ ಮಾಡಿ. ಚೆನ್ನಾಗಿ ಬೆರೆಸಿ ತಕ್ಷಣವೇ ಬೇಕಾದ ಅಳತೆಗೆ ಉಂಡೆ ಮಾಡಿ. ಇದು ತಿಂಗಳವರೆಗೂ ಚೆನ್ನಾಗಿರುತ್ತದೆ.

**

ಚಕ್ಕುಲಿ

ಬೇಕಾಗುವ ಸಾಮಗ್ರಿಗಳು: ಹುರಿದು ಪುಡಿ ಮಾಡಿದ ಉದ್ದಿನಬೇಳೆಯ ಹಿಟ್ಟು – 1 ಕಪ್, ಅಕ್ಕಿಹಿಟ್ಟು – 4 ಕಪ್, ಕಾದ ಎಣ್ಣೆ ಅಥವಾ ಬೆಣ್ಣೆ –1 ಚಮಚ, ರುಚಿಗೆ ಉಪ್ಪು, ಜೀರಿಗೆ ಹಾಗೂ ಎಳ್ಳು ತಲಾ – 1 ಚಮಚ, ಇಂಗು – 1/2 ಚಮಚ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಹುರಿದ ಉದ್ದಿನ ಹಿಟ್ಟು, ಅಕ್ಕಿಹಿಟ್ಟು, ಕಾದ ಎಣ್ಣೆ ಅಥವಾ ಬೆಣ್ಣೆ, ಉಪ್ಪು, ಜೀರಿಗೆ ಹಾಗು ಎಳ್ಳು, ಇಂಗು ಎಲ್ಲವನ್ನೂ ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಬೆರೆಸಿ. ನೀರು ಹಾಕಿ ಹದವಾಗಿ ಕಲಸಿ ಚಕ್ಕುಲಿ ಒರಳಿನಲ್ಲಿ ಹಾಕಿ ಪ್ಲಾಸ್ಟಿಕ್ ಕವರ್ ಮೇಲೆ ಬೇಕಾದ ಅಳತೆಗೆ ಚಕ್ಕುಲಿ ಒತ್ತಿ. ಕಾದ ಎಣ್ಣೆಯಲ್ಲಿ ಹಾಕಿ ಹದವಾಗಿ ಕರಿದು, ರುಚಿಯಾದ ಚಕ್ಕುಲಿ ಸವಿಯಿರಿ.

**

ಮಿಶ್ರಬೇಳೆಯ ಅಂಬೊಡೆ

ಬೇಕಾಗುವ ಸಾಮಗ್ರಿಗಳು: ಕಡ್ಲೆಬೇಳೆ – 1 ಕಪ್, ತೊಗರಿಬೇಳೆ ಹಾಗೂ ಹೆಸರುಬೇಳೆ – ತಲಾ 1/2 ಕಪ್‌, ಹಸಿಶುಂಠಿ – 2 ಇಂಚು, ಹಸಿಮೆಣಸು – 4-5, ಹೆಚ್ಚಿದ ಕರಿಬೇವು, ಕೊತ್ತಂಬರಿ ಸ್ವಲ್ಪ (ಬೇಕಿದ್ದಲ್ಲಿ ಹೆಚ್ಚಿದ ಸಬ್ಬಸ್ಸಿಗೆ ಅಥವಾ ಪುದಿನ) ರುಚಿಗೆ ಉಪ್ಪು, ಇಂಗು ಸ್ವಲ್ಪ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಬೇಳೆಗಳನ್ನು 3-4 ಗಂಟೆಗಳ ಕಾಲ ನೆನೆಸಿ. ಶುಂಠಿ ಹಸಿಮೆಣಸಿನೊಂದಿಗೆ ತರಿತರಿಯಾಗಿ ರುಬ್ಬಿ. ಎಣ್ಣೆಯನ್ನು ಬಿಟ್ಟು ಉಳಿದ ಪದಾರ್ಥಗಳೊಂದಿಗೆ ನೀರು ಹಾಕದೆ ಕಲಸಿ, ಅಂಬೊಡೆ

ಆಕಾರದಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಹದವಾಗಿ ಎರಡೂ ಕಡೆ ಕರಿಯಿರಿ. ರುಚಿಯಾದ ಅಂಬೊಡೆ ಸವಿಯಿರಿ.

**

ಲಡಕಿ ಉಂಡೆ

ಬೇಕಾಗುವ ಸಾಮಗ್ರಿಗಳು: ಕಡಲೆಹಿಟ್ಟು - 1 ಕಪ್, ಅಡುಗೆ ಸೋಡ - ¼ ಚಮಚ, ಬೆಲ್ಲ- 1, 1/2ಕಪ್, ಕೊಬ್ಬರಿತುರಿ - ½ಕಪ್, ಏಲಕ್ಕಿ ಮತ್ತು ಜಾಯಿಕಾಯಿಪುಡಿ - ½ಚಮಚ, ಕರಿಯಲು- ಎಣ್ಣೆ.

ತಯಾರಿಸುವ ವಿಧಾನ: ಕಡಲೆಹಿಟ್ಟಿಗೆ ಸ್ವಲ್ಪ ಅಡುಗೆ ಸೋಡ ಸೇರಿಸಿ ನೀರು ಹಾಕಿ ಗಂಟಾಗದಂತೆ ಕದಡಿ. ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಬಾಣಲಿಯಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ರಂಧ್ರವಿರುವ ಸೌಟಿನಲ್ಲಿ ಕಡಲೆಹಿಟ್ಟು ಹಾಕಿ ಕಾಳು ಕರಿಯಿರಿ. ಮಂದ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ. ನಂತರ ಇತ್ತ ಬೆಲ್ಲವನ್ನು ಗಟ್ಟಿ ಪಾಕ ಮಾಡಿಕೊಳ್ಳಿ. ಅದಕ್ಕೆ ಕರಿದ ಕಾಳುಗಳಿಗೆ ಕೊಬ್ಬರಿತುರಿ, ಏಲಕ್ಕಿ ಪುಡಿ, ಹಾಕಿ ಮಗುಚಿ ಬಿಸಿಬಿಸಿ ಇರುವಾಗಲೇ ಉಂಡೆ ಕಟ್ಟಿ.

**

ಗುಳ್ಳಡಕೆ ಉಂಡೆ

ಬೇಕಾಗುವ ಸಾಮಗ್ರಿಗಳು: ಗೋಧಿ - ½ಕೆಜಿ, ಬೆಲ್ಲ - ¼ ಕೆ.ಜಿ, ಹುರಿಗಡಲೆ ಪುಡಿ -2 ಚಮಚ, ಏಲಕ್ಕಿಪುಡಿ – ¼ಚಮಚ. ಕರಿಯಲು – ಎಣ್ಣೆ

ತಯಾರಿಸುವ ವಿಧಾನ: 24ಗಂಟೆ (ಒಂದು ದಿನ) ಗೋಧಿಯನ್ನು ನೆನೆಸಿ ತೊಳೆದುಕೊಳ್ಳಿ. ನಂತರ ಚೆನ್ನಾಗಿ ರುಬ್ಬಿ. ಅದರ ಹಾಲನ್ನು ಸೋಸಿಕೊಳ್ಳಿ. (ದಪ್ಪ ಹಾಲು ಎಸೆಯಬೇಡಿ. ಅದರಿಂದ ಪೌಷ್ಠಿಕವಾದ ಗೋಧಿ ಹಾಲುಬಾಯಿ ಮಾಡಬಹುದು.) ನಂತರ ನಾರುನಾರಾದ ಮುದ್ದೆ ಸಿಗುತ್ತೆ. ಆ ಮುದ್ದೆಯಲ್ಲಿ ಸ್ವಲ್ಪವೂ ಗೋಧಿಯ ಸಿಪ್ಪೆಯಿರದಂತೆ 10-15 ನಿಮಿಷ ಚೆನ್ನಾಗಿ ತೊಳೆಯಿರಿ. ನಂತರ ಅಂಟಾದ ಮುದ್ದೆ ಸಿಗುತ್ತೆ. ಅದನ್ನು ಚಿಕ್ಕ ಚಿಕ್ಕ ಬಟಾಣಿಕಾಳಿನ ಗಾತ್ರದ ಉಂಡೆ ಮಾಡಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ. ಕರಿದಾಗ ಅದು ಗುಳ್ಳೆಯಂತೆ ಉಬ್ಬಿಕೊಳ್ಳುತ್ತದೆ. ನಂತರ ಎಲ್ಲಾ ಕರಿದ ಗುಳ್ಳೆಗಳನ್ನು ಒಂದು ಕಡಾಯಿಗೆ ಹಾಕಿ ಹುರಿಗಡಲೆ ಪುಡಿ, ಏಲಕ್ಕಿಪುಡಿ ಸೇರಿಸಿ ಬೆಲ್ಲದ ಪಾಕ ಹಾಕಿ ಚೆನ್ನಾಗಿ ಮಗುಚಿ. ನಂತರ ನಾಲ್ಕೈದು ಕರಿದ ಗುಳ್ಳೆಗಳನ್ನು ಒಟ್ಟು ಸೇರಿಸಿ ಉಂಡೆ ಕಟ್ಟಿ.

**

ಶೇಂಗಾ ಉಂಡೆ

ಬೇಕಾಗುವ ಸಾಮಗ್ರಿಗಳು: ಶೇಂಗಾ – 2ಕಪ್‌, ಬೆಲ್ಲ – 1, 1/2ಕಪ್‌

ತಯಾರಿಸುವ ವಿಧಾನ: ಶೇಂಗಾ ಹುರಿದುಕೊಂಡು ಸಿಪ್ಪೆ ತೆಗೆದು ಒಂದು ಸುತ್ತು ಮಿಕ್ಸ್ ಮಾಡಿಕೊಳ್ಳಿ. (ಪ್ರತಿ ಕಾಳು ಮೂರ್ನಾಲ್ಕು ತುಂಡಾದರೆ ಸಾಕು) ಬೆಲ್ಲ ಗಟ್ಟಿ ಪಾಕ ಬಂದ ನಂತರ ಪಾಕಕ್ಕೆ ಶೇಂಗಾ ಹಾಕಿ ಚೆನ್ನಾಗಿ ಮಗುಚಿ ಉಂಡೆ ಕಟ್ಟಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)