ಮಾವಿನ ಹಣ್ಣಿನಲ್ಲಿ ಜ್ಯೂಸ್, ಸೀಕರಣೆ, ಸಲಾಡ್, ಗೊಜ್ಜು.. ಇಂಥ ಖಾದ್ಯಗಳನ್ನು ಮಾಡುವುದು ಸಹಜ. ಆದರೆ, ಕೇಕ್, ಡೆಸರ್ಟ್, ಮೂಸ್, ಫುಡ್ಡಿಂಗ್‌ನಂತಹ ವಿಶೇಷ ತಿನುಸುಗಳನ್ನು ತಯಾರಿಸಬಹುದು, ಗೊತ್ತಾ ? ಹೌದು, ಅಂಥ ಭಿನ್ನವಾದ ಮತ್ತು ವಿಶೇಷ ತಿನಿಸುಗಳ ರೆಸಿಪಿಗಳನ್ನು ಪರಿಚಯಿಸುತ್ತಿದ್ದಾರೆ ಶಿವಮೊಗ್ಗದ ಪ್ರಭಾ ಪಿ. ಶಾಸ್ತ್ರಿ.
ಮಾವಿನಹಣ್ಣಿನ ಕೇಕ್
ಬೇಕಾಗುವ ಸಾಮಾಗ್ರಿಗಳು: ಮಾವಿನಹಣ್ಣಿನ ಪಲ್ಪ್ 1ಕಪ್, ಸಕ್ಕರೆ ಕಾಲು ಕಪ್, ಎಣ್ಣೆ ಕಾಲು ಕಪ್, ಹಾಲು ಅರ್ಧ ಕಪ್, ಗೋಧಿಹಿಟ್ಟು ಮುಕ್ಕಾಲು ಕಪ್, ಮೈದಾಹಿಟ್ಟು ಮುಕ್ಕಾಲು ಕಪ್, ನುಣ್ಣಗಿನ ಬಾದಾಮ್ ಪೌಡರ್ 2 ಟೇಬಲ್ ಚಮಚ, ಬೇಕಿಂಗ್ ಪೌಡರ್ ಅರ್ಧ ಟೀಚಮ, ಬೇಕಿಂಗ್ ಸೋಡಾ ಕಾಲು ಟೀ ಚಮಚ, ಸ್ವಲ್ಪ ಉಪ್ಪು.
ಮಾಡುವ ವಿಧಾನ: ಗೋದಿ ಹಿಟ್ಟು, ಬಾದಾಮ್ ಪೌಡರ್, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಎಲ್ಲವನ್ನೂ ಒಟ್ಟಿಗೆ ಹಾಕಿ ಜರಡಿ ಮಾಡಿ ಇಟ್ಟುಕೊಳ್ಳಬೇಕು. ಮಾವಿನ ಹಣ್ಣಿನ ಪಲ್ಪ್, ಸಕ್ಕರೆ, ಎಣ್ಣೆ, ಹಾಲು, ಹಾಕಿ ಚೆನ್ನಾಗಿ ಬೀಟ್ ಮಾಡಿಕೊಂಡು ಇದಕ್ಕೆ ಜರಡಿ ಮಾಡಿಟ್ಟ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಜೊತೆಗೆ, ಕೇಕ್ ಟಿನ್ನಿಗೆ ತುಪ್ಪ ಸವರಿಡಿ. ಮಿಕ್ಸ್ ಮಾಡಿದ್ದನ್ನು ಕೇಕ್ ಟಿನ್ನಿಗೆ ಸುರಿದು ಸೆಟ್ ಮಾಡಿಕೊಳ್ಳಿ. ಓವನ್ ಫ್ರೀಹೀಟ್ ಮಾಡಿಕೊಂಡು, ಕೇಕ್ ಟಿನ್ನನ್ನು ಇಟ್ಟು, 350 ಡಿಗ್ರಿಯಲ್ಲಿ 30-33 ನಿಮಿಷ ಬೇಯಿಸಿ ತೆಗೆಯಿರಿ. ಈಗ ಮಾವಿನ ಹಣ್ಣಿನ ಕೇಕ್ ರೆಡಿ. ತಟ್ಟೆಯಲ್ಲಿರುವ ಕೇಕ್ ಬೇಕಾದ ಆಕಾರಕ್ಕೆ ಕಟ್ ಮಾಡಿ, ಸರ್ವ್ ಮಾಡಿ, ಸವಿಯಿರಿ.
ಡೆಸರ್ಟ್ ಸ್ವೀಟ್
ಬೇಕಾಗುವ ಸಾಮಗ್ರಿಗಳು: ಮಾವಿನ ಹಣ್ಣಿನ ಹೋಳು-1 ಬಟ್ಟಲು, ಕ್ರೀಮ್ ಅರ್ಧ ಬಟ್ಟಲು, ಸಕ್ಕರೆ -3 ಚಮಚ, ಕೇಸರಿ ಸ್ವಲ್ಪ, ಏಲಕ್ಕಿ ಪುಡಿ ಸ್ವಲ್ಪ, ಮೊಸರು-1 ಬಟ್ಟಲು, ಬಾದಾಮಿ, ಕಪ್ಪು ಒಣದ್ರಾಕ್ಷಿ, ಚೆರಿ ಹಣ್ಣು ಹೆಚ್ಚಿದ್ದು ಕಾಲು ಬಟ್ಟಲು.
ಮಾಡುವ ವಿಧಾನ: ಮೊಸರನ್ನು ಬಟ್ಟೆಯಲ್ಲಿ ಕಟ್ಟಿ ನೀರು ಬಸಿಯಲು ಇಡಬೇಕು. ಹೆಚ್ಚಿದ ಮಾವಿನ ಹಣ್ಣಿನ ಹೋಳು, ಸಕ್ಕರೆ, ಕೇಸರಿ, ಏಲಕ್ಕಿ ಪುಡಿ, ನೀರು ಬಿಸಿದ ಗಟ್ಟಿ ಮೊಸರು, ಕ್ರೀಮ್ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿ ತೆಗೆಯಿರಿ. ಅದಕ್ಕೆ ಹೆಚ್ಚಿದ ಡ್ರೈಫ್ರೂಟ್ಸ್ ಅರ್ಧ ಭಾಗ ಹಾಕಿ. ಚೆನ್ನಾಗಿ ಕಲೆಸಿ ಬೌಲ್‌ನಲ್ಲಿ ಹಾಕಿ ಎರಡು ಗಂಟೆಗಳ ಕಾಲ ಫ್ರೀಜ್‌ನಲ್ಲಿ ಇಟ್ಟು ತೆಗೆಯಿರಿ. ನಂತರ ಅದಕ್ಕೆ ಉಳಿದ ಡ್ರೈಫ್ರೂಟ್ಸ್ ಹಾಕಿ ಹಾಕಿ ಅಲಂಕರಿಸಿ ಸವಿಯಿರಿ.
ಮ್ಯಾಂಗೊ ಮೂಸ್
ಬೇಕಾಗುವ ಸಾಮಗ್ರಿಗಳು: ವಿಪ್ಪಿಂಗ್ ಕ್ರೀಮ್-1 ಕಪ್, ಮಾವಿನಹಣ್ಣು-1, ಸಕ್ಕರೆ-2 ಚಮಚ.
ಮಾಡುವ ವಿಧಾನ: ವಿಪ್ಪಿಂಗ್ ಕ್ರೀಮ್ ಅನ್ನು ಚೆನ್ನಾಗಿ ಒಣಗಿದ ತಣ್ಣಗಿನ ಪಾತ್ರೆಗೆ ಹಾಕಿ ಗಟ್ಟಿಯಾಗುವವರೆಗೆ ಬೀಟ್ ಮಾಡಬೇಕು. ಮಾವಿನ ಹಣ್ಣಿನ ಪಲ್ಪ್, ಸಕ್ಕರೆ ಹಾಕಿ ಚೆನ್ನಾಗಿ ರುಬ್ಬಿಕೊಳಬೇಕು. ಇವೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಸರ್ವಿಂಗ್ ಬೌಲ್‌ನಲ್ಲಿ ಹಾಕಿ ಮುಚ್ಚಿಟ್ಟು ಎರಡು ಗಂಟೆ ಫ್ರಿಜ್‌ನಲ್ಲಿ ಇಟ್ಟು ತೆಗೆಯಿರಿ. ಮಾವಿನ ಮೂಸ್ ಸವಿಯಲು ಸಿದ್ಧ.
ಮಾವು ಮೊಮೋಸ್
ಬೇಕಾಗುವ ಸಾಮಗ್ರಿ: ಮಾವಿನ ಹಣ್ಣಿನ ಪಲ್ಪ್-1 ಕಪ್, ಅಕ್ಕಿ-1 ಕಪ್, ಬೆಲ್ಲ-ಕಾಲು ಕಪ್, ಕಾಯಿತುರಿ-1 ಕಪ್, ಎಲಕ್ಕಿ ಪುಡಿ ಸ್ವಲ್ಪ.
ಮಾಡುವ ವಿಧಾನ: ಮಾವಿನ ಹಣ್ಣಿನ ಪಲ್ಪ್, ಬೆಲ್ಲ, ಕಾಯಿ ತುರಿ ಹಾಕಿ ನೀರು ಹಾಕದೆ ರುಬ್ಬಿ ತೆಗೆದು, ಏಲಕ್ಕಿ ಪುಡಿ, ಸ್ವಲ್ಪ ಉಪ್ಪು ಹಾಕಿ ದಪ್ಪ ತಳದ ಪಾತ್ರೆಗೆ ಹಾಕಿ ಒಲೆಯ ಮೇಲೆ ಇಟ್ಟು ಗಟ್ಟಿಯಾಗುವವರೆವಿಗೂ ಮಗುಚಿ ಇಳಿಸಿ. ಅಕ್ಕಿಯನ್ನು ಎರಡು ಗಂಟೆ ನೆನಸಿಕೊಂಡು ನುಣ್ಣಗೆ ರುಬ್ಬಿ ನೀರು ದೋಸೆ ಹಿಟ್ಟಿನ ಹದಕ್ಕೆ ಇರಲಿ. ಅದನ್ನು ಒಲೆಯ ಮೇಲೆ ಇಟ್ಟು ಸ್ವಲ್ಪ ಉಪ್ಪು ಹಾಕಿ ಮಗುಚಿ. ಗಟ್ಟಿಯಾದಾಗ ಇಳಿಸಿ. ಸ್ವಲ್ಪ ಬಿಸಿ ಇರುವಾಗಲೇ ಚೆನ್ನಾಗಿ ನಾದಿ ಉಂಡೆ ಮಾಡಿಕೊಂಡು ತೆಳ್ಳಗೆ ತಟ್ಟಿ. ಅದರೊಳಗೆ ಮಾವಿನ ಹಣ್ಣಿನ ಹೂರಣ ಇಟ್ಟು ಮುಚ್ಚಿ. ಹಬೆಯಲ್ಲಿ 10 ನಿಮಿಷ ಬೇಯಿಸಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.