ಹಬ್ಬಕ್ಕೆ ಸಾಂಪ್ರದಾಯಿಕ ಅಡುಗೆ

7

ಹಬ್ಬಕ್ಕೆ ಸಾಂಪ್ರದಾಯಿಕ ಅಡುಗೆ

Published:
Updated:

ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ತನ್ನದೇ ಆದ ಪ್ರಾಮುಖ್ಯತೆ ಇದೆ. ಮಹಿಳೆಯರು ತಮ್ಮ ಕುಟುಂಬದ ಆರೋಗ್ಯ ಹಾಗೂ ಸಂಪತ್ತು ಅಭಿವೃದ್ಧಿಗಾಗಿ ಮನೆಗಳಲ್ಲಿ ಲಕ್ಷ್ಮಿ ದೇವಿ ಕೂರಿಸಿ ಪೂಜೆ ಮಾಡುತ್ತಾರೆ. ಈ ವಿಶೇಷ ಹಬ್ಬಕ್ಕೆ ಮಾಡುವ ಅಡುಗೆ ವಿಧಾನಗಳನ್ನು ಉಮಾ ಸರ್ವೆಶ್‌ ವಿವರಿಸಿದ್ದಾರೆ.

ಪುಳಿಯೋಗರೆ
ಸಾಮಗ್ರಿ:
ಹುಣಸೆಹಣ್ಣು 100 ಗ್ರಾಂ, ಸಾರಿನಪುಡಿ (ರಸಂ ಪುಡಿ) ಒಂದು ಚಮಚ, ಬೆಲ್ಲ ಒಂದು ಅಚ್ಚು, ಉಪ್ಪು ರುಚಿಗೆ, ಅರಿಶಿನ ಅರ್ಧಚಮಚ, ಒಂದು ಚಮಚ ಎಣ್ಣೆ. ಉದುರು ಉದುರಾಗಿರುವ ಅನ್ನ, ಒಗ್ಗರಣೆಗೆ ಎಣ್ಣೆ, ಕಡಲೆಕಾಯಿ ಬೀಜ, ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಕರಿಎಳ್ಳು, ಒಣಕೊಬ್ಬರಿ.

ವಿಧಾನ: ಹುಣಸೆ ಹಣ್ಣನ್ನು ಬಿಸಿ ನೀರಲ್ಲಿ ನೆನೆಸಿ ರಸ ತೆಗೆದುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ, ಸಾರಿನಪುಡಿ, ಉಪ್ಪು, ಬೆಲ್ಲ, ಅರಿಶಿನ, ಎಣ್ಣೆ ಎಲ್ಲ ಹಾಕಿ ಸಣ್ಣ ಉರಿಯಲ್ಲಿಟ್ಟು ತಿರುಗಿಸುತ್ತಾ ಇರಬೇಕು. ಚೆನ್ನಾಗಿ ಮಿಶ್ರಗೊಂಡು ಲೇಹದ ಹಾಗೆ ಆದಾಗ ತೆಗೆದಿಡಿ. ನಂತರ ಮತ್ತೊಂದು ಪಾತ್ರೆಯಲ್ಲಿ ಎಳ್ಳನ್ನು ತೊಳೆದು ಗಮ್ ಎನ್ನುವಂತೆ ಹುರಿದು ಪುಡಿ ಮಾಡಿಕೊಳ್ಳಿ, ಅನ್ನ ಉದುರಾಗಿ ಮಾಡಿ ಆರಿಸಬೇಕು. ಅದಕ್ಕೆ ಬೇಕಾದಷ್ಟು ಗೊಜ್ಜು ಹಾಕಿ ಮಿಕ್ಸ್ ಮಾಡಿ, ಒಗ್ಗರಣೆಗೆ ಎಣ್ಣೆ ಕಾಯಿಸಿ ಅದಕ್ಕೆ ಸಾಸಿವೆ, ಕಡಲೆಬೀಜ, ಉದ್ದಿನಬೇಳೆ, ಕಡಲೆಬೇಳೆ, ಮೆಣಸಿನಕಾಯಿ ಹಾಕಿ. ಈ ಒಗ್ಗರಣೆಯನ್ನು ಅನ್ನಕ್ಕೆ ಹಾಕಿ ಮೇಲೆ ಎಳ್ಳುಪುಡಿ, ಕೊಬ್ಬರಿತುರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸವಿಯಿರಿ.

ಕಾಯಿಸಾಸಿವೆ ಅನ್ನ
ಸಾಮಗ್ರಿ
: ಅನ್ನ ಒಂದು ಕಪ್, ಒಣಮೆಣಸಿನಕಾಯಿ 5 , ಹುಣಸೆಹಣ್ಣು ಚೂರು , ಬೆಲ್ಲ ಸಣ್ಣ ತುಂಡು, ಉಪ್ಪು, ಚಿಟಿಕೆ ಅರಿಶಿನ, ಒಂದು ಚಮಚ ಸಾಸಿವೆ, ಕಾಯಿತುರಿ ಸಣ್ಣ ಕಪ್, ಎಣ್ಣೆ ಐದಾರು ಚಮಚ, ಶೇಂಗಾ, ಉದ್ದಿನಬೇಳೆ, ಕಡಲೆಬೇಳೆ, ಕರಿಬೇವು. ಇಂಗು.

ವಿಧಾನ: ಅನ್ನ ಉದುರು ಉದುರಾಗಿ ಮಾಡಿಕೊಳ್ಳಬೇಕು. ಮಿಕ್ಸಿಗೆ ಮೆಣಸಿನಕಾಯಿ, ಬೆಲ್ಲ, ಉಪ್ಪು, ಅರಿಶಿನ, ಸಾಸಿವೆ ಕಾಯಿತುರಿ ಎಲ್ಲಾ ಸೇರಿಸಿ ಮಿಶ್ರ ಮಾಡಬೇಕು. ಅನ್ನಕ್ಕೆ ಹಾಕಿ ಕಲಸಿ, ಒಗ್ಗರಣೆಗೆ ಎಣ್ಣೆ ಕಾಯಿಸಿ ಸಾಸಿವೆ, ಕಡಲೆಕಾಯಿ, ಉದ್ದಿನಬೇಳೆ, ಕಡಲೆ ಬೇಳೆ, ಇಂಗು, ಕರಿಬೇವು ಎಲ್ಲಾ ಹಾಕಿ ಈ ಒಗ್ಗರಣೆಯನ್ನು ಕಲಸಿಟ್ಟ ಅನ್ನಕ್ಕೆ ಹಾಕಿ ಮಿಕ್ಸ್ ಮಾಡಿ.

ಕಜ್ಜಾಯ
ಸಾಮಗ್ರಿ:
ಬೆಲ್ಲ 1 ಕಪ್‌,  2 ಕಪ್ ಅಕ್ಕಿ, ಹಣ್ಣಾದ ಬಾಳೆಹಣ್ಣು 1, ಏಲಕ್ಕಿ ಪುಡಿ, ಬಿಳಿ ಎಳ್ಳು. 

ಮಾಡುವ ವಿಧಾನ: ಹಿಂದಿನ ದಿನವೇ ಅಕ್ಕಿಯನ್ನು 3- 4 ಗಂಟೆ ಚೆನ್ನಾಗಿ ನೆನೆಸಿ ನೀರನ್ನು ಬಸಿದು ಹತ್ತಿ ಬಟ್ಟೆಯ ಮೇಲೆ ಆರಲು ಬಿಡಬೇಕು. ನಂತರ ಈ ಅಕ್ಕಿಯನ್ನು ನೀರು ಹಾಕದಂತೆ ಚೆನ್ನಾಗಿ ಪುಡಿ ಮಾಡಬೇಕು. ನೀರಿಗೆ ಬೆಲ್ಲವನ್ನು ಪುಡಿ ಮಾಡಿ ಹಾಕಿ ಪಾಕ ಮಾಡಿಕೊಳ್ಳಬೇಕು. ಪಾಕ ಅಂಟಿಗೆ ಬರುವ ತನಕ ಚೆನ್ನಾಗಿ ಕೈಯಾಡಿಸಬೇಕು. ಈ ಪಾಕಕ್ಕೆ ತೊಳೆದು ಪುಡಿ ಮಾಡಿಟ್ಟುಕೊಂಡ ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಇದು ತಣ್ಣಗಾಗಲು ಬಿಡಬೇಕು.

ತಣ್ಣಗಾದ ನಂತರ ಕಿವುಚಿದ ಬಾಳೆಹಣ್ಣು, ಏಲಕ್ಕಿ ಪುಡಿ ಹಾಗೂ ಬಿಳಿ ಎಳ್ಳನ್ನು ಹಾಕಿ ಒಂದು ರಾತ್ರಿಯಿಡೀ ಇಡಬೇಕು. ನಂತರ ಅಗಲವಾದ ಬಾಣಲೆಯೊಂದನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಬೇಕು. ನಂತರ ನೆನೆದ ಹಿಟ್ಟನ್ನು ತೆಗೆದುಕೊಂಡು ವೃತ್ತಾಕಾರವಾಗಿ ಅಗಲವಾಗಿ ತಟ್ಟಿ ಕಾದ ಎಣ್ಣೆಗೆ ಹಾಕಿ ಕರಿದರೆ ಕಜ್ಜಾಯ ತಯಾರಾಗುತ್ತದೆ.

ಗಸಗಸೆ ಪಾಯಸ
ಸಾಮಗ್ರಿ: 
ಗಸಗಸೆ 100 ಗ್ರಾಂ, ಅಕ್ಕಿ 100 ಗ್ರಾಂ, ಕೊಬ್ಬರಿ ತುರಿ ಅರ್ಧ ಕಪ್, ಬೆಲ್ಲ 1 ಕಪ್‌, ಏಲಕ್ಕಿ ಪುಡಿ ಅರ್ಧ ಚಮಚ, ಗೋಡಂಬಿ, ದ್ರಾಕ್ಷಿ, ಹಾಲು ಅರ್ಧ ಲೀಟರ್, ತುಪ್ಪ

ಮಾಡುವ ವಿಧಾನ: ಗಸಗಸೆ ಮತ್ತು ಅಕ್ಕಿಯನ್ನು ಒಲೆ ಮೇಲೆ ಒಂದು ಬಾಣಲೆಯಲ್ಲಿ ಹಾಕಿ ಅದನ್ನು ಹದವಾಗಿ ಹುರಿದುಕೊಳ್ಳಿ. ಕೊಬ್ಬರಿ ತುರಿ, ಹುರಿದುಕೊಂಡ ಗಸಗಸೆ, ಅಕ್ಕಿ, ಏಲಕ್ಕಿ ಪುಡಿ ಎಲ್ಲ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ ಒಂದೆರಡು ಕಪ್ ನೀರು ಸೇರಿಸಿ, ಎಷ್ಟು ಬೇಕೋ ಅಷ್ಟು ಬೆಲ್ಲ ಹಾಕಿ, ಚೆನ್ನಾಗಿ ಕುದಿಸಿ. ನಂತರ ಹಾಲನ್ನು ಹಾಕಿ ಕುದಿಸಬೇಕು. ಸೌಟಿನಿಂದ ಕಲಕುತ್ತಿರಬೇಕು. ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಕೆಂಪಗೆ ಹುರಿದು, ಪಾಯಸಕ್ಕೆ ಹಾಕಿ.

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !