ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ಸ್ಯಪ್ರಿಯರಿಗೆ ‘ಮೀನು ಚಕ್ಕುಲಿ’: ನಾರಿಯರ ಪ್ರಯತ್ನ

ಸ್ವ ಸಹಾಯ ಸಂಘದ ಮಹಿಳೆಯರಿಂದ ಮೀನಿನ ಮೌಲ್ಯವರ್ಧಿತ ಉತ್ಪನ್ನ
Last Updated 22 ಸೆಪ್ಟೆಂಬರ್ 2021, 19:55 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಗರ ಊಟದ ತಟ್ಟೆಯಲ್ಲಿ ಪ್ರಮುಖ ಖಾದ್ಯವಾಗಿ ಕಾಣಿಸುತ್ತಿದ್ದ ಮೀನು ಈಗ ಚಹಾದ ಜತೆಗಿನ ಕುರುಕಲು ಸ್ನ್ಯಾಕ್ಸ್‌ ರೂಪದಲ್ಲಿ ಮಾರುಕಟ್ಟೆಗೆ ಬಂದಿದೆ. ನಾಲ್ವರು ಮಹಿಳೆಯರು ಸೇರಿ ಸಿದ್ಧಪಡಿಸುತ್ತಿರುವ ‘ಮೀನು ಚಕ್ಕುಲಿ’ ಮತ್ಸ್ಯ ಪ್ರಿಯರ ಮನಗೆದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಲಾಯಿಲದ ಸಮಗ್ರ ಸಂಜೀವಿನಿ ಒಕ್ಕೂಟದ ಸ್ನೇಹ ಸ್ವ ಸಹಾಯ ಸಂಘದ ಮಹಿಳೆಯರಾದ ಸಾವಿತ್ರಿ ಎಚ್‌.ಎಸ್., ಶಾಹಿದಾ ಬೇಗಂ, ನಸೀಮಾ ಮತ್ತು ಹರ್ಷಿಯಾ ಸೇರಿ, 18 ದಿನಗಳಲ್ಲಿ ಸುಮಾರು 45 ಕೆ.ಜಿ.ಯಷ್ಟು ‘ಮೀನು ಚಕ್ಕುಲಿ’ ಮಾರಾಟ ಮಾಡಿದ್ದಾರೆ.

ಮೀನಿನ ಪಾಲಕ್, ಮೀನಿನ ಪೆಪ್ಪರ್, ಮೀನಿನ ಖಾರ, ಮೀನಿನ ಸಾದಾ ಹೀಗೆ ನಾಲ್ಕು ಬಗೆಯ ಚಕ್ಕುಲಿಗಳು ಇವರ ಅಡುಗೆಮನೆಯಲ್ಲಿ ಸಿದ್ಧವಾಗುತ್ತವೆ. 100 ಗ್ರಾಂ ಚಕ್ಕುಲಿಗೆ ₹35 ದರ.

‘ಸ್ವ ಉದ್ಯೋಗ ಕಾರ್ಯಕ್ರಮದ ಅಡಿಯಲ್ಲಿ ಚಕ್ಕುಲಿ ತಯಾರಿಕೆ, ಅಣಬೆ ಕೃಷಿ, ಮೀನು ಸಾಕಣೆ, ಮಸಾಲೆ ಹುಡಿ ತಯಾರಿಕೆ ಹೀಗೆ ನಾವು ಪ್ರತ್ಯೇಕವಾಗಿ ಗೃಹೋದ್ಯಮ ನಡೆಸುತ್ತಿದ್ದೆವು. ಆಗಸ್ಟ್‌ನಲ್ಲಿ ಮೀನುಗಾರಿಕಾ ಕಾಲೇಜು ಮತ್ತು ನಬಾರ್ಡ್‌ ನೀಡಿದ ಮೀನು ಉತ್ಪನ್ನಗಳ ಸಿದ್ಧತಾ ತರಬೇತಿಯಲ್ಲಿ ಚಕ್ಕುಲಿ ತಯಾರಿಕೆ ಕಲಿತೆವು. ಕಲಿತ ವಿದ್ಯೆಯನ್ನು ಕಾರ್ಯಗತಗೊಳಿಸಲು ₹25 ಸಾವಿರ ಬಂಡವಾಳ ಹಾಕಿ, ಉದ್ಯಮ ಪ್ರಾರಂಭಿಸಿದ್ದೇವೆ’ ಎಂದು ಸಾವಿತ್ರಿ ತಿಳಿಸಿದರು.

‘ಮಂಗಳೂರು ನಗರ, ಸ್ಥಳೀಯ ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿದ್ದ ಉತ್ಪನ್ನಗಳು ಗ್ರಾಹಕರ ಮನಗೆದ್ದಿವೆ. ರಾಣಿ ಮೀನಿನ (ಮದ್ಮಲ್) ಮೀಟ್‌ ಜತೆಗೆ ಅಕ್ಕಿಹಿಟ್ಟು, ಹುರಿಗಡಲೆ ಹಿಟ್ಟು, ಉದ್ದಿನ ಬೇಳೆ, ಜೀರಿಗೆ, ಓಂಕಾಳು ಬಳಸಿ ತಯಾರಿಸುವ ಚಕ್ಕುಲಿ ತಿಂದರೆ, ಮೀನು ತಿಂದ ಸ್ವಾದ ಸಿಗುತ್ತದೆ ಎಂಬುದು ಗ್ರಾಹಕರ ಅಭಿಪ್ರಾಯ’ ಎಂದು ಹರ್ಷಿಯಾಪ್ರತಿಕ್ರಿಯಿಸಿದರು.

‘ಮೀನಿನ ಕೋಡುಬಳೆ, ಹಪ್ಪಳ, ಸಂಡಿಗೆ ಮತ್ತಿತರ ಉತ್ಪನ್ನಗಳನ್ನು ತಯಾರಿಸಿದ್ದೇವೆ. ಮೀನುಗಾರಿಕಾ ಸಚಿವ ಎಸ್. ಅಂಗಾರ ಅವರು ನಮಗೆ ಪ್ರೋತ್ಸಾಹ ನೀಡಿರುವುದು ಬಲ ಹೆಚ್ಚಿಸಿದೆ’ ಎಂದು ಶಾಹಿದಾ ಬೇಗಂ, ನಸೀಮಾ ಹೇಳಿದರು.

*

ರಾಣಿ ಮೀನಿನ ಮೀಟ್ ಜತೆಗೆ ವಿವಿಧ ಪದಾರ್ಥಗಳನ್ನು ಸೇರಿಸಿ ತಯಾರಿಸುವ ಈ ಮೌಲ್ಯವರ್ಧಿತ ಉತ್ಪನ್ನವನ್ನು 45ರಿಂದ 50 ದಿನಗಳವರೆಗೆ ಕೆಡದಂತೆ ಇಡಬಹುದು.
-ಸಾವಿತ್ರಿ ಎಚ್‌.ಎಸ್., ಚಕ್ಕುಲಿ ತಯಾರಕಿ

ಸಂಪರ್ಕ ಸಂಖ್ಯೆ: 9980887012, 8050727601.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT