‘ಅಕ್ಕ’ ಬಡಿಸುವ ಕಡಲ ಖಾದ್ಯಗಳು

7

‘ಅಕ್ಕ’ ಬಡಿಸುವ ಕಡಲ ಖಾದ್ಯಗಳು

Published:
Updated:

ಕರಾವಳಿ ಭಾಗದ ಹೋಟೆಲ್‌ಗಳಲ್ಲಿ ಸಿಗುವಷ್ಟು ಮೀನಿನ ಖಾದ್ಯಗಳ ವೈವಿಧ್ಯ ಬೇರೆಡೆ ಕಾಣುವುದು ಅಪರೂಪ. ಸ್ಥಳೀಯರು ಹಾಗೂ ಪರವೂರಿನ ಗ್ರಾಹಕರಿಗೆ ಅಪ್ಪಟ ಕುಡ್ಲ ರುಚಿಯ ಮೀನಿನ ಖಾದ್ಯಗಳನ್ನು ಒದಗಿಸುತ್ತಿದೆ, ಪಾಣೆಮಂಗಳೂರಿನ ಮೆಲ್ಕಾರ್‌ನಲ್ಲಿರುವ ‘ಅಕ್ಕ’ ಕೋಸ್ಟಲ್‌ಫುಡ್‌ ಹೋಟೆಲ್‌. ಮೈಸೂರಿನ ಕಾವಾ ವಿದ್ಯಾರ್ಥಿಯೊಬ್ಬರ ಕಲ್ಪನೆಯಲ್ಲಿ ಸುಂದರವಾಗಿ ವಿನ್ಯಾಸಗೊಂಡಿರುವ ಹೋಟೆಲ್‌ನ ಒಳಾಂಗಣ ಗ್ರಾಹಕರ ಮನಸ್ಸಿಗೆ ಆಪ್ತ ಅನುಭವ ಕೊಡುತ್ತದೆ.

ಈ ಹೋಟೆಲ್‌ನಲ್ಲಿ ಅಡುಗೆ ಮಾಡುವವರಿಂದ ಹಿಡಿದು ಟೇಬಲ್‌ಗೆ ತಂದು ಬಡಿಸುವವರೆಲ್ಲರೂ ಕರಾವಳಿ ಹೆಣ್ಣುಮಕ್ಕಳೇ! ಹಾಗಾಗಿ, ಇಲ್ಲಿನ ತಿನಿಸುಗಳ ರುಚಿ ಮನೆಯೂಟವನ್ನೇ ನೆನಪಿಸುತ್ತದೆ. ಸಿಗಡಿ, ಮರುವಾಯಿ, ಬಂಗುಡೆ, ಅಂಜಲ್‌, ಮಾಂಜಿ ಹಾಗೂ ಕಾಣೆ ಮೀನಿನ ಖಾದ್ಯಗಳು ಇಲ್ಲಿನ ಸಿಗ್ನೇಚರ್‌ ತಿನಿಸುಗಳು. ಇಲ್ಲಿನ ವಿಶೇಷ ಖಾದ್ಯಗಳ ರೆಸಿಪಿಯನ್ನು ವಿವರಿಸಿದ್ದಾರೆ ಕೆ. ಎಂ. ಸತೀಶ್‌ ಬೆಳ್ಳಕ್ಕಿ‌.

*
ಬಂಗುಡೆ ಪುಳಿಮುಂಚಿ
ಬೇಕಾಗುವ ಸಾಮಗ್ರಿಗಳು:
ಬಂಗುಡೆ ಮೀನು – 10, ಉದ್ದಮೆಣಸು – 25, ಗಿಡ್ಡಮೆಣಸು – 20, ಕೊತ್ತಂಬರಿ – 1ಟೇಬಲ್‌ ಸ್ಪೂನ್‌, ಜೀರಿಗೆ – 1ಟೀ ಸ್ಪೂನ್‌, ಮೆಂತ್ಯ – 1ಟೀ ಸ್ಪೂನ್‌ , ಹುಳಿ – 1ಹಿಡಿ , ಬೆಳ್ಳುಳ್ಳಿ – 5ಎಸಳು , ಈರುಳ್ಳಿ – 1, ಕಾಯಿಮೆಣಸು – 4, ಶುಂಠಿ – ಒಂದು ತುಂಡು, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಉದ್ದಮೆಣಸು, ಗಿಡ್ಡಮೆಣಸು, ಕೊತ್ತಂಬರಿ, ಜೀರಿಗೆ, ಮೆಂತ್ಯವನ್ನು ತೆಂಗಿನೆಣ್ಣೆಯಲ್ಲಿ ಫ್ರೈ ಮಾಡಿ ಬದಿಗಿಟ್ಟುಕೊಳ್ಳಬೇಕು. ನಂತರ ಅದನ್ನು ನಯವಾಗಿ ರುಬ್ಬಿಕೊಳ್ಳಬೇಕು. ತದನಂತರ, ಬಾಣಲೆಯಲ್ಲಿ ಒಂದು ಈರುಳ್ಳಿ ಕತ್ತರಿಸಿಕೊಂಡು ನಾಲ್ಕು ಕಾಯಿಮೆಣಸು ಹಾಕಿ ಶುಂಠಿ ಹಾಕಿ ಸ್ವಲ್ಪ ಎಣ್ಣೆಯಲ್ಲಿ ಬಾಡಿಸಿಕೊಳ್ಳಬೇಕು. ನಂತರ ಮಸಾಲೆ ಹಾಕಿ ತಿರುಗಿಸಿ, ಕುದಿ ಬರುವಾಗ ಕತ್ತರಿಸಿದ 10 ಬಂಗುಡೆ ಮೀನುಗಳನ್ನು ಹಾಕಿದರೆ ಪುಳಿಮುಂಚಿ ತಯಾರು.

*

ಮರುವಾಯಿ ಸುಕ್ಕ
ಬೇಕಾಗುವ ಸಾಮಗ್ರಿಗಳು: ಚಿಪ್ಪು ಮರುವಾಯಿ – 100, ಉದ್ದ ಒಣಮೆಣಸು –20 , ಗಿಡ್ಡಮೆಣಸು – 10, ತೆಂಗಿನಕಾಯಿ –1, ಹುಳಿ – ಒಂದು ಹಿಡಿ, ಕೊತ್ತಂಬರಿಸೊಪ್ಪು – 1ಟೇಬಲ್‌ ಸ್ಪೂನ್‌, ಜೀರಿಗೆ – 1 ಟೀ ಸ್ಪೂನ್‌, ಬೆಳ್ಳುಳ್ಳಿ – 7ಎಸಳು, ಮೆಂತ್ಯ – 1ಟೀ ಸ್ಪೂನ್‌, ಅರಿಸಿನ – ಚಿಟಿಕೆ, ಈರುಳ್ಳಿ – 2, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಮರುವಾಯಿ ಚಿಪ್ಪನ್ನು ಸಮುದ್ರದಿಂದ ತರುವುದರಿಂದ ಅದನ್ನು ಸ್ವಚ್ಛಗೊಳಿಸುವುದೇ ಒಂದು ದೊಡ್ಡ ಸವಾಲು. ಚಿಪ್ಪಿನೊಳಗೆ ಸಣ್ಣಕಣದ ಮರಳು ಇರುತ್ತದೆ. ಆದ್ದರಿಂದ ಅದನ್ನು ನಾಲ್ಕೈದು ಬಾರಿ ಚೆನ್ನಾಗಿ ತೊಳೆದುಕೊಳ್ಳಬೇಕು. ಆನಂತರ ಪ್ರತಿಯೊಂದು ಚಿಪ್ಪನ್ನೂ ಈಳಿಗೆಮಣೆಯ ಸಹಾಯದಿಂದ ಎರಡು ಭಾಗ ಮಾಡಿಕೊಳ್ಳಬೇಕು.

ಇಷ್ಟಾದ ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಉದ್ದಮೆಣಸು, ಗಿಡ್ಡಮೆಣಸು, ಕೊತ್ತಂಬರಿ, ಜೀರಿಗೆ, ಮೆಂತ್ಯ, ಐದು ಎಸಳು ಬೆಳ್ಳುಳ್ಳಿ, ಅರಿಸಿನ ಹಾಕಿ ಅದನ್ನು ಚೆನ್ನಾಗಿ ಹುರಿದುಕೊಂಡು, ಆಮೇಲೆ ರುಬ್ಬಿಕೊಳ್ಳಬೇಕು. ನಂತರ ಒಲೆಯ ಮೇಲೆ ಪಾತ್ರೆ ಇಟ್ಟು ಸ್ವಚ್ಛಗೊಳಿಸಿದ ಮರುವಾಯಿ ಚಿಪ್ಪನ್ನು ಸುರಿದು, ರುಬ್ಬಿದ ಮಸಾಲೆಯನ್ನೂ ಹಾಕಿ ಇಪ್ಪತ್ತು ನಿಮಿಷಗಳ ಕಾಲ ಬೇಯಿಸಬೇಕು. ಮರುವಾಯಿ ಚಿಪ್ಪಿನಲ್ಲೇ ಉಪ್ಪಿನಂಶ ಇರುವುದರಿಂದ ರುಚಿ ನೋಡಿ ಅಗತ್ಯ ಇರುವಷ್ಟು ಮಾತ್ರ ಉಪ್ಪು ಹಾಕಬೇಕು.

ಆನಂತರ, ತೆಂಗಿನ ತುರಿ, ಈರುಳ್ಳಿ ಮತ್ತು ಕರಿಬೇವನ್ನು ತುಪ್ಪದಲ್ಲಿ ಗರಿಗರಿಯಾಗಿ ಹುರಿದುಕೊಳ್ಳಬೇಕು. ಆಮೇಲೆ, ಹಸಿ ಬೆಳ್ಳುಳ್ಳಿ, ಜೀರಿಗೆ ಹುರಿದುಕೊಳ್ಳಬೇಕು. ಹೀಗೆ ಬೇರೆಬೇರೆಯಾಗಿ ಹುರಿದುಕೊಂಡಂತಹ ತೆಂಗಿನ ತುರಿ, ಈರುಳ್ಳಿ, ಕರಿಬೇವು, ಬೆಳ್ಳುಳ್ಳಿ ಮತ್ತು ಜೀರಿಗೆಯನ್ನು ರುಬ್ಬುವ ಕಲ್ಲಿಗೆ ಹಾಕಿ ಒಂದೇ ಒಂದು ಸುತ್ತು ಆಡಿಸಬೇಕು. ಅದು ತರಿತರಿಯಾಗಿರಬೇಕು. ನಂತರ ಅದನ್ನು ತೆಗೆದು ಒಲೆಯ ಮೇಲೆ ಬೇಯುತ್ತಿರುವ ಪಾತ್ರೆಗೆ ಹಾಕಬೇಕು. ಐದು ನಿಮಿಷದ ನಂತರ ತೆಗೆದರೆ ಘಮಘಮಿಸುವ ಮರುವಾಯಿ ಸುಕ್ಕ ಸವಿಯಲು ಸಿದ್ಧ.

*

ಸಿಗಡಿ ಸುಕ್ಕ 
ಬೇಕಾಗುವ ಸಾಮಗ್ರಿ:
ಸಿಗಡಿ, ಉದ್ದ ಮೆಣಸು – 20, ಗಿಡ್ಡ ಮೆಣಸು – 10, ಕೊತ್ತಂಬರಿ – ಒಂದು ಹಿಡಿ, ಜೀರಿಗೆ – 1ಟೀ ಸ್ಪೂನ್‌, ಮೆಂತ್ಯ – 1ಟೀ ಸ್ಪೂನ್‌, ಅರಿಸಿನ – ಸ್ವಲ್ಪ, ಹುಳಿ – ಒಂದು ಹಿಡಿ, ಬೆಳ್ಳುಳ್ಳಿ – 5ಎಸಳು, ತೆಂಗಿನಕಾಯಿ – 1, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮೊದಲಿಗೆ ಸಿಗಡಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಬೇಕು. ಆನಂತರ ಒಲೆಯ ಮೇಲೆ ಪಾತ್ರೆಯನ್ನಿಟ್ಟು ನೀರಿನಲ್ಲಿ ಸಿಗಡಿ ಬೇಯಿಸಿಕೊಳ್ಳಬೇಕು. ತದನಂತರ, ಮೇಲೆ ಹೇಳಿದ ಪದಾರ್ಥಗಳ ಮಸಾಲೆ ತಯಾರಿಸಿಕೊಂಡು ಅದಕ್ಕೆ ಹಾಕಬೇಕು.

ಸಿಗಡಿ ಬೇಯುತ್ತಿರುವಾಗ ತೆಂಗಿನ ತುರಿ, ಈರುಳ್ಳಿ ಮತ್ತು ಕರಿಬೇವನ್ನು ತುಪ್ಪದಲ್ಲಿ ಗರಿಗರಿಯಾಗಿ ಹುರಿದುಕೊಳ್ಳಬೇಕು. ಆಮೇಲೆ, ಹಸಿ ಬೆಳ್ಳುಳ್ಳಿ, ಜೀರಿಗೆ ಹುರಿದುಕೊಳ್ಳಬೇಕು. ಹೀಗೆ ಹುರಿದುಕೊಂಡಂತಹ ತೆಂಗಿನ ತುರಿ, ಈರುಳ್ಳಿ, ಕರಿಬೇವು, ಬೆಳ್ಳುಳ್ಳಿ ಮತ್ತು ಜೀರಿಗೆಯನ್ನು ರುಬ್ಬುವ ಕಲ್ಲಿಗೆ ಹಾಕಿ ಒಂದು ಸುತ್ತು ಆಡಿಸಿ ಬೇಯುತ್ತಿರುವ ಸಿಗಡಿ ಪಾತ್ರೆಗೆ ಹಾಕಿ ಐದು ನಿಮಿಷ ಬೇಯಿಸಿ ತೆಗೆದರೆ ಸಿಗಡಿ ಸುಕ್ಕ ಸವಿಯಲು ಸಿದ್ಧ.

 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !