ಹೆಸರುಕಾಳಿನ ತಿನಿಸು ತಂಪೂ ಹೌದು, ರುಚಿಯೂ ಹೌದು

7

ಹೆಸರುಕಾಳಿನ ತಿನಿಸು ತಂಪೂ ಹೌದು, ರುಚಿಯೂ ಹೌದು

Published:
Updated:
Deccan Herald

ಹೆಸರುಕಾಳಿನ ದೋಸೆ (ಪೆಸರಟ್ಟು)

ಬೇಕಾಗುವ ಸಾಮಗ್ರಿಗಳು: ಹೆಸರುಕಾಳು – 2ಕಪ್, ಅಕ್ಕಿಹಿಟ್ಟು – 4-5ಚಮಚ, ಶುಂಠಿ – 1ಸಣ್ಣ ತುಂಡು, ಹಸಿಮೆಣಸು – 2, ಇಂಗು –ಸ್ವಲ್ಪ, ಕೊತ್ತಂಬರಿಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ, ಎಣ್ಣೆ – ಸ್ವಲ್ಪ, ಈರುಳ್ಳಿ – 1

ತಯಾರಿಸುವ ವಿಧಾನ: 8 ಗಂಟೆಗಳ ಕಾಲ ನೆನೆಸಿದ ಹೆಸರುಕಾಳು ಅಥವಾ ಮೊಳಕೆ ಬಂದ ಕಾಳನ್ನು ಶುಂಠಿ, ಹಸಿಮೆಣಸು, ಉಪ್ಪು, ಇಂಗು, ಕೊತ್ತಂಬರಿ ಸೊಪ್ಪು, ನೀರು ಎಲ್ಲವನ್ನು ಹಾಕಿ ಮಿಕ್ಸಿಯಲ್ಲಿ ದೋಸೆ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿರಿ. ನಂತರ ಕಾವಲಿಗೆ ಎಣ್ಣೆ ಸವರಿ ಅದು ಕಾದ ನಂತರ ದೋಸೆ ಹೊಯ್ದು ಅದರ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಉದುರಿಸಿ. ನಂತರ ದೋಸೆಯನ್ನು ಮಗುಚಿ ಹಾಕಿ ಎರಡೂ ಕಡೆ ಕಾಯಿಸಿ. ಕಾಯಿಚಟ್ನಿಯೊಂದಿಗೆ ಸವಿಯಿರಿ. 

ಹೆಸರುಕಾಳಿನ ಪಕೋಡ

ಬೇಕಾಗುವ ಸಾಮಗ್ರಿಗಳು: ಹೆಸರುಕಾಳು – 1ಕಪ್ , ಅಕ್ಕಿಹಿಟ್ಟು - 2ಚಮಚ, ಕೊತ್ತಂಬರಿಸೊಪ್ಪು - ಸ್ವಲ್ಪ, ಕರಿಬೇವು - 4-5ಎಸಳು , ಹಸಿಮೆಣಸು - 2-3, ಶುಂಠಿ - 1ಇಂಚು, ಸಣ್ಣಗೆ ಹೆಚ್ಚಿದ ಪುದಿನಾ – ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸೋಡ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: 7-8 ಗಂಟೆಗಳ ಕಾಲ ನೆನೆಸಿದ ಹೆಸರುಕಾಳು ಅಥವಾ ಮೊಳಕೆ ಬಂದ ಹೆಸರುಕಾಳನ್ನು ಮಿಕ್ಸಿಯಲ್ಲಿ ತರಿತರಿಯಾಗಿ ನೀರು ಹಾಕದೆ ರುಬ್ಬಿಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಕೊತ್ತಂಬರಿಸೊಪ್ಪು, ಪುದಿನಾ, ಹಸಿಮೆಣಸು, ಕರಿಬೇವು, ಶುಂಠಿ, ಉಪ್ಪು, ಸೋಡ, ಅಕ್ಕಿಹಿಟ್ಟು ಎಲ್ಲವನ್ನು ಹಾಕಿ ನೀರು ಹಾಕದೆ ಕಲಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ.

***

ಹೆಸರುಕಾಳಿನ ನುಚ್ಚಿನುಂಡೆ

ಬೇಕಾಗುವ ಸಾಮಗ್ರಿಗಳು: 8 ಗಂಟೆಗಳ ಕಾಲ ನೆನೆಸಿದ ಹೆಸರುಕಾಳು ಅಥವಾ ಮೊಳಕೆ ಬಂದ ಹೆಸರುಕಾಳು – 2ಕಪ್, ಕಾಯಿತುರಿ – 1ಕಪ್, ಶುಂಠಿ – 1ಇಂಚು, ಹಸಿಮೆಣಸು – 3-4, ಕೊತ್ತಂಬರಿಸೊಪ್ಪು – ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು , ಸ್ವಲ್ಪ ಇಂಗು, 4-5 ಎಸಳು ಕರಿಬೇವು.

ತಯಾರಿಸುವ ವಿಧಾನ: ನೆನೆಸಿದ ಅಥವಾ ಮೊಳಕೆ ಬಂದ ಹೆಸರುಕಾಳನ್ನು ನೀರು ಹಾಕದೆ ಕಾಯಿತುರಿ, ಹಸಿಮೆಣಸು, ಶುಂಠಿ, ಇಂಗು, ಉಪ್ಪು ಎಲ್ಲವನ್ನು ಹಾಕಿ ಮಿಕ್ಸಿಯಲ್ಲಿ ಒಂದು ಸುತ್ತು ತಿರುಗಿಸಿ. ಹೆಸರುಕಾಳು ಪೂರ್ತಿ ನುಣ್ಣಗಾಗಬಾರದು. ಹೀಗೆ ರುಬ್ಬಿದ ಮಿಶ್ರಣವನ್ನು ದೊಡ್ಡದೊಡ್ಡ ಉಂಡೆಗಳನ್ನಾಗಿ ಕಟ್ಟಿ, ಇಡ್ಲಿ ಸ್ಟ್ಯಾಂಡಿನಲ್ಲಿ ಅಥವಾ ಕುಕ್ಕರ್‌ನಲ್ಲಿ ಎರಡು ಲೋಟ ನೀರು ಹಾಕಿ ಅದರ ಮೇಲೆ ಅಗಲವಾದ ಪಾತ್ರೆ ಇಟ್ಟು ಅದರಲ್ಲಿ ಈ ಉಂಡೆಗಳನ್ನಿಟ್ಟು 15 ನಿಮಿಷಗಳ ಕಾಲ ಬೇಯಿಸಿದರೆ ರುಚಿಕರವಾದ ಹೆಸರುಕಾಳು ನುಚ್ಚಿನುಂಡೆ ತಯಾರು. ಚಟ್ನಿಯೊಂದಿಗೆ ಅಥವಾ ಸಾಸ್ ಜೊತೆ ಸವಿಯಬಹುದು.

ಮೊಳಕೆ ಬರಿಸಿದ ಹೆಸರುಕಾಳಿನ ಕೋಸಂಬರಿ

ಬೇಕಾಗುವ ಸಾಮಗ್ರಿಗಳು: ಹೆಸರುಕಾಳು – 100ಗ್ರಾಂ, ಕಾಯಿತುರಿ – ಸ್ವಲ್ಪ, ಕ್ಯಾರೆಟ್ ತುರಿ – ಸ್ವಲ್ಪ, ಸಣ್ಣಗೆ ಹೆಚ್ಚಿದ ಕೊತ್ತಂಬರಿಸೊಪ್ಪು – ಸ್ವಲ್ಪ, ಉದ್ದಕೆ ಸಿಗಿದ ಹಸಿಮೆಣಸು – 2, ಉಪ್ಪು ರುಚಿಗೆ – ತಕ್ಕಷ್ಟು, ಸಕ್ಕರೆ – ಸ್ವಲ್ಪ, ನಿಂಬೆರಸ – ಸ್ವಲ್ಪ, ಒಗ್ಗರಣೆಗೆ ಸ್ವಲ್ಪ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಒಣಮೆಣಸು, 2ಎಸಳು ಕರಿಬೇವಿನ ಸೊಪ್ಪು.

ತಯಾರಿಸುವ ವಿಧಾನ: ಮೊದಲು ಹೆಸರುಕಾಳನ್ನು ಚೆನ್ನಾಗಿ ತೊಳೆದು ಸಾಕಷ್ಟು ನೀರು ಹಾಕಿ 8 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಇದರ ನೀರನ್ನು ಚೆನ್ನಾಗಿ ಬಸಿದು ಒಂದು ಪಾತ್ರೆಯಲ್ಲಿ 10-12 ಗಂಟೆಗಳ ಕಾಲ ಮುಚ್ಚಿಡಬೇಕು. ಹೆಸರುಕಾಳು ಚೆನ್ನಾಗಿ ಮೊಳಕೆ ಬಂದಿರುತ್ತದೆ.

ಈ ಮೊಳಕೆ ಬಂದ ಕಾಳಿಗೆ ಒಗ್ಗರಣೆ ಸಾಮಾನುಗಳನ್ನು ಹೊರತು ಪಡಿಸಿ ಉಳಿದೆಲ್ಲ ಸಾಮಗ್ರಿಗಳನ್ನು ಸೇರಿಸಿ ಮೇಲೊಂದು ಒಗ್ಗರಣೆ ಕೊಟ್ಟರೆ ಕೋಸಂಬರಿ ತಯಾರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !