ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಕ್ಕೂ ಹಿತ ಮಟನ್, ಚಿಕನ್‌ ಸೂಪ್‌

Last Updated 4 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
"ಚಿಕನ್ ನೂಡಲ್ಸ್ ಸೂಪ್‌"

ಚಳಿಗಾಲದಲ್ಲಿ ಬಿಸಿಯಾದ ಹಾಗೂ ಖಾರದ ಖಾದ್ಯಗಳನ್ನು ತಿನ್ನುವುದು ಇಷ್ಟವಾಗುತ್ತದೆ. ಅದರಲ್ಲೂ ಬಿಸಿ ಬಿಸಿ ಸೂಪ್‌ ಅಂತೂ ಚಳಿಗಾಲಕ್ಕೆ ಹೇಳಿ ಮಾಡಿಸಿದ್ದು. ಮಾಂಸಾಹಾರಿಗಳ ನೆಚ್ಚಿನ ಮಟನ್ ಕಾಲು ಸೂಪ್‌ ಹಾಗೂ ಚಿಕನ್ ನೂಡಲ್ಸ್‌ಗಳನ್ನು ಮನೆಯಲ್ಲೂ ಸುಲಭವಾಗಿ ತಯಾರಿಸಬಹುದು. ಇದನ್ನು ಬೇಗನೆ ಸುಲಭವಾಗಿ ತಯಾರಿಸಬಹುದು.

ಚಿಕನ್ ನೂಡಲ್ಸ್ ಸೂಪ್‌
ಬೇಕಾಗುವ ಸಾಮಗ್ರಿಗಳು:
ಆಲಿವ್ ಎಣ್ಣೆ – 2 ಟೇಬಲ್ ಚಮಚ, ಚಿಕನ್‌ ತುಂಡು – 1 ಕಪ್‌ (ಮೂಳೆ ಹಾಗೂ ಚರ್ಮ ರಹಿತ), ಕೋಷರ್ ಉಪ್ಪು, ಕಾಳುಮೆಣಸು ಪುಡಿ, ಒಣಗಿದ ಒರೆಗಾನೊ – 1 ಟೀ ಚಮಚ, ಈರುಳ್ಳಿ – 1 ದೊಡ್ಡದು (ಕತ್ತರಿಸಿದ್ದು), ಕ್ಯಾರೆಟ್‌ – 3 ದೊಡ್ಡದು (ತೆಳ್ಳಗೆ ಸೀಳಿದ್ದು), ಕೊತ್ತಂಬರಿ ಸೊಪ್ಪಿನ ದಂಟು – ಸ್ವಲ್ಪ, ಬೆಳ್ಳುಳ್ಳಿ – 2 ಎಸಳು (ಜಜ್ಜಿದ್ದು), ಚಿಕನ್ ಬ್ರಾಥ್‌ – ಸ್ವಲ್ಪ, ನೀರು – 3 ಕಪ್‌, ದಾಲ್ಚಿನ್ನಿ ಎಲೆ– 1, ನೂಡಲ್ಸ್ – 1 ಕಪ್‌, ನಿಂಬೆರಸ – ಸ್ವಲ್ಪ

ತಯಾರಿಸುವ ವಿಧಾನ: ದಪ್ಪತಳದ ಪಾತ್ರೆಯೊಂದರಲ್ಲಿ 1 ಟೇಬಲ್ ಚಮಚ ಎಣ್ಣೆ ಬಿಸಿ ಮಾಡಿ. ಅದಕ್ಕೆ ಚಿಕನ್‌ ತುಂಡು, ಒರೆಗಾನೊ, ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ. 10 ನಿಮಿಷ ಬೇಯಿಸಿ. ನಂತರ ಚಿಕನ್‌ ತುಂಡುಗಳನ್ನು ಪಾತ್ರೆಯಿಂದ ಹೊರ ತೆಗೆದು 10 ನಿಮಿಷ ಹಾಗೇ ಇಡಿ. ಅದನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಕತ್ತರಿಸಿ. ಒಲೆಯ ಮೇಲಿರುವ ಮಿಶ್ರಣಕ್ಕೆ 2 ಚಮಚ ಚಿಕನ್ ಬ್ರಾಥ್‌ ಸೇರಿಸಿ ಮಿಶ್ರಣ ಮಾಡಿ. ನಂತರ ನೀರು ಸ್ವಲ್ಪ ಕಡಿಮೆಯಾಗುವವರೆಗೂ ಕುದಿಸಿ.

ಬೇರೊಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಅದಕ್ಕೆ ಕ್ಯಾರೆಟ್‌, ಕೊತ್ತಂಬರಿ ದಂಟು, ಉಪ್ಪು ಹಾಗೂ ಕಾಳುಮೆಣಸು ಸೇರಿಸಿ ಮೃದುವಾಗುವವರೆಗೂ ಬೇಯಿಸಿ. ಅದಕ್ಕೆ ಬೆಳ್ಳುಳ್ಳಿ ಸೇರಿಸಿ. ನಂತರ ನೀರು, ದಾಲ್ಚಿನ್ನಿ ಎಲೆ ಸೇರಿಸಿ ಮತ್ತೆ 15 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳಮೆಣಸಿನ ಪುಡಿ ಸೇರಿಸಿ ದೊಡ್ಡ ಉರಿಯಲ್ಲಿ ಕುದಿಸಿ. ಅದಕ್ಕೆ ನೂಡಲ್ಸ್ ಸೇರಿಸಿ. ಮತ್ತೆ 7 ನಿಮಿಷ ಕುದಿಸಿ. ನಂತರ ದಾಲ್ಚಿನ್ನಿ ಎಲೆಯನ್ನು ತೆಗೆಯಿರಿ, ಅದಕ್ಕೆ ಮೇಲಿರುವ ಬೇಯಿಸಿಕೊಂಡ ಚಿಕನ್‌, ಉಳಿದ ಮಿಶ್ರಣ ಹಾಗೂ ನಿಂಬೆರಸ ಸೇರಿಸಿ ಪುನಃ ಕುದಿಸಿ.

ಚಿಕನ್ ನೂಡಲ್ಸ್ ಸೂಪ್‌

ಮಟನ್ ಕಾಲು ಸೂಪ್‌
ಬೇಕಾಗುವ ಸಾಮಗ್ರಿಗಳು
: ಕುರಿ ಕಾಲು – 6, ಉಪ್ಪು – ರುಚಿಗೆ, ಶುಂಠಿ – ಹೆಚ್ಚಿದ್ದು ಸಣ್ಣ ತುಂಡು, ಕಾಳುಮೆಣಸು – 6, ನೀರು – 3 ಲೋಟ, ಎಣ್ಣೆ – 1 ಟೇಬಲ್‌ ಚಮಚ, ಈರುಳ್ಳಿ – ಮಧ್ಯಮ ಗಾತ್ರದ್ದು 2, ಹಸಿಮೆಣಸು – 2 (ಉದ್ದಕ್ಕೆ ಸೀಳಿದ್ದು), ಶುಂಠಿ ಪೇಸ್ಟ್ – 1 ಟೇಬಲ್ ಚಮಚ, ಕಾಳುಮೆಣಸಿನ ಪುಡಿ – 1/2 ಟೀ ಚಮಚ, ಪುದಿನಸೊಪ್ಪು – 2 ಟೇಬಲ್ ಚಮಚ (ಹೆಚ್ಚಿದ್ದು), ಕೊತ್ತಂಬರಿ ಸೊಪ್ಪು – 2 ಟೇಬಲ್ ಚಮಚ, ಕಾರ್ನ್‌ಫ್ಲೋರ್‌ – 1 ಟೇಬಲ್ ಚಮಚ

ತಯಾರಿಸುವ ವಿಧಾನ: ಮೊದಲು ಕುರಿ ಕಾಲುಗಳನ್ನು 5ರಿಂದ 6 ಬಾರಿ ಚೆನ್ನಾಗಿ ತೊಳೆದುಕೊಳ್ಳಿ. ಪಾತ್ರೆಯಲ್ಲಿ ಕುರಿ ಕಾಲು, ಉಪ್ಪು, ಕಾಳುಮೆಣಸು ಹಾಗೂ ಶುಂಠಿ ಹಾಕಿ ಅದಕ್ಕೆ ನೀರು ಸೇರಿಸಿ. ದೊಡ್ಡ ಉರಿಯಲ್ಲಿ 45 ನಿಮಿಷಗಳ ಕಾಲ ಬೇಯಿಸಿ.

ಸೂಪ್‌ ತಯಾರಿಸಲು: ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಉದ್ದಕ್ಕೆ ಕತ್ತರಿಸಿಕೊಂಡ ಹಸಿಮೆಣಸು ಹಾಗೂ ಶುಂಠಿ ಪೇಸ್ಟ್ ಸೇರಿಸಿ ಕೆಲ ನಿಮಿಷ ಕೈಯಾಡಿಸಿ. ನಂತರ ಮೊದಲೇ ಬೇಯಿಸಿಕೊಂಡ ಸಾಮಗ್ರಿಗಳನ್ನು ಸೇರಿಸಿ, ಬೇಕಾದರೆ ಸ್ವಲ್ಪ ನೀರು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಪುದಿನಸೊಪ್ಪು, ಕೊತ್ತಂಬರಿಸೊಪ್ಪು, ಕಾಳುಮೆಣಸಿನ ಪುಡಿ ಸೇರಿಸಿ. ಒಂದು ಸಣ್ಣ ಬೌಲ್‌ಗೆ ಕಾರ್ನ್‌ಫ್ಲೋರ್‌ ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಒಲೆಯ ಮೇಲಿರುವ ಪಾತ್ರೆಗೆ ಹಾಕಿ. ಚೆನ್ನಾಗಿ ತಿರುಗಿಸಿ. ನಂತರ ಮುಚ್ಚಳ ಮುಚ್ಚಿ ಮತ್ತೆ ಸಣ್ಣ ಉರಿಯಲ್ಲಿ ಹದಿನೈದು ನಿಮಿಷ ಕುದಿಸಿ. ಬಿಸಿ ಇರುವಾಗಲೇ ಕುಡಿಯಲು ಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT