ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳದ ರೊಟ್ಟಿಗೆ ಎಣ್ಣೆಗಾಯಿ, ಸಂಜೆ ಸ್ನ್ಯಾಕ್ಸ್‌ಗೆ ಮದ್ದೂರು ವಡೆ

Last Updated 19 ನವೆಂಬರ್ 2020, 15:23 IST
ಅಕ್ಷರ ಗಾತ್ರ
ADVERTISEMENT
""

ಮದ್ದೂರು ವಡೆ

ಮೈದಾಹಿಟ್ಟು, ಅಕ್ಕಿಹಿಟ್ಟು ಮತ್ತು ಗೋಧಿ ರವಾದ ಹದವಾದ ಮಿಶ್ರಣ, ಅದಕ್ಕೆ ಹುರಿದ ಈರುಳ್ಳಿ, ಕರಿಬೇವಿನ ಎಲೆಯ ಚೂರುಗಳು ಸೇರಿಸಿ ಎಣ್ಣೆಯಲ್ಲಿ ಕರಿದ ಮದ್ದೂರು ವಡಾದ ಸವಿಯನ್ನು ತಿಂದವರೇ ಬಲ್ಲರು. ಬೆಂಗಳೂರು ಮತ್ತು ಮೈಸೂರು ನಡುವೆ ಬರುವ ಮಂಡ್ಯ ಜಿಲ್ಲೆಯ ತಾಲ್ಲೂಕು ಮದ್ದೂರು. ಆ ಭಾಗದಲ್ಲಿ ರೈಲ್ವೆಯಲ್ಲಿ ಓಡಾಡುವ ಪ್ರತಿಯೊಬ್ಬರೂ ಈ ವಡೆಯ ರುಚಿ ನೋಡಿರುತ್ತಾರೆ.
ಬೇಕಾಗುವ ಸಾಮಗ್ರಿಗಳು: ರವೆ – 1 ಕಪ್‌, ಮೈದಾಹಿಟ್ಟು – 1 ಕಪ್‌, ಅಕ್ಕಿಹಿಟ್ಟು – 1/4 ಕಪ್‌, ಗೋಡಂಬಿ – 8 ರಿಂದ 10 (ಜಜ್ಜಿಕೊಂಡಿದ್ದು), ಹಸಿಮೆಣಸು – 6 ರಿಂದ 7 (ಸಣ್ಣಗೆ ಕತ್ತರಿಸಿಕೊಂಡಿದ್ದು), ಕರಿಬೇವು – 2 (ಕತ್ತರಿಸಿಕೊಂಡಿದ್ದು), ಶುಂಠಿ – 1 ಚಮಚ (ಕತ್ತರಿಸಿಕೊಂಡಿದ್ದು), ಎಳ್ಳು – 1 ಚಮಚ, ಎಣ್ಣೆ – 3 ಚಮಚ (ಕಾಯಿಸಿಕೊಂಡಿದ್ದು), ಈರುಳ್ಳಿ – 2 (ಕತ್ತರಿಸಿಕೊಂಡಿದ್ದು), ಶೇಂಗಾ – 2 ಚಮಚ (ಪುಡಿ ಮಾಡಿಕೊಂಡಿದ್ದು), ಉಪ್ಪು – ರುಚಿಗೆ

ತಯಾರಿಸುವ ವಿಧಾನ: ದಪ್ಪ ತಳದ ಪ್ಯಾನ್‌ವೊಂದರಲ್ಲಿ ಎಣ್ಣೆಯನ್ನು ಕಾಯಲು ಬಿಡಿ. ಇನ್ನೊಂದು ಪಾತ್ರೆಯಲ್ಲಿ ರವೆ, ಮೈದಾಹಿಟ್ಟು ಅಕ್ಕಿಹಿಟ್ಟು, ಶೇಂಗಾಪುಡಿ, ಹಸಿಮೆಣಸು, ಈರುಳ್ಳಿ, ಗೋಡಂಬಿ, ಎಳ್ಳು, ಕರಿಬೇವು, ಉಪ್ಪು, ಕಾಯಿಸಿಕೊಂಡ ಎಣ್ಣೆ ಹಾಕಿ ಹಾಗೂ ಸ್ವಲ್ಪ ನೀರು ಸೇರಿಸಿಕೊಂಡು ಉದ್ದಿನವಡೆಯ ಹದಕ್ಕೆ ಕಲೆಸಿಟ್ಟುಕೊಳ್ಳಿ. ಅದನ್ನು 15 ನಿಮಿಷ ಹಾಗೆ ಬಿಡಿ. ಹಿಟ್ಟನ್ನು ಅಂಗೈ ಅಗಲಕ್ಕೆ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಬಿಡಿ. (ಕೈಗೆ ಹಿಟ್ಟು ಅಂಟದಿರಲು ಆಗಾಗ ಕೈಗೆ ನೀರು ಸವರಿಕೊಳ್ಳುತ್ತಾ ಇರಿ). ಗ್ಯಾಸ್ ಅನ್ನು ಮಧ್ಯಮ ಉರಿಯಲ್ಲಿ ಇರಿಸಿಕೊಂಡು ಕಾಯಿಸಿ. ಎರಡೂ ಕಡೆ ಕಂದುಬಣ್ಣ ಬರುವವರೆಗೂ ಕರಿಯಿರಿ. ಇದು ತೆಂಗಿನಕಾಯಿ ಚಟ್ನಿ ಅಥವಾ ಕೆಚಪ್ ಜೊತೆ ತಿನ್ನಲು ಒಳ್ಳೆಯ ಕಾಂಬಿನೇಷನ್‌.

ಎಣ್ಣೆಗಾಯಿ

ಉತ್ತರ ಕರ್ನಾಟಕದ ಈ ಜನಪ್ರಿಯ ಖಾದ್ಯದ ಬಗ್ಗೆ ಯಾರು ತಾನೇ ಕೇಳಿಲ್ಲ ಹೇಳಿ. ಅಲ್ಲಿಯವರ ನಿತ್ಯದ ಊಟ ಇತರ ಕಡೆಯವರಿಗೆ ಸ್ಪೆಷಲ್‌. ‘ಜವಾರಿ ರೊಟ್ಟಿ– ಎಣ್‌ಗಾಯಿ ಹೊಡದ್ರ ರಾತ್ರಿಮಟ ಮತ್ತೇನ್‌ ಬೇಕಾಂಗಿಲ್ಲ ನೋಡ್‌’ ಎಂಬ ಮಾತು ಅಲ್ಲಿ ಸಾಮಾನ್ಯ. ಉತ್ತಮ ಗುಣಮಟ್ಟದ ಬಿಳಿ ಜೋಳದ ಹಿಟ್ಟಿನಿಂದ ಮಾಡಿದ ಹೂವಿನಂತಹ ರೊಟ್ಟಿ, ಹೆಚ್ಚಿನವರು ಕಟಕ ರೊಟ್ಟಿ ಇಷ್ಟಪಡುತ್ತಾರೆ, ಒಮ್ಮೆಗೇ 8–10 ಬೇಕಾದರೂ ತಿನ್ನಬಹುದು. ಬದನೆಕಾಯಿ ಎಣ್‌ಗಾಯಿ, ಜೊತಿಗೆ ಪುಂಡಿ ಚಟ್ನಿ, ತಟ್ಟೆ ಬದಿಗೆ ಮೆಂತ್ಯ ಸೊಪ್ಪು, ಹಸಿ ಈರುಳ್ಳಿ, ಮೂಲಂಗಿ ಚೂರು ಇದ್ದರೆ ಆ ಊಟ ಅಮೃತದಂತೆ.

ಎಣ್ಣೆಗಾಯಿ

ಬೇಕಾಗುವ ಸಾಮಗ್ರಿಗಳು: ದುಂಡನೆ ಬದನೆಕಾಯಿ – 10, ಸಾಸಿವೆ – 1 ಟೇಬಲ್ ಚಮಚ, ಕರಿಬೇವು, ಮೆಂತ್ಯೆ – 1/2 ಟೇಬಲ್ ಚಮಚ, ಈರುಳ್ಳಿ – 1, ಹುಣಸೆರಸ – 1/4 ಕಪ್‌, ಬೆಲ್ಲ – 1 ಚಮಚ, ಕೊತ್ತಂಬರಿ – ಸ್ವಲ್ಪ, ಎಳ್ಳು – 2 ಚಮಚ, ಒಣಕೊಬ್ಬರಿ – 1/2 ಕಪ್‌, ಶೇಂಗಾ – 1/4 ಕಪ್‌, ಮೆಣಸಿನಪುಡಿ – 1 ಚಮಚ, ಉಪ್ಪು – ರುಚಿಗೆ

ಕರಿ ತಯಾರಿಸಲು: ಈರುಳ್ಳಿ – 1, ಟೊಮೆಟೊ – 2, ಶುಂಠಿ – 1/2 ಚಮಚ, ಬೆಳ್ಳುಳ್ಳಿ – 1/2 ಚಮಚ, ಅರಿಸಿನ ಪುಡಿ– 1/2 ಚಮಚ, ಕೆಂಪುಮೆಣಸಿನ ಪುಡಿ – 1/2 ಚಮಚ, ಕೊತ್ತಂಬರಿ ಪುಡಿ – 1 ಚಮಚ, ಜೀರಿಗೆಪುಡಿ – 1/4 ಚಮಚ, ಗರಂ ಮಸಾಲ – 1/2 ಚಮಚ, ಉಪ್ಪು – ರುಚಿಗೆ

ತಯಾರಿಸುವ ವಿಧಾನ: ಪ್ಯಾನ್ ಬಿಸಿ ಮಾಡಿಕೊಂಡು ಅದರಲ್ಲಿ ಎಳ್ಳು, ಶೇಂಗಾ, ತೆಂಗಿನತುರಿ ಎಲ್ಲವನ್ನೂ ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಮಿಕ್ಸಿ ಜಾರಿಗೆ ಹುರಿದುಕೊಂಡ ಸಾಮಗ್ರಿಗಳು, ಕೆಂಪುಮೆಣಸಿನ ಪುಡಿ, ಉಪ್ಪು ಸೇರಿಸಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಆ ಪುಡಿಯನ್ನು ಚೆನ್ನಾಗಿ ತೊಳೆದು, ಒರೆಸಿ ಮಧ್ಯ ಭಾಗಕ್ಕೆ ತೂತು ಮಾಡಿಕೊಂಡಿದ್ದ ಬದನೆಕಾಯಿಯೊಳಗೆ ಸೇರಿಸಿ. ಪುಡಿ ನಾಲ್ಕು ಭಾಗಕ್ಕೆ ಅಂಟಿಕೊಳ್ಳುವಂತಿರಲಿ. ಇನ್ನೊಂದು ಪ್ಯಾನ್‌ನಲ್ಲಿ 2 ಚಮಚ ಎಣ್ಣೆ ಬಿಸಿಮಾಡಿ. ಅದರಲ್ಲಿ ತಯಾರಿಸಿಕೊಂಡ ಬದನೆಕಾಯಿ ಇಡಿ. ಮೇಲಿನಿಂದಲೂ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ.

ಕರಿ ತಯಾರಿಸಲು: ಎಣ್ಣೆ ಬಿಸಿ ಮಾಡಿಕೊಂಡು ಕತ್ತರಿಸಿಟ್ಟುಕೊಂಡ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಹಾಗೂ ಟೊಮೆಟೊ ಸೇರಿಸಿ ಟೊಮೆಟೊ ಮೆತ್ತಗಾಗುವವರೆಗೂ ಬೇಯಿಸಿ. ಅದಕ್ಕೆ ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಮೆಣಸಿನ ಪುಡಿ, ಅರಿಸಿನ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತೆ ಬೇಯಿಸಿ. ಅದನ್ನು ತಣ್ಣಗಾಗಲು ಬಿಟ್ಟು ತಣ್ಣಗಾದ ಮೇಲೆ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಅದಕ್ಕೆ ಸಾಸಿವೆ, ಜೀರಿಗೆ, ಮೆಂತ್ಯೆ, ಕತ್ತರಿಸಿಕೊಂಡ ಈರುಳ್ಳಿ, ಕರಿಬೇವು ಹಾಗೂ ರುಬ್ಬಿಕೊಂಡ ಮಿಶ್ರಣ ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಮೊದಲು ಬದನೆಕಾಯಿಗೆ ತುಂಬಲು ಇರಿಸಿಕೊಂಡ ಮಿಶ್ರಣವನ್ನೂ ಹಾಕಿ ಚೆನ್ನಾಗಿ ಕಲೆಸಿ, ಅದಕ್ಕೆ ಹುಣಸೆರಸ ಸೇರಿಸಿ ಮಿಶ್ರಣ ಮಾಡಿ ಕುದಿ ಬರಿಸಿ. ಕುದಿಯುತ್ತಿರುವ ಮಸಾಲೆಗೆ ಬೇಯಿಸಿಕೊಂಡ ಬದನೆಕಾಯಿ ಹಾಕಿ. ಅದಕ್ಕೆ ಒಂದು ಚಮಚ ಬೆಲ್ಲ ಸೇರಿಸಿ. ಚೆನ್ನಾಗಿ ಕುದಿಸಿ. ಇದು ಚಪಾತಿ, ರೊಟ್ಟಿಯಲ್ಲದೇ ಅನ್ನದ ಜೊತೆಗೂ ತಿನ್ನಲು ಚೆನ್ನಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT