ಭಾನುವಾರ, ಸೆಪ್ಟೆಂಬರ್ 20, 2020
24 °C

ಕಂಚಿಕಾಯಿ ಹುಳಿಯಲ್ಲೂ ಮಾಡಬಹುದು ಸಿಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಳಿ ಎಂದಾಕ್ಷಣ ಬಾಯಲ್ಲಿ ನೀರೂರುವುದು ಮನುಷ್ಯ ಸಹಜ ಕ್ರಿಯೆ. ಆದರೆ ಅನೇಕರಿಗೆ ಹುಳಿ ಪದಾರ್ಥಗಳೆಂದರೆ ಅಷ್ಟಕಷ್ಟೆ. ಇನ್ನೂ ಕೆಲವರಿಗೆ ಹುಳಿಹಣ್ಣು, ಹುಳಿ ಅಂಶ ಹೊಂದಿರುವ ಹಣ್ಣು, ಕಾಯಿಯಿಂದ ಮಾಡಿದ ಖಾದ್ಯಗಳೆಂದರೆ ಬಲು ಮೆಚ್ಚು. ನಿಂಬೆಕಾಯಿ, ಮೂಸಂಬಿ, ಕಂಚಿಕಾಯಿ (ಹೇರಳೆಕಾಯಿ), ದುಡ್ಲಕಾಯಿ ಹೀಗೆ ಹುಳಿ ಅಂಶಗಳಿರುವ ಖಾದ್ಯಗಳಿಂದ ಚಿತ್ರಾನ್ನ, ಉಪ್ಪಿನಕಾಯಿ, ರಸಂ ತಯಾರಿಸಬಹುದು. ಅದು ಬಾಯಿಗೆ ಒಗರಾದರೂ ದೇಹಕ್ಕೆ ಹಿತ. ಅದರಲ್ಲೂ ಕಂಚಿಕಾಯಿಯಿಂದ ಬಗೆ ಬಗೆ ಅಪ್ಪೆಹುಳಿ, ಸಾಸಿವೆ, ತಂಬುಳಿಗಳನ್ನು ತಯಾರಿಸಬಹುದು ಎನ್ನುತ್ತಾರೆ ಕಲ್ಪನಾ ಪ್ರಭಾಕರ ಸೋಮನಳ್ಳಿ

 ಸಾಸಿವೆ

ಬೇಕಾಗುವ ಸಾಮಗ್ರಿಗಳು: ಕಾಯಿತುರಿ – 1/2 ಕಪ್‌, ಹುಳಿಗಂಚಿ – 1/2, ಸಿಹಿಮೊಸರು – 1 ಸೌಟು, ಸಾಸಿವೆ – 2 ಚಮಚ, ಕೊತ್ತಂಬರಿ – 1/4 ಚಮಚ, ಎಳ್ಳು – 1 ಚಮಚ, ಒಣಮೆಣಸಿನ ಚೂರು – 1-2, ಹಸಿಮೆಣಸು – 1-2, ಅರಿಸಿನ – 1/2 ಚಮಚ, ಇಂಗು.
ಒಗ್ಗರಣೆಗೆ: ಎಣ್ಣೆ – 2 ಚಮಚ, ಉದ್ದಿನಬೇಳೆ – 1/2 ಚಮಚ, ಸಾಸಿವೆ, ಒಣಮೆಣಸಿನ ಚೂರು – 2-3, ಕರಿಬೇವಿನ ಸೊಪ್ಪು – 4-5 ಎಸಳು, ರುಚಿಗೆ ಉಪ್ಪು, ಬೆಲ್ಲ,

ತಯಾರಿಸುವ ವಿಧಾನ: ಕಾಯಿತುರಿಯ ಜೊತೆ ಸಾಸಿವೆ, ಕೊತ್ತಂಬರಿ, ಎಳ್ಳು, ಒಣಮೆಣಸಿನ ಚೂರು, ಹಸಿಮೆಣಸು, ಅರಿಸಿನ, ಚಿಟಿಕೆ ಇಂಗು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಮೊಸರು ಉಪ್ಪು, ಬೆಲ್ಲ (ಸಿಹಿ ಬೇಕಿದ್ದರೆ ಜಾಸ್ತಿ ಹಾಕಬಹುದು)ಹಾಕಿ ಮೊಸರು ಬಜ್ಜಿಯ ಹದಕ್ಕೆ ಹದ ಮಾಡಿ. ಇದಕ್ಕೆ ಒಗ್ಗರಣೆ ಮಾಡಿದರೆ ರುಚಿಯಾದ ಸಾಸಿವೆ ಸಿದ್ಧ. ಅನ್ನದ ಜೊತೆ ತಿನ್ನಲು ಇದು ರುಚಿಯಾಗಿರುತ್ತದೆ. 

ಚಿತ್ರಾನ್ನ

ಬೇಕಾಗುವ ಸಾಮಗ್ರಿಗಳು: ಉದುರಾದ ಅನ್ನ- 1 ಬಟ್ಟಲು, ಹುಳಿಗಂಚಿ – 1/2, ಕಡ್ಲೆಬೀಜ- 15, ಕಾಯಿತುರಿ – 4-5 ಚಮಚ, ಒಗ್ಗರಣೆಗೆ ಉದ್ದಿನಬೇಳೆ –1 ಚಮಚ, ಕೆಂಪುಮೆಣಸು – 4-5 ಚೂರು, ಹಸಿಮೆಣಸು – 3-4ಚೂರು, ಅರಿಸಿನ – 1/4 ಚಮಚ, ಇಂಗು ಚೂರು, ಸಾಸಿವೆ – 1 ಚಮಚ, ಕರಿಬೇವಿನ ಎಸಳು – 8-10, ರುಚಿಗೆ ಉಪ್ಪು, ಸಕ್ಕರೆ – ಚಿಟಿಕೆ, ಕೊತ್ತಂಬರಿ ಸೊಪ್ಪು, ಒಗ್ಗರಣೆಗೆ ಎಣ್ಣೆ – 4-5 ಚಮಚ.

ತಯಾರಿಸುವ ವಿಧಾನ: ಒಂದು ಪಾತ್ರೆಗೆ 1 ಬಟ್ಟಲು (ಬೌಲ್) ಉದುರಾದ ಅನ್ನ ಹಾಕಿಕೊಳ್ಳಿ. ಒಂದು ಚಿಕ್ಕ ಲೋಟದಲ್ಲಿ ಚಿಟಿಕೆ ಉಪ್ಪು ಹಾಕಿ, ಕತ್ತರಿಸಿದ ಒಂದು ಭಾಗ ಹುಳಿಗಂಚಿ ಕಾಯಿಯನ್ನು ಹಿಂಡಿ ಬೀಜ ತೆಗೆದು ರಸ ಮಾತ್ರ ಇಟ್ಟುಕೊಳ್ಳಿ. ಒಗ್ಗರಣೆಗೆಂದು ಒಂದು ಪಾತ್ರೆಯನ್ನು ಒಲೆ ಮೇಲಿಟ್ಟು ಎಣ್ಣೆ ಹಾಕಿ. ಕಾದ ಮೇಲೆ ಮೊದಲು ಕಡ್ಲೆಬೀಜ ಹಾಕಿ ಸ್ವಲ್ಪ ಹುರಿದ ಮೇಲೆ ಉದ್ದಿನಬೇಳೆ, ಒಣಮೆಣಸಿನ ಚೂರು, ಹಸಿಮೆಣಸಿನ ಚೂರು, ಇಂಗು, ಕರಿಬೇವಿನ ಎಸಳು, ಅರಿಸಿನ, ಸಾಸಿವೆ ಹಾಕಿ ಚಟ್‍ಪಟ್ ಎಂದ ಮೇಲೆ ಕೆಳಗಿಳಿಸಿ. ಇದಕ್ಕೆ ಉಪ್ಪು, ಸಕ್ಕರೆ, ಹುಳಿಗಂಚಿ ರಸ ಹಾಕಿ ಸ್ವಲ್ಪ ಕೈಯಾಡಿಸಿ. ನಂತರ ಇದಕ್ಕೆ ಅನ್ನ, ಕಾಯಿತುರಿ ಹಾಕಿ ಚೆನ್ನಾಗಿ ಕಲಸಿ. ಕೊತ್ತಂಬರಿ ಸೊಪ್ಪನ್ನು ಹಾಕಿ ಕೈಯಾಡಿಸಿ. ಮತ್ತೊಮ್ಮೆ ಒಲೆ ಮೇಲೆ ಇಟ್ಟು ಸ್ವಲ್ಪ ಕೈಯಾಡಿಸಿ. ಬಿಸಿ ಬಂದ ಮೇಲೆ ಇಳಿಸಿಬಿಡಿ. ಬಿಸಿ ಬಿಸಿ ಚಿತ್ರಾನ್ನ ಬಾಯಿಗೆ ರುಚಿಯಾಗಿರುತ್ತದೆ.

ತಂಬುಳಿ

ಬೇಕಾಗುವ ಸಾಮಗ್ರಿಗಳು: ಹುಳಿಗಂಚಿ – 1/2, ಕಾಯಿತುರಿ – 1/4 ಲೋಟ,  ಉದ್ದಿನಬೇಳೆ – 1ಚಮಚ, ಎಳ್ಳು – 1ಚಮಚ, ಹಸಿಮೆಣಸು –1, ಕಡೆದ ಮಜ್ಜಿಗೆ – 1/2 ಲೋಟ ಒಗ್ಗರಣೆಗೆ: ಉದ್ದಿನ ಬೇಳೆ, ಒಣಮೆಣಸಿನ ಚೂರು, ಕರಿಬೇವು, ಸಾಸಿವೆ, ಇಂಗು, ಎಣ್ಣೆ – 2 ಚಮಚ, ರುಚಿಗೆ ಉಪ್ಪು, ಚಿಟಿಕೆ ಬೆಲ್ಲ.

ತಯಾರಿಸುವ ವಿಧಾನ: ಕಾಯಿತುರಿಗೆ ಹುರಿದ ಉದ್ದಿನಬೇಳೆ ಎಳ್ಳು, ಹಸಿಮೆಣಸು ಹಾಕಿ ನುಣ್ಣಗೆ ರುಬ್ಬಿ, ಇದಕ್ಕೆ ಉಪ್ಪು, ಕಡೆದ ಮಜ್ಜಿಗೆ ಚಿಟಿಕೆ ಬೆಲ್ಲ, ನೀರು ಹಾಕಿ ತಂಬುಳಿ ಹದ ಮಾಡಿಕೊಳ್ಳಿ. ಇದಕ್ಕೆ ಹುಳಿಗಂಚಿ ರಸ ಹಿಂಡಿ, ನಂತರ ಒಗ್ಗರಣೆಗೆ ಎಣ್ಣೆ ಕಾಯಿಸಿ ಉದ್ದಿನಬೇಳೆ, ಒಣಮೆಣಸಿನ ಚೂರುಗಳು, ಸಾಸಿವೆ, ಕರಿಬೇವು, ಇಂಗು ಹಾಕಿ ಒಗ್ಗರಿಸಿ. ಊಟದ ಜೊತೆ ತಂಬುಳಿ ಸಿದ್ಧ.

 

ಅಪ್ಪೆ ಹುಳಿ

ಬೇಕಾಗುವ ಸಾಮಗ್ರಿಗಳು: ನೀರು – 2-3 ಲೋಟ, ಹುಳಿಗಂಚಿ – 1, ಒಗ್ಗರಣೆಗೆ ಒಣಮೆಣಸು – 2, ಹಸಿಮೆಣಸು – 2-3, ಕರಿಬೇವಿನ ಎಸಳು – 4-5, ಸಾಸಿವೆ, ಉದ್ದಿನಬೇಳೆ, ಇಂಗು – ಸ್ವಲ್ಪ ಜಾಸ್ತಿ (ಒಂದು ಉದ್ದಿನ ಬೇಳೆ ಗಾತ್ರ) ಅರಿಸಿನ – ಚಿಟಿಕೆ, ಉಪ್ಪು, ಸಕ್ಕರೆ ಅಥವಾ ಬೆಲ್ಲ.

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಉಪ್ಪು ಹಾಕಿ ಕತ್ತರಿಸಿದ ಹುಳಿಗಂಚಿಯನ್ನು ಹಿಂಡಿ ಬೀಜ ತೆಗೆದುಬಿಡಿ. ಇದಕ್ಕೆ 2-3 ಲೋಟ ನೀರು ಬೆರೆಸಿ ಸ್ವಲ್ಪ (1 ಚಮಚ) ಕೊಬ್ಬರಿ ಎಣ್ಣೆ ಹಾಕಿ ಒಂದು ಹಸಿಮೆಣಸು ಕಿವುಚಿ. ಒಗ್ಗರಣೆಗೆ ಎಣ್ಣೆ ಹಾಕಿ ಉದ್ದಿನಬೇಳೆ, ಒಣಮೆಣಸಿನ ಚೂರುಗಳು, ಸಾಸಿವೆ, ಹಸಿಮೆಣಸು, ಚಿಟಿಕೆ ಅರಿಸಿನ, ಕರಿಬೇವು, ಇಂಗು ಹಾಕಿ ಸಾಸಿವೆ ಚಟಪಟ ಎಂದ ಮೇಲೆ ಹುಳಿ ಹಿಂಡಿದ ನೀರಿಗೆ ಹಾಕಿ ಪ್ಲೇಟು ಮುಚ್ಚಿಬಿಡಿ. ಕ್ಷಣ ಬಿಟ್ಟು ತೆಗೆದು ಒಗ್ಗರಣೆಯ ಮೆಣಸುಗಳಲ್ಲಿ ಕೆಲವು ಒಣಮೆಣಸನ್ನು ಹಿಸುಕಿ. ಉಪ್ಪು ಹುಳಿ ಖಾರ ಸರಿಯಾಗಿ ಇದ್ದರೆ ಅಪ್ಪೆಹುಳಿ ಅನ್ನಕ್ಕೆ ಚೆನ್ನಾಗಿರುತ್ತದೆ. ಜೀರ್ಣಕಾರಿ ಕೂಡ.

ಸಿಹಿ ಗೊಜ್ಜು

ಬೇಕಾಗುವ ಸಾಮಗ್ರಿಗಳು: ಹುಳಿಗಂಚಿ – 2, ಬೆಲ್ಲ – 1/2 ಲೋಟ, ಹುಣಸೆಹಣ್ಣಿನ ದಪ್ಪ ರಸ – 2-3 ಚಮಚ, ಅರಿಸಿನ – 1 ಚಮಚ, ಉಪ್ಪು, ಅಚ್ಚ ಖಾರದಪುಡಿ – 5-7 ಚಮಚ (ಖಾರ ಹಿಡಿಸುವಷ್ಟು) ಒಗ್ಗರಣೆಗೆ: ಉದ್ದಿನಬೇಳೆ, ಸಾಸಿವೆ, ಜೀರಿಗೆ, ಓಮ, ಇಂಗು ಕರಿಬೇವು, ಎಣ್ಣೆ

ತಯಾರಿಸುವ ವಿಧಾನ: ಮೊದಲು ಪಾತ್ರೆಗೆ ಸ್ವಲ್ಪ ಉಪ್ಪು ಹಾಕಿ ಹುಳಿಗಂಚಿಯನ್ನು ಸಿಪ್ಪೆ ಸಹಿತ ತುರಿದು ಅದಕ್ಕೆ ಅರಿಸಿನ ಹಾಕಿ ಇಟ್ಟುಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಉದ್ದಿನಬೇಳೆ, ಜೀರಿಗೆ, ಓಮ, ಇಂಗು ಕರಿಬೇವು ಎಲ್ಲ ಹಾಕಿ ಚಟ್ ಪಟ್ ಎಂದ ಮೇಲೆ ತುರಿದ ಹುಳಿಗಂಚಿ, ಅಚ್ಚ ಖಾರದ ಪುಡಿ, ಬೆಲ್ಲ, ಹುಣಸೆಹಣ್ಣಿನ ರಸ, ತಕ್ಕಷ್ಟು ಉಪ್ಪು ಹಾಕಿ ಅಂಟು ಬರುವಂತೆ ಕುದಿಸಿ. ಅನ್ನಕ್ಕೆ ನೆಂಚಿಕೊಳ್ಳಲು ಒಳ್ಳೆಯದು. ಇದು ಸ್ವಲ್ಪ ಕಹಿ ಅಂಶವನ್ನೂ ಹೊಂದಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದು.

ಹುಳಿಗಂಚಿ ಸಂಬಾರ ಅಪ್ಪೆ ಹುಳಿ

ಬೇಕಾಗುವ ಸಾಮಗ್ರಿಗಳು: ಹುಳಿಗಂಚಿಕಾಯಿ – 1, ಕಾಯಿತುರಿ – 1/2 ಕಪ್, ಓಮ – 1/4 ಚಮಚ, ಜೀರಿಗೆ – 1 ಚಮಚ, ಕೊತ್ತಂಬರಿ – 1 ಚಮಚ, ಸಾಸಿವೆ – 1/2 ಚಮಚ ಒಣಮೆಣಸು – 2–3, ಹಸಿಮೆಣಸು – 1–2, ಇಂಗು ಅಥವಾ ಬೆಳ್ಳುಳ್ಳಿ, ಒಗ್ಗರಣೆಗೆ: ಎಣ್ಣೆ ಸಾಸಿವೆ, ಕರಿಬೇವು, ಉದ್ದಿನಬೇಳೆ. ರುಚಿಗೆ ಉಪ್ಪು, ಚಿಟಿಕೆ ಬೆಲ್ಲ.

ತಯಾರಿಸುವ ವಿಧಾನ: ಪಾತ್ರೆಗೆ ಸ್ವಲ್ಪ ಉಪ್ಪು ಹಾಕಿ ಹುಳಿಗಂಚಿಯನ್ನು ಹಿಂಡಿಕೊಳ್ಳಿ. ಕಾಯಿತುರಿಯ ಜೊತೆ ಹಸಿಯಾದ ಕೊತ್ತಂಬರಿ, ಓಮ, ಸಾಸಿವೆ, ಜೀರಿಗೆ, ಒಣಮೆಣಸು, ಹಸಿಮೆಣಸು, (ಖಾರ ಬೇಕಾದಷ್ಟು) ಹಾಕಿ ರುಬ್ಬಿ ಹುಳಿ ಹಿಂಡಿದ ಪಾತ್ರೆಗೆ ಹಾಕಿ. ನಂತರ ಎಣ್ಣೆಯನ್ನು ಒಲೆಯ ಮೇಲಿಟ್ಟು ಉದ್ದಿನಬೇಳೆ, ಒಣಮೆಣಸಿನ ಚೂರು, ಬೆಳ್ಳುಳ್ಳಿ ಅಥವಾ ಇಂಗು, ಸಾಸಿವೆ, ಕರಿಬೇವಿನ ಎಸಳು ಹಾಕಿ ಚಟ್ ಪಟ್ ಎಂದ ಮೇಲೆ ಒಗ್ಗರಿಸಿ. ಚೆನ್ನಾಗಿ ಕಲೆಸಿ. ಅನ್ನದ ಜೊತೆ ಚೆನ್ನಾಗಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು