ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಬಗೆಹರಿದ ಆಂತರಿಕ ಬಂಡಾಯ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ: ಅಧಿಕೃತ ಅಭ್ಯರ್ಥಿ ಡಾ.ಶ್ರೀನಿವಾಸ್ ಬೆಂಬಲಕ್ಕೆ ನಿಂತ ಭಿನ್ನರು
Last Updated 28 ಏಪ್ರಿಲ್ 2018, 13:30 IST
ಅಕ್ಷರ ಗಾತ್ರ

ಶಿವಮೊಗ್ಗ:  ಮಾಜಿ ಶಾಸಕ ಕರಿಯಣ್ಣ ಪುತ್ರ ಡಾ.ಎಸ್‌.ಕೆ. ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಿದ್ದ ಹೈಕಮಾಂಡ್ ನಿರ್ಧಾರ ವಿರೋಧಿಸಿ ಬಂಡಾಯದ ಬಾವುಟ ಹಾರಿಸಿದ್ದ ಮೂವರನ್ನೂ ಓಲೈಸುವಲ್ಲಿ ಕಾಂಗ್ರೆಸ್ ಕೊನೆಗೂ ಯಶಸ್ವಿಯಾಗಿದೆ.

ಟಿಕೆಟ್‌ ಘೋಷಣೆಯ ನಂತರ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿತ್ತು. ಎನ್‌ಎಸ್‌ಯುಐ ಮೂಲಕ ಹೋರಾಟದ ಬದುಕಿಗೆ ನಾಂದಿ ಹಾಡಿದ್ದ ಭೋವಿ ಸಮಾಜದ ಮುಖಂಡ ಎಸ್‌. ರವಿಕುಮಾರ್ ಕಳೆದ 25 ವರ್ಷಗಳಿಂದ ಕಾಂಗ್ರೆಸ್‌ಗಾಗಿ ದುಡಿದಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡುವುದಾಗಿ ಪಕ್ಷ ಭರವಸೆ ನೀಡಿತ್ತು.

ಆದರೆ, ಕರಿಯಣ್ಣ ಅವರಿಗೆ ಇದೇ ಕೊನೆಯ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿ, ಅವರ ಮನವೊಲಿಸಲಾಗಿತ್ತು.

ಈ ಬಾರಿ ಅವರಿಗೆ ಟಿಕೆಟ್ ಖಚಿತ ಎಂದು ಕಾಂಗ್ರೆಸ್ ವಲಯದಲ್ಲೇ ಚರ್ಚೆಯಾಗಿತ್ತು. ಆದರೆ, ಟಿಕೆಟ್ ನೀಡಿದ್ದು ಮಾತ್ರ ಕರಿಯಣ್ಣ ಅವರ ಪುತ್ರ ಡಾ.ಶ್ರೀನಿವಾಸ್ ಅವರಿಗೆ. ಹಾಗಾಗಿ, ಪಕ್ಷದ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದ್ದ ರವಿಕುಮಾರ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

ಮತ್ತೊಂದೆಡೆ ನಿವೃತ್ತ ಐಎಎಸ್ ಅಧಿಕಾರಿ ಬಲದೇವಕೃಷ್ಣ ಅವರು ಹಲವು ವರ್ಷಗಳಿಂದ ಗ್ರಾಮಾಂತರ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದರು. ಟಿಕೆಟ್ ಖಚಿತ ಎಂಬ ಭರವಸೆಯನ್ನೂ ಇಟ್ಟುಕೊಂಡಿದ್ದರು.

ಟಿಕೆಟ್‌ ಕೈತಪ್ಪಿದ್ದು ಅವರಲ್ಲಿ ಎಷ್ಟು ಆಕ್ರೋಶ ಹುಟ್ಟಿಹಾಕಿತ್ತು ಎಂದರೆ ಕಾಂಗ್ರೆಸ್ ಅಭ್ಯರ್ಥಿ ಡಾ.ಶ್ರೀನಿವಾಸ್ ಅವರು ಸರ್ಕಾರಿ ವೈದ್ಯ ವೃತ್ತಿಗೆ ನೀಡಿದ ರಾಜೀನಾಮೆ ನಿಯಮ ಬಾಹಿರ ಎಂದು ದೂರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಕುರಿತು ವಿವರ ನೀಡುವಂತೆ ಕೋರ್ಟ್‌ ಸರ್ಕಾರಕ್ಕೆ ಸೂಚನೆ ನೀಡಿತ್ತು. ಬಲದೇವಕೃಷ್ಣ ಅವರ ಈ ನಡೆ ಕಾಂಗ್ರೆಸ್ ವಲಯದಲ್ಲೂ ಆತಂಕ ಸೃಷ್ಟಿಸಿತ್ತು. ಜತೆಗೆ, ಅವರೂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷೆ ಜಿ. ಪಲ್ಲವಿ ಕಳೆದ ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಪಕ್ಷದ ಹಲವು ಕಾರ್ಯಕ್ರಮಗಳಿಗೆ ನೆರವಾಗಿದ್ದರು.

2013ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ‍್ಯಾನಾಯ್ಕ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದರು. ಒಬ್ಬ ಮಹಿಳೆ ವಿರುದ್ಧ ಮತ್ತೊಬ್ಬ ಮಹಿಳೆಯನ್ನು ಕಣಕ್ಕಿಳಿಸುವ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಪಲ್ಲವಿ ಅವರಿಗೆ ಟಿಕೆಟ್‌ ನೀಡಲಾಗುತ್ತದೆ ಎಂದು ವಿಶ್ಲೇಷಿಸಲಾಗಿತ್ತು.

ಪಲ್ಲವಿ ಕ್ಷೇತ್ರದ ಎಲ್ಲೆಡೆ ಒಂದು ಸುತ್ತು ಹಾಕಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜಿಲ್ಲೆಗೆ ಬಂದಾಗ ಸಾಕಷ್ಟು ಜನರನ್ನು ಸೇರಿಸಿದ್ದರು. ಟಿಕೆಟ್ ಪಡೆಯಲು ವರಿಷ್ಠರ ಮೇಲೆ ಸಾಕಷ್ಟು ಪ್ರಭಾವವನ್ನೂ ಬಳಸಿದ್ದರು. ಆದರೆ, ಕಾಂಗ್ರೆಸ್‌ ಸಾಮಾಜಿಕ ನ್ಯಾಯದ ಭಾಗವಾಗಿ ದಲಿತ ಸಮುದಾಯದ ಕರಿಯಣ್ಣ ಅವರ ಪುತ್ರನಿಗೆ ಮಣೆ ಹಾಕಿತ್ತು. ಇದರಿಂದ ಬೇಸರಗೊಂಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಿರ್ಧರಿಸಿದ್ದರು.

ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆಯಿಂದಲೇ ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದವು.

ಖುದ್ದು ಎಐಸಿಸಿ ಮುಖಂಡರು ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ಪ್ರಯತ್ನಿಸಿದ್ದರು. ಜಿಲ್ಲಾ ಮುಖಂಡರೂ ಅಭ್ಯರ್ಥಿಗಳ ಮನೆಗಳಿಗೆ ಎಡತಾಕಿದ್ದರು.ಕೊನೆಗೂ ಮೂವರ ಮನವೊಲಿಸುವಲ್ಲಿ ಯಶ ಕಂಡರು. ರವಿಕುಮಾರ್, ಬಲದೇವಕೃಷ್ಣ, ಪಲ್ಲವಿ ನಾಮಪತ್ರ ಹಿಂದಕ್ಕೆ ಪಡೆದು ಪಕ್ಷದ ಅಧಿಕೃತ ಅಭ್ಯರ್ಥಿ ಡಾ.ಶ್ರೀನಿವಾಸ್ ಅವರಿಗೆ ಬೆಂಬಲ ಸೂಚಿಸಿದರು.ಆ ಮೂಲಕ ಪಕ್ಷದ ಆಂತರಿಕ ವಲಯದಲ್ಲಿ ಮೂಡಿದ್ದ ಆತಂಕದ ಕಾರ್ಮೋಡ ದೂರ ಮಾಡಿದರು.

ಅದೃಷ್ಟದ ನಿರೀಕ್ಷೆಯಲ್ಲಿ ಕಾಂಗ್ರೆಸ್

ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಅಭ್ಯರ್ಥಿ ಕರಿಯಣ್ಣ 35,560 ಮತಗಳಿಸಿದ್ದರು. ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ‍್ಯಾನಾಯ್ಕ ಕ್ಷೇತ್ರದಲ್ಲಿ  ಗೆಲುವು ಪಡೆದರೆ, ಕೆಜೆಪಿ ಅಭ್ಯರ್ಥಿ ಜಿ. ಬಸವಣ್ಣಪ್ಪ 38,405 ಮತಗಳನ್ನು ಪಡೆದು 2ನೇ ಸ್ಥಾನ ಗಳಿಸಿದ್ದರು. 2008ರಲ್ಲಿ ಶಾಸಕರಾಗಿದ್ದ ಬಿಜೆಪಿಯ ಕೆ.ಜಿ. ಕುಮಾರಸ್ವಾಮಿ ಕೇವಲ 12,398 ಮತಗಳನ್ನು ಪಡೆದು 4ನೇ ಸ್ಥಾನಕ್ಕೆ ಕುಸಿದಿದ್ದರು.

ಗ್ರಾಮಾಂತರ ಕ್ಷೇತ್ರ ರಚನೆಯಾಗಿದ್ದು 2008ರಲ್ಲಿ. ಮೊದಲ ಅವಧಿ ಬಿಜೆಪಿ ಗೆದ್ದುಕೊಂಡರೆ, ಎರಡನೇ ಅವಧಿ ಜೆಡಿಎಸ್ ಪಾಲಾಗಿತ್ತು. ಕಾಂಗ್ರೆಸ್ ಈ ಬಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT