ಶುಕ್ರವಾರ, ಮೇ 29, 2020
27 °C

ನೀರೂರಿಸುವ ಸಾಗುವಾಲಾ, ಜಾಲ್ ಫ್ರೆಜಿ

ಪ್ರದೀಪ.ಟಿ.ಕೆ Updated:

ಅಕ್ಷರ ಗಾತ್ರ : | |

Prajavani

ರಂಜಾನ್ ಹಬ್ಬದ ಸಂದರ್ಭದಲ್ಲಿ ಉಪವಾಸ ಮುರಿಯಲು ರಾಜ್ಯದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಖಾದ್ಯಗಳನ್ನು ತಯಾರಿಸಿ ಸವಿಯುವುದು ವಾಡಿಕೆ. ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ವಿಜಯಪುರ, ಕಲಬುರ್ಗಿ ಹೀಗೆ ಆಯಾಯಾ ಪ್ರದೇಶದ ವಿಶೇಷ ಖಾದ್ಯಗಳು ರಂಜಾನ್ ರಂಗನ್ನು ಹೆಚ್ಚಿಸುತ್ತವೆ. ಬೆಂಗಳೂರು ಹಾಗೂ ಹಳೆ ಮೈಸೂರು ಭಾಗದಲ್ಲಿ ಮಟನ್ ಸಾಗುವಾಲಾ, ಮಟನ್ ಚಾಂಪ್, ಆಲೂ ಫ್ರೆಜಿಯಂತಹ ಖಾದ್ಯಗಳು ರಂಜಾನ್ ಉಪವಾಸ ಹಸಿವನ್ನು ನೀಗುತ್ತವೆ. ಇಂತಹ ಕೆಲವು ಖಾದ್ಯಗಳನ್ನು ತಯಾರಿಸುವ ವಿಧಾನ ವಿವರಿಸಿದ್ದಾರೆ ಪ್ರದೀಪ ಟಿ.ಕೆ.

ಚಾಂಪ್ ಮಸಾಲ

ಬೇಕಾಗುವ ಸಾಮಗ್ರಿಗಳು: ಮಟನ್ – ಅರ್ಧ ಕೆಜಿ (ಮೂಳೆ ಸಹಿತ) ಟೊಮೆಟೊ – 2 (ಪೇಸ್ಟ್ ಮಾಡಿರುವುದು) ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಖಾರದ ಪುಡಿ – (ರುಚಿಗೆ ತಕ್ಕಷ್ಟು) ಮೊಸರು – 1 ಕಪ್, ರುಚಿಗೆ ತಕ್ಕಷ್ಟು – ಉಪ್ಪು, ಗರಂ ಮಸಾಲ – 1 ಚಮಚ, ಕರಿ ಜೀರಿಗೆ – 1ಚಮಚ, ವೈಟ್ ವಿನೆಗರ್ – 1 ಚಮಚ, ಚಕ್ಕೆ ಮತ್ತು ಲವಂಗದ ಪುಡಿ – 1 ಚಮಚ, ಎಣ್ಣೆ – 2 ಚಮಚ, ನೀರು – 1 ಕಪ್, ಕೊತ್ತಂಬರಿ ಸೊಪ್ಪು – ಸ್ವಲ್ಪ, ನಿಂಬೆ ರಸ – ಸ್ವಲ್ಪ.

ತಯಾರಿಸುವ ವಿಧಾನ: ಮಾಂಸವನ್ನು ಚೆನ್ನಾಗಿ ತೊಳೆದಿಡಿ. ನಂತರ ಪ್ರೆಶರ್ ಕುಕ್ಕರ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಕರಿ ಜೀರಿಗೆ ಹಾಕಿ ಒಂದು ನಿಮಿಷ ಸಿಡಿಸಿ. ನಂತರ ಪೇಸ್ಟ್ ಮಾಡಿದ ಟೊಮೆಟೊ ಹಾಗೂ ಈರುಳ್ಳಿ ಹಾಕಿ 5 ನಿಮಿಷ ಸೌಟ್‌ನಿಂದ ತಿರುಗಿಸುತ್ತಾ ಬೇಯಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮತ್ತೆ 2 ನಿಮಿಷ ಬೇಯಿಸಿ. ಈಗ ಮೊಸರು, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು, ಗರಂ ಮಸಾಲ, ಚಕ್ಕೆ ಮತ್ತು ಲವಂಗ ಪುಡಿ, ನಿಂಬೆರಸ ಮತ್ತು ವೈಟ್ ವಿನೆಗರ್ ಹಾಕಿ ಮಿಕ್ಸ್ ಮಾಡಿ. ನಂತರ ಮಾಂಸವನ್ನು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ. ನಂತರ 1 ಕಪ್ ನೀರು ಹಾಕಿ ಕುಕ್ಕರ್‌ನ ಬಾಯಿ ಮುಚ್ಚಿ. 4-5 ವಿಶಲ್ ಬರುವವರೆಗೆ ಬೇಯಿಸಿ. ಕುಕ್ಕರ್ ಅನ್ನು ಹತ್ತು ನಿಮಿಷ ಹಾಗೇ ಇಟ್ಟು ನಂತರ ಓಪನ್ ಮಾಡಿ ಕೊತ್ತಂಬರಿ ಸೊಪ್ಪು ಹಾಕಿದರೆ ಚಾಂಪ್ ಮಸಾಲ ರೆಡಿ. ಇದನ್ನು ಫ್ರೈಡ್ ರೈಸ್ ಅಥವಾ ರೊಟ್ಟಿ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. (ವಿಶೇಷ ಸೂಚನೆ: ಇದನ್ನು ಯಾವುದೇ ರೀತಿಯ ಮಾಂಸ ಉಪಯೋಗಿಸಿ ತಯಾರಿಸಬಹುದು)

ಮಟನ್ ಸಾಗುವಾಲಾ

ಬೇಕಾಗುವ ಸಾಮಗ್ರಿಗಳು: ಮಟನ್ – ಅರ್ಧ ಕೆಜಿ, ಪಾಲಕ್ ಸೊಪ್ಪು – ಅರ್ಧ ಕಟ್ಟು, ಈರುಳ್ಳಿ – 2, ಬೆಳ್ಳುಳ್ಳಿ – 5 ಎಸಳು, ಹೆಚ್ಚಿದ ಟೊಮೆಟೊ – 1, ಹಸಿಮೆಣಸಿನಕಾಯಿ, ಮೊಸರು – 2 ಚಮಚ, ಫ್ರೆಶ್‌ಕ್ರೀಮ್ – 1 ಚಮಚ(ಬೇಕಿದ್ದರೆ ಹಾಕಬಹುದು), ಚಿಟಿಕೆಯಷ್ಟು ಇಂಗು, ಖಾರದ ಪುಡಿ – 1 ಚಮಚ, ಕರಿಬೇವಿನ ಎಲೆ, ಎಣ್ಣೆ – 2 ಚಮಚ, ತುಪ್ಪ – 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಸ್ವಚ್ಛ ಮಾಡಿದ ಪಾಲಕ್ ಸೊಪ್ಪನ್ನು ಸುಮಾರಾಗಿ ಬೇಯಿಸಿ. ನಂತರ ಅದರ ನೀರು ಬಸಿದು ಹಸಿ ಮೆಣಸಿನಕಾಯಿ ಹಾಕಿ ರುಬ್ಬಿ ಪೇಸ್ಟ್ ರೀತಿ ಮಾಡಿಟ್ಟುಕೊಳ್ಳಿ. ಕುಕ್ಕರ್‌ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಕರಿಬೇವು, ಇಂಗು, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ನಂತರ ಮಟನ್ ತುಂಡುಗಳನ್ನು ಹಾಕಿ 5 ರಿಂದ 6 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. ಈಗ ಟೊಮೆಟೊ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ 5 ನಿಮಿಷ ಹುರಿಯಿರಿ. ತಯಾರಿಟ್ಟುಕೊಂಡಿರುವ ಪಾಲಕ್ ಪೇಸ್ಟ್ ಸೇರಿಸಿ 2 ನಿಮಿಷ ಹುರಿದು ಖಾರದ ಪುಡಿ, ಅರಿಸಿನ ಪುಡಿ, ಗರಂ ಮಸಾಲ, ಮೆಂತೆ ಸೊಪ್ಪು ಹಾಕಿ 2 ಕಪ್ ನೀರು ಸೇರಿಸಿ ಕುಕ್ಕರ್‌ನ ಬಾಯಿ ಮುಚ್ಚಿ 3 ರಿಂದ 4 ವಿಶಲ್ ಬರುವವರೆಗೆ ಬೇಯಿಸಿ. ಹತ್ತು ನಿಮಿಷ ಬಿಟ್ಟು ಕುಕ್ಕರ್‌ನ ಮುಚ್ಚಳ ತೆಗೆದು ಫ್ರೆಶ್‌ಕ್ರೀಮ್ ಮತ್ತು ತುಪ್ಪ ಹಾಕಿ ಮಿಕ್ಸ್‌ ಮಾಡಿದರೆ ಮಟನ್ ಸಾಗುವಾಲಾ ರೆಡಿ.

ಆಲೂ ಜಾಲ್ ಫ್ರೆಜಿ

ಬೇಕಾಗುವ ಸಾಮಗ್ರಿಗಳು: ಆಲೂಗೆಡ್ಡೆ – 7-8 (ಬೇಯಿಸಿ ಸಿಪ್ಪೆ ಸುಲಿದಿರಬೇಕು), ಈರುಳ್ಳಿ – 2, ಶುಂಠಿ – ಒಂದು ಚಿಕ್ಕ ಪೀಸ್, ಬೆಳ್ಳುಳ್ಳಿ ಎಸಳು – 5-6, ಟೊಮೆಟೊ – 1 ಚಿಕ್ಕದಾಗಿ ಕತ್ತರಿಸಿದ್ದು, ಹಸಿಮೆಣಸಿನ ಕಾಯಿ – 1, ಒಣಮೆಣಸು – 2, ಟೊಮೆಟೊ – ಪೇಸ್ಟ್ ಅರ್ಧ ಕಪ್, ಅರಿಸಿನ ಪುಡಿ – 1/2 ಚಮಚ, ಖಾರದ ಪುಡಿ (ಖಾರಕ್ಕೆ ತಕ್ಕಷ್ಟು), ಗರಂ ಮಸಾಲ – 1 ಚಮಚ, ಜೀರಿಗೆ – 1 ಚಮಚ, ಸಾಸಿವೆ – 1/2 ಚಮಚ, ಮೆಂತೆ – 1/2 ಚಮಚ, ರುಚಿಗೆ ತಕ್ಕ – ಉಪ್ಪು, ತುಪ್ಪ – 2 ಚಮಚ, ನೀರು – 1 ಕಪ್.

ತಯಾರಿಸುವ ವಿಧಾನ: ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ ಅದಕ್ಕೆ ಜೀರಿಗೆ, ಪಲಾವ್ ಎಲೆ, ಸಾಸಿವೆ, ಮೆಂತೆ ಹಾಕಬೇಕು. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಇದೇ ಸಮಯದಲ್ಲಿ ಬೇಯಿಸಿದ ಆಲೂಗೆಡ್ಡೆಯನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿಡಬೇಕು. ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವಾಗ ಹಸಿಮೆಣಸಿನ ಕಾಯಿ ಮತ್ತು ಒಣಮೆಣಸು ಹಾಕಿ ನಂತರ ಟೊಮೆಟೊವನ್ನು ಹಾಕಿ ಸೌಟ್‌ನಿಂದ ಆಡಿಸಿ. ಟೊಮೆಟೊ ಸ್ವಲ್ಪ ಮೆತ್ತಗಾದಾಗ ಅರಿಸಿನ ಪುಡಿ, ಖಾರದ ಪುಡಿ, ಗರಂ ಮಸಾಲ, ಉಪ್ಪು ಹಾಕಿ ನಂತರ ಟೊಮೆಟೊ ಸಾಸ್, ಆಲೂಗೆಡ್ಡೆ ಹಾಕಿ 1 ಕಪ್ ನೀರು ಹಾಕಿ ಗ್ರೇವಿ ರೀತಿಯಾಗುವವರೆಗೆ ಬೇಯಿಸಿ ನಂತರ ಉರಿಯಿಂದ ಇಳಿಸಿದರೆ ಆಲೂ ಜಾಲ್ ಫ್ರೆಜಿ ರೆಡಿ. ಇದನ್ನು ಪರೋಟ, ಚಪಾತಿ, ರೊಟ್ಟಿ ಹಾಗೂ ಅನ್ನದೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

ವೆಜ್ ಕುರ್ಮಾ

ಬೇಕಾಗುವ ಸಾಮಗ್ರಿಗಳು: ಕೊತ್ತಂಬರಿ – 1 ಚಮಚ, ಸೋಂಪು – 1 ಚಮಚ, ಜೀರಿಗೆ – 1 ಚಮಚ, ಏಲಕ್ಕಿ – 2-3, ಚೆಕ್ಕೆ – ಒಂದು ಚೂರು, ಮೆಣಸಿನ ಕಾಳು – 7-8, ಒಣ ಮೆಣಸಿನ ಕಾಯಿ – 2-3, ಹಸಿ ಮೆಣಸು – 1-2, ಶುಂಠಿ – ಒಂದು ಚೂರು, ಬೆಳ್ಳುಳ್ಳಿ – 5-6 ಎಸಳು, ಗೋಡಂಬಿ – 7-8, ಗಸಗಸೆ – 1 ಚಮಚ, ಕಾಯಿ ತುರಿ – 1/4 ಕಪ್, ಎಣ್ಣೆ ಸ್ವಲ್ಪ, ಈರುಳ್ಳಿ – 1, ಟೊಮೆಟೊ – 1, ಅರಿಸಿನ – 1/2 ಚಮಚ, ಅಚ್ಚಖಾರದ ಪುಡಿ –1 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಆಲೂಗೆಡ್ಡೆ – 1, ಹೆಚ್ಚಿದ ಕ್ಯಾರೆಟ್ – 1/2 ಕಪ್, ಹೆಚ್ಚಿದ ಬೀನ್ಸ್ –  1/2 ಕಪ್, ಹೆಚ್ಚಿದ ಹೂಕೋಸು – 1/2 ಕಪ್, ಹಸಿರು ಬಟಾಣಿ – 1 ಕಪ್, ಕೊತ್ತಂಬರಿ ಸೊಪ್ಪು  – ಸ್ವಲ್ಪ.

ತಯಾರಿಸುವ ವಿಧಾನ: ತವಾವನ್ನು ಒಲೆಯ ಮೇಲೆ ಸಣ್ಣ ಉರಿಯಲ್ಲಿಡಿ. ಒಂದೊಂದು ಚಮಚ ಕೊತ್ತಂಬರಿ, ಸೋಂಪು, ಜೀರಿಗೆ, ಏಲಕ್ಕಿ, ಮೆಣಸಿನ ಕಾಳು, ಚಕ್ಕೆಯನ್ನು ಹಾಕಿ ಒಂದು ನಿಮಿಷ ಹುರಿಯಿರಿ. ನಂತರ ಅದಕ್ಕೆ ಒಣಮೆಣಸು ಸೇರಿಸಿ ಹುರಿಯಿರಿ. ಈ ಪದಾರ್ಥಗಳನ್ನು ಹುರಿದು ಅದರ ಘಮ ಬಂದಾಗ ಅದನ್ನು ಸ್ವಲ್ಪ ಆರಲು ಬಿಟ್ಟು ನಂತರ ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿರಿ. ಈ ಮಿಶ್ರಣಕ್ಕೆ 1 ಹಸಿಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ, ನೆನೆಸಿದ ಗೋಡಂಬಿ ಹಾಗೂ ಗಸಗಸೆ, ಕಾಯಿತುರಿ ಮತ್ತು ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಂಡರೆ ಕುರ್ಮಾ ಮಸಾಲಾ ಸಿದ್ಧವಾಗುತ್ತದೆ.

ಈಗ ಒಂದು ಪ್ಯಾನ್‌ನಲ್ಲಿ 2-3 ಚಮಚ ಎಣ್ಣೆ ಹಾಕಿ. ಅದಕ್ಕೆ 1 ಹೆಚ್ಚಿದ ಈರುಳ್ಳಿ, 1 ಹೆಚ್ಚಿದ ಟೊಮೆಟೊ, ಅರಿಸಿನ, ಅಚ್ಚಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಹೆಚ್ಚಿದ ಆಲೂಗೆಡ್ಡೆ, ಕ್ಯಾರೆಟ್, ಬೀನ್ಸ್, ಹಸಿರು ಬಟಾಣಿ ಮತ್ತು ಗೋಬಿಯನ್ನು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಬೇಯಿಸಿ. 5 ನಿಮಿಷದ ನಂತರ ಈ ಮೊದಲೇ ರೆಡಿ ಮಾಡಿಕೊಂಡಿರುವ ಮಸಾಲಾವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ 15-20 ನಿಮಿಷ ಚೆನ್ನಾಗಿ ಕುದಿಸಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ವೆಜ್ ಕುರ್ಮಾ ಸಿದ್ಧವಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.