ಪ್ರಶ್ನೆಯುಂಟೆ ಉತ್ತರ ಕರ್ನಾಟಕದ ತಿಂಡಿಗಳ ರುಚಿಗೆ?

7

ಪ್ರಶ್ನೆಯುಂಟೆ ಉತ್ತರ ಕರ್ನಾಟಕದ ತಿಂಡಿಗಳ ರುಚಿಗೆ?

Published:
Updated:

ಉತ್ತರಕರ್ನಾಟಕದ ಭಾಷೆಯಷ್ಟೇ ತಿಂಡಿಗಳೂ ಚೆಂದ. ಇಲ್ಲಿನ ಜನರು ವಿಭಿನ್ನವಾದ ತಿಂಡಿಗಳನ್ನು ಮಾಡಲು ಹೆಸರುವಾಸಿ. ಥಾಲಿಪಟ್ಟಿನಂತಹ ತಿಂಡಿಗಳನ್ನು ಕರ್ನಾಟಕದ ಜನರಿಗೆ ಪರಿಚಯಿಸಿದ್ದು ಇವರೇ. ಮಹರಾಷ್ಟ್ರದ ವಡಾ ಪಾವ್‌ನಂತಹ ತಿಂಡಿಗಳ ಅಸಲಿ ರುಚಿಯನ್ನು ಸವಿಯಬೇಕು ಎಂದರೆ ನೀವು ಉತ್ತರ ಕರ್ನಾಟಕದ ಕಡೆಗೆ ಹೋಗಬೇಕು. ಉತ್ತರ ಕರ್ನಾಟಕ ಶೈಲಿಯ ಕೆಲವು ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸುವ ವಿಧಾನದ ವಿವರ.

ಅಲಸಂದಿ ವಡೆ
ಬೇಕಾಗುವ ಸಾಮಗ್ರಿಗಳು:
ಅಲಸಂದೆ – 2ಕಪ್, ಉದ್ದಿನಬೇಳೆ – 1/4ಕಪ್‌, ಹಸಿಮೆಣಸಿನಕಾಯಿ – 3-4, ಬೆಳ್ಳುಳ್ಳಿ – 2, ಕರಿಬೇವು, ಕೊತ್ತಂಬರಿಸೊಪ್ಪು, ಸೋಡಾಪುಡಿ, ಉಪ್ಪು, ಎಣ್ಣೆ. 
ತಯಾರಿಸುವ ವಿಧಾನ: ಹಿಂದಿನ ದಿನ ರಾತ್ರಿ ಅಲಸಂದೆ ಮತ್ತು ಉದ್ದಿನಬೇಳೆಯನ್ನು ತೊಳೆದು ನೆನೆಸಿಡಿ. ಮರುದಿನ ಬೆಳಗ್ಗೆ ಅದರಲ್ಲಿನ ನೀರನ್ನು ತೆಗೆಯಿರಿ. ಬೇಳೆಗಳಿಗೆ ಹಸಿಮೆಣಸಿನಕಾಯಿ, ಕೊತ್ತಂಬರಿ, ಬೆಳ್ಳುಳ್ಳಿ ಮತ್ತು ಉಪ್ಪನ್ನು ಹಾಕಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಕರಿಬೇವನ್ನು ಸಣ್ಣಗೆ ಕಟ್ ಮಾಡಿ ಅದರಲ್ಲಿ ಸೇರಿಸಿ. ಸೋಡಾಪುಡಿ ಹಾಕಿ ಕಲಿಸಿ ಅರ್ಧ ಗಂಟೆ ನೆನೆಯಲು ಬಿಡಿ. ನಂತರ ವಡೆಯ ಆಕಾರದಲ್ಲಿ ಬಿಸಿಬಿಸಿ ಎಣ್ಣೆಯಲ್ಲಿ ಕರಿಯಿರಿ.  

ಮೈಸೂರ್ ಬೊಂಡಾ 
ಬೇಕಾಗುವ ಸಾಮಗ್ರಿಗಳು
:  ಮೈದಾಹಿಟ್ಟು – 2ಕಪ್, ಹಸಿಮೆಣಸಿನಕಾಯಿ – 3–4, ಎಣ್ಣೆ, ಕರಿಬೇವು, ಕೊತ್ತಂಬರಿಸೊಪ್ಪು, ಮಜ್ಜಿಗೆ, ಉಪ್ಪು, ಸೋಡಾಪುಡಿ. 
ತಯಾರಿಸುವ ವಿಧಾನ:  ಮೊದಲು ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿಸೊಪ್ಪು – ಇಷ್ಟನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ 2ಕಪ್ ಮೈದಾಹಿಟ್ಟನ್ನು ಹಾಕಿ, ಅದರಲ್ಲಿ ಕಟ್ ಮಾಡಿರುವ ಸಾಮಗ್ರಿಗಳನ್ನು ಹಾಕಿ. ಅದಕ್ಕೆ ಒಂದು ಚಿಟಿಕೆ ಸೋಡಾಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಮಜ್ಜಿಗೆಯಲ್ಲಿ ಮಿಶ್ರಣವನ್ನು ಕಲಿಸಿಕೊಳ್ಳಿ. ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಆ ಹಿಟ್ಟನ್ನು ಬೊಂಡಾದ ಆಕಾರ ಮಾಡಿ, ಬಿಸಿ ಎಣ್ಣೆಯಲ್ಲಿ ಕರಿಯಿರಿ. 
 


ಮೈಸೂರ್ ಬೊಂಡಾ 

ವಡಾ ಪಾವ್ 
ಬೇಕಾಗುವ ಸಾಮಗ್ರಿಗಳು:  
ಪಾವ್(ಬ್ರೆಡ್) – 5-6, ಆಲೂಗಡ್ಡೆ – 3-4, ಈರುಳ್ಳಿ – 2-3, ಹಸಿಮೆಣಸಿನಕಾಯಿ – 2 -3, ಕರಿಬೇವು, ಕೊತ್ತಂಬರಿಸೊಪ್ಪು, ಖಾರದಪುಡಿ – 2ಚಮಚ, ಎವರೆಸ್ಟ್ ಗರಂಮಸಾಲಾ, ಎಣ್ಣೆ, ಕಡ್ಲೆಹಿಟ್ಟು, ಸೋಡಾಪುಡಿ, ಉಪ್ಪು.

ತಯಾರಿಸುವ ವಿಧಾನ: ಮೊದಲು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. ನಂತರ ಈರುಳ್ಳಿ, ಪುದಿನಾ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿಸೊಪ್ಪು – ಎಲ್ಲವನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಆಲೂಗಡ್ಡೆಯನ್ನು ನುಣ್ಣಗೆ ಸ್ಮ್ಯಾಶ್ ಮಾಡಿಕೊಳ್ಳಿ. ಅದರಲ್ಲಿ ಕತ್ತರಿಸಿದ ಎಲ್ಲ ಸಾಮಗ್ರಿಗಳನ್ನು ಹಾಕಿ. ಅದಕ್ಕೆ ಉಪ್ಪು, ಖಾರದಪುಡಿ, ಎವರೆಸ್ಟ್ ಗರಂ ಮಸಾಲಾ ಹಾಕಿ ಚೆನ್ನಾಗಿ ಕಲೆಸಿಕೊಳ್ಳಿ.


ವಡಾ ಪಾವ್

ನಂತರ ಒಂದು ಬಾಣಲೆಯಲ್ಲಿ ಕಡಲೆಹಿಟ್ಟು, ಸೋಡಾಪುಡಿ ಹಾಕಿಕೊಂಡು ಸ್ವಲ್ಪ ನೀರು ಹಾಕಿ ಮಿರ್ಚಿ ಮಾಡುವ ಹದಕ್ಕೆ ಕಲಿಸಿಕೊಳ್ಳಿ. ಆಲೂಗಡ್ಡೆಯ ಮಿಶ್ರಣದ ಉಂಡೆಯನ್ನು ಮಾಡಿಕೊಂಡು ಅದನ್ನು ಕಡಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯಿರಿ. ನಂತರ ಬ್ರೆಡ್ ಅನ್ನು ಸ್ಲೈಸ್‌ ಮಾಡಿ ಕತ್ತರಿಸಿ. ಅದರಲ್ಲಿ ಆಲೂಬೊಂಡಾವನ್ನು ಇಟ್ಟು ಇನ್ನೊಂದು ಸ್ಲೈಸನ್ನು ಅದರ ಮೇಲೆ ಇಟ್ಟು ಪುದಿನಾ ಚಟ್ನಿಯೊಂದಿಗೆ ಸರ್ವ್‌ ಮಾಡಿ.

ಥಾಲಿಪಟ್ಟು 
ಬೇಕಾಗುವ ಸಾಮಗ್ರಿಗಳು: 
ಗೋಧಿಹಿಟ್ಟು – 2ಕಪ್, ಅಕ್ಕಿಹಿಟ್ಟು – 1ಕಪ್, ನೆನೆಸಿದ ಮಡಕೆಕಾಳು – 1/2ಕಪ್, ಬೀನ್ಸ್ –7-8, ಹಸಿಮೆಣಸಿನಕಾಯಿ – 3-4, ಈರುಳ್ಳಿ – 2-3, ಜೀರಿಗೆ – 1ಚಮಚ, ಅಜ್ವಾನ –  1ಚಮಚ, ಬದನೆಕಾಯಿ – 2-4, ಆಲೂಗಡ್ಡೆ – 2-3, ಉಪ್ಪು, ಖಾರದಪುಡಿ, ಎಣ್ಣೆ.

ತಯಾರಿಸುವ ವಿಧಾನ:  ಮೊದಲು ತರಕಾರಿಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ, ಒಂದು ಪಾತ್ರೆಯಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಆಲೂಗಡ್ಡೆ, ನೆನೆಸಿದ ಮಡಿಕೆಕಾಳು ಮತ್ತು ಬದನೆಕಾಯಿಯನ್ನು ಹಾಕಿರಿ. 5 ನಿಮಿಷ ಹುರಿಯಿರಿ. ನಂತರ 2 ಚಮಚ ಖಾರದಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಪಲ್ಲೆಯನ್ನು ರೆಡಿ ಮಾಡಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಗೋಧಿಹಿಟ್ಟು, ಅಕ್ಕಿಹಿಟ್ಟು ಹಾಕಿ ಅದರಲ್ಲಿ ಮಾಡಿರುವ ಪಲ್ಲೆಯನ್ನು ಹಾಕಿ, ನಂತರ ಅದರಲ್ಲಿ ಹಸಿಮೆಣಸಿನಕಾಯಿ, ಈರುಳ್ಳಿ, ಜೀರಿಗೆ ಮತ್ತು ಅಜ್ವಾನವನ್ನು ಹಾಕಿ ಕಲೆಸಿಕೊಳ್ಳಿ. ನಂತರ ನೀರು ಹಾಕಿ ಚಪಾತಿ ಮಾಡುವ ಹದಕ್ಕೆ ಕಲಿಸಿಕೊಳ್ಳಿ. 10 ನಿಮಿಷ ಬಿಟ್ಟು ಉಂಡೆಯನ್ನು ಮಾಡಿ ಲಟ್ಟಿಸಿ ನಂತರ ಹಂಚಿನಲ್ಲಿ ಎಣ್ಣೆ ಹಾಕಿ ಬೇಯಿಸಿಕೊಳ್ಳಿ. ನಂತರ ಪ್ಲೇಟ್‌ನಲ್ಲಿ ತೆಗೆದು ಟೊಮೆಟೊ ಸಾಸ್‌ ಜೊತೆಗೆ ಸರ್ವ್‌ ಮಾಡಿ.


ಥಾಲಿಪಟ್ಟು 

 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !