ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟಕ್ಕೂ ತಿಂಡಿಗೂ ಪಲ್ಯದ ಸಂಗಾತ

Last Updated 26 ಅಕ್ಟೋಬರ್ 2018, 19:32 IST
ಅಕ್ಷರ ಗಾತ್ರ

ನುಗ್ಗೆಕಾಯಿಪಲ್ಯ

ಬೇಕಾಗುವ ಸಾಮಗ್ರಿಗಳು: ಹೆಚ್ಚಿರುವ ನುಗ್ಗೆಕಾಯಿ ಹೋಳುಗಳು – 4, ಇಂಗು – ಸ್ವಲ್ಪ, ತುಪ್ಪ – 3ಚಮಚ, ರುಚಿಗೆ – ಉಪ್ಪು, ಕೆಂಪುಮೆಣಸು – 5, ಉದ್ದಿನಬೇಳೆ – 1ಚಮಚ, ಎಳ್ಳು – 1/2ಚಮಚ, ಸಾಸಿವೆ – 1/4ಚಮಚ

ತಯಾರಿಸುವ ವಿಧಾನ: ಸ್ವಲ್ಪ ಎಣ್ಣೆಯಲ್ಲಿ ಕೆಂಪುಮೆಣಸು ಹಾಗೂ ಉದ್ದಿನಬೇಳೆಯನ್ನು ಹುರಿದುಕೊಳ್ಳಬೇಕು. ಎಳ್ಳನ್ನು ಎಣ್ಣೆ ಇಲ್ಲದೆ ಬೇರೆ ಹುರಿಯಬೇಕು. ಬಾಟಲಿಗೆ ತುಪ್ಪ ಹಾಕಿ ಸಾಸಿವೆಯನ್ನು ಸಿಡಿಸಿ ನುಗ್ಗೆಕಾಯಿ ಹೋಳುಗಳನ್ನು ಹಾಕಿ ಸ್ವಲ್ಪ ಹೊತ್ತು ಹುರಿದು ನೀರು ಮತ್ತು ಉಪ್ಪನ್ನು ಸೇರಿಸಿ ಪ್ಲೇಟ್ ಮುಚ್ಚಬೇಕು. ಹುರಿದ ಕೆಂಪುಮೆಣಸು ಮತ್ತು ಉದ್ದಿನಬೇಳೆಯನ್ನು ಪುಡಿ ಮಾಡಿ ಬೆಂದ ನುಗ್ಗೆಕಾಯಿಗೆ ಸೇರಿಸಿ ಕೆದಕಿ ಎಳ್ಳನ್ನು ಪುಡಿಮಾಡಿ ಸೇರಿಸಿ ಹಾಗೂ ಇಂಗನ್ನು ಹಾಕಿ ಕೆದಕಿದರೆ ರುಚಿಯಾದ ನುಗ್ಗೆಕಾಯಿಯ ಪಲ್ಯ ಸಿದ್ಧ.

ಆಲೂಗಡ್ಡೆ ಗರಿಗರಿ ಪಲ್ಯ

ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ – 2, ರುಚಿಗೆ – ಉಪ್ಪು, ಕೆಂಪುಮೆಣಸು – 4, ಒಣಕೊಬ್ಬರಿ ತುರಿ – 1/4ಕಪ್‌, ಬೆಳ್ಳುಳ್ಳಿ ಎಸಳು – 2, ಕರಿಯಲು ಸಾಕಷ್ಟು ಎಣ್ಣೆ.

ತಯಾರಿಸುವ ವಿಧಾನ: ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಅರ್ಧ ಭಾಗ ಮಾಡಿ ನೀರಿನಲ್ಲಿ ಬೇಯಿಸಬೇಕು. ಅರ್ಧ ಬೆಂದ ನಂತರ ಚಿಕ್ಕ ಚಿಕ್ಕದಾಗಿ ಹೋಳುಗಳನ್ನು ಮಾಡಿ ಎಣ್ಣೆ ಕಾಯಿಸಿ ಕರಿಯಬೇಕು. ಒಣ ಕೊಬ್ಬರಿತುರಿ, ಕೆಂಪುಮೆಣಸು, ಬೆಳ್ಳುಳ್ಳಿ ಹಾಗೂ ಉಪ್ಪನ್ನು ಸೇರಿಸಿ ಮಿಕ್ಸಿಯಲ್ಲಿ ಪುಡಿ ಮಾಡಿ. ಬಾಣಲಿಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಮಾಡಿ ಪುಡಿ ಮಾಡಿದ ಮಿಶ್ರಣವನ್ನು ಸೇರಿಸಿ ಹುರಿದು ತಯಾರಿಸಿದ ಆಲೂಗಡ್ಡೆ ಹೋಳುಗಳನ್ನು ಹಾಕಿ ಬೆರೆಸಿದರೆ ಸವಿಯಲು ಸಿದ್ಧ. ಬಿಸಿಯಿರುವಾಗಲೇ ಅನ್ನಕ್ಕೆ ಕಲೆಸಿ ಸೇವಿಸಿದರೆ ರುಚಿಯಾಗಿರುತ್ತದೆ. ಹಾಗೆಯೇ ಸವಿಯಲೂಬಹುದು.

ಬೀಟ್‌ರೂಟ್ ಪಲ್ಯ

ಬೇಕಾಗುವ ಸಾಮಗ್ರಿಗಳು: ತುರಿದ ಬೀಟ್‌ರೂಟ್ – 1ಕಪ್‌, ರುಚಿಗೆ – ಉಪ್ಪು, ಸಾರಿನಪುಡಿ – 3/4ಚಮಚ, ಕಾಯಿತುರಿ – 1ಚಮಚ, ಕೊತ್ತಂಬರಿಸೊಪ್ಪು – ಸ್ವಲ್ಪ, ಎಣ್ಣೆ – 1,1/2ಚಮಚ,ಸಾಸಿವೆ – 1/4ಚಮಚ,ಕತ್ತರಿಸಿರುವ ಈರುಳ್ಳಿ – 1/4ಕಪ್‌.

ತಯಾರಿಸುವ ವಿಧಾನ: ಬಾಣಲಿಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಕರೀಬೇವು ಸಿಡಿಸಿ. ಈರುಳ್ಳಿ ಚೂರನ್ನು ಹಾಕಿ ಚೆನ್ನಾಗಿ ಕೆದಕಿ, ಬೀಟ್‌ರೂಟ್‌ ತುರಿಯನ್ನು ಹಾಕಿ ಕೆದಕಿ ಸ್ವಲ್ಪ ನೀರನ್ನು ಹಾಕಿ ಪ್ಲೇಟ್ ಮುಚ್ಚಿ. ಮೆತ್ತಗಾದ ನಂತರ ಉಪ್ಪು ಹಾಗೂ ಸಾರಿನ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ ಕಾಯಿತುರಿ, ಕೊತ್ತಂಬರಿಸೊಪ್ಪನ್ನು ಅಲಂಕರಿಸಿದರೆ ಸವಿಯಲು ಸಿದ್ಧ. ಅನ್ನಕ್ಕೆ ಚಪಾತಿಗೆ ಹೊಂದುತ್ತದೆ.

ದೊಣ್ಣೆಮೆಣಸಿನಕಾಯಿ ಪಲ್ಯ

ಬೇಕಾಗುವ ಸಾಮಗ್ರಿಗಳು:ದೊಣ್ಣೆ ಮೆಣಸಿನಕಾಯಿ ಹೋಳುಗಳು – 1ಕಪ್‌, ಬೆಳ್ಳುಳ್ಳಿ – 4ಎಸಳು, ಈರುಳ್ಳಿ ಚೂರು – 2ಚಮಚ, ತೊಗರಿಬೇಳೆ – 1/4ಕಪ್‌, ಚಿಟಿಕೆ – ಅರಿಸಿನ, ತುಪ್ಪ– ಸ್ವಲ್ಪ, ಸಾಸಿವೆ – 1/4ಚಮಚ, ಕರೀಬೇವು – 1ಕಡ್ಡಿ, ಹಸಿಮೆಣಸು – 3, ರುಚಿಗೆ – ಉಪ್ಪು, ಬೆಲ್ಲ – ಚೂರು, ಹುಣಸೇ ನೀರು – 1ಚಮಚ, ಕಾಯಿತುರಿ – 1/2ಚಮಚ, ಎಣ್ಣೆ – 1, 1/2ಚಮಚ.

ತಯಾರಿಸುವ ವಿಧಾನ: ಸಾಕಷ್ಟು ನೀರಿನಲ್ಲಿ ತೊಗರಿಬೇಳೆ, ದೊಣ್ಣೆಮೆಣಸಿನಕಾಯಿ ಹೋಳುಗಳು, ಬೆಳ್ಳುಳ್ಳಿ, ಈರುಳ್ಳಿಚೂರು, ಹಸಿಮೆಣಸಿನಕಾಯಿ ಕತ್ತರಿಸಿದ್ದು, ಅರಿಸಿನ, ತುಪ್ಪ ಎಲ್ಲವನ್ನೂ ಸೇರಿಸಿ ಬೇಯಿಸಬೇಕು. ಬೆಂದ ನಂತರ ಕಟ್ಟನ್ನು ತೆಗೆದು ಬೇಳೆ ಮಿಶ್ರಣವನ್ನು ಹಾಕಿ ಸ್ವಲ್ಪ ಹೊತ್ತು ಕೆದಕಿ ಕಾಯಿತುರಿಯನ್ನು ಸೇರಿಸಿ ಕೆದಕಿದರೆ ಪಲ್ಯ ಸಿದ್ಧ. ಕಟ್ಟಿಗೆ ಮೇಲೆ ತಿಳಿಸಿದ ಹುಣಸೆನೀರು, ಕರೀಬೇವು, ಬೆಲ್ಲ, ಕಾಯಿತುರಿ, ಉಪ್ಪನ್ನು ಸೇರಿಸಿ ಹಾಗೇ ಸಾಸಿವೆಕಾಳನ್ನು ಸಿಡಿಸಿ ಸೇರಿಸಿದರೆ ಸಾರು ಸಿದ್ಧ. ಮೇಲೆ ತಿಳಿಸಿರುವ ಕಾಯಿತುರಿ, ಬೆಲ್ಲ, ಹುಣಸೆನೀರು ಎಲ್ಲವನ್ನೂ ಸಾರಿಗೆ ಅರ್ಧ ಪಲ್ಯಕ್ಕೆ ಅರ್ಧ ಸೇರಿಸಬೇಕು. ಸಾರನ್ನು ಸ್ವಲ್ಪ ಬಿಸಿ ಮಾಡಿದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT