ಸೋಮವಾರ, ಏಪ್ರಿಲ್ 12, 2021
23 °C

ನಳಪಾಕ: ರುಚಿಗೂ, ಆರೋಗ್ಯಕ್ಕೂ ಪರೋಟ

ವೇದಾವತಿ ಎಚ್‌.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬಾಳೆಕಾಯಿ ಮಸಾಲೆ ಪರೋಟ

ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು– ಒಂದೂವರೆ ಕಪ್, ಬಾಳೆಕಾಯಿ– 500 ಗ್ರಾಂ, ಕೊತ್ತಂಬರಿ ಸೊಪ್ಪು– 3 ಟೇಬಲ್ ಚಮಚ, ಅರಿಸಿನ– 1/2 ಟೀ ಚಮಚ, ಅಚ್ಚ ಖಾರದ ಪುಡಿ– 1/4 ಟೀ ಚಮಚ, ಅಜವಾನ– 1/2 ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಅಥವಾ ತುಪ್ಪ ಬೇಯಿಸಲು.

ತಯಾರಿಸುವ ವಿಧಾನ: ಬಾಳೆಕಾಯಿಯನ್ನು ಕುಕರ್‌ನಲ್ಲಿ ನೀರನ್ನು ಹಾಕಿ 3 ಕೂಗು ಬರುವವರೆಗೆ ಬೇಯಿಸಿಕೊಳ್ಳಿ. ನಂತರ ಸಿಪ್ಪೆಯನ್ನು ತೆಗೆದು ನುಣ್ಣಗೆ ಹಿಸುಕಿಕೊಳ್ಳಿ. ಒಂದು ಪಾತ್ರೆಯಲ್ಲಿ ಮೇಲೆ ತಿಳಿಸಿರುವ ಪದಾರ್ಥಗಳನ್ನು ಹಾಕಿಕೊಳ್ಳಿ. ಅದಕ್ಕೆ ನುಣ್ಣಗೆ ಮಾಡಿಕೊಂಡ ಬಾಳೆಕಾಯಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಳ್ಳುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟನ್ನು ಕಲಸಿಕೊಳ್ಳಿ. ಈ ಹಿಟ್ಟನ್ನು ಅರ್ಧ ಗಂಟೆ ಕಾಲ ಹಾಗೆ ಮುಚ್ಚಿಡಿ.

ನಂತರ ಹಿಟ್ಟನ್ನು ಚಪಾತಿಯಂತೆ ಲಟ್ಟಿಸಿ. ತವಾ ಬಿಸಿ ಮಾಡಿ ಎಣ್ಣೆ ಅಥಾ ತುಪ್ಪವನ್ನು ಸವರಿ ಎರಡೂ ಬದಿಗೂ ಎಣ್ಣೆಯನ್ನು ಹಾಕಿ ಬೇಯಿಸಿಕೊಳ್ಳಿ. ರುಚಿಕರವಾದ ಪರೋಟವನ್ನು ರಾಯಿತ ಅಥವಾ ಚಟ್ನಿ,ಉಪ್ಪಿನಕಾಯಿಯೊಂದಿಗೆ ಸವಿಯಿರಿ. ಇದೇ ಹಿಟ್ಟಿನಿಂದ ಪೂರಿಯನ್ನೂ ತಯಾರಿಸಬಹುದು.

***

ಸೋರೆಕಾಯಿ ಮಸಾಲೆ ಪರೋಟ

ಬೇಕಾಗುವ ಸಾಮಗ್ರಿಗಳು: ಸೋರೆಕಾಯಿ– 1 ಕಪ್, ಗೋಧಿಹಿಟ್ಟು–2 ಕಪ್, ಗಟ್ಟಿಮೊಸರು– ಅರ್ಧ ಕಪ್, ಎಣ್ಣೆ ಅಥವಾ ತುಪ್ಪ ಬೇಯಿಸಲು, ಮೆಂತ್ಯ ಸೊಪ್ಪು– ಒಂದೂವರೆ ಕಪ್,‌ ಎಳ್ಳು– 1 ಟೇಬಲ್ ಚಮಚ, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ– 2, ಶುಂಠಿ ಪೇಸ್ಟ್– ಅರ್ಧ ಟೀ ಚಮಚ, ಧನಿಯಾ ಪುಡಿ– 1ಟೀ ಚಮಚ, ಜೀರಿಗೆ–  ಕಾಲು ಟೀ ಚಮಚ, ಅಚ್ಚಖಾರದ ಪುಡಿ– ಕಾಲು ಟೀ ಚಮಚ, ಅರಿಸಿನ ಪುಡಿ– ಕಾಲು ಟೀ ಚಮಚ, ಗರಂಮಸಾಲೆ– ಕಾಲು ಟೀ ಚಮಚ, ನಿಂಬೆರಸ– 1ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು.


ಸೋರೆಕಾಯಿ ಮಸಾಲೆ ಪರೋಟ

ತಯಾರಿಸುವ ವಿಧಾನ: ಮೊದಲು ಸೋರೆಕಾಯಿಯ ಸಿಪ್ಪೆಯನ್ನು ತೆಗೆದು ತುರಿದುಕೊಳ್ಳಿ. ಒಂದು ಪಾತ್ರೆಯಲ್ಲಿ ಗೋಧಿಹಿಟ್ಟನ್ನು ಹಾಕಿಕೊಳ್ಳಿ. ಗೋಧಿಹಿಟ್ಟಿನೊಟ್ಟಿಗೆ ಒಂದು ಟೇಬಲ್ ಚಮಚ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ, ಈ ಮಿಶ್ರಣಕ್ಕೆ ಚಿಕ್ಕದಾಗಿ ಕತ್ತರಿಸಿದ ಮೆಂತ್ಯ ಸೊಪ್ಪು, ತುರಿದ ಸೋರೆಕಾಯಿ, ಎಳ್ಳು, ಗಟ್ಟಿಮೊಸರು, ಹಸಿಮೆಣಸು, ಶುಂಠಿ ಪೇಸ್ಟ್, ಧನಿಯಾ ಪುಡಿ, ಜೀರಿಗೆ, ಅಚ್ಚಖಾರದ ಪುಡಿ, ಅರಿಸಿನ ಪುಡಿ, ಗರಂಮಸಾಲೆ, ನಿಂಬೆರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕಲೆಸಿಕೊಳ್ಳಿ. ಇದು ಚಪಾತಿ ಹಿಟ್ಟಿನ ಹದಕ್ಕಿರಲಿ. ಹಿಟ್ಟು ಗಟ್ಟಿಯೆನಿಸಿದರೆ ಸ್ವಲ್ಪ ನೀರನ್ನು ಸೇರಿಸಿ ಕಲೆಸಿಕೊಳ್ಳಿ. ಕಲೆಸಿಕೊಂಡ ಹಿಟ್ಟನ್ನು ಕಾಲು ಗಂಟೆ ಹಾಗೆಯೇ ಮುಚ್ಚಿಡಿ. ನಂತರ ಚಪಾತಿ ಉಂಡೆಗಳ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಗೋಧಿಹಿಟ್ಟನ್ನು ಉದುರಿಸಿಕೊಂಡು ಚಪಾತಿಯಂತೆ ಲಟ್ಟಿಸಿಕೊಳ್ಳಿ. ಮಧ್ಯಮ ಉರಿಯಲ್ಲಿ ಎರಡೂ ಬದಿಯನ್ನು ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಬೇಯಿಸಿ. ಇದು ತುಂಬಾ ಮೃದುವಾಗಿ ಮತ್ತು ತಿನ್ನಲು ರುಚಿಯಾಗಿರುತ್ತದೆ. ಇದು ರಾಯಿತ, ಚಟ್ನಿ, ದಾಲ್ ಅಥವಾ ಮೊಸರು, ಉಪ್ಪಿನಕಾಯಿಯೊಟ್ಟಿಗೆ ತಿನ್ನಲು ರುಚಿಯಾಗಿರುತ್ತದೆ.

***

ಈರುಳ್ಳಿ ಪರೋಟ

ಬೇಕಾಗುವ ಸಾಮಗ್ರಿಗಳು: ಗೋಧಿ ಹಿಟ್ಟು– 2 ಕಪ್, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು– 2, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ– 1/2 ಕಪ್, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಸೊಪ್ಪು– 1/2 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಗರಂ ಮಸಾಲೆ– 1 ಟೀ ಚಮಚ, ಅಚ್ಚಮೆಣಸಿನ ಪುಡಿ– 1 ಟೀ ಚಮಚ, ತುಪ್ಪ ಅಥವಾ ಎಣ್ಣೆ ಬೇಯಿಸಲು.


ಈರುಳ್ಳಿ ಪರೋಟ

ತಯಾರಿಸುವ ವಿಧಾನ: ಪಾತ್ರೆಯಲ್ಲಿ ಗೋಧಿ ಹಿಟ್ಟನ್ನು ಹಾಕಿ ಅದರೊಂದಿಗೆ ಮೇಲೆ ತಿಳಿಸಿರುವ ಪದಾರ್ಥಗಳನ್ನು ಸೇರಿಸಿ ಕೈಯಲ್ಲಿ ಮೃದುವಾಗಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಈ ಕಲೆಸಿಕೊಂಡ ಹಿಟ್ಟನ್ನು ಅರ್ಧ ಗಂಟೆ ಹಾಗೆಯೇ ಮುಚ್ಚಿಡಿ. ನಂತರ ಹಿಟ್ಟನ್ನು ಚಪಾತಿ ಹಿಟ್ಟಿನಂತೆ ಉಂಡೆಗಳನ್ನು ತಯಾರಿಸಿಕೊಳ್ಳಿ. ಗೋಧಿ ಹಿಟ್ಟನ್ನು ಉದುರಿಸಿಕೊಂಡು ಚಪಾತಿಯನ್ನು ಲಟ್ಟಿಸಿದಂತೆ ಲಟ್ಟಿಸಿಕೊಳ್ಳಿ. ತವಾ ಬಿಸಿ ಮಾಡಿಕೊಂಡು ಎಣ್ಣೆಯನ್ನು ಸವರಿಕೊಂಡು ಅದರಲ್ಲಿ ಲಟ್ಟಿಸಿಕೊಂಡ ಪರೋಟವನ್ನು ಹಾಕಿ ಎರಡೂ ಬದಿಯಲ್ಲಿ ಬೇಯಿಸಿ. ರುಚಿಕರವಾದ ಈರುಳ್ಳಿ ಪರೋಟ ಚಟ್ನಿ, ಪಲ್ಯ, ರಾಯಿತ ಅಥವಾ ಸಾಗು ಹಾಕಿಕೊಂಡು ತಿನ್ನಲು ರುಚಿಯಾಗಿರುತ್ತದೆ.

***

ಮೂಲಂಗಿ ಪರೋಟ

ಬೇಕಾಗುವ ಸಾಮಗ್ರಿಗಳು: ತುರಿದ ಮೂಲಂಗಿ– 250ಗ್ರಾಂ, ಗೋಧಿ ಹಿಟ್ಟು– 500 ಗ್ರಾಂ, ಕಡಲೆಹಿಟ್ಟು– 100 ಗ್ರಾಂ, ಕಾಳುಮೆಣಸಿನ ಪುಡಿ– ಅರ್ಧ ಟೀ ಚಮಚ, ಅಜವಾನ– ಅರ್ಧ ಟೀ ಚಮಚ, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು 2-3, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು– ಅರ್ಧ ಕಪ್, ಅರಿಸಿನ ಪುಡಿ– ಕಾಲು ಟೀ ಚಮಚ, ಎಣ್ಣೆ/ ತುಪ್ಪ ಬೇಯಿಸಲು, ಕಲೆಸುವಾಗ 1 ಟೀ ಚಮಚ, ತುಪ್ಪ, ಉಪ್ಪು ರುಚಿಗೆ ತಕ್ಕಷ್ಟು.


ಮೂಲಂಗಿ ಪರೋಟ

ತಯಾರಿಸುವ ವಿಧಾನ: ಬಾಣಲೆಯಲ್ಲಿ ಗೋಧಿ ಹಿಟ್ಟು ಮತ್ತು ಕಡಲೆಹಿಟ್ಟನ್ನು ಹಾಕಿ. ನಂತರ ಅರಿಸಿನ, ಅಜವಾನ, ಕಾಳುಮೆಣಸಿನ ಪುಡಿ, ಹಸಿ ಮೆಣಸಿನಕಾಯಿ, ಉಪ್ಪು, ಕೊತ್ತಂಬರಿ ಸೊಪ್ಪು, ತುರಿದ ಮೂಲಂಗಿಯನ್ನು ಹಿಟ್ಟಿನಲ್ಲಿ ಹಾಕಿ ಕಲೆಸಿ. ನಂತರ ಒಂದು ಟೀ ಚಮಚ ತುಪ್ಪವನ್ನು ಹಾಕಿ ಮಿಶ್ರಣ ಮಾಡಿ. ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ. ಮೂಲಂಗಿಯಲ್ಲಿ ನೀರಿನ ಅಂಶ ಇರುವುದರಿಂದ ಎಷ್ಟು ಬೇಕೋ ಅಷ್ಟೇ ನೀರನ್ನು ಹಾಕಿ ಕಲೆಸಿಕೊಳ್ಳಿ. ನಂತರ ಈ ಹಿಟ್ಟಿನಿಂದ ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆಗಳನ್ನು ತಯಾರಿಸಿಕೊಳ್ಳಿ. ಚಪಾತಿ ಮಣೆಯ ಮೇಲೆ ಹಿಟ್ಟನ್ನು ಉದುರಿಸಿ ಚಪಾತಿಯಂತೆ ಲಟ್ಟಿಸಿ. ತವಾವನ್ನು ಬಿಸಿ ಮಾಡಿ ತುಪ್ಪವನ್ನು ಸವರಿ. ಲಟ್ಟಿಸಿಕೊಂಡ ಪರೋಟವನ್ನು ಅದರಲ್ಲಿ ಹಾಕಿ ಎರಡೂ ಬದಿಗಳಲ್ಲಿ ತುಪ್ಪವನ್ನು ಹಾಕಿ ಬೇಯಿಸಿ. ರುಚಿಯಾದ ಪರೋಟಾ ರಾಯಿತ, ಉಪ್ಪಿನಕಾಯಿ ಅಥವಾ ಬೆಣ್ಣೆಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.