ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಪ್‌ಕಾರ್ನ್‌ ಚಿಕನ್, ಚಿಕನ್ ಮಂಚೂರಿಯನ್ ಡ್ರೈ

Last Updated 18 ಜೂನ್ 2021, 19:30 IST
ಅಕ್ಷರ ಗಾತ್ರ

ಪಾಪ್‌ಕಾರ್ನ್‌ ಚಿಕನ್

ಬೇಕಾಗುವ ಸಾಮಗ್ರಿಗಳು: ಅಕ್ಕಿಹಿಟ್ಟು – 3 ಕಪ್‌, ಮೊಟ್ಟೆ – 2, ನಿಂಬೆರಸ – 2 ಚಮಚ, ಎಣ್ಣೆ – ಕರಿಯಲು, ಚರ್ಮ ಹಾಗೂ ಮೂಳೆ ರಹಿತ ಚಿಕನ್ ತುಂಡುಗಳು – 2 ಕಪ್‌, ಉಪ್ಪು – ರುಚಿಗೆ, ಕಾಳುಮೆಣಸಿನ ಪುಡಿ – ಸ್ವಲ್ಪ.

ತಯಾರಿಸುವ ವಿಧಾನ: ಬೌಲ್‌ನಲ್ಲಿ ಅಕ್ಕಿಹಿಟ್ಟು, ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮೊಟ್ಟೆ ತಿರುಳು ಹಾಗೂ ನಿಂಬೆರಸವನ್ನು ಒಂದು ಪ್ರತ್ಯೇಕ ಬೌಲ್‌ನಲ್ಲಿ ಮಿಶ್ರಣ ಮಾಡಿ. ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಕಾಯಲು ಇಡಿ. ಚಿಕನ್ ತುಂಡುಗಳನ್ನು ಮೇಲೆ ಹೇಳಿದ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ನಂತರ ಅದನ್ನು ಮೊಟ್ಟೆ ಮಿಶ್ರಣದಲ್ಲಿ ಅದ್ದಿ, ಪುನಃ ಹಿಟ್ಟಿನಲ್ಲಿ ಅದ್ದಿ. ಕಾದ ಎಣ್ಣೆಯಲ್ಲಿ ಚಿಕನ್ ತುಂಡುಗಳನ್ನು ಹಾಕಿ ಬಣ್ಣ ಬದಲಾಗುವವರೆಗೂ ಕರಿಯಿರಿ. ಇದು ಮಳೆಗಾಲದಲ್ಲಿ ತಿನ್ನಲು ಚೆನ್ನಾಗಿರುತ್ತದೆ.

**

ಚಿಕನ್ ಮಂಚೂರಿಯನ್ ಡ್ರೈ

ಬೇಕಾಗುವ ಸಾಮಗ್ರಿಗಳು: ಕಾರ್ನ್‌ಫ್ಲೋರ್ – 1 ಚಮಚ, ಈರುಳ್ಳಿ ದಂಟು – 1 ಕಪ್, ಬೆಳ್ಳುಳ್ಳಿ – 1 ಹೆಚ್ಚಿದ್ದು, ಶುಂಠಿ – ಅರ್ಧ ಇಂಚು ಹೆಚ್ಚಿದ್ದು, ಎಣ್ಣೆ – 3 ಚಮಚ, ನೀರು – 2 ಚಮಚ.

ನೆನೆಸಿಡಲು: ಮೂಳೆ ಹಾಗೂ ಚರ್ಮ ರಹಿತ ಚಿಕನ್ ತುಂಡುಗಳು – 1 ಕಪ್‌, ಮೊಟ್ಟೆ – 1, ಸೋಯಾ ಸಾಸ್ – 1 ಚಮಚ, ಕಾರ್ನ್‌ಫ್ಲೋರ್‌ – 4 ಚಮಚ, ಮೈದಾಹಿಟ್ಟು – 2 ಚಮಚ, ಉಪ್ಪು – ರುಚಿಗೆ, ಕಾಳುಮೆಣಸಿನ ಪುಡಿ – ಚಿಟಿಕೆ

ಸಾಸ್ ತಯಾರಿಸಲು: ಟೊಮೆಟೊ ಕೆಚಪ್‌ – 1/4 ಕಪ್‌, ಸೋಯಾ ಸಾಸ್‌ – 1 ಟೇಬಲ್ ಚಮಚ, ಹಸಿಮೆಣಸಿನ ಸಾಸ್‌ – 3 ಚಮಚ, ಕೆಂಪುಮೆಣಸಿನ ಸಾಸ್‌ – 3 ಚಮಚ, ವಿನೆಗರ್‌ – 1 ಚಮಚ, ಸಕ್ಕರೆ – 1 ಚಮಚ.

ತಯಾರಿಸುವ ವಿಧಾನ: ನೆನೆಸಿಡಲು ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ನೆನೆಯಲು ಬಿಡಿ. ನಾನ್‌ಸ್ಟಿಕ್‌ ಪಾತ್ರೆಯಲ್ಲಿ ಎಣ್ಣೆ ಕಾಯಲು ಇಡಿ. ಕಾದ ಎಣ್ಣೆಯಲ್ಲಿ ಚಿಕನ್ ತುಂಡುಗಳನ್ನು ಬಣ್ಣ ಬದಲಾಗುವವರೆಗೂ ಕರಿದು ಇಟ್ಟುಕೊಳ್ಳಿ. ಸಾಸ್‌ ತಯಾರಿಸಲು ಹೇಳಿದ ಎಲ್ಲಾ ಸಾಮಗ್ರಿಗಳನ್ನು ಮಿಶ್ರಣ ಮಾಡಿ, ಇನ್ನೊಂದು ಕಪ್‌ನಲ್ಲಿ ಕಾರ್ನ್‌ಫ್ಲೋರ್‌ಗೆ ನೀರು ಸೇರಿಸಿ ಮಿಶ್ರಣ ಮಾಡಿ ಇಡಿ. ಕರಿದು ಉಳಿದ ಎಣ್ಣೆಗೆ ಶುಂಠಿ, ಬೆಳ್ಳುಳ್ಳಿ ಹಾಗೂ ಈರುಳ್ಳಿ ದಂಟು ಸೇರಿಸಿ ಒಂದು ನಿಮಿಷ ಹುರಿದುಕೊಳ್ಳಿ. ಅದಕ್ಕೆ ಸಾಸ್ ಮಿಶ್ರಣ, ಕರಿದ ಚಿಕನ್ ತುಂಡು ಹಾಗೂ ಕಾರ್ನ್‌ಫ್ಲೋರ್ ಮಿಶ್ರಣ ಸೇರಿಸಿ ಕಲೆಸಿ, ಅದಕ್ಕೆ ಹೆಚ್ಚಿದ ಈರುಳ್ಳಿ ದಂಟು ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಯಾದ ಚಿಕನ್ ಮಂಚೂರಿಯನ್ ಡ್ರೈ ಸವಿಯಲು ಸಿದ್ಧ.

**


ಚಿಕನ್ ಕಟ್ಲೆಟ್‌

ಬೇಕಾಗುವ ಸಾಮಗ್ರಿಗಳು: ಚಿಕನ್ ತುಂಡುಗಳು – 600 ಗ್ರಾಂ, ಬ್ರೆಡ್‌‍ಪುಡಿ – 1 ಕಪ್‌, ನಿಂಬೆರಸ – 2 ಚಮಚ, ಉಪ್ಪು – ರುಚಿಗೆ, ಕಾಳುಮೆಣಸಿನ ಪುಡಿ – ಸ್ವಲ್ಪ, ಎಣ್ಣೆ – ಕಾಯಿಸಲು, ಅಕ್ಕಿಹಿಟ್ಟು – 1/2 ಕಪ್‌, ಮೊಟ್ಟೆ – 2, ಆಲೂಗೆಡ್ಡೆ – 4 (ಮಧ್ಯಮ ಗಾತ್ರದ್ದು), ದೊಣ್ಣೆಮೆಣಸು – 1/2 ಕ‍‍ಪ್‌ (ಹೆಚ್ಚಿದ್ದು), ಕ್ಯಾರೆಟ್‌ – 1/2 ಕಪ್‌ (ಹೆಚ್ಚಿದ್ದು), ಈರುಳ್ಳಿ – 1/2 ಕಪ್‌ (ಹೆಚ್ಚಿದ್ದು), ಹಸಿಮೆಣಸು – ಸ್ವಲ್ಪ (ಹೆಚ್ಚಿದ್ದು), ಬೆಳ್ಳುಳ್ಳಿ – ಹೆಚ್ಚಿದ್ದು 5 ರಿಂದ 6 ಎಸಳು, ಶುಂಠಿ – 1/2 ಇಂಚು (ಸಣ್ಣಗೆ ತುರಿದದ್ದು), ಗರಂ ಮಸಾಲೆ ಪುಡಿ – 1/2 ಚಮಚ, ಜೀರಿಗೆ ಪುಡಿ – 1 ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ

ತಯಾರಿಸುವ ವಿಧಾನ: ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದು ಅರ್ಧ ಬೇಯಿಸಿ ಇಡಿ. ಪ್ಯಾನ್‌ವೊಂದರಲ್ಲಿ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ. ಬಿಸಿಯಾದ ಮೇಲೆ ಜೀರಿಗೆ ಹಾಕಿ, ಜೀರಿಗೆ ಸಿಡಿಯಲು ಆರಂಭಿಸಿದ ಮೇಲೆ ಹೆಚ್ಚಿದ ಶುಂಠಿ ಹಾಗೂ ಬೆಳ್ಳುಳ್ಳಿ ಹಾಕಿ ಬಾಡಿಸಿ. ಅದಕ್ಕೆ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಬಾಡಿದ ಮೇಲೆ ಕ್ಯಾರೆಟ್‌, ಕ್ಯಾಪ್ಸಿಕಂ ಸೇರಿಸಿ ಮಧ್ಯಮ ಉರಿಯಲ್ಲಿ ಬೇಯಿಸಿ, ಗ್ಯಾಸ್ ಆರಿಸಿ ತಣ್ಣಗಾಗಲು ಬಿಡಿ. ಒಂದು ದೊಡ್ಡ ಬೌಲ್‌ನಲ್ಲಿ ಬೇಯಿಸಿದ ಆಲೂಗೆಡ್ಡೆ, ಅರೆಬೆಂದ ಚಿಕನ್ ತುಂಡುಗಳು, ಬೇಯಿಸಿದ ತರಕಾರಿ, ಹಸಿಮೆಣಸು, ಗರಂಮಸಾಲೆ, ಜೀರಿಗೆ ಪುಡಿ, ಬ್ರೆಡ್‌ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಲ್ಲಿ ಕಟ್ಲೆಟ್‌ ಆಕಾರ ಮಾಡಿಕೊಳ್ಳಿ. ಅದನ್ನು ಅಕ್ಕಿಹಿಟ್ಟಿನಲ್ಲಿ ಅದ್ದಿ, ಮೊಟ್ಟೆ ತಿರುಳಿನಲ್ಲಿ ಹೊರಳಾಡಿಸಿ. ನಂತರ ಬ್ರೆಡ್‌ಪುಡಿಯಲ್ಲಿ ಅದ್ದಿ. 2 ಬಾರಿ ಹೀಗೆ ಮಾಡಿ. ಪಾತ್ರೆಯಲ್ಲಿ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಮೇಲೆ ಕಟ್ಲೆಟ್‌ ಅನ್ನು ಎಣ್ಣೆಯಲ್ಲಿ ಕಾಯಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT