ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಸೂಪ್ ಬಾತ್‌ಚೀತ್

Last Updated 6 ಫೆಬ್ರುವರಿ 2021, 10:13 IST
ಅಕ್ಷರ ಗಾತ್ರ

‘ಸೂಪ್‌’… ಹೋಟೆಲ್‌, ರೆಸ್ಟೊರೆಂಟ್‌ಗೆ ಹೋದಾಗ ಬಾಯಲ್ಲಿ ಮೊದಲು ಇಣುಕುವ ಪದವಿದು. ಸೂಪ್‌ ಇಲ್ಲದೇ ಹೋಟೆಲ್‌, ರೆಸ್ಟೊರೆಂಟ್‌ ಊಟ ಅಪೂರ್ಣ ಎಂಬಷ್ಟರಮಟ್ಟಿಗೆ ರುಚಿಮೊಗ್ಗು ಅರಳಿಸುತ್ತದೆ. ಮಕ್ಕಳು, ದೊಡ್ಡವರಾದಿಯಾಗಿ ಎಲ್ಲರ ಬಾಯಲ್ಲೂ ನೀರೂರಿಸುವ ಸೂಪ್‌ ಬಹುತೇಕರಿಗೆ ಅಚ್ಚರಿಯ ಮೊಗ್ಗು. ಪುಟ್ಟ ಬಟ್ಟಲಲ್ಲಿ ಮೊಗೆದಷ್ಟೂ ರುಚಿ ನೀಡುವ ಸೂಪ್‌ನ ಕರಾಮತ್ತಿಗೆ ಫಿದಾ ಆಗದವರಿಲ್ಲ. ಮಕ್ಕಳಂತೂ ಸೂಪ್‌ ಕುಡಿಯಲೆಂದೇ ಹಟ ಮಾಡಿ ಹೋಟೆಲ್‌ಗೆ ಪೋಷಕರನ್ನು ಕರೆದುಕೊಂಡು ಹೋಗುತ್ತಾರೆ. ಎದುರಿಗೆ ಮೃಷ್ಟಾನ್ನ ಭೋಜನವಿಟ್ಟರೂ ಸೂಪ್‌ ಮಾತ್ರವೇ ಮಕ್ಕಳ ಹೊಟ್ಟೆಗಿಳಿಯುತ್ತದೆ. ಬಹುತೇಕ ಪೋಷಕರು ‘ಊಟ ಮಾಡಿದರಷ್ಟೇ ಸೂಪ್‌’ ಎಂದು ಮಕ್ಕಳಿಗೆ ಕಟ್ಟಪ್ಪಣೆ ಹೊರಡಿಸಿ ಹೋಟೆಲ್‌ಗೆ ಅಡಿ ಇಡುತ್ತಾರೆ.

ರುಚಿಕರವಾದ, ಜೀರ್ಣಕ್ರಿಯೆ ಹೆಚ್ಚಿಸುವ, ದೇಹಕ್ಕೆ ಅಗತ್ಯ ಪೋಷಕಾಂಶ ಒದಗಿಸುವ, ಬೊಜ್ಜು ಇಳಿಸಲು ಸಹಕಾರಿಯಾಗುವ ಸೂಪ್‌ನ ರೂಪಗಳು ಹಲವು. ತರಕಾರಿ ಸೂಪ್‌, ಮಶ್ರೂಮ್‌ ಸೂಪ್‌, ಪೆಪ್ಪರ್‌ ಸೂಪ್‌, ಟೊಮೆಟೊ ಸೂಪ್‌, ಚಿಕನ್‌ ಸೂಪ್‌, ಮಟನ್‌ ಸೂಪ್‌, ಕಾರ್ನ್‌ ಸೂಪ್‌ ... ಹೀಗೆ ಹಲವು ರೂಪಗಳು. ತರಕಾರಿ ಸೂಪ್‌ಗಳಲ್ಲಂತೂ ಒಂದೊಂದು ತರಕಾರಿಯಲ್ಲೂ ಒಂದೊಂದು ಬಗೆಯ ಸೂಪ್‌ ತಯಾರಿಸಬಹುದು. ಎಲ್ಲವೂ ಭಿನ್ನ ರುಚಿ ನೀಡುವುದರಿಂದ ಇಷ್ಟದ ತರಕಾರಿ ಬಳಸಿ ಸೂಪ್‌ ಸಿದ್ಧಪಡಿಸಿಕೊಳ್ಳಬಹುದು. ಸೂಪ್‌ಗಳಲ್ಲಿ ಟೊಮೆಟೊ ಸೂಪ್‌ಗೆ ಎಂದಿಗೂ ಅಗ್ರಪಟ್ಟ.

ಮೊದಲೆಲ್ಲ ಹೋಟೆಲ್‌, ರೆಸ್ಟೊರೆಂಟ್‌ಗಳಿಗೆ ಮಾತ್ರವೇ ಸೀಮಿತವಾಗಿದ್ದ ಸೂಪ್‌ ಈಚೆಗೆ ಮನೆಯಲ್ಲೂ ತಯಾರಾಗುತ್ತಿದೆ. ಅಡುಗೆ ಹೇಳಿಕೊಡುವ ಯೂಟ್ಯೂಬ್‌ ‘ಗೆಳೆಯ– ಗೆಳತಿಯರು’ ಬಂದಮೇಲಂತೂ ಮನೆಯಲ್ಲೇ ಸೂಪ್‌ ತಯಾರಿಸಿ ಸವಿಯುವವರ ಸಂಖ್ಯೆ ಹೆಚ್ಚಾಗಿದೆ. ಸ್ವಲ್ಪ ಶ್ರಮ ಹಾಕಿದರೆ ಸ್ವಾದಿಷ್ಟ, ಆರೋಗ್ಯಕರ ಸೂಪ್‌ ತಯಾರಿಸಿ ಸವಿಯಬಹುದು. ಈಗಂತೂ ಇನ್‌ಸ್ಟಂಟ್‌ ಸೂಪ್‌ ಪ್ಯಾಕೆಟ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಪ್ಯಾಕೆಟ್‌ ತಂದು ನೀರು ಬೆರೆಸಿ ಬಿಸಿ ಮಾಡಿದರೆ ಸೂಪ್‌ ರೆಡಿ. ಹೋಟೆಲ್‌, ರೆಸ್ಟೊರೆಂಟ್‌ ಸೂಪ್‌ ರೀತಿಯಲ್ಲೇ ಇವು ರುಚಿ ನೀಡುತ್ತವೆ. ಹೀಗಾಗಿ ಸೂಪ್‌ ಸವಿಯಬೇಕೆಂದಾಗಲೆಲ್ಲ ಇನ್‌ಸ್ಟಂಟ್‌ ಸೂಪ್‌ ಜತೆಯಾಗುತ್ತದೆ. ಆದರೂ ಮನೆಯಲ್ಲೇ ತಾಜಾವಾಗಿ ತಯಾರಿಸಿದ ಸೂಪ್‌ ಹೆಚ್ಚು ಆರೋಗ್ಯಕರ ಎನ್ನುತ್ತಾರೆ ಆಹಾರ ತಜ್ಞರು.

ಚಳಿಗಾಲಕ್ಕೆ ಸೂಕ್ತ ಖಾದ್ಯ

ಚಳಿಗಾಲದಲ್ಲಂತೂ ಸೂಪ್‌ಗೆ ಹೆಚ್ಚು ಮಹತ್ವ. ದೇಹವನ್ನು ಬೆಚ್ಚಗಿಡುವ, ಮನಸ್ಸಿಗೆ ತಾಜಾತನ ತಂದು ಕೊಡುವ ಸೂಪ್‌ ಆರೋಗ್ಯ ವರ್ಧನೆಯೂ ಹೌದು. ಸೂಪ್‌ಗೆ ಬಳಸುವ ಮಸಾಲೆ ಪದಾರ್ಥಗಳು ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗಿತ್ತವೆ.

ಇನ್ನು ಶಿಶುಗಳಿಗೆ ಊಟದ ಅಭ್ಯಾಸ ಮಾಡಿಸಬೇಕೆಂದರೆ ಸೂಪ್‌ನಿಂದಲೇ ಶುರು ಮಾಡಬಹದು. 8 ತಿಂಗಳು ಪೂರ್ಣಗೊಂಡ ನಂತರ ಶಿಶುಗಳಿಗೆ ಸೂಪ್‌ ಪರಿಚಯಿಸಬಹುದು. ಬೇಳೆ ಕಟ್ಟನ್ನು ತೆಗೆದು ಸೂಪ್‌ ರೀತಿ ಕುಡಿಸಬಹುದು. ಕೋಸು, ಅಣಬೆ, ಕ್ಯಾರೆಟ್‌, ಬೀನ್ಸ್‌ ಬಳಸಿ ಸೂಪ್‌ ತಯಾರಿಸಿ ನೀಡುವುದರಿಂದ ಶಕ್ತಿ ವರ್ಧನೆಯಾಗುತ್ತದೆ.

ಸಾಮಾನ್ಯವಾಗಿ ಮಕ್ಕಳು ತರಕಾರಿ ತಿನ್ನಲು ಇಷ್ಟಪಡುವುದಿಲ್ಲ. ಆಗ ತರಕಾರಿ ಸೂಪ್‌ ಹೆಚ್ಚು ಫಲಕಾರಿ. ಸೂಪ್‌ ಸವಿದ ಖುಷಿ ಮಕ್ಕಳಿಗಾದರೆ ಪೌಷ್ಟಿಕ ಆಹಾರ ತಿನ್ನಿಸಿದ ತೃಪ್ತಿ ಅಮ್ಮಂದಿರಿಗೆ ಸಿಗುತ್ತದೆ. ನಿಯಮಿತವಾಗಿ ಸೂಪ್‌ ಕೊಡುವುದರಿಂದ ಮಕ್ಕಳಿಗೆ ಸಾಮಾನ್ಯವಾಗಿ ಕಾಡುವ ಶೀತ, ಕೆಮ್ಮಿನಿಂದ ದೂರವಿಡಬಹುದು.

ತರಕಾರಿ, ದ್ವಿದಳ ಧಾನ್ಯಗಳು, ಅಕ್ಕಿಯಿಂದ ತಯಾರಿಸಿದ ಸೂಪ್‌ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಖನಿಜಗಳು, ಕ್ಯಾಲ್ಸಿಯಂ, ಪ್ರೊಟೀನ್‌, ಕಾರ್ಬೊಹೈಡ್ರೇಟ್‌ಗಳನ್ನು ನೀಡುತ್ತವೆ. ಬೆಣ್ಣೆ ಹಾಕಿದ ಸೂಪ್‌ ಮಕ್ಕಳ ತೂಕ ಹೆಚ್ಚಿಸಲು, ದೇಹದಲ್ಲಿ ನೀರಿನ ಅಂಶ ನಿರ್ವಹಣೆಗೂ ಸಹಕಾರಿ. ಬೆಳಿಗ್ಗೆ ಅಥವಾ ಸಂಜೆ ಲಘು ಉಪಾಹಾರದ ರೀತಿ ಮಕ್ಕಳಿಗೆ ಸೂಪ್‌ ಕೊಡಬಹುದು.

ಆದಿ ಕಾಲದಿಂದಲೂ ಇದೆ ಸೂಪ್‌ ಬಳಕೆ

ಸೂಪ್‌ನ ಇತಿಹಾಸ ಇಂದು, ನಿನ್ನೆಯದಲ್ಲ. ಕ್ರಿ.ಪೂ. 20,000ರಷ್ಟು ಹಿಂದೆಯೇ ಸೂಪ್‌ ಬಳಕೆ ಇತ್ತು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ನೀರನ್ನು ಹಿಡಿದಿಟ್ಟುಕೊಳ್ಳುವ ಪಾತ್ರೆಗಳು ಆವಿಷ್ಕಾರಗೊಳ್ಳುವ ಮೊದಲು ಕುದಿಯುವ ಪ್ರಕ್ರಿಯೆ ಅಡುಗೆಯ ಭಾಗವಾಗಿರಲಿಲ್ಲ. ಮಣ್ಣಿನ ಕುಡಿಕೆಗಳು ಆವಿಷ್ಕಾರಗೊಂಡ ಬಳಿಕ ‘ಸೂಪ್‌’ ಜನಿಸಿರಬಹುದು. ಆಹಾರ ಪದಾರ್ಥಗಳನ್ನು ಬೇಯಿಸಿ ಬಸಿದ ನೀರು ಆ ಕಾಲದಲ್ಲಿ ಸೂಪ್‌ ರೀತಿ ಬಳಕೆಯಾಗುತ್ತಿತ್ತು. ಊಟಕ್ಕೂ ಮೊದಲು ಇದನ್ನು ಸವಿಯುವ ಪರಿಪಾಠ ರೂಢಿಸಿಕೊಂಡ ಮಾನವ ಜೀರ್ಣಕ್ರಿಯೆ ಚೆನ್ನಾಗಿ ಆಗುವುದನ್ನೂ ಕಂಡುಕೊಂಡ. ಆಗಿನ ಗಂಜಿಯೇ ಬರುಬರುತ್ತಾ ಸೂಪ್‌ ರೂಪ ತಳೆಯಿತು. ಆವಿಷ್ಕಾರ ಹೆಚ್ಚುತ್ತಾ ಹೋದಂತೆ ಸೂಪ್‌ನ ರೂಪಗಳೂ ಹೆಚ್ಚುತ್ತಾ ಹೋದವು.

ಬಾರ್ಲಿಯಲ್ಲಿ ಸುಲಭವಾಗಿ ಮಕ್ಕಳಿಗೆ ಸೂಪ್‌ ಹೀಗೆ ತಯಾರಿಸಿ

* ಬಾರ್ಲಿ– 1/4 ಕಪ್‌

*ಮಿಶ್ರ ತರಕಾರಿಗಳು 1/2 ಕಪ್‌ (ಕ್ಯಾರೆಟ್‌, ಬೀನ್ಸ್‌, ಬಟಾಣಿ)

* ಜೀರಿಗೆ ಪುಡಿ ಚಿಟಿಕೆ

* ಅರಿಶಿನ ಚಿಟಿಕೆ

* ತುಪ್ಪ ಅಥವಾ ಬೆಣ್ಣೆ 1 ಚಮಚ

* ರುಚಿಗೆ ಉಪ್ಪು

ಬಾರ್ಲಿಯನ್ನು ಎರಡು ಬಾರಿ ಚೆನ್ನಾಗಿ ತೊಳೆಯಿರಿ. ಕನಿಷ್ಠ 2ರಿಂದ 4 ಗಂಟೆ ನೆನೆಸಿಡಿ. ಬಳಿಕ ಕುಕ್ಕರ್‌ಗೆ ನೆನೆಸಿಟ್ಟ ಬಾರ್ಲಿ, ಬೇಕಾದ ತರಕಾರಿ ಹಾಕಿ. ಅದಕ್ಕೆ ಒಂದೂವರೆ ಕಪ್‌ ನೀರು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ. ಬೇಯಿಸಿದ ಬಾರ್ಲಿ ಹಾಗೂ ತರಕಾರಿ ಮಿಶ್ರಣವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಬಳಿಕ ಬಾಣಲೆ ಬಿಸಿ ಮಾಡಿ ತುಪ್ಪ ಅಥವಾ ಬೆಣ್ಣೆ ಹಾಕಿ ಜೀರಿಗೆ ಪುಡಿ ಹಾಕಿ. ರುಬ್ಬಿಕೊಂಡ ಮಿಶ್ರಣವನ್ನು ಬಾಣಲೆಗೆ ಹಾಕಿ. ಮಕ್ಕಳು ಇಷ್ಟ ಪಡುವುದಿದ್ದರೆ ಕಾಳುಮೆಣಸಿನ ಪುಡಿ, ಇನ್ನಷ್ಟು ಜೀರಿಗೆ ಪುಡಿ, ಅರಿಶಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಬಿಸಿ ಇರುವಾಗಲೇ ಸವಿಯಲು ಕೊಡಿ.

ತರಕಾರಿ ಸೂಪ್‌ ಹೀಗೆ ಮಾಡಿ

* 1 ಕಪ್‌ ಹಸಿರು ಬಟಾಣಿ

* 1 ಕಪ್‌ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ

* ಒಂದು ದಪ್ಪನೆ ಈರುಳ್ಳಿ

* 6 ಎಸಳು ಬೆಳ್ಳುಳ್ಳಿ

* ಸ್ವಲ್ಪ ಎಣ್ಣೆ

* ಕಪ್ಪು ಮೆಣಸು

* ಉಪ್ಪು

ತಯಾರಿಸುವ ವಿಧಾನ

ಎಲ್ಲ ತಕಾರಿಗಳನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಒಂದು ಪಾತ್ರೆಯನ್ನು ಸ್ಟವ್‌ ಮೇಲೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಬಿಸಿಯಾದ ಬಳಿಕ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೂ ಬಾಡಿಸಿ. ಬಳಿಕ ಹೆಚ್ಚಿಟ್ಟುಕೊಂಡ ತರಕಾರಿ ಅಗತ್ಯ ಸಾಸ್‌ಗಳನ್ನು ಹಾಕಿ 5 ನಿಮಿಷ ಚೆನ್ನಾಗಿ ಕುದಿಯಲು ಬಿಡಿ. ಬಳಿಕ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕುದಿಯಲು ಬಿಡಿ. ಸ್ಟವ್‌ ಉರಿ ಸಣ್ಣಗೆ ಮಾಡಿ ಮುಚ್ಚಳ ಮುಚ್ಚಿ 10 ನಿಮಿಷ ಕುದಿಯಲು ಬಿಡಿ. ನಂತರ ಕಾಳುಮೆಣಸು ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ಬಿಸಿ ಇರುವಾಗಲೇ ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT